ಬಿಜೆಪಿ ಮುಖಂಡರಿಗೆ ಭರ್ಜರಿ ಬೇಡಿಕೆ

7

ಬಿಜೆಪಿ ಮುಖಂಡರಿಗೆ ಭರ್ಜರಿ ಬೇಡಿಕೆ

Published:
Updated:

ಶಿವಮೊಗ್ಗ: ಬಿಜೆಪಿ-ಕೆಜೆಪಿ ಮೇಲಾಟದಿಂದಾಗಿ ಜಿಲ್ಲೆಯ ಬಿಜೆಪಿಯ ಸಣ್ಣ-ಪುಟ್ಟ ಮುಖಂಡರಿಗೂ ಈಗ ಮನ್ನಣೆ. ಬಿಜೆಪಿ ಶಕ್ತಿಕೇಂದ್ರದ ಕಾರ್ಯಕರ್ತರು ಹಾಗೂ ನಾಯಕರಿಗೂ ಈಗ ಭರ್ಜರಿ ಬೇಡಿಕೆ.ಇವರನ್ನು ಸೆಳೆದುಕೊಳ್ಳಲು ಬಿಜೆಪಿ- ಕೆಜೆಪಿಗಳಿಂದ ಆಸೆ-ಆಕಾಂಕ್ಷೆಗಳ ಬಲೆ. ಹಾಗಾಗಿ, ಬೆಳಿಗ್ಗೆ ಬಿಜೆಪಿಯ ಬೈಠಕ್‌ನಲ್ಲಿ, ಸಂಜೆ ಕೆಜೆಪಿಯ ಗುಪ್ತಸಭೆಯಲ್ಲಿ ಕಾಣಿಸಿಕೊಳ್ಳುವವರ ಸಂಖ್ಯೆ ಜಿಲ್ಲೆಯಲ್ಲಿ ದೊಡ್ಡದಾಗುತ್ತಿದೆ. ತಕ್ಕ ಸಮಯವಿದು ಎಂದರಿತ ನಾಯಕರು ಮತ್ತು ಕಾರ್ಯಕರ್ತರು ತಮ್ಮ ಬೇಡಿಕೆ ಕುದುರಿಸಿಕೊಳ್ಳಲು ನಿಂತುಬಿಟ್ಟಿದ್ದಾರೆ.ಕೆಜೆಪಿ, ಜಾತಿಯ ದಾಳ, ಚುನಾವಣೆ ಟಿಕೆಟ್‌ನ ಆಮಿಷ ಒಡ್ಡಿ ಬಿಜೆಪಿಗೆ ಲಗ್ಗೆ ಹಾಕಿದ್ದರೆ, ಅಧಿಕಾರದಲ್ಲಿರುವ ಬಿಜೆಪಿ ಈ ಮುಖಂಡರ ವೈಯಕ್ತಿಕ ಕೆಲಸ-ಕಾರ್ಯಗಳನ್ನು ಪೂರೈಸಲು ಪ್ರಾಶಸ್ತ್ಯ ನೀಡಿದೆ.ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಕೆಜೆಪಿಯತ್ತ ಹೆಜ್ಜೆ ಹಾಕಿದರೆ, ಶಿಕಾರಿಪುರ, ಸಾಗರ, ಸೊರಬ,  ತೀರ್ಥಹಳ್ಳಿಯಲ್ಲಿ ಬಿಜೆಪಿಯ ಎರಡನೇ ಹಂತದ ಮುಖಂಡರ ವಲಸೆ ಪರ್ವ ಆರಂಭವಾಗಿದೆ. ಆದರೆ, ಇದಕ್ಕೆ ಬ್ರೇಕ್ ಹಾಕಲು ಬಿಜೆಪಿ ತಕ್ಕ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ.ಯಡಿಯೂರಪ್ಪ ಅವರ ಎಲ್ಲ ಕಾರ್ಯಕ್ರಮ, ಸಭೆಗಳಲ್ಲೂ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ಉಪಾಧ್ಯಕ್ಷೆ ಹೇಮಾಪಾವನಿ ಶ್ರೀನಿವಾಸ್ ಅವರು ಈಗ ಬಿಜೆಪಿ ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಉಪಸ್ಥಿತರಿದ್ದ ಕಾರ್ಯಕರ್ತರ ಸಭೆಯಲ್ಲೂ ಭಾಗವಹಿಸಿ, ಅಚ್ಚರಿಗೆ ಕಾರಣವಾಗಿದ್ದಾರೆ.ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಹುಣವಳ್ಳಿ ಗಂಗಾಧರ್, ಶಾಸಕ ಎಚ್. ಹಾಲಪ್ಪ ಜತೆಗೇ ಇದ್ದು, ಕೆಜೆಪಿಯ ಎಲ್ಲಾ ಸಭೆಗಳಲ್ಲೂ ಪಾಲ್ಗೊಂಡಿದ್ದರು. ಈಗ ದಿಢೀರ್ ಬಿಜೆಪಿ ಸಭೆಗಳಲ್ಲಿ ಸಕ್ರಿಯರಾಗಿದ್ದಾರೆ. ಯಡಿಯೂರಪ್ಪ, ಈಶ್ವರಪ್ಪ ಅವರಿಗೆ ಬೈಯುವಾಗಲೂ ಜತೆಗಿದ್ದ ನಗರಸಭಾ ಮಾಜಿ ಅಧ್ಯಕ್ಷ ಎನ್.ಜೆ. ರಾಜಶೇಖರ್, ಈಗ ಈಶ್ವರಪ್ಪ ಪಾಳ್ಯದಲ್ಲಿ ಠಳಾಯಿಸುತ್ತಿದ್ದಾರೆ. ಈಶ್ವರಪ್ಪ ಅವರಿಗೆ ಈಚೆಗಷ್ಟೇ ಧಿಕ್ಕಾರ ಕೂಗಿದ್ದ ಜಿಲ್ಲಾ ವಕ್ಫ್ ಬೋರ್ಡ್ ಮುಖಂಡ ತಲ್ಕೀನ್ ಅಹಮದ್ ಮತ್ತು ಅವರ ಬೆಂಬಲಿಗರು ಈಗ ಈಶ್ವರಪ್ಪ ಜತೆ ಓಡಾಡುತ್ತಿದ್ದಾರೆ.ಈ ಮಧ್ಯೆ ಈಶ್ವರಪ್ಪ ಅವರನ್ನು ವಾಚಾಮಗೋಚರವಾಗಿ ಬೈದಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಈಗ ಬಿಜೆಪಿಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಜತೆ ಬೆಂಗಳೂರಿನಿಂದ ಹೆಲಿಕಾಪ್ಟರ್‌ನಲ್ಲಿ ಹಾರಿ ಬರುವ ಅವಕಾಶ ಈಚೆಗೆ ಅವರೊಬ್ಬರಿಗೇ ದಕ್ಕಿತ್ತು. ಜತೆಗೆ, ಕಾರ್ಯಕರ್ತರ ಸಭೆಯಲ್ಲೂ ಅವರಿಗೆ ವಿಶೇಷ ಮನ್ನಣೆ. ಅಲ್ಲದೇ, ಜಿಲ್ಲೆ ಜತೆ ಪಕ್ಕದ ಕಾರವಾರ, ಶಿರಸಿಯಲ್ಲೂ ಈಗ ಅವರು ಬಿಜೆಪಿಯ ಸ್ಟಾರ್ ಪ್ರಚಾರಕ.ಕೆಜೆಪಿ ಕಡೆ ಹೆಜ್ಜೆ ಹಾಕಿದ ಪ್ರಮುಖರಿಗೆ ಒತ್ತಡ ಹೇರುತ್ತಿರುವ ಬಿಜೆಪಿ, ಮತ್ತೊಂದು ಕಡೆಯಲ್ಲಿ ಪಕ್ಷ ಬಿಟ್ಟು ಹೋದ ಪದಾಧಿಕಾರಿಗಳನ್ನು ತಕ್ಷಣವೇ ತುಂಬಿಕೊಳ್ಳಲು ಮುಂದಾಗಿದೆ. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಬಿಳಕಿ ಕೃಷ್ಣಮೂರ್ತಿ, ಕೆಜೆಪಿಗೆ ಸೇರ್ಪಡೆಯಾಗುತ್ತಿದ್ದಂತೆ ಅವರ ಜಾಗಕ್ಕೆ ಶಿವಮೊಗ್ಗ ನಗರಸಭಾ ಉಪಾಧ್ಯಕ್ಷ ಎಸ್. ರಾಮು ಅವರನ್ನು ನೇಮಿಸಿದೆ.ಸಾಲು, ಸಾಲು ಸಮಾವೇಶ, ಹಾದಿ-ಬೀದಿಯಲ್ಲೂ ಸಭೆಗಳನ್ನು ಕೆಜೆಪಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ಮಾಡುತ್ತಿದ್ದರೆ, ಈಶ್ವರಪ್ಪ ನೇತೃತ್ವದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಅನಂತಕುಮಾರ್ ಅವರನ್ನು ಕರೆಸಿ, ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಈಗ ಜಿಲ್ಲೆಯಲ್ಲಿ ಬಿರುಸಿನಿಂದ ಸಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry