ಬಿಜೆಪಿ ಮೌನಕ್ಕೆ ಕೃಷ್ಣ ಬೆಂಬಲಿಗರ ಅಸಮಾಧಾನ

7

ಬಿಜೆಪಿ ಮೌನಕ್ಕೆ ಕೃಷ್ಣ ಬೆಂಬಲಿಗರ ಅಸಮಾಧಾನ

Published:
Updated:

ಮಂಗಳೂರು: ವಿಧಾನಸಭೆಯಲ್ಲಿ ಕಲಾಪ ನಡೆಯುತಿದ್ದಾಗ ಬ್ಲೂಫಿಲಂ ವೀಕ್ಷಿಸಿದ ವಿವಾದದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಹೆಸರು ಕೇಳಿಬಂದಾಗ ಬಿಜೆಪಿಯ ಜಿಲ್ಲಾ ಘಟಕ ನಡೆದುಕೊಂಡ ರೀತಿ ಕೃಷ್ಣ ಪಾಲೆಮಾರ್ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ.ಸಚಿವ ಸ್ಥಾನಕ್ಕೆ ಪಾಲೆಮಾರ್ ರಾಜೀನಾಮೆ ಸಲ್ಲಿಸಿ 1 ದಿನ ಕಳೆದ ಬಳಿಕವೂ ಬಿಜೆಪಿ ಜಿಲ್ಲಾ ಘಟಕದ ಪ್ರಮುಖರು ಸಚಿವರ ಬೆಂಬಲಕ್ಕೆ ನಿಂತಿಲ್ಲ ಎಂದು ಕಿಡಿಕಾರಿರುವ ಮಾಜಿ ಸಚಿವರ ಬೆಂಬಲಿಗರು, ಮಹಾನಗರ ಪಾಲಿಕೆಯ ಕೆಲವು ಸದಸ್ಯರು ಗುರುವಾರ ಸಂಜೆ ನಗರದ ಪಿವಿಎಸ್ ವೃತ್ತದ ಬಳಿ ಇರುವ ಬಿಜೆಪಿ ಜಿಲ್ಲಾ ಘಟಕದ ಕಚೇರಿಗೆ ಆಗಮಿಸಿ ಜಿಲ್ಲಾ ಪ್ರಮುಖರನ್ನು ತರಾಟೆ ತೆಗೆದುಕೊಂಡರು. 50ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಬೆಂಬಲಿಗರ ಜತೆ ಬಿಜೆಪಿ ನಗರ ಘಟಕದ ಪ್ರಮುಖರು ಮಾತುಕತೆ ನಡೆಸಿದರು. ಅರ್ಧ ತಾಸಿಗೂ ಹೆಚ್ಚು ಕಾಲ ಮಾತುಕತೆ ನಡೆಯಿತು. ಮಾಧ್ಯಮದವರು ಸಭಾಂಗಣ ಪ್ರವೇಶಿಸುವುದನ್ನು ತಡೆಯಲು ಸಭಾಂಗಣಕ್ಕೆ ಬೀಗ ಹಾಕಲಾಯಿತು.

`ಈ ವಿವಾದದಲ್ಲಿ ಪಾಲೆಮಾರ್ ಅವರ ಹೆಸರನ್ನು ವೃಥಾ ಎಳೆದು ತರಲಾಗಿದೆ. ಜಿಲ್ಲೆಯಲ್ಲಿ ಪಕ್ಷಕ್ಕೆ ನೆಲೆ ಒದಗಿಸುವಲ್ಲಿ ಶ್ರಮಿಸಿದ ಪಾಲೆಮಾರ್ ಅವರು ಸಂಕಷ್ಟದಲ್ಲಿರುವಾಗ ಪಕ್ಷದ ಜಿಲ್ಲಾ ಪ್ರಮುಖರು ಯಾರೂ ನೆರವಿಗೆ ಧಾವಿಸಿಲ್ಲ. ಜಿಲ್ಲೆಯ ಅಭಿವೃದ್ಧಿಗೆ, ಪಕ್ಷದ ಏಳಿಗೆಗೆ ಪಾಲೆಮಾರ್ ಪಟ್ಟಿರುವ ಶ್ರಮ ಈಗ ಯಾರಿಗೂ ನೆನಪಿಲ್ಲ. ಜಿಲ್ಲಾ ಪ್ರಮುಖರು ಪಾಲೆಮಾರ್ ಬೆಂಬಲಕ್ಕೆ ನಿಲ್ಲದಿದ್ದಲ್ಲಿ ಬೇರೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ~ ಎಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.`24 ಗಂಟೆಯೊಳಗೆ ಜಿಲ್ಲಾ ಘಟಕದ ನಿಲುವು ಏನೆಂಬುದು ಬಹಿರಂಗಪಡಿಸದಿದ್ದಲ್ಲಿ ನಾವೂ ನಮ್ಮ ದಾರಿ ನೋಡಿಕೊಳ್ಳುತ್ತೇವೆ~ ಎಂದು ಎಚ್ಚರಿಕೆ ನೀಡಿದರು. ಬಳಿಕ, ಪಾಲೆಮಾರ್ ಅವರ ಬೆಂಬಲಕ್ಕೆ ಧಾವಿಸುವ ಬಗ್ಗೆ ಪಕ್ಷದ ಜಿಲ್ಲಾ ಮಟ್ಟದ ನಾಯಕರು ಭರವಸೆ ನೀಡಿದ ಬಳಿಕ ಬೆಂಬಲಿಗರ ಆಕ್ರೋಶ ತಣ್ಣಗಾಯಿತು ಎಂದು ಮೂಲಗಳು ತಿಳಿಸಿವೆ.`ಪಾಲೆಮಾರ್ ರಾಜೀನಾಮೆಯಿಂದ ಬೆಂಬಲಿಗರಿಗೆ ಅಸಮಾಧಾನವಾಗಿರುವುದು ನಿಜ. ಜಿಲ್ಲಾ ಘಟಕ ಪಾಲೆಮಾರ್ ಬೆಂಬಲಕ್ಕೆ ನಿಂತಿದೆ. ಬೆಂಬಲಿಗರ ಅಸಮಾಧಾನ ವರಿಷ್ಠರಿಗೆ ತಲುಪಿಸುತ್ತೇವೆ~ ಎಂದು ಬಿಜೆಪಿ ನಗರ ಘಟಕ ಅಧ್ಯಕ್ಷ ಶ್ರೀಕರ ಪ್ರಭು `ಪ್ರಜಾವಾಣಿ~ಗೆ ತಿಳಿಸಿದರು.`ಪಾಲೆಮಾರ್ ಮೊಬೈಲ್‌ನಲ್ಲಿ ನೂರಿನ್ನೂರು ಮೆಸೇಜ್ ತುಂಬಿರುತ್ತವೆ. ಅವರು ಅಂತಹ ಅಶ್ಲೀಲ ದೃಶ್ಯ ಮೊಬೈಲ್‌ನಲ್ಲಿಟ್ಟುಕೊಳ್ಳುವ ವ್ಯಕ್ತಿಯಲ್ಲ. ಅವರಿಗೆ ಆಗದವರು ಈ ರೀತಿ ಮಾಡಿರುವ ಸಾಧ್ಯತೆ ಇದೆ. ವಿವಾದದಲ್ಲಿ ಅವರ ಹೆಸರನ್ನು ವೃಥಾ ಎಳೆದು ತರಲಾಗಿದೆ~ ಎಂದು ಪಾಲೆಮಾರ್ ಬೆಂಬಲಿಗ, ಪಾಲಿಕೆ ಸದಸ್ಯ ತಿಲಕ್ ತಿಳಿಸಿದರು.`ಪಕ್ಷಕ್ಕೆ ಪಾಲೆಮಾರ್ ಬೇಕಿಲ್ಲ ಎಂದಾದರೆ ಕಾರ್ಯಕರ್ತರಿಗೂ ಪಕ್ಷದ ಅಗತ್ಯ ಇಲ್ಲ. ಶುಕ್ರವಾರ ಸಂಜೆಯೊಳಗೆ ಪಕ್ಷದ ಮುಖಂಡರು ಸೂಕ್ತ ನಿರ್ಧಾರ ಕೈಗೊಳ್ಳದಿದ್ದಲ್ಲಿ ಕಾರ್ಯಕರ್ತರು ಮುಂದಿನ ದಾರಿ ನೋಡಿಕೊಳ್ಳಬೇಕಾಗುತ್ತದೆ~ ಎಂದು ಕಾರ್ಯಕರ್ತರೊಬ್ಬರು ಎಚ್ಚರಿಕೆ ಮಾತು ಹೇಳಿದರು.ಬಿಜೆಪಿ ಕಚೇರಿ ಮುಂದೆ ಏಕಾಏಕಿ ನೂರಾರು ಮಂದಿ ಕಾರ್ಯಕರ್ತರು ಸೇರಿದ್ದರಿಂದ ಕಚೇರಿ ಬಳಿ ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಬಿಜೆಪಿ ಜಿಲ್ಲಾ ಘಟಕ ಮಾಜಿ ಅಧ್ಯಕ್ಷ ಮೋನಪ್ಪ ಭಂಡಾರಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಜಗದೀಶ ಶೇಣವ, ಮೇಯರ್ ಪ್ರವೀಣ್, ಉಪಮೇಯರ್ ಗೀತಾ ನಾಯಕ್, ಮಾಜಿ ಮೇಯರ್‌ಗಳಾದ ಗಣೇಶ್ ಹೊಸಬೆಟ್ಟು, ರಜನಿ ದುಗ್ಗಣ್ಣ, ಪಾಲಿಕೆ ಸದಸ್ಯರಾದ ಶಾಂತಾ ಆರ್, ರೂಪಾ, ಪ್ರೇಮಾನಂದ ಶೆಟ್ಟಿ ಮತ್ತಿತರರಿದ್ದರು.ಬಿಕೋ ಎನ್ನುತ್ತಿದೆ `ಪಾಲೆಮಾರ್~ ಮನೆ

ವಿಧಾನಸಭೆಯಲ್ಲಿ ಅಶ್ಲೀಲ ದೃಶ್ಯ ವೀಕ್ಷಣೆ ವಿವಾದ ಬಹಿರಂಗಗೊಂಡ ಬಳಿಕ ಅವರ ನಗರದ ಬಿಜೈ ರಸ್ತೆಯ ಕೊಡಿಯಾಲ್ ಗುತ್ತು ಬಳಿ ಇರುವ ಕೃಷ್ಣ ಪಾಲೆಮಾರ್ ಅವರ ನಿವಾಸ ಬಿಕೋ ಎನ್ನುತ್ತಿದೆ. ಶುಕ್ರವಾರ ಬೆಳಿಗ್ಗೆ ನಿವಾಸಕ್ಕೆ ಸೂಕ್ತ ಭದ್ರತೆ ಒದಗಿಸಲಾಗಿತ್ತು. ಪಿಸಿಆರ್ ವಾಹನವನ್ನು ಅಲ್ಲಿ ಬೆಂಗಾವಲಿಗೆ ನಿಲ್ಲಿಸಲಾಗಿತ್ತು. ಸಂಜೆ ವೇಳೆ ವಿಶೇಷ ಭದ್ರತೆ ಕಂಡುಬರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry