ಬುಧವಾರ, ನವೆಂಬರ್ 20, 2019
25 °C

ಬಿಜೆಪಿ ಲೂಟಿಕೋರರ ಪಕ್ಷ: ದೇಶಪಾಂಡೆ

Published:
Updated:

ಬೆಳಗಾವಿ: `ಬಿಜೆಪಿ ಲೂಟಿಕೋರರ ಪಕ್ಷ. ಅಲ್ಪಸಂಖ್ಯಾತರ ಶೋಷಣೆ, ದಲಿತರ ಮೇಲೆ ದೌರ್ಜನ್ಯ, ಭ್ರಷ್ಟಾಚಾರ ಹಾಗೂ ಅತ್ಯಾಚಾರಗಳು ಬಿಜೆಪಿಯ ಸಾಧನೆಗಳು. ರಾಜ್ಯದ ಮಾನವನ್ನು ರಾಷ್ಟ್ರಮಟ್ಟದಲ್ಲಿ ಹರಾಜು ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.ತಾಲ್ಲೂಕಿನ ಮಾರಿಹಾಳ ಗ್ರಾಮದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ ಪರ ಗುರುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ ನಾಯಕರು ಜನಸಾಮಾನ್ಯರ ಹಣವನ್ನು ಲೂಟಿ ಮಾಡಿ ಜೈಲು ಪಾಲಾಗಿದ್ದಾರೆ. ದೇಶದ ಇತಿಹಾಸ ದಲ್ಲಿಯೇ ಇಷ್ಟೊಂದು ಭ್ರಷ್ಟ ಸರ್ಕಾರ ಯಾವ ರಾಜ್ಯದಲ್ಲಿಯೂ ಅಧಿಕಾರ ಮಾಡಿಲ್ಲ. ಬಿಜೆಪಿಯು ನಾಡು, ನುಡಿ, ಸಂಸ್ಕೃತಿಗೆ ಹೆಸರುವಾಸಿಯಾದ ಕರ್ನಾಟಕಕ್ಕೆ ಕಳಂಕ ತಂದಿದೆ ಎಂದು ಆಪಾದಿಸಿದರು.ಇಂದಿನ ರಾಜಕಾರಣವು ಹಣ ಹಾಗೂ ಹೆಂಡದ ಮೇಲೆ ನಿಂತಿದೆ. ಜನರು ರಾಜಕಾರಣಿಗಳ ಭರವಸೆಯ ಮಾತುಗಳಿಗೆ ಮರುಳಾಗುತ್ತಿದ್ದಾರೆ. ಇದರಿಂದ ಪುನಃ ಭ್ರಷ್ಟ ನಾಯಕರೇ ಆಯ್ಕೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಜನಸಾಮಾನ್ಯರು ಯಾವುದೇ ಆಮಿಷಗಳಿಗೆ ಬಲಿಯಾಗದೇ ಸೂಕ್ತ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.ಪ್ರಚಾರ ಸಭೆ ನಂತರ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ದೇಶಪಾಂಡೆ, ಬಂಡಾಯ ಅಭ್ಯರ್ಥಿಗಳಿಂದ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಎದ್ದಿದ್ದು, ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪಕ್ಷದಿಂದ ಹೊರ ನಡೆದ 17 ಬಂಡಾಯ ಅಭ್ಯರ್ಥಿಗಳ ಮೇಲೆ ಹೈಕಮಾಂಡ್ ಕಠಿಣ ಕ್ರಮ ಕೈಗೊಂಡಿದೆ. ಕಾಂಗ್ರೆನಿಂದ ಹೊರ ಹೋದ ಕಾರ್ಯಕರ್ತರಿಗೆ ತಿರುಗಿ ಬರಲು ಯಾವುದೇ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ, ಪಂಚನಗೌಡ ದ್ಯಾಮನಗೌಡ್ರ, ಗಂಗಣ್ಣ ಕಲ್ಲೂರ, ಅಶ್ವಿನಿ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)