ಶುಕ್ರವಾರ, ಮೇ 27, 2022
31 °C

ಬಿಜೆಪಿ ವರಿಷ್ಠರು ಇಕ್ಕಟ್ಟಿನಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ಬದಲಾವಣೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಬಣ ಹಿಡಿದಿರುವ ಪಟ್ಟನ್ನು ಮತ್ತಷ್ಟು ಬಿಗಿಗೊಳಿಸಿರುವ ಹಿನ್ನೆಲೆಯಲ್ಲಿ ತೀವ್ರ ಇಕ್ಕಟ್ಟಿಗೆ ಸಿಕ್ಕಿರುವ ಬಿಜೆಪಿ ವರಿಷ್ಠರು ಮುಂದಿನ ದಾರಿ ಕುರಿತು ಚಿಂತನೆ ಆರಂಭಿಸಿದ್ದಾರೆ.ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ಯಾವುದೇ ರೀತಿಯಲ್ಲೂ ಹಾನಿಯಾಗದಂತೆ ನಾಯಕತ್ವ ಬದಲಾವಣೆ ತೀರ್ಮಾನ ಆಗಬೇಕಿರುವುದರಿಂದ ಒತ್ತಡ ಹೇರಬಾರದು ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಯಡಿಯೂರಪ್ಪನವರ ಬಣಕ್ಕೆ ಕಿವಿಮಾತು ಹೇಳಿದ್ದಾರೆಂದು ಉನ್ನತ ಮೂಲಗಳು ಸೋಮವಾರ `ಪ್ರಜಾವಾಣಿ~ಗೆ ತಿಳಿಸಿವೆ.ರಾಜ್ಯ ಬಿಜೆಪಿ ಬೆಳವಣಿಗೆ ಬಗೆಗೆ ಅಧ್ಯಯನ ನಡೆಸಲು ಹಿರಿಯ ಮುಖಂಡ ಧರ್ಮೇಂದ್ರ ಪ್ರಧಾನ್ ಅವರನ್ನು ಈ ವಾರ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಮುಖ್ಯಮಂತ್ರಿ ಬದಲಾವಣೆಗೆ ವರಿಷ್ಠರು ಉತ್ಸುಕರಾಗಿದ್ದಾರೆ. `ಸದಾನಂದಗೌಡರ ನಾಯಕತ್ವದಲ್ಲಿ ಚುನಾವಣೆಗೆ ಹೋದರೆ ಪಕ್ಷ ಅಧಿಕಾರಕ್ಕೆ ಬರುವುದು ಕಷ್ಟ~ ಎಂಬ ಅಂಶ ವರಿಷ್ಠರ ಗಮನಕ್ಕೂ ಬಂದಿದೆ ಎಂದು ಮೂಲಗಳು ಹೇಳಿವೆ.ಮುಖ್ಯಮಂತ್ರಿ ಸ್ಥಾನಕ್ಕೆ ಜಗದೀಶ್ ಶೆಟ್ಟರ್,  ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪನವರ ನಡುವೆ ಆರಂಭವಾಗಿರುವ ಪೈಪೋಟಿ ಹಿನ್ನೆಲೆಯಲ್ಲಿ ಸುಸೂತ್ರವಾಗಿ ಅಧಿಕಾರ ಹಸ್ತಾಂತರ ಮಾಡುವ ಕುರಿತು ಬಿಜೆಪಿ ಹೈಕಮಾಂಡ್ ತಲೆಕೆಡಿಸಿಕೊಂಡಿದೆ. ನಾಯಕತ್ವವನ್ನು ಯಾವಾಗ ಮತ್ತು ಹೇಗೆ ಬದಲಾವಣೆ ಮಾಡಬೇಕೆಂಬ ವಿಷಯವನ್ನು ವರಿಷ್ಠರಿಗೆ ಬಿಡಿ. ಈ ಬಗ್ಗೆ ಸೂಕ್ತ ತೀರ್ಮಾನ ಮಾಡಲು ಸ್ವಲ್ಪ ಸಮಯ ಹಿಡಿಯಲಿದೆ ಎಂದು ಗಡ್ಕರಿ ಯಡಿಯೂರಪ್ಪ ಅವರ ಬಣಕ್ಕೆ ಮನವರಿಕೆ ಮಾಡಿದ್ದಾರೆ.`ನಾಯಕತ್ವ ಬದಲಾವಣೆ ಕುರಿತು ಚಿಂತನೆ ಆರಂಭವಾಗಿದೆ. ನೀವು ಪ್ರತ್ಯೇಕ ಸಭೆಗಳನ್ನು ನಡೆಸುವುದು. ಪತ್ರಿಕಾ ಹೇಳಿಕೆ ಕೊಡುವ ಕೆಲಸ ಮಾಡಬೇಡಿ~ ಎಂದು ಗಡ್ಕರಿ ಮನವಿ ಮಾಡಿದ್ದಾರೆ.

ಗಡ್ಕರಿ ಮಗನ ಆರತಕ್ಷತೆ ಜುಲೈ 2ರಂದು ದೆಹಲಿಯಲ್ಲಿ ನಡೆಯಲಿದ್ದು ಅನಂತರ ರಾಜ್ಯ ಬಿಜೆಪಿ ಬೆಳವಣಿಗೆ ಕುರಿತು ಚರ್ಚೆ ನಡೆಸಲಿದ್ದಾರೆ. ಸದಾನಂದಗೌಡರ ನಾಯಕತ್ವ ಬದಲಾವಣೆ ಕುರಿತು ಇದುವರೆಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದ ವರಿಷ್ಠರಲ್ಲಿ ಒಮ್ಮತ ಏರ್ಪಡುವ ಸಂಭವವಿದೆ. ಅನಂತ ಕುಮಾರ್ ಕೂಡಾ ಒಪ್ಪುವ ಸಾಧ್ಯತೆ ಇದೆ ಎಂದು ಮೂಲಗಳು ವಿವರಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.