ಬಿಜೆಪಿ ವಿರುದ್ಧ ಜೆಡಿಎಸ್ ಪ್ರತಿಭಟನೆ

7

ಬಿಜೆಪಿ ವಿರುದ್ಧ ಜೆಡಿಎಸ್ ಪ್ರತಿಭಟನೆ

Published:
Updated:

ಬಾಗಲಕೋಟೆ: ಜೆಡಿಎಸ್ ಶಾಸಕ ಜಮೀರ್ ಅಹ್ಮದ್‌ಖಾನ್ ಅವರ ಮೇಲೆ ರಾತ್ರೋರಾತ್ರಿ ಆರೋಪ ಪಟ್ಟಿ ಸಲ್ಲಿಸಿರುವ ಕ್ರಮವನ್ನು ಖಂಡಿಸಿ ಜಿಲ್ಲಾ ಜೆಡಿಎಸ್ ಘಟಕದ ಕಾರ್ಯಕರ್ತರು ಶುಕ್ರವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಯು ವಿರೋಧ ಪಕ್ಷಗಳನ್ನು ದಮನ ಮಾಡುವುದಕ್ಕಾಗಿ ಇಂತಹ ಸೇಡಿನ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ದೂರಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಆಪರೇಷನ್ ಕಮಲದ ಮೂಲಕ ವಿರೋಧಪಕ್ಷಗಳ ಮೇಲೆ ಪ್ರಹಾರ ನಡೆಸುತ್ತಿರುವ ಬಿಜೆಪಿಯು ಶಾಸಕರೊಬ್ಬರ ವಿರುದ್ಧ ಆರೋಪ ಪಟ್ಟಿ ಸಲ್ಲಿಸುವುದರೊಂದಿಗೆ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಸವಪ್ರಭು ಸರನಾಡಗೌಡರ ಟೀಕಿಸಿದರು.“ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ಸಭಾಧ್ಯಕ್ಷರನ್ನು ಬಳಸಿಕೊಂಡು ಶಾಸಕರನ್ನು ಅನರ್ಹಗೊಳಿಸಿ ಪ್ರಜಾತಂತ್ರ ವ್ಯವಸ್ಥೆಯ ಕತ್ತುಹಿಸುಕಿದೆ. ನಂತರದ ದಿನಗಳಲ್ಲಿ ಸದನ ಸಮಿತಿಗಳ ಮೂಲಕ ಶಾಸಕರ ಮೇಲೆ ‘ಅಮಾನತು’ ತೂಗುಕತ್ತಿ ಬೀಸತೊಡಗಿದೆ. ಇದೀಗ ಪೊಲೀಸ್ ವ್ಯವಸ್ಥೆ ಮುಂದಿಟ್ಟುಕೊಂಡು ಶಾಸಕರನ್ನು ದಮನ ಮಾಡಲು ಹೊರಟಿದೆ” ಎಂದು ಜೆಡಿಎಸ್ ಆರೋಪಿಸಿದೆ.ಬಿಜೆಪಿ ಭಿನ್ನಮತ ವೇಳೆ ಗೋವಾದಲ್ಲಿ ನಡೆದ ರಾಜಕೀಯ ಬೆಳವಣಿಗೆ ಸಹಿಸದ ಸರ್ಕಾರ, ಶಾಸಕ ಜಮೀರ್ ಅಹ್ಮದ್ ಅವರನ್ನು ರಾಜಕೀಯವಾಗಿ ಮಟ್ಟ ಹಾಕಲು ಷಡ್ಯಂತ್ರ ರೂಪಿಸಿದೆ ಎಂದು ದೂರಲಾಗಿದೆ. ದ್ವೇಷದ ರಾಜಕಾರಣದ ಹಿನ್ನೆಲೆಯಲ್ಲಿ ಜನತಾದಳ ಹಾಗೂ ಅಲ್ಪಸಂಖ್ಯಾತ ಮುಖಂಡರನ್ನು ದಮನ ಮಾಡಲು ಯತ್ನಿಸುತ್ತಿರುವ ಬಿಜೆಪಿ ಸರ್ಕಾರದ ಪತನವಾಗುವರೆಗೆ ಜೆಡಿಎಸ್ ರಾಜ್ಯದಾದ್ಯಂತ ಹೋರಾಟ ನಡೆಸಲಿದೆ ಎಂದು ಜೆಡಿಎಸ್ ಮುಖಂಡರು ತಿಳಿಸಿದರು.

 

ಜಮೀರ್ ಅಹ್ಮದ್ ವಿರುದ್ಧದ ಆರೋಪದಲ್ಲಿ ಹುರುಳಿಲ್ಲದಿರುವುದರಿಂದ ಆರೋಪಪಟ್ಟಿಯಿಂದ ಅವರ ಹೆಸರನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ಅವರ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಸವಪ್ರಭು ಸರನಾಡಗೌಡ ಮನವಿಪತ್ರವನ್ನು ಓದಿ, ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಬಿ.ನಾಗನೂರ, ಶಿವಪ್ರಸಾದ ಗದ್ದಿ, ನಬೀ ಟಂಕಸಾಲಿ, ಬಸವರಾಜ ಕಲ್ಲೊಳ್ಳಿ, ಶರಣು ಹುರಕಡ್ಲಿ, ಸಲೀಂ ಮೋಮಿನ್, ರಫೀಕ್ ಲೋಕಾಪುರ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry