ಶುಕ್ರವಾರ, ಏಪ್ರಿಲ್ 16, 2021
21 °C

ಬಿಜೆಪಿ ವಿಶ್ವಾಸಾರ್ಹತೆಗೆ ಕುಂದು-ಅಡ್ವಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 1992ರಲ್ಲಿ ಬಾಬರಿ ಮಸೀದಿ ಧ್ವಂಸವಾದ ನಂತರ ಬಿಜೆಪಿಯ ವಿಶ್ವಾಸಾರ್ಹತೆಗೆ ಭಾರಿ ಧಕ್ಕೆ ಉಂಟಾಯಿತು ಎಂದು ಬಿಜೆಪಿಯ ಹಿರಿಯ ಮುಖಂಡ ಎಲ್. ಕೆ. ಅಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ.ಬಾಬರಿ ಮಸೀದಿ ಉರುಳಿದ 15 ದಿನಗಳ ನಂತರ ಪತ್ರಿಕೆಗಳಿಗೆ ತಾವು ಬರೆದ ಲೇಖನಗಳನ್ನು ಜ್ಞಾಪಿಸಿಕೊಂಡ ಅವರು, ವಿವಾದಾತ್ಮಕ ಸ್ಥಳದಲ್ಲಿಯ ಕಟ್ಟಡ ಉರುಳಿ ಬಿದ್ದದ್ದು ತಮ್ಮ ಜೀವನದ ಅತೀ ದುಃಖಕರ ದಿನ ಎಂದು ಬ್ಲಾಗ್‌ನಲ್ಲಿ ತಿಳಿಸಿದ್ದಾರೆ.ಅಯೋಧ್ಯೆಯ ಘಟನಾವಳಿಯ ಬಗ್ಗೆ ಯಾಕೆ ತಪ್ಪಿತಸ್ಥ ಭಾವನೆ ಹೊಂದಿದ್ದೀರಿ ಎಂದು ಕೆಲವು ಸಹೋದ್ಯೋಗಿಗಳು ಆಗ ಟೀಕಿಸಿದ್ದೂ ಉಂಟು ಎಂದು ಅಡ್ವಾಣಿ ಹಿಂದಿನ ದಿನಗಳನ್ನು ಮೆಲಕು ಹಾಕಿದ್ದಾರೆ.‘ನನಗೆ ತಪ್ಪಿತಸ್ಥ ಭಾವನೆ ಇಲ್ಲ, ಅಯೋಧ್ಯೆ ಚಳವಳಿಯಲ್ಲಿ ಭಾಗವಹಿಸಿದ್ದಕ್ಕೆ ಹೆಮ್ಮೆ ಇದೆ, ಆದರೆ ಆ ಘಟನೆಯ ನಂತರ ಬಿಜೆಪಿಯ ವಿಶ್ವಾಸಾರ್ಹತೆಗೆ ಕುಂದು ಉಂಟಾಗಿದ್ದರ ಬಗ್ಗೆ ಬೇಸರವಿದೆ’ ಎಂದು ಸಹೋದ್ಯೋಗಿಗಳಿಗೆ ಉತ್ತರಿಸಿದ್ದೆ’ ಎಂದು ಹೇಳಿಕೊಂಡಿದ್ದಾರೆ.ಮಸೀದಿ ಧ್ವಂಸದ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದ ಸಂಘಟನೆಗಳು ಕಾರ್ಯಕರ್ತರು ತಾಳ್ಮೆ ಕಳೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಸೂಕ್ತವಾಗಿ ಅಥವಾ ವಿವೇಚನೆಯಿಂದ ನಿರ್ಧಾರ ತೆಗೆದುಕೊಂಡಿರಲಿಲ್ಲ ಎನ್ನುವುದನ್ನು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾಗಿ ಅಡ್ವಾಣಿ ತಿಳಿಸಿದ್ದಾರೆ.ಮಂದಿರ ನಿರ್ಮಾಣ ಮಾಡಬೇಕು ಎಂಬ ಜನರ ಆಶಯವನ್ನು ಈಡೇರಿಸಲು ಆಗಿನ ಉತ್ತರಪ್ರದೇಶ ಸರ್ಕಾರ ಯೋಜಿತವಾಗಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಸಾಗುತ್ತಿರುವ ಸಂದರ್ಭದಲ್ಲಿ ಕಟ್ಟಡ ಉರುಳಿಬಿದ್ದುದು ಎಲ್ಲಾ ಪ್ರಯತ್ನಗಳನ್ನು ನಿಷ್ಫಲಗೊಳಿಸಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಸಿವಿಸಿ ವಿವಾದ: ಅಡ್ವಾಣಿ ಮತ್ತೆ ಟೀಕೆ


ನವದೆಹಲಿ (ಪಿಟಿಐ): ಕೇಂದ್ರ ಜಾಗೃತ ಆಯುಕ್ತರ (ಸಿವಿಸಿ) ನೇಮಕ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಯುಪಿಎ ಸರ್ಕಾರದ ವಿರುದ್ಧ ಮತ್ತೊಮ್ಮೆ ಟೀಕೆಗಳ ಸುರಿಮಳೆಗರೆದಿದ್ದಾರೆ.ಈ ವಿಷಯದಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರ ಬಗೆಗಿನ ವಿಶ್ವಾಸಾರ್ಹತೆ ಗೊಂದಲದಿಂದ ಕೂಡಿದೆ ಎಂದು ಅವರು ದೂರಿದ್ದಾರೆ.ತಮ್ಮ ಬ್ಲಾಗ್‌ನಲ್ಲಿ ಇದನ್ನು ಪ್ರಸ್ತಾಪಿರುವ ಅಡ್ವಾಣಿ, ಹಗರಣದ ಆರೋಪ ಹೊತ್ತವರನ್ನು ಇಂತಹ ಹುದ್ದೆಗಳಿಗೆ ನೇಮಕ ಮಾಡುವ ಮೂಲಕ ಸರ್ಕಾರ ಸಂಪೂರ್ಣವಾಗಿ ತನ್ನ ಜವಾಬ್ದಾರಿಯನ್ನು ಮರೆತಂತಿದೆ ಎಂದು ಟೀಕಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.