ಬಿಜೆಪಿ ಶಾಸಕ ಸುರೇಶ್‌ ರಾಣಾ ಬಂಧನ

7
ಮುಜಫ್ಫರ್‌ನಗರ ಕೋಮು ಗಲಭೆ

ಬಿಜೆಪಿ ಶಾಸಕ ಸುರೇಶ್‌ ರಾಣಾ ಬಂಧನ

Published:
Updated:

ಲಖನೌ (ಪಿಟಿಐ): ಮುಜಫ್ಫರ್‌­ನಗರ ಗಲಭೆಗೆ ಕಾರಣವಾದ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬಿಜೆಪಿ ಶಾಸಕ ಸುರೇಶ್‌ ರಾಣಾ ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿದರು.ಇದರೊಂದಿಗೆ ಗಲಭೆಗೆ ಸಂಬಂಧಿಸಿದಂತೆ  ಇದೇ ಮೊದಲ ಬಾರಿಗೆ ಪ್ರಮುಖ ರಾಜಕಾರಣಿಯೊಬ್ಬರನ್ನು ಬಂಧಿಸಿದಂತಾಗಿದೆ.ಉತ್ತರ ಪ್ರದೇಶ ವಿಧಾನಸಭೆ ಅಧಿವೇಶನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದ ಕೆಲವೇ ಕ್ಷಣಗಳಲ್ಲಿ ಈ ಬಂಧನ ನಡೆಯಿತು. ಶಾಮ್ಲಿ ಜಿಲ್ಲೆಗೆ ಸೇರಿದ ಠಾಣಾ ಭವನ್‌ ಕ್ಷೇತ್ರದ ಶಾಸಕ. ಅವರು ಪಕ್ಷದ ಕಚೇರಿಯಿಂದ ಸಂಜೆ ಗೋಮತಿನಗರಕ್ಕೆ ಹೋಗು­ತ್ತಿ­ದ್ದಾಗ ಲಖನೌ ಪೊಲೀಸರಿಂದ ಈ ಬಂಧನ ನಡೆಯಿತು.ರಾಣಾ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) 188ನೇ ಸೆಕ್ಷನ್‌ (ಸಾರ್ವಜನಿಕ ಸುವ್ಯವಸ್ಥೆ ದೃಷ್ಟಿಯಿಂದ ಹೊರಡಿಸಿದ್ದ ಆದೇಶ­ಗಳನ್ನು ಉದ್ದೇಶ­ಪೂರ್ವಕ­ವಾಗಿ ಉಲ್ಲಂಘಿ­ಸುವುದು), 153 ಎ (ಧರ್ಮದ ಆಧಾರ­ದಲ್ಲಿ ಗುಂಪುಗಳ ಮಧ್ಯೆ ವೈರತ್ವಕ್ಕೆ ಕುಮ್ಮಕ್ಕು ನೀಡುವುದು), 353ನೇ ಸೆಕ್ಷನ್‌ (ಗಲಭೆ ನಡೆ­ಯಲಿ ಎಂದೇ ಜನರನ್ನು ಕೆರಳಿ­ಸುವುದು) ಮತ್ತು 435ನೇ ಸೆಕ್ಷನ್‌ಗಳಡಿ (ಆಸ್ತಿಪಾಸ್ತಿಗೆ ಹಾನಿ) ದೂರು ದಾಖಲಿಸಲಾಗಿದೆ. ಈ ಸೆಕ್ಷನ್‌ಗಳಡಿ ದಾಖಲಿಸಿದ ದೂರಿಗೆ ಜಾಮೀನು ಪಡೆಯುವ ಅವಕಾಶ ಇರುವುದಿಲ್ಲ.ಗಲಭೆಯನ್ನು ಪ್ರಚೋದಿಸಿದ ಶಾಸಕರನ್ನು ಬಂಧಿಸು­ವಲ್ಲಿ ಉತ್ತರಪ್ರದೇಶ ಸರ್ಕಾರ ವಿಳಂಬ ಮಾಡುತ್ತಿದೆ ಎಂಬ ತೀಕ್ಷ್ಣ ಟೀಕೆ ಕೆಲವು ದಿನಗಳಿಂದಲೇ ಕೇಳಿಬರು­ತ್ತಿತ್ತು. ಈ ಹಿನ್ನೆಲೆಯಲ್ಲಿ ಐಜಿಪಿ ಆರ್‌.ಕೆ.ವಿಶ್ವಕರ್ಮ ಅವರು ಗುರುವಾರ ಸ್ಪಷ್ಟನೆ ನೀಡಿ, ‘ವಿಧಾನಸಭೆ ಅಧಿ­ವೇಶನ ನಡೆ­ಯುತ್ತಿರುವುದರಿಂದ ಉದ್ದೇಶ-­ಪೂರ್ವಕ­­ವಾಗಿಯೇ ಬಂಧನವನ್ನು ಮಾಡಿಲ್ಲ’ ಎಂದು ಹೇಳಿದ್ದರು.ರಾಜೀನಾಮೆಗೆ ಒತ್ತಾಯ (ನವದೆಹಲಿ ವರದಿ): ಮುಜಫ್ಫರ್‌ನಗರದಲ್ಲಿ ಕೋಮು ಹಿಂಸಾಚಾರ ನಿಲ್ಲಿಸಲು ವಿಫಲವಾಗಿರುವುದಕ್ಕಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.ಅಖಿಲೇಶ್‌ ಅವರು ಜನರ ಜೀವ ಹಾಗೂ ಆಸ್ತಿ ರಕ್ಷಿಸಬೇಕಾದ ಸಾಂವಿಧಾನಿಕ ಹೊಣೆಗಾರಿಕೆಯನ್ನು ನಿರ್ವಹಿಸಲು ವಿಫಲವಾಗಿದ್ದಾರೆ ಎಂದು ಪಕ್ಷದ ರಾಜ್ಯ ವಿದ್ಯಮಾನಗಳ ಮೇಲ್ವಿಚಾರಕರೂ ಆದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್‌ ಮಿಸ್ತ್ರಿ ಟೀಕಿಸಿದ್ದಾರೆ.ಗರ್ಭಿಣಿಯರ ಕುರಿತು ವಿಶೇಷ ಕಾಳಜಿಗೆ  ಸೂಚನೆ

ಮುಜಪ್ಫರ್‌ನಗರ:
ಮುಜಪ್ಫರ್‌ ನಗರ ಗಲಭೆ ಸಂತ್ರಸ್ತರ ಶಿಬಿರದಲ್ಲಿರುವ ಗರ್ಭಿಣಿಯರ ಕುರಿತು ವಿಶೇಷ ಕಾಳಜಿ ವಹಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ನಿರ್ದೇಶನ ನೀಡಿದೆ.ಗುರುವಾರ ಸಂತ್ರಸ್ತರ ಶಿಬಿರಕ್ಕೆ ಭೇಟಿ ನೀಡಿದ್ದ ಆಯೋಗದ ಅಧ್ಯಕ್ಷೆ ಮಮತಾ ಶರ್ಮಾ, ಗಲಭೆಯಲ್ಲಿ ಸಂತ್ರಸ್ತರಾಗಿರುವ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಮತ್ತು ಸಮರ್ಪಕ ವೈದ್ಯಕೀಯ ಸೌಲಭ್ಯ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಗಲಭೆಪೀಡಿತ ಪ್ರದೇಶಗಳಲ್ಲಿ ಬಾಲಕಿಯರು ಯಾವುದೇ ಭಯವಿಲ್ಲದೇ ಶಾಲೆಗೆ  ಹೋಗಲು ಸೂಕ್ತ ರಕ್ಷಣೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಶಿಬಿರದಲ್ಲಿ ಸುಮಾರು 138 ಗರ್ಭಿಣಿಯರಿದ್ದಾರೆ ಎಂದು ಅವರು ತಿಳಿಸಿದರು.ಸತ್ತವರ ಸಂಖ್ಯೆ 48

ಮುಜಫ್ಫರ್‌ನಗರ:
ಉತ್ತರ­ಪ್ರದೇಶದ ಮುಜಫ್ಫರ್‌ನಗರ ಜಿಲ್ಲೆಯಲ್ಲಿ ನಡೆದ ಕೋಮುಗಲಭೆಯಲ್ಲಿ  ಮೃತಪಟ್ಟವರ ಸಂಖ್ಯೆ 48 ಎಂದು ಅಧಿಕಾರಿಗಳು ಅಧಿಕೃತ­ವಾಗಿ ತಿಳಿಸಿದ್ದಾರೆ.ಗಲಭೆಯಲ್ಲಿ ಮೃತರಾದವರ ಪಟ್ಟಿಯನ್ನು ಗುರುವಾರ ಬಿಡುಗಡೆಗೊಳಿಸಿರುವ ಅಧಿಕಾರಿ­ಗಳು, ‘ಮೃತಪಟ್ಟವರಲ್ಲಿ ಐವರು ಮಹಿಳೆ­ಯರು ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ’ ಎಂದು ತಿಳಿಸಿದ್ದಾರೆ. ‘ಮೃತರ ಪೈಕಿ 43 ಮಂದಿ ಮುಜಫ್ಫರ್‌ನಗರ, 3 ಮೀರತ್  ಹಾಗೂ ಸಹರಣ್‌ಪುರ ಮತ್ತು ಹಾಪುರಗಳಲ್ಲಿ ತಲಾ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ’ ಎಂದು ಹೇಳಿದ್ದಾರೆ.ಇಲ್ಲಿನ ಕಾವಲ್ ಗ್ರಾಮದಲ್ಲಿ ಬಾಲಕಿ ಯರನ್ನು ಚುಡಾಯಿಸಿದ ಕಾರಣಕ್ಕಾಗಿ ಆಗಸ್ಟ್‌ 27ರಂದು ಮೂವರ ಹತ್ಯೆಯೊಂದಿಗೆ ಆರಂಭ ವಾದ ಕೋಮುಗಲಭೆ ನಂತರ, ಸುತ್ತಮುತ್ತಲಿನ ಜಿಲ್ಲೆಗಳಿಗೆ ವ್ಯಾಪಿಸಿತ್ತು.ಸಣ್ಣ ಗುಂಪಿನ ಕೈವಾಡ: ಪ್ರಧಾನಿ

ನವದೆಹಲಿ:
ಮುಜಫ್ಫರ್‌ನಗರ ಗಲಭೆಯನ್ನು ‘ಅತ್ಯಂತ ವಿಷಾದಕರ’ ಎಂದಿರುವ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌, ಕೆಲ ಸಣ್ಣ ಗುಂಪುಗಳಿಂದಾಗಿ ಗಲಭೆ ನಡೆಯುಂತಾಯಿತು ಎಂದು ತಿಳಿಸಿದ್ದಾರೆ.ರಾಷ್ಟ್ರೀಯ ಕೋಮು ಸೌಹಾರ್ದ ಪ್ರಶಸ್ತಿ  ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತ­ನಾಡಿದ ಡಾ.ಸಿಂಗ್‌, ‘ಕೆಲವೇ ಕೆಲ ಸಣ್ಣ ಗುಂಪುಗಳು ನಮ್ಮಲ್ಲಿ ಅನೈಕ್ಯತೆ ಮೂಡಿಸುತ್ತಿವೆ. ಇಂತಹ ಶಕ್ತಿಗಳ ದಮನ ಪ್ರತಿಯೊಬ್ಬರ ಕರ್ತವ್ಯ­ವಾಗಬೇಕು. ದೇಶದಲ್ಲಿ ಕೋಮು ಸೌಹಾರ್ದ ಕಾಪಾಡಿ­ಕೊಳ್ಳಲು ಸರ್ಕಾರ ಸಾಧ್ಯವಿರುವ ಎಲ್ಲ ಯತ್ನ­ಗಳನ್ನು ಮಾಡುತ್ತಿದ್ದು, ಈ ಕೆಲಸ ಮತ್ತಷ್ಟು ಗಟ್ಟಿಗೊಳ್ಳುವ ದಿಸೆಯಲ್ಲಿ ಇದೇ 23 ರಂದು ರಾಷ್ಟ್ರೀಯ ಐಕ್ಯತಾ ಮಂಡಳಿಯ ಸಭೆಯನ್ನು ಕರೆಯಲಾಗಿದೆ’ ಎಂದು ತಿಳಿಸಿದರು.2011ರ ರಾಷ್ಟ್ರೀಯ ಕೋಮು ಸೌಹಾರ್ದ ಪ್ರಶಸ್ತಿಯನ್ನು ಮಿಜೋರಾಂನ ಖಮಲಿಯಾನಾ, ಒಡಿಶಾದ ಅಬ್ದುಲ್‌ ಬಾರಿ ಅವರಿಗೆ, 2012ರ ಸಾಲಿನ ಪ್ರಶಸ್ತಿಯನ್ನು ದೆಹಲಿ ಮೂಲದ ‘ಎಫ್‌ಎಎನ್‌ಎಸ್‌’ ಸ್ವಯಂಸೇವಾ ಸಂಸ್ಥೆಗೆ ಪ್ರದಾನ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry