ಬಿಜೆಪಿ ಸದೃಢ, ಗೊಂದಲ ಬೇಡ: ಸಚಿವ

7
ಪ್ರಜಾವಾಣಿ ವಾರ್ತೆ

ಬಿಜೆಪಿ ಸದೃಢ, ಗೊಂದಲ ಬೇಡ: ಸಚಿವ

Published:
Updated:

ದಾವಣಗೆರೆ: ಜಿಲ್ಲಾ ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ. ಹಾಗನ್ನುವುದಕ್ಕೆ ನೀವಿಲ್ಲಿ ಬಂದು ಸೇರಿರುವುದೇ ಸಾಕ್ಷಿ. ಪಕ್ಷದಿಂದ ಹೊರಹೋಗಿದ್ದೇವೆ ಅಂದುಕೊಂಡವರು ನಿಮ್ಮನ್ನು ತಮ್ಮೆಡೆಗೆ ಸೆಳೆಯಲು ಬಂದಾಗ ನಿಷ್ಠುರವಾಗಿ ಮಾತನಾಡಿ.- ನೀವೆಲ್ಲಾ ಸಂಜೆ ವೇಳೆ ಪಾರ್ಟಿಗಳಿಗೆ ಹೋಗಬೇಡಿ. ಅಲ್ಲಿ ಏನಾಗುತ್ತೋ ಗೊತ್ತಾಗುವುದಿಲ್ಲ. ಮಾತ್ರವಲ್ಲ ಡಿ. 10ರವರೆಗೆ ಬಿಜೆಪಿಯ ಯಾವುದೇ ಕಾರ್ಯಕರ್ತರು ಹಾವೇರಿ ಕಡೆ ಹೋಗಲೇಬೇಡಿ. ಕೊನೆಗೆ ಈ ಮಾಧ್ಯಮದವರು ನಿಮ್ಮನ್ನು ತೋರಿಸಿ ಕೆಜೆಪಿ ಸೇರಿದ್ದಾನೆ ಅಂದುಬಿಟ್ಟಾರು. ನಿಷ್ಠುರವಾಗಿ ಮಾತನಾಡದಿದ್ದರೆ ಹಲವರು ನಮ್ಮನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ...- ಇದು ಸಚಿವ ಎಸ್.ಎ. ರವೀಂದ್ರನಾಥ್ ಅವರ ಸ್ಪಷ್ಟ ಸೂಚನೆ. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ದಿಢೀರನೆ ಕರೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಪತ್ರಿಕಾ ವರದಿಗಳು ಹೇಳಿವೆ. ಇವು ಒಮ್ಮೆ ಆತಂಕ ಮೂಡಿಸುವಂತಿದೆ. ಆದರೆ, ಸದ್ಯ ಜಿಲ್ಲಾ ಬಿಜೆಪಿಯಲ್ಲಿ 2.17 ಲಕ್ಷ ಸದಸ್ಯರಿದ್ದಾರೆ. ಈ ವಾಸ್ತವ ಅರಿಯದೇ ವರದಿ ಬರುತ್ತಿವೆ. ಪಕ್ಷವು ಕಾರ್ಯಕರ್ತರು ಕಟ್ಟಿದ ಮನೆ. ವ್ಯಕ್ತಿ ಕಟ್ಟಿದ್ದಲ್ಲ.ಬಿ.ಎಸ್. ಯಡಿಯೂರಪ್ಪ ಅವರು ಪಕ್ಷ ಬಿಟ್ಟು ಹೋಗಿದ್ದು ತುಂಬಾ ನೋವುಂಟು ಮಾಡಿದೆ. ಆದರೆ, ಕಾರ್ಯಕರ್ತರೇ ಜೀವಾಳ ಅನ್ನುತ್ತಿದ್ದ ಅವರು ವ್ಯಕ್ತಿ ಕೇಂದ್ರಿತ ಪಕ್ಷ ಕಟ್ಟುತ್ತಿದ್ದಾರೆ. ಬೇರೆ ರಾಜ್ಯಗಳಲ್ಲೂ ಇಂಥದ್ದೇ ಸಮಸ್ಯೆ ಉಂಟಾದಾಗ ಪಕ್ಷವನ್ನು ಕಾರ್ಯಕರ್ತರೇ ಕಟ್ಟಿ ಬೆಳೆಸಿದ ಉದಾಹರಣೆಯಿದೆ ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಹೇಳಿದರು.ಶಾಸಕ ಎಂ. ಬಸವರಾಜ ನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಅಸ್ತಿತ್ವವೇ ಇಲ್ಲ ಎಂಬಂತೆ ಬಿಂಬಿಸಲಾಗುತ್ತಿದೆ. ಬಾಡಿಗೆ ಜನರನ್ನು ಕರೆತಂದು ಬಿಜೆಪಿ ಕಾರ್ಯಕರ್ತರು ವಲಸೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಇಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದಿರುವವರು ಯಾರೂ ಹೋಗಿಲ್ಲ. ರಾಜ್ಯದಲ್ಲಿ ಬಿಜೆಪಿ ಮತ್ತೆ ನೆಲೆಯೂರುತ್ತದೆ ಎಂದು ಸ್ಪಷ್ಟ ಭರವಸೆ ನೀಡುತ್ತೇವೆ ಎಂದರು.ಮುಂದಿನ ಕೆಲವೇ ದಿನಗಳಲ್ಲಿ `ಕಾಂಗ್ರೆಸ್ ಹಠಾವೋ; ದೇಶ್ ಬಚಾವೋ' ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಪಾಲಿಕೆ ಉಪ ಮೇಯರ್ ಮಹೇಶ್ ರಾಯಚೂರು, ಮುಖಂಡರಾದ ವೈ. ಮಲ್ಲೇಶ್, ಜಯಣ್ಣ, ಯಶವಂತರಾವ್ ಜಾಧವ್, ಬಿ. ಲೋಕೇಶ್, ಡಿ.ಎಸ್. ಶಿವಶಂಕರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry