ಮಂಗಳವಾರ, ಏಪ್ರಿಲ್ 20, 2021
29 °C

ಬಿಜೆಪಿ ಸಭೆಯಲ್ಲಿ ಮಾರಾಮಾರಿ; ನಾಯಕರು ಸಾಕ್ಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಬಿಜೆಪಿ ಜಿಲ್ಲಾ ಮಟ್ಟದ ಸಭೆ ಆರಂಭದಲ್ಲೇ ಅಧ್ಯಕ್ಷ ಎನ್.ಲಕ್ಷ್ಮಯ್ಯ ವಿರುದ್ಧ ಪಕ್ಷದ ಗುಂಪೊಂದು ವ್ಯಕ್ತಪಡಿಸಿದ ಅಸಮಾಧಾನ ಗುಂಪುಗಳ ನಡುವೆ ಮಾರಾಮಾರಿಗೆ ದಾರಿ ಮಾಡಿದ ಘಟನೆ ನಗರ ಹೊರವಲಯದ ಆರ್.ವಿ.ಶಾಲೆ ಆವರಣದಲ್ಲಿ ಶನಿವಾರ ನಡೆಯಿತು.ಪಕ್ಷದ ಬಹುತೇಕರಿಗೆ ಮುಜುಗರ ತಂದ ಈ ಘಟನೆಗೆ ಶಾಸಕರಾದ ವೈ.ಸಂಪಂಗಿ, ವೈ.ಎ.ನಾರಾಯಣಸ್ವಾಮಿ,   ಡಿ.ಎಸ್.ವೀರಯ್ಯ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ಗಿರೀಶ್ ಪಟೇಲ್, ಶಾಸಕ ನಂದೀಶ ರೆಡ್ಡಿ, ಮುಖಂಡ ಸುರೇಂದ್ರಗೌಡ ಸಾಕ್ಷಿಯಾದರು.ದಯವಿಟ್ಟು ಶಾಂತಿ ಕಾಪಾಡಿ ಎಂಬ ಈ ಮುಖಂಡರ ಮಾತುಗಳನ್ನು ಲೆಕ್ಕಿಸದೆ ಕಾರ್ಯಕರ್ತರು ವೇದಿಕೆ ಒಳಗೆ-ಹೊರಗೆ ಪರಸ್ಪರ ತಳ್ಳಾಟ -ಹಲ್ಲೆ ನಡೆಸಿದರು. ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಕೈಗೆ ಸಿಕ್ಕಿದ ಕುರ್ಚಿ, ಹೆಲ್ಮೆಟ್, ಸಸಿಕುಂಡ ಎತ್ತಿಕೊಂಡು ಸಿಕ್ಕಿದ ವಿರೋಧಿಗಳಿಗೆ ಹೊಡೆದರು. ಎಸೆದರು. ಪರಿಣಾಮ ಹಲವರು ಗಾಯಗೊಂಡರು. ಕಾರ್ಯಕರ್ತರ ಈ ಮಾರಾಮಾರಿ ತಡೆಯಲು ಸಾಧ್ಯವಾಗದ ಮುಖಂಡರು ಸಭೆ ಮುಂದೂಡಿ ಹೊರಗೆ ನಡೆದರು. ನಂತರ ಕೆಲ ಮುಖಂಡರ ನೇತೃತ್ವದಲ್ಲಿ ಮತ್ತೆ ಸಭೆ ನಡೆದರೂ ಎರಡು ಬಾರಿ ಮತ್ತೆ ವಾಗ್ವಾದ ನಡೆದವು.ವಿವರ: ಬೆಳಿಗ್ಗೆ 10.30ಕ್ಕೆ ಸಭೆ ನಿಗದಿಯಾಗಿತ್ತು. ಶುರುವಾಗುವ ವೇಳೆಗೆ ಮಧ್ಯಾಹ್ನ 12 ಗಂಟೆಯಾಗಿತ್ತು. ಸಭೆ ಆರಂಭದಲ್ಲಿ ಸ್ವಾಗತ ಭಾಷಣ ಶುರುವಾಗುವಷ್ಟರಲ್ಲೆ ಎದ್ದು ನಿಂತ ಶ್ರೀನಿವಾಸಪುರ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ಎನ್.ಲಕ್ಷ್ಮಯಗೆ ವೇದಿಕೆಯಲ್ಲಿ ಕುಳಿತುಕೊಳ್ಳಲು ಅರ್ಹತೆ ಇಲ್ಲ ಎಂದು ಆಕ್ರೋಶದಿಂದ ನುಡಿದರು.ಅನಿರೀಕ್ಷಿತವಾದ ಈ ಘಟನೆ ಎನ್.ಲಕ್ಷ್ಮಯ್ಯ ಬೆಂಬಲಿಗರಲ್ಲಿ ಉದ್ವೇಗ, ಆಕ್ರೋಶ ಮೂಡಿಸಿತು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಓಂಶಕ್ತಿ ಚಲಪತಿ, ವಿಜಯಕುಮಾರ, ನರಸಿಂಹಮೂರ್ತಿ, ಕೀಲುಕೋಟೆ ರವಿ ಸೇರಿದಂತೆ ಹಲವರು ಏಕಾಏಕಿ ಶಿವಾರೆಡ್ಡಿ ಕಡೆಗೆ ನುಗ್ಗಿದರು. ಇಷ್ಟವಿಲ್ಲದಿದ್ದರೆ ಸಭೆಯಿಂದ ಹೊರಹೋಗಿ ಎಂದು ಅವರನ್ನು ಆಚೆಗೆ ತಳ್ಳಲು ಮುಂದಾದರು. ಇದು ಮಾರಾಮಾರಿಗೆ ದಾರಿ ಮಾಡಿತು. ಸ್ಥಳದಲ್ಲಿದ್ದ ಮಹಿಳೆಯರ ಪೈಕಿ ಕೋಲಾರ ತಾಲ್ಲೂಕು ಘಟಕದ ಮಮತಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಗಮನ ಸೆಳೆಯಿತು.ಶಿವಾರೆಡ್ಡಿ ಸೇರಿದಂತೆ ಶ್ರೀನಿವಾಸಪುರ ತಾಲ್ಲೂಕು, ಕೋಲಾರ ತಾಲ್ಲೂಕು, ಮುಳಬಾಗಲು, ಕೆಜಿಎಫ್‌ನ ಕಾರ್ಯಕರ್ತರೂ ಕೂಡ ಅದೇ ಕ್ಷಣದಲ್ಲಿ ಲಕ್ಷ್ಮಯ್ಯ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದು ಸನ್ನಿವೇಶವನ್ನು ಇನ್ನಷ್ಟು ಉದ್ವಿಗ್ನಗೊಳಿಸಿತು. ಸಭೆಯಲ್ಲಿದ್ದ ಕಾರ್ಯಕರ್ತರಲ್ಲೆ 3-4 ಗುಂಪು ಏರ್ಪಟ್ಟು ಪರಸ್ಪರ ಹಲ್ಲೆ, ತಳ್ಳಾಟಗಳೂ ನಡೆದವು. ಸಭಾಂಗಣದ ಒಳಗೆ ಮತ್ತು ಹೊರಗೆ ಗದ್ದಲ-ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.ಆರೋಪ: ಲಕ್ಷ್ಮಯ್ಯ ಅಧ್ಯಕ್ಷರಾದ ಬಳಿಕ ಮೂರ‌್ನಾಲ್ಕು ವರ್ಷದಿಂದ ಸಾಮಾನ್ಯ ಸಭೆಯನ್ನೇ ನಡೆಸಿಲ್ಲ. ಕೆಲವೇ ಮಂದಿ ಸೇರಿಸಿಕೊಂಡು ಪ್ರಮುಖ ತೀರ್ಮಾನ ಕೈಗೊಳ್ಳುತ್ತಾರೆ. ಪದಾಧಿಕಾರಿಗಳು ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಪೂರ್ಣ ನಿರ್ಲಕ್ಷ್ಯಿಸಿದ್ದಾರೆ. ರೌಡಿ ಪಡೆಯನ್ನಿಟ್ಟುಕೊಂಡು ಕಾರ್ಯಕರ್ತರನ್ನು ಅವಮಾನ ಮಾಡುತ್ತಿದ್ದಾರೆ. ಅವರ ಜತೆಗಿರುವವರು ಪಕ್ಷದ ಕಾರ್ಯಕರ್ತರಲ್ಲ ಎಂದು ಮುಖಂಡರಾದ ಶಿವಾರೆಡ್ಡಿ, ಸುಗಟೂರು ಚಲಪತಿ, ಸಿ.ಡಿ.ರಾಮಚಂದ್ರಗೌಡ, ಮಾರ್ಕೆಟ್ ಕೆಂಪಣ್ಣ, ಸೋಮಶೇಖರ, ಮಂಜುನಾಥ, ಹರಪನಾಯಕನಹಳ್ಳಿ ವೆಂಕಟೇಶ ಪದೇಪದೇ ಆರೋಪಿಸಿದರು.ಮುಂದೂಡಿಕೆ: ಸಭೆ ನಿಯಂತ್ರಣ ಮೀರಿ ವಾಗ್ವಾದ, ನಿಂದನೆ, ಹಲ್ಲೆ, ಗೊಂದಲಗಳ ಗೂಡಾದ ಪರಿಣಾಮ ಶಾಸಕರಾದ ವೈ.ಸಂಪಂಗಿ, ವೈ.ಎ.ನಾರಾಯಣಸ್ವಾಮಿ, ಡಿ.ಎಸ್.ವೀರಯ್ಯ, ಶಾಸಕ ನಂದೀಶ ರೆಡ್ಡಿ ಸಭೆಯಿಂದ ಹೊರಬಂದು ಶಾಲೆ ಕೊಠಡಿಯೊಂದನ್ನು ಸೇರಿಕೊಂಡರು. ನಂತರ ಹೊರ ಬಂದ ನಂದೀಶ ರೆಡ್ಡಿ, ಘಟನೆ ವಿಷಾದನೀಯ. ಇದಕ್ಕೆ ಕಾರಣರಾದವರ ಬಗ್ಗೆ ಪಕ್ಷದ ವರಿಷ್ಠರಿಗೆ ಮಾಹಿತಿ ನೀಡಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಸಭೆಯನ್ನು ಬೇರೊಂದು ದಿನ ನಡೆಸಲಾಗುವುದು ಎಂದು ತಿಳಿಸಿ ನಿರ್ಗಮಿಸಿದರು.ಅವರು ತೆರಳಿದ ಬಳಿಕವೂ, ಶಿವಾರೆಡ್ಡಿ ನೇತೃತ್ವದ ಕಾರ್ಯಕರ್ತ ಮುಖಂಡರು ತಮ್ಮ ಅಸಮಾಧಾನ ಹೊರಹಾಕುತ್ತಲೇ ಇದ್ದರು. ಈ ಎಲ್ಲ ಘಟನೆ ನಡೆಯುತ್ತಿರುವ ಸಂದರ್ಭದಲ್ಲಿ ಲಕ್ಷ್ಮಯ್ಯ ತುಟಿ ಬಿಚ್ಚದೆ ಮೌನಕ್ಕೆ ಶರಣಾಗಿದ್ದರು.ಮತ್ತೆ ಸಭೆ: ಸನ್ನಿವೇಶ ತಿಳಿಯಾದ ಬಳಿಕ ಮತ್ತೆ ಸಭೆ ಶುರುವಾಯಿತು. ಹಿರಿಯ ಮುಖಂಡ ವಿ.ಹನುಮಪ್ಪ ಮಾತನಾಡಿ ಘಟನೆ ಬಗ್ಗೆ ವಿಷಾದಿಸಿದರು. ಪಕ್ಷದಲ್ಲಿರುವ ರಾಜ್ಯ-ರಾಷ್ಟ್ರಮಟ್ಟದ ನಾಯಕರಲ್ಲಿ ಹೊಂದಾಣಿಕೆ ಕಡಿಮೆ ಆದ ಪರಿಣಾಮ ಪ್ರಾಮಾಣಿಕ ಸಾಮಾನ್ಯ ಕಾರ್ಯಕರ್ತರಿಗೆ ನೋವುಂಟಾಗುತ್ತಿದೆ ಎಂದರು.ಶಾಸಕರಾದ ವೈ.ಸಂಪಂಗಿ, ಎಂ.ನಾರಾಯಣಸ್ವಾಮಿ, ಗಿರೀಶ್ ಪಟೇಲ್, ಮುಖಂಡ ಸುರೇಂದ್ರಗೌಡ, ಜಿಲ್ಲಾ ಪಂಚಾಯತಿ ಸದಸ್ಯರಾದ ಮುತ್ಯಾಲಮ್ಮ, ಮಂಜುಳಾ, ರಾಮಸ್ವಾಮಿ ರೆಡ್ಡಿ, ಮುತ್ಯಾಲಮ್ಮ, ಯಶೋದಮ್ಮ, ಹೂವಳ್ಳಿ ವೆಂಕಟಾಚಲಪತಿ, ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಕ್ರಮಾದಿತ್ಯನ್, ಕನ್ನತ್ತ ಮುನಿವೆಂಕಟಪ್ಪ, ನೀಲಿ ಜಯಶಂಕರ ಪಾಲ್ಗೊಂಡಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.