ಗುರುವಾರ , ಜೂನ್ 17, 2021
22 °C

ಬಿಜೆಪಿ ಸಮಾವೇಶ: ಒಳಮೀಸಲಾತಿ ವಿರುದ್ಧ ಈಶ್ವರಪ್ಪ ಗುಡುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: `ಹಿಂದುಳಿದವರಿಗೆ ಮತ್ತು ದಲಿತರಿಗೆ ದ್ರೋಹ ಮಾಡಿ ಈಗಿನ ಶೇ 27ರ ಮೀಸಲಾತಿಯಲ್ಲಿ ಶೇ 4.5ರಷ್ಟು ಕಡಿತ ಮಾಡಿ ಅದನ್ನು ಅಲ್ಪಸಂಖ್ಯಾತರಿಗೆ ನೀಡಿದ್ದೇ ಆದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದಲ್ಲಿ ರಕ್ತಕ್ರಾಂತಿಯೇ ಆಗಲಿದೆ~ ಎಂದು  ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಇಲ್ಲಿ ಎಚ್ಚರಿಸಿದ್ದಾರೆ.ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಬುಧವಾರ ನಾಮಪತ್ರ ಸಲ್ಲಿಸಿದ ಬಳಿಕ ಕಡಿಯಾಳಿ ಯಲ್ಲಿ ಪಕ್ಷದ ಕಚೇರಿ ಎದುರು ಆಯೋಜಿಸಿದ್ದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.`ಬಿಜೆಪಿಯನ್ನು ಕೋಮುವಾದಿ ಎಂದು ಬೈಯುವ ಕಾಂಗ್ರೆಸ್ ಜಾತೀವಾದಿ ಪಕ್ಷ. ದಲಿತ ಹಾಗೂ ಹಿಂದುಳಿದವರಿಗೆ ಇರುವ ಶೇ 27ರ ಮೀಸಲಾತಿಯಲ್ಲಿ ಕಿಂಚಿತ್ತೂ ಕಡಿತಗೊಳಿಸಿದರೆ ಬಿಜೆಪಿ ಹೋರಾಟ ನಡೆಸಲಿದೆ~ ಎಂದರು.`ಸಿ.ಎಂ. ಇಬ್ರಾಹಿಂ, ಸಿದ್ದರಾಮಯ್ಯ, ವಿಶ್ವನಾಥ್ ಅವಕಾಶವಾದಿ ರಾಜಕಾರಣದಲ್ಲಿ ನಿಸ್ಸೀಮರು. ಹಿಂದೆ ಇಂದಿರಾ ಗಾಂಧಿಯ ಬಗ್ಗೆ ಹೀನಾಯವಾಗಿ ಮಾತನಾಡಿದ್ದ ಈ ಮುಖಂಡರು ಈಗ ಸೋನಿಯಾ ಗಾಂಧಿ ಅವರನ್ನು ಹೊಗಳುತ್ತಿದ್ದಾರೆ~ ಎಂದು ಕುಟುಕಿದರು. `ಏನೇ ರಾಜಕೀಯ ಗೊಂದಲವಿದ್ದರೂ ಅಭಿವೃದ್ಧಿಯಲ್ಲಿ ರಾಜ್ಯ ಯಾವತ್ತೂ ಹಿಂದೆ ಬಿದ್ದಿಲ್ಲ. ರಾಜ್ಯವು ದೇಶದಲ್ಲೆ 2ನೇ ಸ್ಥಾನದಲ್ಲಿದೆ. ಈ ಕುರಿತು ಕೇಂದ್ರ ಯೋಜನಾ ಆಯೋಗವೇ ರಾಜ್ಯಕ್ಕೆ ಶಹಭಾಸ್‌ಗಿರಿ ನೀಡಿದೆ~ ಎಂದರು.ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾತನಾಡಿ, `ಬಿಜೆಪಿ ಸರ್ಕಾರದ  ಸಾಧನೆಯನ್ನು ಜನ ಅರಿತಿದ್ದಾರೆ. ಇಷ್ಟಾದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಅಪಪ್ರಚಾರ ಮಾಡಿ ಮತ ಗಳಿಸಲು ಯತ್ನಿಸುತ್ತಿದ್ದಾರೆ~ ಎಂದು ಆಕ್ಷೇಪಿಸಿದರು.`ನಾಗರಿಕ ಸೇವಾ ಖಾತರಿ ಕಾಯಿದೆ ಇದೇ 1ರಿಂದ ನಾಲ್ಕು ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ. ಚುನಾವಣೆ ಬಳಿಕ ಕಾಯಿದೆಯನ್ನು 30 ಜಿಲ್ಲೆಗೂ ವಿಸ್ತರಿಸಲಾಗುವುದು~ ಎಂದರು.ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಮಾತನಾಡಿ, `ದಿನವಹಿ ಬೆಲೆ ಏರಿಕೆಯಿಂದ ತತ್ತರಿಸುವ ದೇಶದ ಜನತೆಗೆ ಪದೇ ಪದೇ ಬೆಲೆ ಏರಿಕೆ ಮಾಡುವ ಕಾಂಗ್ರೆಸ್ ಪಕ್ಷ ಮತ್ತೆ ಪೆಟ್ರೋಲ್, ಗ್ಯಾಸ್, ಡೀಸೆಲ್ ದರವನ್ನು ಏರಿಕೆ ಮಾಡಲಿದೆ. ಇಂತಹ ಕಾಂಗ್ರೆಸ್ ಸರ್ಕಾರ ನಿಮಗೆ ಬೇಕೆ? ಎಂದು ಮತದಾರರಲ್ಲಿ ಕಾರ್ಯಕರ್ತರು ಕೇಳಬೇಕು~ ಎಂದರು.ಕಾಂಗ್ರೆಸ್ ಪಕ್ಷ ಕ್ಷುಲ್ಲಕ ವಿಚಾರವನ್ನು ಇಟ್ಟುಕೊಂಡು ಚುನಾವಣಾ ಪ್ರಚಾರಕ್ಕೆ ಇಳಿದಿದೆ. ಆದರೆ ಬಿಜೆಪಿ ಅಭಿವೃದ್ಧಿ ವಿಚಾರದಿಂದ ಕಣಕ್ಕಿಳಿದಿದೆ. `ಕುಂದಾ ಪುರ-ಉಡುಪಿ-ಕಾಸರಗೋಡಿನವರೆಗೆ ಮೆಟ್ರೋ ರೈಲು ಮಾಡುವ ಕನಸು ಕಾಣುತ್ತಿದೆ. ಕಾಂಗ್ರೆಸ್‌ನಿಂದ ಇಂಥವೆಲ್ಲ ಸಾಧ್ಯವೇ? ಕರಾವಳಿಗಾಗಲಿ ರಾಜ್ಯಕ್ಕಾಗಲಿ ಕಾಂಗ್ರೆಸ್ ಕೊಟ್ಟಿದ್ದು ಏನು?~ ಎಂದು ಪ್ರಶ್ನಿಸಿದರು.ಸಮಾವೇಶಕ್ಕೂ ಮುನ್ನ ಮಲ್ಪೆಯಿಂದ ಕಡಿಯಾಳಿವರೆಗೆ ಅಭ್ಯರ್ಥಿ ಸುನೀಲ್ ಕುಮಾರ್ ನೇತೃತ್ವದಲ್ಲಿಯೇ ಬೃಹತ್ ರ‌್ಯಾಲಿ ನಡೆಯಿತು. ಇದೇ ಸಂದರ್ಭ ಮಾಜಿ ಸಂಸದೆ ಮನೋರಮಾ ಮಧ್ವರಾಜ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.ಸಚಿವ ವಿಶ್ವೇಶ್ವರ ಕಾಗೇರಿ, ಸಂಸದ ಬಿ.ವೈ.ರಾಘವೇಂದ್ರ, ಸಂಸದ ನಳಿನ್ ಕುಮಾರ್ ಕಟೀಲ್, ಮುಖಂಡ ಎ.ಜಿ.ಕೊಡ್ಗಿ, ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಘಟಕದ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಪ್ರಾಣೇಶ್, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಜೀವರಾಜ್, ಬಿ.ಎಸ್.ಸುರೇಶ್, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ಸುಲೋಚನಾ ಭಟ್‌ಮತ್ತಿತರರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.