ಬಿಜೆಪಿ ಸಮಾವೇಶ: ಶ್ವೇತಪತ್ರಕ್ಕೆ ಸವಾಲು

7

ಬಿಜೆಪಿ ಸಮಾವೇಶ: ಶ್ವೇತಪತ್ರಕ್ಕೆ ಸವಾಲು

Published:
Updated:

ಬೆಂಗಳೂರು: ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾವೇಶದ ಮೂಲಕ ಬಿಜೆಪಿ ‘ಸಾರ್ವಜನಿಕರ ಹಣ ಪೋಲು ಮಾಡಿದೆ’ ಎಂದು ಕೆಪಿಸಿಸಿ ಕಾನೂನು ವಿಭಾಗದ ಅಧ್ಯಕ್ಷ ಸಿ.ಎಂ. ಧನಂಜಯ ಆರೋಪಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸಮಾವೇಶದಿಂದ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು ಬಿಟ್ಟರೆ ಯಾರಿಗೆ ಪ್ರಯೋಜನವಾಗಿದೆ’ ಎಂಬುದಾಗಿ ಪ್ರಶ್ನಿಸಿದರು.ಯಾವುದೇ ಸಮಯದಲ್ಲೂ ಮಧ್ಯಂತರ ಚುನಾವಣೆ ಎದುರಾಗಬಹುದು ಎಂಬ ಭೀತಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿರುವುದರಿಂದ ಚುನಾವಣಾ ಪ್ರಚಾರದ ರೀತಿಯಲ್ಲಿ ಈ ಸಮಾವೇಶ ಆಯೋಜಿಸಿದ್ದಾರೆ ಎಂದು ಆರೋಪಿಸಿದರು.‘ಸಮಾವೇಶದಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ, ತನ್ನ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಸಮಾವೇಶದ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ದುಂದುವೆಚ್ಚ ಮಾಡುತ್ತಿದೆ’ ಎಂದು ಅವರು ದೂರಿದರು.‘ಬಿಜೆಪಿ ಸರ್ಕಾರ ನಡೆಸಿದ ಸಮಾವೇಶಗಳು, ಇದಕ್ಕೆ ಸರ್ಕಾರದಿಂದ ಆದ ಖರ್ಚು, ಇದರ ಪ್ರಾಯೋಜಕತ್ವ ವಹಿಸಿದ್ದವರ ಬಗ್ಗೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಶ್ವೇತಪತ್ರ ಹೊರಡಿಸಬೇಕು’ಎಂದು ಆಗ್ರಹಿಸಿದರು.ವಿರೋಧ ಪಕ್ಷಗಳ ಹಗರಣದ ಬಗ್ಗೆ ಯಡಿಯೂರಪ್ಪ ಅವರ ಬಳಿ ದಾಖಲೆಗಳಿದ್ದರೆ ಅದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.ಹೇಮಾಮಾಲಿನಿ ಅವರನ್ನು ರಾಜ್ಯಸಭೆಗೆ ಅಭ್ಯರ್ಥಿಯನ್ನಾಗಿ ಆರಿಸುವ ಮೂಲಕ ರಾಜ್ಯದವರನ್ನು ಬಿಜೆಪಿ ವಂಚಿಸಿದೆ ಎಂದು ಟೀಕಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry