ಬಿಜೆಪಿ ಸರ್ಕಾರದ ನೀತಿಗೆ ಖಂಡನೆ

7

ಬಿಜೆಪಿ ಸರ್ಕಾರದ ನೀತಿಗೆ ಖಂಡನೆ

Published:
Updated:
ಬಿಜೆಪಿ ಸರ್ಕಾರದ ನೀತಿಗೆ ಖಂಡನೆ

ಯಾದಗಿರಿ: ಬಿಜೆಪಿ ಸರ್ಕಾರದ ದಲಿತ ವಿರೋಧಿ ಶಿಕ್ಷಣ ನೀತಿಗಳನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ಬುಧವಾರ ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಬಿಜೆಪಿ ಸರ್ಕಾರದ ಶಿಕ್ಷಣ ನೀತಿಗಳು ದಲಿತರ, ಹಿಂದುಳಿದವರ ವಿರೋಧಿಯಾಗಿದ್ದು, ಕಂಡರಿಯದ ಜನವಿರೋಧಿ ದುರಾಡಳಿತಕ್ಕೆ ಕರ್ನಾಟಕ ಒಳಗಾಗಿದೆ. ಇಡೀ ರಾಷ್ಟ್ರದಲ್ಲಿಯೇ ಕನ್ನಡನಾಡು ತಲೆ ತಗ್ಗಿಸುವಂತಾಗಲು ಈಗಿನ ಬಿಜೆಪಿ ಸರ್ಕಾರವೇ ಕಾರಣ ಎಂದು ದೂರಿದರು.ದುಡಿಯುವ ವರ್ಗಗಳಾದ ರೈತ, ದಲಿತ, ಹಿಂದುಳಿದ, ಕಾರ್ಮಿಕ, ಮಹಿಳೆಯರು ಸೇರಿದಂತೆ ಯಾವುದೇ ವರ್ಗದ ಹಿತಾಸಕ್ತಿಯನ್ನು ಈ ಸರ್ಕಾರ ಪರಿಗಣಿಸಿಲ್ಲ. ಬಿಜೆಪಿ ಸರ್ಕಾರಕ್ಕೆ ಸಾಮಾಜಿಕ ನ್ಯಾಯ ಎಂಬುದೇ ಗೊತ್ತಿಲ್ಲ. ದುಡಿಯುವ ವರ್ಗಗಳ ಬಗ್ಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.ರಾಜ್ಯ ಸರ್ಕಾರ ಮತ್ತು ಖಾಸಗಿ ಕ್ಷೇತ್ರದ ತಾಂತ್ರಿಕ ಶಿಕ್ಷಣ ಕಾಲೇಜುಗಳಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸುಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ದುಪ್ಪಟ್ಟು ಶುಲ್ಕ ನೀಡಿ ಪ್ರವೇಶಿಸುವಂತಾಗಿದೆ. ಶುಲ್ಕ ಭರಿಸದಿದ್ದರೆ, ಈ ವಿದ್ಯಾರ್ಥಿಗಳ ಪದವಿಯ ಕನಸು ಮಣ್ಣು ಪಾಲಾಗುತ್ತದೆ. ಅಲ್ಲದೆ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ದಲಿತ ವರ್ಗದ ಉನ್ನತ ಶ್ರೇಣಿಯ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಎಂಬ ನಿರ್ಬಂಧ ಹೇರಲಾಗಿದೆ. ಇಂತಹ ನೀತಿಯು ಸಹಜವಾಗಿ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಮಾರಕವಾಗಿದೆ ಎಂದು ತಿಳಿಸಿದರು.ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಬಯಸುವ ಎಸ್.ಸಿ, ಎಸ್.ಟಿ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪೂರ್ಣ ಪ್ರಮಾಣದ ಶಿಕ್ಷಣ ಶುಲ್ಕವನ್ನು ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಗಳು ಭರಿಸಬೇಕು ಎಂದು ಒತ್ತಾಯಿಸಿದರು.ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಬಿಡುಗಡೆ ಆಗದೇ ಇರುವ ಎಸ್.ಸಿ, ಎಸ್.ಟಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಅಳವಡಿಸಿ, ಕಂಪ್ಯೂಟರ್ ಶಿಕ್ಷಣ ನೀಡಬೇಕು. ಸ್ಥಳಾಂತರಗೊಂಡ ವಡಗೇರಾದ ಸರ್ಕಾರಿ ಪದವಿಪೂರ್ವ ಕಾಲೇಜನ್ನು ಹಿಂದಿರುಗಿಸಬೇಕು ಎಂದು ಮನವಿ ಮಾಡಿದರು.ನಂತರ ಜಿಲ್ಲಾಧಿಕಾರಿಗಳ ಮೂಲಕ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಪದಾಧಿಕಾರಿಗಳಾದ ಗೋಪಾಲ ತಳಕೇರಿ, ಮಾನಪ್ಪ ಕಟ್ಟಿಮನಿ, ಮಾರುತಿ ಜಂಬಗಾ, ರಾಯಪ್ಪ ಗಂಗನಾಳ, ಮರೆಪ್ಪ ಚಟ್ಟರಕರ್, ಪ್ರಭು ಬಮ್ಮನ್, ಹೊನ್ನಪ್ಪ ಗಂಗನಾಳ, ಸೈದಪ್ಪ ಸುಂಗಲಕರ್, ಪ್ರಭಾಕರ ಬುಳ್ಳಾ, ಲಕ್ಷ್ಮಣ ರಾಂಪೂರ, ಚಂದ್ರು ಚಟ್ಟೇರಕರ್, ಬಸವರಾಜ, ಪರಶುರಾಮ ಕುರುಕುಂದಿ, ರಮೇಶ ಸುಂಗಲಕರ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry