ಬಿಜೆಪಿ ಸರ್ಕಾರದ ವಿರುದ್ಧ ಸಚಿವ ಕೃಷ್ಣ ವಾಗ್ದಾಳಿ

7

ಬಿಜೆಪಿ ಸರ್ಕಾರದ ವಿರುದ್ಧ ಸಚಿವ ಕೃಷ್ಣ ವಾಗ್ದಾಳಿ

Published:
Updated:
ಬಿಜೆಪಿ ಸರ್ಕಾರದ ವಿರುದ್ಧ ಸಚಿವ ಕೃಷ್ಣ ವಾಗ್ದಾಳಿ

ರಾಮನಗರ:  ‘ಭ್ರಷ್ಟ ಬಿಜೆಪಿ ಸರ್ಕಾರದಿಂದಾಗಿ ರಾಜ್ಯದ ಹೆಸರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜು ಆಗುತ್ತಿದೆ’ ಎಂದು ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ನೇರ ಆರೋಪ ಮಾಡಿದರು.ಚನ್ನಪಟ್ಟಣ ಉಪ ಚುನಾವಣೆಯ ಅಭ್ಯರ್ಥಿ ರಘುನಂದನ್ ರಾಮಣ್ಣ ಅವರ ಪರವಾಗಿ ಭಾನುವಾರ ಹೊಂಗನೂರಿನಲ್ಲಿ ಕಾಂಗ್ರೆಸ್ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.‘ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದ್ದಾಗ ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಬಂದಾಗಿನಿಂದ ವಿಧಾನಸೌಧದಲ್ಲಿ ಪಾರದರ್ಶಕತೆಯೇ ಇಲ್ಲದಂತಾಗಿದೆ. ವಿಧಾನಸೌಧದಲ್ಲಿ ವ್ಯಾಪಾರವಲ್ಲದೇ ಮತ್ತೇನು ನಡೆಯುತ್ತಿಲ್ಲ’ ಎಂದು ದೂರಿದರು.‘ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಅವರ ಬಗ್ಗೆ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇತ್ತೀಚೆಗೆ ಸೌದಿ ಅರೇಬಿಯಾದ ಪತ್ರಿಕೆಯೊಂದರಲ್ಲಿಯೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹಗರಣಗಳ ಕುರಿತು ಲೋಕಾಯುಕ್ತ ತನಿಖೆ ನಡೆಸುತ್ತಿರುವ ವಿಷಯ ಪ್ರಕಟವಾಗಿದೆ. ಇದನ್ನು ಓದಿದ ನನಗೆ ರಾಜ್ಯಕ್ಕೆ ಎಂತಹ ದುಸ್ಥಿತಿ ಬಂದಿದೆಯಪ್ಪ ಎನ್ನಿಸಿತು’ ಎಂದು ಅವರು ಹೇಳಿದರು.ಹುಚ್ಚು ಕುದುರೆ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷದಲ್ಲಿಯೇ ಹುಚ್ಚು ಕುದುರೆ ರೀತಿ ಓಡುತ್ತಿದೆ. ಅದಕ್ಕೆ ಈ ಉಪ ಚುನಾವಣೆಯಲ್ಲಿ ಮತದಾರರು ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.ಬಿಜೆಪಿಯ ಹಿರಿಯ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ ಅವರು ಐದು ವರ್ಷ ಪ್ರಧಾನಿಯಾಗಿದ್ದರು. ಅವರು ಸಮರ್ಥವಾಗಿ ದೇಶವನ್ನು ಮುನ್ನಡೆಸಿದರು. ಅವರು ಪ್ರಧಾನಿ ಆಗಿದ್ದಾಗ ನಾನು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದೆ. ಅಂದಿನ ಬಿಜೆಪಿಗೂ ಇಂದಿನ ಬಿಜೆಪಿಗೂ ಹೋಲಿಸಲು ಆಗದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕಾಂಗ್ರೆಸ್ ಪಕ್ಷದವರಿಗಿಂತ ಹೆಚ್ಚಾಗಿ ಬಿಜೆಪಿಯ ಒಳಗಿರುವವರಿಗೆ ಈ ಸರ್ಕಾರದ ಬಗ್ಗೆ ಬೇಸರ ಇದೆ. ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರೇ ಭ್ರಷ್ಟ ನಾಯಕರನ್ನು ಬದಲಿಸುವಂತೆ ಹೈಕಮಾಂಡ್‌ಗೆ ದೂರು ನೀಡಿದ್ದಾರೆ. ಅವರೊಡನೆ ಸಂಸದ ಅನಂತಕುಮಾರ್ ಕೂಡ ಇದ್ದಾರೆ ಎಂದು ಸಚಿವ ಎಸ್.ಎಂ.ಕೃಷ್ಣ ಹೇಳಿದರು.ಮೇಜರ್ ಸರ್ಜರಿ ಆಗಬೇಕು: ಉಪ ಚುನಾವಣೆ ನಂತರ ರಾಜ್ಯ ಬಿಜೆಪಿಯಲ್ಲಿ ಮೇಜರ್ ಸರ್ಜರಿ ಆಗಲಿದೆ ಎಂದು ಬಿಜೆಪಿ ಮುಖಂಡರೇ ಹೇಳುತ್ತಿದ್ದಾರೆ. ಅವರು ಸರ್ಜರಿ ಮಾಡುತ್ತಾರೋ ಇಲ್ಲವೋ, ಮತದಾರರೇ ಈ ಉಪ ಚುನಾವಣೆಯಲ್ಲಿ ಸರ್ಕಾರಕ್ಕೆ ಸರ್ಜರಿ ಮಾಡಬೇಕು ಎಂದು  ಮನವಿ ಮಾಡಿದರು.ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಸಾರ್ವಭೌಮರು. ನಿಮ್ಮ ಅಂತರಾತ್ಮಕ್ಕೆ ಒಪ್ಪಿಗೆ ಆಗುವಂತಹ ವ್ಯಕ್ತಿಯನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಿದೆ. ಅವರಿಗೆ ಮತ ನೀಡಿ ಎಂದು ಅವರು ಕೋರಿದರು.ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕಲಾವಿದ ಎಂದು ಸಿ.ಪಿ.ಯೋಗೇಶ್ವರ್ ಅವರಿಗೆ ಕಾಂಗ್ರೆಸ್ ಮಾನ್ಯತೆ ನೀಡಿತು. ಆದರೆ ಅವರು ತಮ್ಮ ಕಲೆಯನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕ್ಷೇತ್ರದ ಜನತೆಗೆ ದ್ರೋಹ ಬಗೆದಿದ್ದಾರೆ. ಅವರಿಗೆ ತಕ್ಕ ಪಾಠವನ್ನು ಕ್ಷೇತ್ರದ ಜನತೆ ಈ ಚುನಾವಣೆಯಲ್ಲಿ ಕಲಿಸಬೇಕು ಎಂದರು.ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ‘ಆಪರೇಷನ್ ಕಮಲ’ದ ಮೂಲಕ ಸಂವಿಧಾನಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಅಗೌರವ ತೋರಿದೆ. ಅಲ್ಲದೆ ಮೂರು ವರ್ಷದಲ್ಲಿ ಯಾವುದೇ ಜನಪರ ಕಾರ್ಯಕ್ರಮಗಳನ್ನು ಸರ್ಕಾರ ಮಾಡಿಲ್ಲ. ಒಂದು ಸೀರೆ, ಒಂದು ಸೈಕಲ್ ಕೊಟ್ಟದ್ದೇ ಈ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದ ಅವರು ಇಂತಹ ಪಕ್ಷದ ಅಭ್ಯರ್ಥಿಗಳನ್ನು ಮತದಾರರು ತಿರಸ್ಕರಿಸಬೇಕು ಎಂದರು.ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಚನ್ನಪಟ್ಟಣ ಕ್ಷೇತ್ರದ ಮತದಾರರು ಮೂರು ವರ್ಷದಲ್ಲಿ 7ನೇ ಚುನಾವಣೆಯನ್ನು ನೋಡುತ್ತಿದ್ದಾರೆ.ವಿಧಾನಸಭಾ ಕ್ಷೇತ್ರಕ್ಕಾಗಿ ಮೂರನೇ ಬಾರಿ ಚುನಾವಣೆ ಎದುರಾಗಿದೆ. ಇದಕ್ಕೆಲ್ಲ ಪಕ್ಷಾಂತರಿಗಳು ಹಾಗೂ ಸರ್ಕಾರ ಕಾರಣ. ಇವರಿಗೆ ಜನತೆಯೇ ಪಾಠ ಕಲಿಸಬೇಕು ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಜಿಯಾವುಲ್ಲಾ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಮಂಜುಳಾ ನಾಯ್ಡು, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಕಾಂಗ್ರೆಸ್ ಮುಖಂಡರಾದ ರಾಮಚಂದ್ರಪ್ಪ, ಮರಿದೇವರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry