ಬುಧವಾರ, ನವೆಂಬರ್ 20, 2019
20 °C

`ಬಿಜೆಪಿ ಸರ್ಕಾರ ದೇವೇಗೌಡರ ಕೂಸು'

Published:
Updated:

ಬೆಂಗಳೂರು: `ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರೇ ರಾಜ್ಯದಲ್ಲಿ ಐದು ವರ್ಷಗಳ ಕಾಲ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರದ ಜನ್ಮದಾತರು' ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಸಿ.ಕೆ.ಜಾಫರ್ ಷರೀಫ್ ಆರೋಪಿಸಿದರು.ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ಬೆಂಗಳೂರು ವರದಿಗಾರರ ಕೂಟ ಜಂಟಿಯಾಗಿ ಮಂಗಳವಾರ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು. `ಮಗ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ದೇವೇಗೌಡರು ಬಿಜೆಪಿಯನ್ನು ಅಪ್ಪಿಕೊಂಡರು. ಆಗಲೂ ಒಪ್ಪಂದದಂತೆ ಅಧಿಕಾರ ಹಸ್ತಾಂತರ ಮಾಡದೇ ವಂಚಿಸಿದರು. ಇದು, ಕರ್ನಾಟಕದಲ್ಲಿ ಬಿಜೆಪಿ ಬಲಿಷ್ಠವಾಗಿ ಬೆಳೆಯಲು ಕಾರಣವಾಯಿತು. ಇದನ್ನು ದೇವೇಗೌಡರೂ ನಿರಾಕರಿಸಲು ಸಾಧ್ಯವಿಲ್ಲ' ಎಂದರು.200*ರಲ್ಲಿ ಅನಿವಾರ್ಯವಾಗಿ ಜೆಡಿಎಸ್ ಜೊತೆ ಸೇರಿ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚಿಸಿತು. ದೇವೇಗೌಡರ ಬಯಕೆಯಂತೆಯೇ ಧರ್ಮಸಿಂಗ್ ಮುಖ್ಯಮಂತ್ರಿ ಆದರು. ಆದರೆ, ಇಲ್ಲೂ ದೇವೇಗೌಡರು ಮಗನನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ಜೊತೆ ಸ್ನೇಹ ಮಾಡಿದರು. ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುವವರು ಸ್ವಾರ್ಥ ಸಾಧನೆಗೆ ಹೆಚ್ಚು ಆದ್ಯತೆ ನೀಡಿದರು. ನಂತರ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡದೇ ವಂಚಿಸಿದರು. ಇದರಿಂದಾಗಿಯೇ ದೇವೇಗೌಡರ ಕನಸು ನೀರು ಪಾಲಾಯಿತು ಎಂದು ಟೀಕಿಸಿದರು.ಬಿಜೆಪಿ ಯಾವಾಗಲೂ ಮೌಲ್ಯಾಧಾರಿತ ಪಕ್ಷ, ರಾಷ್ಟ್ರಪ್ರೇಮವೇ ತನ್ನ ಅಂತಿಮ ಧ್ಯೇಯ ಎನ್ನುತ್ತಿತ್ತು. ಆದರೆ, ರಾಜ್ಯದಲ್ಲಿ ಅಧಿಕಾರ ಹಿಡಿದ ಬಳಿಕ ನಡೆಸಿದ ಭ್ರಷ್ಟಾಚಾರದಿಂದ ಆ ಪಕ್ಷದ ಮುಖವಾಡ ಕಳಚಿಬಿದ್ದಿದೆ. ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ನೀಡಿದ ವರದಿಗಳಲ್ಲಿ ಬಿಜೆಪಿಯ ಬಣ್ಣ ಬಯಲಾಗಿದೆ ಎಂದರು.`ನಾನು ಅಲ್ಪಸಂಖ್ಯಾತ ವರ್ಗದವನಾದ ಕಾರಣಕ್ಕೆ ಕಾಂಗ್ರೆಸ್‌ನಲ್ಲಿ ನನಗೆ ಅವಕಾಶಗಳು ಕೈತಪ್ಪಿವೆ ಎಂಬ ಭಾವನೆ ಯಾವತ್ತೂ ನನ್ನನ್ನು ಕಾಡಿಲ್ಲ. ಯಾವ ಸಂದರ್ಭದಲ್ಲೂ ನಾನು ಅಲ್ಪಸಂಖ್ಯಾತ ವರ್ಗದವನು ಎಂದು ನಾನು ಕೂಡ ಭಾವಿಸಿಲ್ಲ. ಬಹುಸಂಖ್ಯಾತರ ಬೆಂಬಲದಲ್ಲೇ ದೀರ್ಘಕಾಲ ರಾಜಕಾರಣದಲ್ಲಿ ಯಶಸ್ಸು ಕಂಡಿದ್ದೇನೆ. ಆದರೂ, ರಾಜಕೀಯದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರು ಅವಕಾಶ ವಂಚಿತರು ಎಂಬುದು ಸತ್ಯ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.200*ರ ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರನ್ನು ಒಡೆಯುವ ಪ್ರಯತ್ನ ಬಿಜೆಪಿಯಿಂದ ನಡೆಯಿತು. ಈ ಉದ್ದೇಶಕ್ಕಾಗಿಯೇ ಕ್ರೈಸ್ತ ಸಮುದಾಯದ ಎಚ್.ಟಿ.ಸಾಂಗ್ಲಿಯಾನ ಅವರನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಿತು. ಪರಿಣಾಮವಾಗಿಯೇ ತಾವು ಸೋಲು ಅನುಭವಿಸಬೇಕಾಯಿತು. ಕೊನೆಗೂ ಅಲ್ಪಸಂಖ್ಯಾತರನ್ನು ಒಡೆಯುವ ಆರ್‌ಎಸ್‌ಎಸ್ ತಂತ್ರಕ್ಕೆ ಜಯ ದೊರೆಯಿತು ಎಂದರು.`ಅನುಭವ ಮಾರಾಟಕ್ಕೆ ಸಿಗಲ್ಲ': `ಜ್ಞಾನ ಮತ್ತು ಅನುಭವ ಹೊಂದಿರುವ ಹಿರಿಯ ಮುಖಂಡರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುವುದು ಪಕ್ಷದ ನಾಯಕರಿಗೆ ಬಿಟ್ಟ ವಿಷಯ. ಜ್ಞಾನ ಮತ್ತು ಅನುಭವ ಎರಡೂ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವುದಿಲ್ಲ. ನಮಗೂ ಬೇಕಾದಷ್ಟು ಕೆಲಸ ಇದೆ. ನಿರಂತರವಾಗಿ ಓದುತ್ತೇನೆ. ಅದರಿಂದ ಜ್ಞಾನವನ್ನು ಗಳಿಸುತ್ತೇನೆ' ಎಂದು ಹೇಳಿದರು.ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಒಂದರಂತೆ 28 ವಿಧಾನಸಭಾ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಮಾಡಲಾಗಿತ್ತು. ಆದರೆ, ಚುನಾವಣೆಯಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಸ್ಥಳೀಯ ನಾಯಕರಾದ ಸಿದ್ದರಾಮಯ್ಯ, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಮತ್ತಿತರರನ್ನು ಹೆಚ್ಚಾಗಿ ಅವಲಂಬಿಸಿಕೊಂಡು ಟಿಕೆಟ್ ಹಂಚಿಕೆ ಮಾಡಲಾಗಿದೆ. ಟಿಕೆಟ್ ಹಂಚಿಕೆಯಲ್ಲಿ ಸ್ವಲ್ಪ ವ್ಯತ್ಯಾಸಗಳಾಗಿದ್ದರೂ, ಅವು ಚುನಾವಣೆ ಮೇಲೆ ಹೆಚ್ಚಿನ ಪರಿಣಾಮ ಬೀರಲಾರವು ಎಂದು ವಿಶ್ಲೇಷಿಸಿದರು.ಸೋಲಿಗೆ ಕಾರಣ

`ಕಳೆದ ಲೋಕಸಭಾ (2009) ಚುನಾವಣೆಯಲ್ಲಿ ಬೆಂಗಳೂರು ಕೇಂದ್ರದಲ್ಲಿ ನನಗೆ, ದಕ್ಷಿಣದಲ್ಲಿ ಎಸ್.ಎಂ. ಕೃಷ್ಣ ಅವರಿಗೆ ಮತ್ತುಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕೃಷ್ಣ ಬೈರೇಗೌಡ ಅವರಿಗೆ ಟಿಕೆಟ್ ನೀಡಿದ್ದರೆ, ಮೂವರಿಗೂ ಗೆಲುವು ದೊರೆಯುತ್ತಿತ್ತು. ಆದರೆ, ಸ್ಥಳೀಯ ನಾಯಕರನ್ನು ಅವಲಂಬಿಸಿ ಹೈಕಮಾಂಡ್ ಟಿಕೆಟ್ ಹಂಚಿಕೆ ಮಾಡಿತು. ಪರಿಣಾಮವಾಗಿ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸೋಲು ಅನುಭವಿಸಿತು'.

-ಸಿ.ಕೆ. ಜಾಫರ್ ಷರೀಫ್ಪ್ರಶ್ನೋತ್ತರ...


*ಪ್ರಶ್ನೆ: ನೀವು ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯೇ?

ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಆಗುವುದರಲ್ಲಿ ತಪ್ಪೇನು?   ಆದರೆ, ನಾನು ಈ ಬಾರಿ  ಚುನಾವಣೆಗೆ ಸ್ಪರ್ಧಿಸಿಯೇ ಇಲ್ಲ.*ಪ್ರಶ್ನೆ: ಪಕ್ಷದಲ್ಲಿ ಸೂಕ್ತ ಸ್ಥಾನಮಾನ ದೊರೆತಿಲ್ಲ ಎಂಬ ಕೊರಗು ಇದೆಯೇ?

ನನಗೆ ಯಾವ ಕೊರಗೂ ಇಲ್ಲ. ರೈಲ್ವೆ ಸಚಿವನಾಗಿ ಏಳು ಬಾರಿ ರೈಲ್ವೆ ಬಜೆಟ್ ಮಂಡಿಸಿದ್ದೇನೆ. ನನಗೆ ಮುಖ್ಯಮಂತ್ರಿ ಹುದ್ದೆಗಿಂತಲೂ ಇದು ದೊಡ್ಡದು.*ಪ್ರಶ್ನೆ: ದೀರ್ಘ ಕಾಲ ರಾಜಕಾರಣ ಮಾಡಿದ ನಿಮ್ಮಂತಹವರೂ ಮಕ್ಕಳು, ಮೊಮ್ಮಕ್ಕಳಿಗೇ ಟಿಕೆಟ್ ನೀಡುವಂತೆ ಒತ್ತಡ ತರುವುದು ಸರಿಯೇ?

ನನ್ನ ಜೀವಿತಾವಧಿಯಲ್ಲಿ ನನ್ನ ಮೊಮ್ಮಗನನ್ನು ಮುಂದಕ್ಕೆ ತರದೇ ಹೋದರೆ, ಈ ಬಗ್ಗೆ ಬೇರೆ ಯಾರು ಭರವಸೆ ಕೊಡುತ್ತಾರೆ? ವೈದ್ಯರ ಮಕ್ಕಳು ವೈದ್ಯರಾಗುತ್ತಾರೆ, ವಕೀಲರ ಮಕ್ಕಳು ವಕೀಲರಾಗುತ್ತಾರೆ, ರಾಜಕಾರಣಿಗಳ ಮಕ್ಕಳು ರಾಜಕಾರಣಕ್ಕೆ ಬರುವುದರಲ್ಲಿ ತಪ್ಪೇನು? ಅಷ್ಟಕ್ಕೂ ನನ್ನ ಮೊಮ್ಮಗ ಸಾಕಷ್ಟು ಕೆಲಸ ಮಾಡಿಯೇ ರಾಜಕಾರಣಕ್ಕೆ ಬಂದಿದ್ದಾನೆ.*ಪ್ರಶ್ನೆ: ಹೆಬ್ಬಾಳ ಕ್ಷೇತ್ರದ ಟಿಕೆಟ್ ವಿಷಯದಲ್ಲಿ ಜಾಫರ್ ಷರೀಫ್ ಮೋಸ ಮಾಡಿದ್ದಾರೆ ಎಂದು ಎಚ್.ಎಂ.ರೇವಣ್ಣ ಆರೋಪಿಸಿದ್ದಾರಲ್ಲಾ....?

ಟಿಕೆಟ್ ಕೈತಪ್ಪಿದಾಗ ಎಲ್ಲರೂ ಮೋಸ ಅಂತಾರೆ. ನಾನು ಮೊಮ್ಮಗನಿಗೆ ಟಿಕೆಟ್ ನೀಡುವಂತೆ ಒತ್ತಡವನ್ನೇ ಹೇರಿಲ್ಲ. ಅಭ್ಯರ್ಥಿಗಳ ಆಯ್ಕೆ ನಡೆಯುವಾಗ ದೇಶದ ಪ್ರಮುಖ ದರ್ಗಾಗಳ ಭೇಟಿಗೆ ತೀರ್ಥಯಾತ್ರೆ ಮಾಡುತ್ತಿದ್ದೆ.*ಪ್ರಶ್ನೆ: ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರ ಯುಗ ಮುಗಿಯಿತೇ?

ಹಾಗೇನೂ ಇಲ್ಲ. ಎಸ್.ಎಂ.ಕೃಷ್ಣ ಅವರಂತಹ ಹಿರಿಯ ನಾಯಕರು ಹೇಳಿದವರಿಗೆ ಟಿಕೆಟ್ ಸಿಗದೇ ಇರಬಹುದು. ಆದರೆ, ಹಿರಿಯ ನಾಯಕರ ಪ್ರಭಾವ ಇನ್ನೂ ಇದೆ. ಟಿಕೆಟ್ ಹಂಚಿಕೆ ಒಂದರಿಂದಲೇ ಎಲ್ಲವನ್ನೂ ಅಳೆಯಲಾಗದು.*ಪ್ರಶ್ನೆ: ಮುಂದಿನ ಲೋಕಸಭಾ ಚುನಾವಣೆಗೆ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೀರಿ?

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲೇ ನಾನು ಸ್ಪರ್ಧಿಸುತ್ತೇನೆ. ಸಿ.ಎಂ.ಇಬ್ರಾಹಿಂ ಭದ್ರಾವತಿಯಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಸಾಂಗ್ಲಿಯಾನ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪಾಧ್ಯಕ್ಷರ ಹುದ್ದೆಯಲ್ಲಿದ್ದರು. ಈಗ ಬೆಂಗಳೂರು ಕೇಂದ್ರ ಕ್ಷೇತ್ರದ ಟಿಕೆಟ್ ನನಗೇ ದೊರೆಯುತ್ತದೆ ಎಂಬ ವಿಶ್ವಾಸವಿದೆ.*ಪ್ರಶ್ನೆ: ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತೀರಾ?

ರಾಜ್ಯದ ವಿವಿಧ ಕಡೆಗಳಿಂದ ಪ್ರಚಾರಕ್ಕೆ ಬರುವಂತೆ ಆಹ್ವಾನವಿದೆ. ಬೆಂಗಳೂರು ನನ್ನ ಕ್ಷೇತ್ರ. ಮೊಮ್ಮಗ ಕೂಡ ಸ್ಪರ್ಧಿಸಿದ್ದಾನೆ. ಇಲ್ಲಿ ಹೆಚ್ಚು ಪ್ರಚಾರ ಮಾಡುತ್ತೇನೆ. ನಂತರ ಬೇರೆ ಕ್ಷೇತ್ರಗಳಿಗೆ ಹೋಗುತ್ತೇನೆ.

ಪ್ರತಿಕ್ರಿಯಿಸಿ (+)