ಬಿಜೆಪಿ ಸರ್ಕಾರ ರೈತರಿಗೇನು ಮಾಡಿದೆ?

7

ಬಿಜೆಪಿ ಸರ್ಕಾರ ರೈತರಿಗೇನು ಮಾಡಿದೆ?

Published:
Updated:

ಹನುಮಸಾಗರ: ರೈತರ ಹೆಸರಿನ ಮೇಲೆ ಸರ್ಕಾರ ಕಟ್ಟಿ, ಅವರ ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕಾರ ಮಾಡಿದ ಬಿಜೆಪಿ ಸರ್ಕಾರ ರೈತರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದಿರಲಿ ಮತ್ತಷ್ಟು ಸಮಸ್ಯಗಳನ್ನೇ ಹುಟ್ಟು ಹಾಕಿದೆ ಎಂದು ಜೆಡಿಎಸ್ ಮುಖಂಡ ದೇವೇಂದ್ರಪ್ಪ ಬಳೂಟಗಿ ಆಪಾದಿಸಿದರು.ಭಾನುವಾರ ಸಮೀಪದ ಹನುಮನಾಳ ಗುರು ಗಂಗಾಧರೇಶ್ವರ ಸಂಗೀತ ಶಾಲಾ ಮೈದಾನದಲ್ಲಿ ನಡೆದ ಜೆಡಿಎಸ್ ಪಕ್ಷದ ವಲಯ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.ಸಾರ್ವಜನಿಕರು ನೀಡಿದ ತೆರಿಗೆಯಲ್ಲಿ ಕೋಟಿಗಟ್ಟಲೇ ಹಣವನ್ನು ವಿವಿಧ ಮಠಗಳಿಗೆ ಉದಾರವಾಗಿ ನೀಡಿದ ಯಡಿಯೂರಪ್ಪ, ನಾಡಿಗೆ ಅನ್ನ ನೀಡಲು ಹೆಣಗುತ್ತಿರುವ ರೈತರಿಗೆ ಹಣ ನೀಡುವಲ್ಲೇಕೆ ಮೀನಾಮೇಷ ಎಣಿಸಿದರು ಎಂದು ಪ್ರಶ್ನೆ ಮಾಡಿದರು. ಆಡಳಿತ ಮಾಡುತ್ತಿರುವ ಪಕ್ಷಗಳಿಗೆ ಗ್ರಾಮೀಣ ಪ್ರದೇಶದಲ್ಲಿರುವ ರೈತರ ಸಂಕಷ್ಟ ಅರ್ಥವಾಗುತ್ತಿಲ್ಲ ಎಂದು ಹೇಳಿದರು.ಯಡಿಯೂರಪ್ಪ ತಾವು ಮಾಡಿದ ಭ್ರಷ್ಟಾಚಾರದಿಂದಾಗಿ ಜೈಲಿಗೆ ಹೋಗಿ ಬರುವಂತಾಯಿತು, ಆದರೆ ಕರ್ನಾಟಕದ 6ಕೋಟಿ ಜನ ತಲೆತಗ್ಗಿಸುವಂತಾಗಿದೆ ಎಂದು ವಿಷಾದಿಸಿದರು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮಾಲತಿ ನಾಯಕ ಮಾತನಾಡಿ ಈ ಭಾಗದ ಜನರು ಚುನಾಯಿತ ಪ್ರತಿನಿಧಿಗಳಿಂದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ. ಸದ್ಯ ನಿಮ್ಮ ಪ್ರವೃತ್ತಿಯನ್ನು ಬದಲಾಯಿಸಿಕೊಂಡು ಬೇಡಿಕೆಗಳನ್ನು ಮುಂದಿಡಿ ಅದು ನಿಮ್ಮ ಹಕ್ಕು ಎಂದು ಹೇಳಿದರು.

 

ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಉಳಿದ ಪಕ್ಷಗಳಲ್ಲಿ ಕೇವಲ ಒಬ್ಬೊಬ್ಬರೇ ಅಭ್ಯರ್ಥಿಗಳ್ದ್ದಿದರೆ ಜೆಡಿಎಸ್‌ನಲ್ಲಿ ಮಾತ್ರ ಹತ್ತಾರು ಸ್ಪರ್ಧಿಗಳಿದ್ದು ಉಳಿದೆಲ್ಲ ಪಕ್ಷಗಳಿಗಿಂತ ಜೆಡಿಎಸ್‌ನಲ್ಲಿಯೇ ಸ್ಪರ್ಧೆ ಹೆಚ್ಚಾಗಿದೆ ಎಂದು ಹೇಳಿದರು.ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಅಮರೇಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಈಗಲೂ ಬೇರು ಮಟ್ಟದಲ್ಲಿ ಜೆಡಿಎಸ್‌ನ ಹಳೆಯ ಕಾರ್ಯಕರ್ತರು ಇದ್ದಾರೆ, ಬೇರೆ ಪಕ್ಷಗಳು ನೀಡಿದ ಆಮಿಷೆಗೆ ಬಲಿಯಾಗದೆ ನಂಬಿಕೊಂಡು ಬಂದಿರುವ ಪಕ್ಷದ ತತ್ವಗಳನ್ನು ಆಧರಿಸಿ ಉಳಿದಿರುವುದು ಅಭಿನಂದನಾರ್ಹ ಎಂದು ಹೇಳಿದರು.

 

ಬಿಜೆಪಿಯ ದುರಾಡಳಿತದಿಂದ ಬೇಸತ್ತಿರುವ ರಾಜ್ಯದ ಜನರು ಯಾವಾಗ ಅವಧಿ ಮುಗಿದಿತೋ ಎಂದು ಕಾಯುತ್ತಿದ್ದಾರೆ, ಚುನಾವಣೆ ಸಂದರ್ಭದಲ್ಲಿ ಮತದಾರರು ಭ್ರಷ್ಟರಾಗದೇ ನಿಮ್ಮ ಅಮೂಲ್ಯವಾಗಿರುವ ಮತದಿಂದ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಹೇಳಿದರು.ಜೆಡಿಎಸ್ ಮಾಜಿ ಅಧ್ಯಕ್ಷ ಬಸವರಾಜ ಕುದರಿಮೋತಿ, ಬಸವರಾಜ ಮಲಕಾಪೂರ, ಶಿವಪ್ಪ ನೀರಾವರಿ, ಸಿ.ಎಂ.ಹಿರೇಮಠ, ಉಮೇಶ ಮಂಗಳೂರ, ಅಮರಪ್ಪ ನಾಲತವಾಡ, ರಾಘವೇಂದ್ರ ದೇಸಾಯಿ, ತ್ಲ್ಲಾಲೂಕು ಪಂಚಾಯಿತಿ ಸದಸ್ಯೆ ಸುವರ್ಣಮ್ಮ, ಯಲ್ಲಪ್ಪ ಗದ್ದಿ, ಕಾಡಪ್ಪ ದಮ್ಮೂರ ಮಾತನಾಡಿದರು.ಮಹಾಂತೇಶ ಮದಲಗಟ್ಟಿ, ದೊಡ್ಡಯ್ಯ ಗದ್ದಡಕಿ, ಮಹಾಂತೇಶ ಕುಷ್ಟಗಿ, ರುದ್ರಪ್ಪ ಮದ್ನಾಳ, ಮಹಾಂತೇಶ ಹನುಮನಾಳ, ಕಾಳಮ್ಮ ಬಡಿಗೇರ, ಜಿ.ಕೆ.ಹಿರೇಮಠ, ವಿಜಯಕುಮಾರ ಹಿರೇಮಠ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಇದ್ದರು.ಕುಷ್ಟಗಿ ಪುರಸಭೆಗೆ ಅಧ್ಯಕ್ಷೆಯಾಗಿ ಆಯ್ಕೆಯಾದ ಕಾಳಮ್ಮ ಬಡಿಗೇರ ಇವರನ್ನು ಪಕ್ಷದ ಪರವಾಗಿ ಸನ್ಮಾನಿಸಲಾಯಿತು.ಕಿಶೋರ ಹಿರೇಮಠ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಯಂಕಪ್ಪ ಬಂಕದ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry