ಮಂಗಳವಾರ, ಜೂನ್ 22, 2021
23 °C

ಬಿಜೆಪಿ ಹೈಕಮಾಂಡ್‌ನಲ್ಲಿ ಭಿನ್ನಾಭಿಪ್ರಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಆಗಿ ನೇಮಕ ಮಾಡುವುದಕ್ಕೆ ಸಂಬಂಧಿಸಿದಂತೆ ಬಿಜೆಪಿ ವರಿಷ್ಠರಲ್ಲಿ ಮತ್ತೆ ತೀವ್ರ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದೆ.ಮುಖ್ಯಮಂತ್ರಿ ಸ್ಥಾನದಿಂದ ಸದಾನಂದಗೌಡ ಅವರನ್ನು ಪದಚ್ಯುತಿಗೊಳಿಸಿ ಯಡಿಯೂರಪ್ಪ ಅವರನ್ನೇ ಪುನಃ ನೇಮಕ ಮಾಡಬೇಕೆಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಒತ್ತಾಯ ಮಾಡುತ್ತಿದ್ದಾರೆ. ಇದಕ್ಕೆ ಅರುಣ್ ಜೇಟ್ಲಿ ದನಿಗೂಡಿಸಿದ್ದಾರೆ. ಆದರೆ, ಎಂದಿನಂತೆ ಎಲ್.ಕೆ. ಅಡ್ವಾಣಿ, ಸುಷ್ಮಾ  ಸ್ವರಾಜ್, ವೆಂಕಯ್ಯ ನಾಯ್ಡು, ರಾಜ್‌ನಾಥ್‌ಸಿಂಗ್, ಮುರುಳಿ ಮನೋಹರ ಜೋಶಿ ಒಳಗೊಂಡಂತೆ ಹಲವರು ವಿರೋಧ ಮಾಡುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮಂಗಳವಾರ ದೆಹಲಿಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬುಧವಾರ ವೈಷ್ಣೊದೇವಿಗೆ ತೆರಳಿ ಬೆಂಗಳೂರಿಗೆ ಹಿಂತಿರುಗಿದ್ದಾರೆ. ರಾಜ್ಯದ ರಾಜಧಾನಿಗೆ ಮರಳುವ ಮುನ್ನ ಗಡ್ಕರಿ ಮತ್ತಿತರ ಮೇಲೆ ಮತ್ತೆ ತಮ್ಮನ್ನು ಮುಖ್ಯಮಂತ್ರಿ ಸ್ಥಾನಕ್ಕೆ ನೇಮಿಸಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡಿ ಹೊರ ಹೋಗುತ್ತೇನೆ ಎಂದು ಒತ್ತಡ ಹೇರಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ಭವಿಸಿರುವ ಪರಿಸ್ಥಿತಿ ಕುರಿತು ಚರ್ಚಿಸಲು ಬಿಜೆಪಿ ವರಿಷ್ಠರು ಬುಧವಾರ ಸಂಜೆ ಸಭೆ ಸೇರಿದ್ದರು. ಈ ಸಭೆಯಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ.ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು, ರಾಜನಾಥ್‌ಸಿಂಗ್ ಮತ್ತು ಸತೀಶ್ ಸಭೆಯಲ್ಲಿ ಭಾಗವಹಿಸಿದ್ದರು. ಇದು ಪ್ರಮುಖರ ಸಭೆ ವಿನಾ ಸಂಸದೀಯ ಪಕ್ಷದ ಸಭೆಯಲ್ಲ. ಯಡಿಯೂರಪ್ಪ ಅವರ ಪರ ಮತ್ತು ವಿರುದ್ಧ ಬಿರುಸಿನ ಚರ್ಚೆ ನಡೆಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿಯಾಗಿ ನೇಮಕ ಮಾಡಿದರೆ ಪಕ್ಷದ ವರ್ಚಸ್ಸು ಏನಾಗಬೇಕು. ಭ್ರಷ್ಟಾಚಾರದ ವಿರುದ್ಧ ದನಿ ಎತ್ತುವುದು ಹೇಗೆ. ಈಗ ಆರಂಭವಾಗಿರುವ ಸಂಸತ್ತನ್ನು ಎದುರಿಸುವುದು ಹೇಗೆ ಎಂದು ಅಡ್ವಾಣಿ ಬಣದ ಮುಖಂಡರು ಕೇಳಿದ್ದಾರೆ.

 

ಅಕ್ರಮ ಗಣಿಗಾರಿಕೆ ಆರೋಪ ಹೊತ್ತ ಗಣಿ ಕಂಪೆನಿಗಳಿಂದ `ಕಪ್ಪ ಕಾಣಿಕೆ~ ಪಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರ ವಿರುದ್ಧ ಸಿಬಿಐ ತನಿಖೆ ಅಗತ್ಯವಿದೆಯೇ ಎಂದು ಸುಪ್ರೀಂ ಕೋರ್ಟ್ ತಾನು ನೇಮಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಗೆ ಕೇಳಿದೆ. ಸಿಇಸಿ ಸಿಬಿಐ ತನಿಖೆಗೆ ಶಿಫಾರಸು ಮಾಡಿದರೆ ಮತ್ತೆ ಯಡಿಯೂರಪ್ಪ ರಾಜೀನಾಮೆ ಕೇಳುವುದೇ ಎಂಬ ವಾದಗಳನ್ನು ಮುಂದಿಟ್ಟಿದ್ದಾರೆ.ಗಣಿ ಕಂಪೆನಿಗಳಿಂದ ದೇಣಿಗೆ ಪಡೆದ ಪ್ರಕರಣದಿಂದ ಹೈಕೋರ್ಟ್ ಯಡಿಯೂರಪ್ಪ ಅವರನ್ನು ಮುಕ್ತಿಗೊಳಿಸಿದೆ. ಯಡಿಯೂರಪ್ಪ ಅವರಂಥ ಪ್ರಭಾವಿ ನಾಯಕರು ಪಕ್ಷಕ್ಕೆ ಅಗತ್ಯವಿದೆ, ಅವರನ್ನು ಮತ್ತೆ ಶಾಸಕಾಂಗ ಪಕ್ಷದ ನಾಯಕರಾಗಿ ನೇಮಕ ಮಾಡುವುದು ಪಕ್ಷದ ಹಿತದೃಷ್ಟಿಯಿಂದ ಸೂಕ್ತ ಎಂಬ ಪ್ರತಿಪಾದನೆ ಗಡ್ಕರಿ ಅವರದ್ದು.ಬಿಜೆಪಿ ಹೈಕಮಾಂಡ್‌ನಲ್ಲಿ ಯಡಿಯೂರಪ್ಪ ಪರವಾದ ದನಿಗಿಂತ ವಿರುದ್ಧ ದನಿಯೇ ಜೋರಾಗಿದೆ.ಈ ಹಿನ್ನೆಲೆಯಲ್ಲಿ ಸದ್ಯಕ್ಕಂತೂ ತೀರ್ಮಾನ ಸಾಧ್ಯವಿಲ್ಲದ ಮಾತು ಎಂದು ಮೂಲಗಳು ವಿವರಿಸಿವೆ.

ಈಗ ಯಾವುದೇ ತೀರ್ಮಾನ ಮಾಡಿದರೂ ಉಡುಪಿ- ಚಿಕ್ಕಮಗಳೂರು ಉಪ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಚುನಾವಣೆ ಮುಗಿಯುವವರೆಗೆ ಕರ್ನಾಟಕದ ಬೆಳವಣಿಗೆ ಕುರಿತು ಚರ್ಚೆ ಬೇಡ ಎಂಬ ಅಭಿಪ್ರಾಯವನ್ನು ಬಹುತೇಕರು ವ್ಯಕ್ತಮಾಡಿದ್ದಾರೆ.

 

ಇದಾದ ಬಳಿಕ ರಾಜ್ಯ ವಿಧಾನಮಂಡಲ ಅಧಿವೇಶನ ಶುರುವಾಗಲಿದೆ. ಹೀಗಾಗಿ ಏನೇ ತೀರ್ಮಾನ ಆಗಬೇಕಾದರೂ ಬಿಜೆಪಿ ಸಂಸದೀಯ ಮಂಡಳಿ ಸೇರಬೇಕು. ಸದ್ಯಕ್ಕೆ ಸಂಸದೀಯ ಮಂಡಳಿ ಸೇರುವುದಿಲ್ಲ ಎನ್ನಲಾಗಿದೆ. ವೈಷ್ಣೊದೇವಿಯಿಂದ ಬೆಂಗಳೂರಿಗೆ ತೆರಳುವ ಮುನ್ನ ಯಡಿಯೂರಪ್ಪ ಬಜೆಟ್ ಮಂಡನೆಗೆ ತಮಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.