ಶುಕ್ರವಾರ, ಮೇ 7, 2021
24 °C
ನಗರ ಸಂಚಾರ

ಬಿಟಿಡಿಎ ಅಧ್ಯಕ್ಷ ಗಾದಿಗೆ ಭಾರೀ ಲಾಬಿ

ಬಸವರಾಜ್ ಸಂಪಳ್ಳಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ(ಬಿಟಿಡಿಎ) ಅಧ್ಯಕ್ಷ, ಸದಸ್ಯರಾಗಲು ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಭಾರೀ ಲಾಬಿ ಆರಂಭವಾಗಿದೆ. ಕಾಂಗ್ರೆಸ್ ವರಿಷ್ಠರು ಯಾರಿಗೆ ರಾಜಕೀಯ ಪುನರ್ವಸತಿ ಕಲ್ಪಿಸುತ್ತಾರೆ ಎಂಬುದು ಇದೀಗ ಚರ್ಚೆಗೆ ಗ್ರಾಸವಾಗಿದೆ.ಬಿಟಿಡಿಎ ಅಧ್ಯಕ್ಷರಾಗಬೇಕು ಎಂದು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರ ಮನೆಯ ಕದ ತಟ್ಟಿರುವ ಹಾಗೂ ಬೆಂಗಳೂರಿಗೆ ತೆರಳಿ ಕೆಪಿಸಿಸಿ ವರಿಷ್ಠರನ್ನು ಭೇಟಿ ಮಾಡಿ ಬಂದಿರುವ ಮತ್ತು ಭೇಟಿ ಮಾಡಲು ಅಣಿಯಾಗಿರುವ ಕಾಂಗ್ರೆಸ್ ಮುಖಂಡರಲ್ಲಿ ಯಾರಿಗೆ ಬಿಟಿಡಿಎ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಸಾಮರ್ಥ್ಯ, ತಿಳಿವಳಿಕೆ ಇದೆ ಎಂಬುದು ಪ್ರಶ್ನೆಯಾಗಿದೆ.ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಮತ್ತು ಆಗಲಿರುವ ಆಸ್ತಿಗಳ ಸ್ವಾಧೀನ ಮತ್ತು ನವನಗರದಲ್ಲಿ ಭೂಸ್ವಾಧೀನ ಮಾಡಿಕೊಂಡು ಸಂತ್ರಸ್ತರಿಗೆ ಪುನರ್‌ವಸತಿ ಮತ್ತು ಪುನರ್‌ನಿರ್ಮಾಣ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು 1983ರಲ್ಲಿ `ಬಾಗಲಕೋಟೆ ಟೌನ್ ಡೆವಲಪ್‌ಮೆಂಟ್ ಆ್ಯಕ್ಟ್' ಎಂಬ ವಿಶೇಷ ಕಾನೂನನ್ನು ಜಾರಿಗೆ ತಂದಿದೆ. ಈ ಕಾಯ್ದೆ ಅನ್ವಯ ಪ್ರಾಧಿಕಾರವನ್ನು ಸ್ಥಾಪನೆ ಮಾಡಲಾಗಿದೆ.ಪ್ರಾಧಿಕಾರವು ಒಬ್ಬ ಅಧಿಕಾರೇತರ ಅಧ್ಯಕ್ಷರನ್ನು ಮತ್ತು ಮೂರು ಜನ ಅಧಿಕಾರೇತರ ಸದಸ್ಯರನ್ನು ಒಳಗೊಂಡಿದೆ.ಈವರೆಗೆ ಬಿಟಿಡಿಎ ಅಧ್ಯಕ್ಷರಾಗಿ ಜಿ.ವಿ. ಮಂಟೂರ, ಡಾ. ಕುಪ್ಪಸ್ತ, ಡಾ. ರಾಜಶೇಖರ ಕಂಠಿ, ಎಸ್.ಆರ್. ಪಾಟೀಲ, ಸಿದ್ದಣ್ಣ ಶೆಟ್ಟರ, ಪ್ರಕಾಶ ತಪಶೆಟ್ಟಿ, ಜಿ.ಎನ್. ಪಾಟೀಲ, ವೀರಣ್ಣ ಚರಂತಿಮಠ, ಲಿಂಗರಾಜ ವಾಲಿ, ಸಿ.ವಿ. ಕೋಟಿ ವಿವಿಧ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.ಇದೀಗ ಬಿಟಿಡಿಎ ಅಧ್ಯಕ್ಷರಾಗಬೇಕೆಂಬ ಆಕಾಂಕ್ಷಿಗಳ ಸಾಲಿನಲ್ಲಿ ಈಗಾಗಲೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ ಪ್ರಕಾಶ ತಪಶೆಟ್ಟಿ, ಜಿ.ಎನ್. ಪಾಟೀಲ ಸೇರಿದಂತೆ ಆನಂದ ಜಿಗಜಿನ್ನಿ, ಮುತ್ತಣ್ಣ ಬೆಣ್ಣೂರ, ಕುಮಾರ ಯಳ್ಳುಗುತ್ತಿ, ಡಾ. ಕಿರಣ ಕಂಠಿ, ಎಸ್.ಕೆ. ಯಡಹಳ್ಳಿ, ಅಶೋಕ ಲಾಗಲೂಟಿ ಪ್ರಮುಖರಾಗಿದ್ದು, ಇವರಲ್ಲಿ ಬಿಟಿಡಿಎ ಅಧ್ಯಕ್ಷ ಗಾದಿಯನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಯಾರಿಗಿದೆ ಎಂದು ಆಯ್ಕೆ ಮಾಡುವುದು ಸುಲಭ. ಆದರೆ, ಯಾರೊಬ್ಬರನ್ನೂ ಆಯ್ಕೆ ಮಾಡುವ ಮುನ್ನ ಶೀಘ್ರದಲ್ಲೇ ಎದುರಾಗಲಿರುವ ಲೋಕಸಭೆ ಚುನಾವಣೆ ಗಮನಿಸಬೇಕಾಗಿರುವುದು ಕಾಂಗ್ರೆಸ್‌ಗೆ ತಲೆನೋವಾಗಿದೆ.ಪ್ರಾಧಿಕಾರದ ಅಧ್ಯಕ್ಷ ಗಾದಿ ರಾಜಕೀಯ ಸಂತ್ರಸ್ತರ ಪುನರ್ವಸತಿ ಕೇಂದ್ರವೂ ಅಲ್ಲ, ಅಧಿಕಾರ ಅನುಭವಿಸುವ ರಾಜಕೀಯ ಹುದ್ದೆಯೂ ಅಲ್ಲ. ಜಲಾಶಯದಲ್ಲಿ ಸರ್ವಸ್ವವನ್ನು ಕಳೆದುಕೊಂಡು ಸಂತ್ರಸ್ತರಾಗಿರುವ ಬಾಗಲಕೋಟೆ ಜನತೆಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಜೊತೆಗೆ ಹೊಸ ಬದುಕನ್ನು ಕಟ್ಟಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಾದ ದೊಡ್ಡ ಹೊಣೆಗಾರಿಕೆ ಇದೆ.ಪ್ರಸ್ತುತ 523 ಮೀಟರ್ ವರೆಗಿನ ಸಂತ್ರಸ್ತರಿಗೆ ಪರಿಹಾರಧನ ನೀಡಲಾಗಿದೆ. ಆದರೆ, 7,200 ಸಂತ್ರಸ್ತ ಕುಟುಂಬಗಳಿಗೆ ನಿವೇಶನ ನೀಡುವುದು ಬಾಕಿ ಉಳಿದಿದೆ. ಯುನಿಟ್ 2 ಮತ್ತು 3 ಅನ್ನು ಅಭಿವೃದ್ಧಿಪಡಿಸಬೇಕಿದೆ (525 ಮತ್ತು 527 ಮೀಟರ್). ಈಗಾಗಲೇ ಕಾಯ್ದಿರಿಸಿ ರದ್ದುಗೊಂಡಿರುವ 3600 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಬೇಕಿದೆ. ನವನಗರದಲ್ಲಿ ಸಂತ್ರಸ್ತರು ನೆಮ್ಮದಿಯಿಂದ ಜೀವನ ಸಾಗಿಸಲು ಮೂಲ ಸೌಲಭ್ಯ ಒದಗಿಸುವ ಕಾರ್ಯ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಬಿಟಿಡಿಎ ಅಧ್ಯಕ್ಷರಾಗಬಯಸುವವರಿಗೆ ರಾಜಕೀಯ ಅರಿವಿಗಿಂತ ಕಾನೂನಿನ ಜ್ಞಾನ ಅತ್ಯಗತ್ಯವಾಗಿದೆ.ಈ ಹಿಂದೆ ಒಮ್ಮೆ ಬಿಟಿಡಿಎ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಅನುಭವ ಹೊಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ ಅವರು ಸ್ಥಳೀಯ ಶಾಸಕ ಎಚ್.ವೈ. ಮೇಟಿ ಅವರೊಂದಿಗೆ ಚರ್ಚಿಸಿ ಸಮರ್ಥರನ್ನು ಬಿಟಿಡಿಎಗೆ ನೇಮಕ ಮಾಡುವುದಾಗಿ ಹೇಳಿದ್ದಾರೆ. ಯಾರು ಆ `ಸಮರ್ಥ'ರು ಎಂದು ಕಾದು ನೋಡಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.