ಬಿಟಿ ಹತ್ತಿ ಗಿಡ ಪರಿಶೀಲಿಸಿದ ಕೃಷಿ ವಿಜ್ಞಾನಿಗಳು

7
ಜಗಳೂರು, ಹರಪನಹಳ್ಳಿ, ದಾವಣಗೆರೆ ತಾಲ್ಲೂಕಿನ ಹೊಲಗಳಿಗೆ ಭೇಟಿ

ಬಿಟಿ ಹತ್ತಿ ಗಿಡ ಪರಿಶೀಲಿಸಿದ ಕೃಷಿ ವಿಜ್ಞಾನಿಗಳು

Published:
Updated:
ಬಿಟಿ ಹತ್ತಿ ಗಿಡ ಪರಿಶೀಲಿಸಿದ ಕೃಷಿ ವಿಜ್ಞಾನಿಗಳು

ದಾವಣಗೆರೆ: ಜಿಲ್ಲೆಯ ವಿವಿಧೆಡೆ ಬಿತ್ತಿದ ಕನಕ ಬ್ರಾಂಡ್‌ನ ಬಿಟಿ ಹತ್ತಿ ಗಿಡಗಳು ಕಾಯಿಗಟ್ಟದೇ ರೈತರಿಗೆ ಅಪಾರ ನಷ್ಟವಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಶುಕ್ರವಾರ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಜಿಲ್ಲೆಯ ಹಲವು ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.ಜಿಲ್ಲೆಯಲ್ಲಿ ಈ ಬಾರಿ 24,253 ಹೆಕ್ಟೇರ್ ಪ್ರದೇಶದಲ್ಲಿ ಬಿಟಿ ಹತ್ತಿ ಬೆಳೆಯಲಾಗಿದ್ದು, ಶೇ 90ಷ್ಟು ಬೆಳೆ ಕೈಕೊಟ್ಟಿದೆ. ರೈತರು ಕೋಟ್ಯಂತರ ರೂ ನಷ್ಟ ಅನುಭವಿಸಿದ್ದಾರೆ. ಬೀಜ ವಿತರಿಸಿದ ಕಂಪೆನಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸೂಕ್ತ ಪರಿಹಾರ ದೊರಕಿಸಬೇಕು ಎಂದು ರೈತರು ಸರಣಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೃಷಿ ವಿಜ್ಞಾನಿಗಳಿಂದ ಪರಿಶೀಲನೆ ನಡೆಸುವ ಭರವಸೆ ನೀಡಿತ್ತು.ಕೃಷಿ ವಿಜ್ಞಾನಿ ಡಾ.ಎಸ್‌.ಬಿ.ಪಾಟೀಲ, ಡಾ.ಎಂ.ಎಸ್‌.ಎಲ್‌.ರಾವ್‌, ಮಂಜುಳಾ ಅವರನ್ನು ಒಳಗೊಂಡ ತಂಡ ಜಿಲ್ಲೆಯ ಆನಗೋಡು, ಕಂದನಕೋವಿ, ಹನುಮಂತಾಪುರ, ದೇವಿಕೆರೆ, ಗಡಿಮಾಕುಂಟೆ, ಬೆಣ್ಣೆಹಳ್ಳಿ ಸೇರಿದಂತೆ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿನ ಹೊಲಗಳಿಗೆ ಭೇಟಿ ನೀಡಿ, ಮಣ್ಣಿನ ಮಾದರಿ, ಬೇಸಾಯ ಕ್ರಮ, ಕೀಟಬಾಧೆ, ಗಿಡಗಳ ಬೆಳವಣಿಗೆ, ಕಾಯಿಗಟ್ಟುವಿಕೆ ಕುರಿತು ಪರಿಶೀಲಿಸಿ, ಮಾಹಿತಿ ಕಲೆಹಾಕಿತು.ಹೆಚ್ಚಿನ ಪರಿಹಾರಕ್ಕೆ ರೈತರ ಆಗ್ರಹ

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ, ದುಬಾರಿ ಬೆಲೆ ತೆತ್ತು ರಾತ್ರಿ ಎಲ್ಲ ನಿದ್ದೆಗೆಟ್ಟು ಹತ್ತಿಬೀಜ ಖರೀದಿಸಿ ಬಿತ್ತನೆ ಮಾಡಲಾಗಿದೆ. ಪ್ರತಿ ಎಕರೆಗೆ 40 ಸಾವಿರದಿಂದ 50 ಸಾವಿರದವರೆಗೆ ಒಬ್ಬೊಬ್ಬ ರೈತರು ಖರ್ಚು ಮಾಡಿದ್ದಾರೆ. ಬೀಜ  ಮಾರಾಟ ಮಾಡುವಾಗ ಅಧಿಕ ಇಳುವರಿಯ ಆಮಿಷ ಒಡ್ಡುವ ಕಂಪೆನಿಗಳು ಬೀಜ ಕಳಪೆ ಎಂಬ ಆರೋಪ ಬಂದ ತಕ್ಷಣ ಬೇರೆ ಸಬೂಬು ಹೇಳುತ್ತವೆ.ಅದಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಧ್ವನಿಗೂಡಿಸುತ್ತಾರೆ. ಕಂಪೆನಿಗಳು ಹಾಗೂ ಇಲಾಖೆ ನಡುವೆ ಸಿಲುಕಿ ರೈತರು ಸಾವಿನ ಹಾದಿ ಹಿಡಿಯುತ್ತಿದ್ದಾರೆ. ವಿಜ್ಞಾನಿಗಳು ಸೂಕ್ತ ವರದಿ ನೀಡಿ ಬೆಳೆ ನಷ್ಟವಾಗಿರುವ ರೈತರಿಗೆ ಹೆಚ್ಚಿನ ಪರಿಹಾರ ದೊರಕಿಸಬೇಕು ಎಂದು ಒತ್ತಾಯಿಸಿದರು.ಗ್ರಾಮ ಪಂಚಾಯ್ತಿ ಸದಸ್ಯ ಎಚ್‌.ಎಸ್.ಪ್ರಕಾಶ್‌, ರೈತ ಮುಖಂಡರಾದ ಹೊನ್ನೂರು ಮುನಿಯಪ್ಪ, ಚಿನ್ನಸಮುದ್ರ ಶೇಖರ್‌ನಾಯ್ಕ, ಹನುಮೇಶ್, ಮಂಜುನಾಥ್‌, ಚಂದ್ರು, ರೇವಣಸಿದ್ದಪ್ಪ, ಹನುಮಂತಪ್ಪ, ಜಂಟಿ ಕೃಷಿ ನಿರ್ದೇಶಕ ಡಾ.ಆರ್‌.ಜಿ.ಗೊಲ್ಲರ್‌, ಸಹಾಯಕ ಕೃಷಿ ನಿರ್ದೇಶಕ ಉಮೇಶ್‌, ತಿಪ್ಪೇಸ್ವಾಮಿ ಹಾಜರಿದ್ದರು.ರೈತರ ಪ್ರತಿಭಟನೆ

ಆನಗೋಡಿನ ನಾಗಪ್ಪ ಎನ್ನುವವರ ಜಮೀನಿಗೆ ವಿಜ್ಞಾನಿಗಳು ಆಗಮಿಸಿ ಹತ್ತಿ ಗಿಡಗಳನ್ನು ಪರಿಶೀಲನೆ ನಡೆಸಿದ ನಂತರ, ಸ್ಥಳದಲ್ಲೇ ವರದಿ ನೀಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.ಹಿಂದೆ ಬಿಟಿ ಹತ್ತಿ ವಿರುದ್ಧ ಪ್ರತಿಭಟನೆ ನಡೆಸಿ, ಹಲವು ಹೊಲಗಳಲ್ಲಿ ಬೆಳೆದ ಗಿಡಗಳನ್ನು ಕಿತ್ತು ಹಾಕಿದ್ದೆವು. ಅಂದು 40ಕ್ಕೂ ಹೆಚ್ಚು ರೈತರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ನಂತರ ಬಿಟಿ ಹತ್ತಿಯನ್ನು ಸ್ಥಳೀಯ ಹೆಸರುಗಳಲ್ಲಿ ಪ್ಯಾಕ್‌ ಮಾಡಿ ರೈತರಿಗೆ ಮಾರಾಟ ಮಾಡಲಾಗಿದೆ. ಅದಕ್ಕೆ ಕೃಷಿ ಇಲಾಖೆಯೇ ಹೊಣೆ. ವಿಜ್ಞಾನಿಗಳು ಬೆಳೆ ವಿಫಲತೆ ಏನು ಕಾರಣ ಎನ್ನುವುದನ್ನು ಸ್ಥಳದಲ್ಲೇ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.ವಾರದಲ್ಲಿ ವರದಿ ಸಲ್ಲಿಕೆ

ಜಿಲ್ಲೆಯ ವಿವಿಧೆಡೆ ಹತ್ತಿ ಗಿಡಗಳು ಕಾಯಿಗಟ್ಟದೇ ಇರುವುದಕ್ಕೆ ಇರುವ ಕಾರಣಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ವಾರದ ಒಳಗೆ ಸಮಗ್ರ ವರದಿ ನೀಡಲಾಗುವುದು. ಪ್ರತಿ ಗಿಡದಲ್ಲೂ 60ರಿಂದ 80 ಕಾಯಿ ಇರಬೇಕಿತ್ತು. ಆದರೆ, 3ರಿಂದ 15 ಕಾಯಿ ಮಾತ್ರ ಇವೆ. ಈ ಬಗ್ಗೆ ತಳಿಶಾಸ್ತ್ರಜ್ಞರು, ಕೀಟ ಶಾಸ್ತ್ರಜ್ಞರು, ಮಣ್ಣು ಪರೀಕ್ಷಕರ ಪರೀಕ್ಷರ ಜತೆಗೂಡಿ ವರದಿ ಸಿದ್ಧಪಡಿಸಲಾಗುತ್ತದೆ. ವರದಿ ನೀಡಿದ ನಂತರ ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತ ವರದಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

– ಡಾ.ಎಸ್‌.ಬಿ.ಪಾಟೀಲ, ಕೃಷಿ ವಿಜ್ಞಾನಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry