ಸೋಮವಾರ, ಏಪ್ರಿಲ್ 19, 2021
32 °C

ಬಿ.ಟಿ ಹತ್ತಿ ಬೆಳೆಯಿರಿ, ಆತ್ಮಹತ್ಯೆ ಮಾಡಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ನನ್ನ ಅಪ್ಪ ಮರಳಿ ಬರಲಿ~-ಇದು ಹತ್ತು ವರ್ಷದ ಸೂರಜ್ ನಿರೀಕ್ಷೆ. ಆದರೆ ಈತ ಅಪ್ಪ ಎಂದೆಂದಿಗೂ ಬರುವುದೇ ಇಲ್ಲ. ಏಕೆಂದರೆ ಈ ಹುಡುನಗ ಅಪ್ಪ ಬಿ.ಟಿ ಹತ್ತಿ ಬೆಳೆಯಲು ಬ್ಯಾಂಕ್ ಮತ್ತು ಲೇವಾದೇವಿಗಾರರಿಂದ ಪಡೆದ ಸಾಲವನ್ನು ತೀರಿಸಲಾಗದೆ ಹೊಲದಲ್ಲಿ ಕ್ರಿಮಿನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದಾಗಿ ಇಡೀ ಕುಟುಂಬ ಕಣ್ಣೀರಿನಲ್ಲಿ  ಕೈತೊಳೆಯುವಂತಾಗಿದೆ.-ಇದು ಕೇವಲ ಸೂರಜ್ ತಂದೆಯ ಕಥೆ ಮಾತ್ರವಲ್ಲ, ಮಹಾರಾಷ್ಟ್ರದ ವಿದರ್ಭ ಭಾಗದಲ್ಲಿ ಬಿ.ಟಿ ಹತ್ತಿ ಬೆಳೆದ ಸಾವಿರಾರು ರೈತ ಕುಟುಂಬಗಳ ಕಥೆ. ಬಿ.ಟಿ ಹತ್ತಿ ಬೆಳೆದು ನಷ್ಟ ಅನುಭವಿಸಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡವರು ಮತ್ತು ಅದೇ ಹಾದಿಯಲ್ಲಿರುವ ರೈತರ ನೋವಿನ ಚಿತ್ರಣವನ್ನು `ನನ್ನ ಅಪ್ಪ ಮರಳಿ ಬರಲಿ~ ಸಾಕ್ಷ್ಯಚಿತ್ರ ಎಳೆ ಎಳೆಯಾಗಿ ಬಿಡಿಸಿಡುತ್ತದೆ.ಮೈಸೂರು ವಿಶ್ವವಿದ್ಯಾನಿಲಯ ಅಧ್ಯಾಪಕರ ಸಂಘ ಮತ್ತು ಸೇಜ್-ಸಂವಾದ ಮೈಸೂರು ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಎರಡು ದಿನ ಆಯೋಜಿಸಿರುವ `ಕುಲಾಂತರಿಯಿಂದ ಮುಕ್ತಿ~ ಸಾಕ್ಷ್ಯ ಚಿತ್ರೋತ್ಸವ ದಲ್ಲಿ `ನನ್ನ ಅಪ್ಪ ಮರಳಿ ಬರಲಿ~ ಪ್ರದರ್ಶನ ಗೊಂಡಿತು.ವಿದರ್ಭದಲ್ಲಿ ಸಾಂಪ್ರದಾಯಿಕ ಕೃಷಿಯನ್ನು ಬಿಟ್ಟು ಹೆಚ್ಚು ಇಳುವರಿ ಮತ್ತು ಹಣ ಗಳಿಕೆಯ ಆಸೆಗೆ ಬಿದ್ದ ರೈತರು ಮಾನ್ಸೆಂಟೊ ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳ ಬಣ್ಣದ ಮಾತಿಗೆ ಮರುಳಾಗುತ್ತಾರೆ. ಆ ಕಂಪೆನಿಗಳ ಬೀಜವನ್ನು ಬಿತ್ತುತ್ತಾರೆ. ರಸಗೊಬ್ಬರ, ಕ್ರಿಮಿನಾಶಕವನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ಅಂದುಕೊಂಡಷ್ಟು ಆದಾಯ ಬರುವುದೇ ಇಲ್ಲ. ಇದರಿಂದಾಗಿ ವಿದರ್ಭದ ಭಾಗದ ಗ್ರಾಮಗಳು ಸಾವಿನ ಮನೆಯಂತಾಗಿಬಿಡುತ್ತವೆ.ಈ ಸಾಕ್ಷ್ಯಚಿತ್ರವು ಕುಲಾಂತರಿ ತಳಿ ವಿರುದ್ಧ ಹೋರಾಟ ನಡೆಸುತ್ತಿರುವ ತಜ್ಞರು, ಹೋರಾಟಗಾರರು, ನೋವು ಅನುಭವಿಸಿದ ರೈತರ ಸಂದರ್ಶನವನ್ನು ಒಳಗೊಂಡಿದೆ. ವಿದರ್ಭ ಭಾಗದಲ್ಲಿ ರೈತರು ಬಿ.ಟಿ ಹತ್ತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದು ಹೀಗೆ-~ಬಿ.ಟಿ ಹತ್ತಿ ಬೆಳೆಯಿರಿ, ಆತ್ಮಹತ್ಯೆ ಮಾಡಿಕೊಳ್ಳಿ~. ಈ ಇಂತಹ ಮಾತು ಸಾಕ್ಷ್ಯಚಿತ್ರದಲ್ಲಿ ಪದೇ ಪದೇ ಪ್ರತಿಧ್ವನಿಸುತ್ತಲೇ ಹೋಗುತ್ತದೆ.ವಿದರ್ಭ ಭಾಗದ ರೈತರು ಹತ್ತಿಯನ್ನು ಬಳಿ ಬಂಗಾರ ಎಂದೇ ಕರೆಯುತ್ತಿರುತ್ತಾರೆ. ಆದರೆ ಬಿ.ಟಿ ಹತ್ತಿ ಹಾಕಿದ ಮೇಲೆ ಅದು ಅವರಿಗೆ ವಿಷವಾಗಿ ಪರಿಣಮಿಸುತ್ತದೆ. `ಬಹುರಾಷ್ಟ್ರೀಯ ಕಂಪೆನಿಗಳು ನಮ್ಮ ಬೀಜ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಪೇಟೆಂಟ್ ಮೂಲಕ ಹಕ್ಕು ಸಾಧಿಸುತ್ತಿವೆ. ಇದರಿಂದಾಗಿಯೇ ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಆದ್ದರಿಂದ ಕುಲಾಂತರಿ ತಳಿಯನ್ನು ದೂರ ಮಾಡಬೇಕು~ ಎಂದು ಗ್ರೀನ್‌ಪೀಸ್‌ನ ವಂದನಾ ಶಿವ ಹೇಳುತ್ತಾರೆ.ಸರ್ಕಾರಗಳು ಸಣ್ಣ ಸಣ್ಣ ರೈತರನ್ನು ಮುಗಿಸುವ ಮೂಲಕ ಭೂಮಿಯನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ನೀಡುವ ಹುನ್ನಾರ ನಡೆಸಿದೆ. ಆದ್ದರಿಂದ ರೈತರು ಕುಲಾಂತರಿ ತಳಿಗೆ ಪ್ರತಿಯಾಗಿ ದೇಸಿಯ ಬೀಜ ಪದ್ಧತಿಯನ್ನು ಅಳವಡಿಸಿಕೊಳ್ಳ ಬೇಕು ಎನ್ನುವ ಆಶಯ ಸಾಕ್ಷ್ಯಚಿತ್ರದಲ್ಲಿ ವ್ಯಕ್ತವಾಗುತ್ತದೆ. ಸುಮಾರು 50 ನಿಮಿಷಗಳ ಈ ಸಾಕ್ಷ್ಯಚಿತ್ರವನ್ನು ಸುಮಾ ಜೇಸನ್ ನಿರ್ದೇಶಿಸಿದ್ದಾರೆ.ಈ ಸಾಕ್ಷ್ಯ ಚಿತ್ರೋತ್ಸವವನ್ನು ಸಮಾಜ ಸೇವಾಕರ್ತ ಬಾಪು ಸತ್ಯನಾರಾಯಣ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಸೇಜ್ ಸಂಚಾಲಕ ರಾಮಚಂದ್ರ, ಪ್ರೊ. ಮುಜಾಫರ್ ಅಸಾದಿ ಇದ್ದರು. ನಂತರ ನಡೆದ ಸಂವಾದದಲ್ಲಿ ಡಾ.ಎಸ್.ಜಿ.ಒಂಬತ್ಕೆರೆ, ಪ್ರೊ.ಕಿಕ್ಕೇರಿ ನಾರಾಯಣ, ಪ್ರೊ.ಎ.ಎನ್.ಲಕ್ಷ್ಮಿನಾರಾಯಣ, ಪ್ರೊ.ಉ.ನ. ರವಿಕುಮಾರ ಭಾಗವಹಿಸಿದ್ದರು. ಇದಕ್ಕೂ ಮುನ್ನ ಶ್ಯಾಂ ಕಶ್ಯಪ್ ಕುಲಾಂತರಿ ತಳಿಯ ಅವಾಂತರ ಕುರಿತು ಮಾತನಾಡಿದರು.

ಪ್ರೇಕ್ಷಕರ ಕೊರತೆ

ಮಹತ್ವದ ವಿಷಯ ಕುರಿತು ಆಯೋಜಿಸಿರುವ ಸಾಕ್ಷ್ಯ ಚಿತ್ರೋತ್ಸವಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸಭಾಂಗಣದಲ್ಲಿ 50 ಪ್ರೇಕ್ಷಕರ ಗಡಿಯನ್ನು ದಾಟಲಿಲ್ಲ. ಇದರಿಂದ ಬೇಸರಗೊಂಡ ಬಾಪು ಸತ್ಯನಾರಾಯಣ ತಮ್ಮ ಉದ್ಘಾಟನಾ ಭಾಷಣದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು. `ಜನ ಇಲ್ಲದೇ ಇರುವುದು ಖೇದವನ್ನುಂಟು ಮಾಡಿದೆ. ಇದೊಂದು ಗಂಭೀರ ವಿಚಾರ. ಈಗ ಇರುವವರು ಮಧ್ಯಾಹ್ನವೂ ಇರಬೇಕು~ ಎಂದು ಮನವಿ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.