ಭಾನುವಾರ, ಅಕ್ಟೋಬರ್ 20, 2019
27 °C

ಬಿ.ಟೆಕ್ ಪದವೀಧರೆ ಆತ್ಮಹತ್ಯೆ

Published:
Updated:

ಬೆಂಗಳೂರು: ಬಿ.ಟೆಕ್ ಪದವೀಧರೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿವಾಳ ಸಮೀಪದ ಮಾರುತಿನಗರದಲ್ಲಿ ಮಂಗಳವಾರ ನಡೆದಿದೆ.ಆಂಧ್ರಪ್ರದೇಶದ ಮೂಲದ ದೀಪ್ತಿ (25) ಆತ್ಮಹತ್ಯೆ ಮಾಡಿಕೊಂಡವರು. ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ಅವರು ಮಾರುತಿನಗರ ಒಂಬತ್ತನೇ ಅಡ್ಡರಸ್ತೆಯ ಪೇಯಿಂಗ್‌ಗೆಸ್ಟ್‌ನಲ್ಲಿ ವಾಸವಾಗಿದ್ದರು. ಅವರ ತಾಯಿ ಮತ್ತು ಸಹೋದರ ಆಂಧ್ರಪ್ರದೇಶದಲ್ಲಿ ನೆಲೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಅದೇ ಪೇಯಿಂಗ್‌ಗೆಸ್ಟ್‌ನಲ್ಲಿ ವಾಸವಾಗಿರುವ ಇತರೆ ಯುವತಿಯರು ಬೆಳಿಗ್ಗೆಯೇ ಕೆಲಸಕ್ಕೆ ಹೋಗಿದ್ದರು. ಆ ನಂತರ ದೀಪ್ತಿ ಅವರು ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಸಂಜೆ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ದರೋಡೆ

ವಿಳಾಸ ಕೇಳುಪ ನೆಪದಲ್ಲಿ ದುಷ್ಕರ್ಮಿಗಳು ಡೆವಲಪರ್ ಒಬ್ಬರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ಚಿನ್ನದ ಸರ ದರೋಡೆ ಮಾಡಿರುವ ಘಟನೆ ಆನಂದರಾವ್ ವೃತ್ತದ ಬಳಿ ಮಂಗಳವಾರ ಸಂಜೆ ನಡೆದಿದೆ.ನಯನ್‌ಗೌಡ ದರೋಡೆಗೆ ಒಳಗಾದವರು. ಕೆಲಸದ ನಿಮಿತ್ತ ಕಾರಿನಲ್ಲಿ ಆನಂದರಾವ್ ವೃತ್ತದ ಬಳಿ ಬಂದಿದ್ದ ಅವರನ್ನು ಮೂವರು ಕಿಡಿಗೇಡಿಗಳು ವಿಳಾಸ ಕೇಳುವ ನೆಪದಲ್ಲಿ ಅಡ್ಡಗಟ್ಟಿದ್ದಾರೆ. ಅವರು ಕಾರು ನಿಲ್ಲಿಸುತ್ತಿದ್ದಂತೆ ವಾಹನಕ್ಕೆ ಹತ್ತಿದ ಕಿಡಿಗೇಡಿಗಳು ಚಾಕುವಿನಿಂದ ಬೆದರಿಸಿ ಸುಮಾರು 25 ರೂಪಾಯಿ ಮೌಲ್ಯದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಉಪ್ಪಾರಪೇಟೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಪಡಿತರ ಸೀಮೆಎಣ್ಣೆ ಮಾರಾಟ ಬಂಧನ

ಪಡಿತರ ಸೀಮೆಎಣ್ಣೆಯನ್ನು ಕಾಳಸಂತೆಯಲ್ಲಿ ಮಾರುತ್ತಿದ್ದ ಮೂರು ಮಂದಿಯನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಸುಮಾರು 1.50 ಲಕ್ಷ ರೂಪಾಯಿ ಮೌಲ್ಯದ ಸೀಮೆಎಣ್ಣೆಯನ್ನು ವಶಪಡಿಸಿಕೊಂಡಿದ್ದಾರೆ.ರವಿ (20), ಸೈಯದ್ (19) ಮತ್ತು ಇಲಿಯಾಸ್ ಖಾನ್ (31) ಬಂಧಿತರು. ಆರೋಪಿಗಳು ಪಡಿತರ ಸೀಮೆಎಣ್ಣೆಯ ಬಣ್ಣವನ್ನು ಪರಿವರ್ತಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಅವರು ಬಾಣಸವಾಡಿಯ ಅರವಿಂದನಗರದ ಮನೆಯೊಂದರಲ್ಲಿ ಸೀಮೆಎಣ್ಣೆಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಆರೋಪಿಗಳಿಂದ 600 ಲೀಟರ್ ಸೀಮೆಎಣ್ಣೆ, ಕೃತ್ಯಕ್ಕೆ ಬಳಸುತ್ತಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಜಿ.ಟಿ.ಅಜ್ಜಪ್ಪ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧನ

ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮೂವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಎರಡು ಸಾವಿರ ನಗದು ಹಾಗೂ ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಳ್ಳೇಗಾಲದ ಲಿಂಗರಾಜು (33) ಮತ್ತು ಪಶ್ಚಿಮ ಬಂಗಾಳ ಮೂಲದ ಇಬ್ಬರು ಯುವತಿಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಆರೋಪಿಗಳು ಇಂಟರ್‌ನೆಟ್‌ನಲ್ಲಿ ರಾಯಲ್ ಬಾಡಿ ಮಸಾಜ್ ಸೆಂಟರ್ ಎಂದು ಜಾಹೀರಾತು ನೀಡುತ್ತಿದ್ದರು. ಮಸಾಜ್ ಸೆಂಟರ್‌ನ ಸೋಗಿನಲ್ಲಿ ದೊಮ್ಮಲೂರು ಎರಡನೇ ಹಂತದ ಐದನೇ ಮುಖ್ಯರಸ್ತೆಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಆ ಮನೆಯ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು. ಪ್ರಕರಣದ ಮತ್ತೊಬ್ಬ ಆರೋಪಿ ರವೀಶ್ ಎಂಬಾತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಬಂಧಿತರ ವಿರುದ್ಧ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Post Comments (+)