ಬಿಡದ ಮಳೆ: ಸಿಡಿಲಿಗೆ ರೈತ ಬಲಿ

7

ಬಿಡದ ಮಳೆ: ಸಿಡಿಲಿಗೆ ರೈತ ಬಲಿ

Published:
Updated:

ಬೆಂಗಳೂರು: ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಾಪುರ, ಹಾವೇರಿ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗಿದೆ. ಬಾಗಲಕೋಟೆ ನಗರ ಸುತ್ತಮುತ್ತ ರಭಸದ ಮಳೆಯಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ಸಿಡಿಲು ಬಡಿದು ಒಬ್ಬ ರೈತ ಮೃತಪಟ್ಟಿದ್ದಾನೆ.55 ಮನೆಗಳಿಗೆ ಹಾನಿ (ದಾವಣಗೆರೆ ವರದಿ): ಜಿಲ್ಲೆಯ ವಿವಿಧೆಡೆ ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಿಗ್ಗೆ ಸುರಿದ ಮಳೆಯಿಂದ 55 ಮನೆಗಳಿಗೆ ಹಾನಿಯಾಗಿದೆ. ಪಾಲಿಕೆ ವ್ಯಾಪ್ತಿಯ ವಿನೋಬನಗರದಲ್ಲಿ ಮನೆ ಕಳೆದುಕೊಂಡ 18 ಕುಟುಂಬಗಳು ರಾತ್ರಿಯೆಲ್ಲ ಊಟ, ನಿದ್ರೆ ಇಲ್ಲದೇ ರಸ್ತೆಯಲ್ಲೇ ಕಳೆದಿದ್ದಾರೆ. ಚೌಡೇಶ್ವರಿ ನಗರದ ಮೋರಿಯ ನೀರಿನಲ್ಲಿ ಕೊಚ್ಚಿಕೊಂಡು ಹೋದ ಮಗುವನ್ನು ಸ್ಥಳೀಯರು ರಕ್ಷಿಸಿದ್ದಾರೆ.ವಿನೋಬನಗರ 4ನೇ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಬೆಂಕಿನಗರದ 64 ಮನೆಗಳಿಗೆ ನೀರು ನುಗ್ಗಿದ್ದು, 18 ಮನೆ ಗಳಿಗೆ ಹಾನಿಯಾಗಿದೆ. ಮನೆ ಕಳೆದುಕೊಂಡವರು ರಾತ್ರಿಯೆಲ್ಲ ರಸ್ತೆಯಲ್ಲೇ ಕಳೆದರೂ, ಜಿಲ್ಲಾಡಳಿತ ಗಂಜಿಕೇಂದ್ರವನ್ನೂ ತೆರೆ ದಿಲ್ಲ, ತಾತ್ಕಾಲಿಕ ಆಶ್ರಯವನ್ನೂ ಕಲ್ಪಿಸಿಲ್ಲ ಎಂದು ಆರೋಪಿಸಿ ನಾಗರಿಕರು ಮುಖ್ಯರಸ್ತೆಯಲ್ಲೇ ಧರಣಿ ನಡೆಸಿದರು.ಶೇಖರಪ್ಪ ನಗರದಲ್ಲಿ ಉರ್ದು ಶಾಲೆಗೆ ನೀರು ನುಗ್ಗಿದ ಪರಿಣಾಮ ಶಾಲಾ ಕೊಠಡಿಗಳು ಕೆಸರು ತುಂಬಿಕೊಂಡಿದ್ದು ವಿದ್ಯಾರ್ಥಿಗಳು,ಶಿಕ್ಷಕರು ಪರದಾಡಿದರು.ಚೌಡೇಶ್ವರಿ ನಗರದ ದೊಡ್ಡ ಮೋರಿಯಲ್ಲಿ 8 ವರ್ಷದ ಮಗುವೊಂದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ನೆರೆಹೊರೆಯವರ ಸಮಯ ಪ್ರಜ್ಞೆಯಿಂದ ಮಗುವನ್ನು ರಕ್ಷಿಸಿದ್ದಾರೆ.ಚಿಕ್ಕಜಾಜೂರು (ಚಿತ್ರದುರ್ಗ ವರದಿ): ಭಾನುವಾರ ರಾತ್ರಿ ಸುರಿದ ಭಾರಿ ಮಳೆ­ಯಿಂದಾಗಿ ಸಮೀಪದ ಗುಂಜಿಗನೂರು ಗ್ರಾಮದ ಹಳೆ ಕೆರೆ ಏರಿ ಒಡೆದು ಅದರಲ್ಲಿದ್ದ ನೀರೆಲ್ಲ ಹಳ್ಳ ಸೇರಿದೆ. ನೀರಿನ ರಭಸಕ್ಕೆ ಹಳ್ಳಗಳ ಪಕ್ಕದಲ್ಲಿ ಫಸಲಿಗೆ ಬಂದಿದ್ದ ಮೆಕ್ಕೆಜೋಳ, ಹತ್ತಿ, ಬಾಳೆ, ಚೆಂಡು ಹೂ ಸೇರಿದಂತೆ ಹಲವು ಬೆಳೆಗಳು ಸಂಪೂರ್ಣ ನೆಲಕಚ್ಚಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.ಸಿಡಿಲಿಗೆ ರೈತ ಬಲಿ (ಹುಬ್ಬಳ್ಳಿ ವರದಿ): ಮೇವು ತರಲು ಹೊಲಕ್ಕೆ ಹೋಗಿದ್ದ ರೈತನೊಬ್ಬ ಸಿಡಿಲು ಬಡಿದು ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.ಮೃತರನ್ನು ಕೇರೂರ ಗ್ರಾಮದ ನಿವಾಸಿ ಅಪ್ಪಾಸಾಹೇಬ ಭೀಮಾ ಗಡದೆ (45) ಎಂದು ಗುರುತಿಸಲಾಗಿದೆ.ಉಪ ವಿಭಾಗಾಧಿಕಾರಿ ಡಾ.ರುದ್ರೇಶ ಘಾಳಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಕಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರಾಯಚೂರು ವರದಿ: ಜಿಲ್ಲೆಯಲ್ಲಿ ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ರಸ್ತೆ, ಚರಂಡಿ ಸೇರಿದಂತೆ ರೂ. 28.47 ಕೋಟಿ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ  ಎಸ್.ಎನ್ ನಾಗರಾಜು ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಪಂ ವ್ಯಾಪ್ತಿಗೆ ಸಂಬಂಧಪಟ್ಟಂತೆ ₨8.47 ಕೋಟಿ ರಸ್ತೆ ಹಾಳಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸಂಬಂಧಪಟ್ಟ ರಸ್ತೆ 8.91 ಕೋಟಿ  ಹಾಳಾಗಿದೆ. ರಾಯಚೂರು ಮತ್ತು ಸಿಂಧನೂರು ನಗರಸಭೆಗಳಲ್ಲಿ ಒಟ್ಟು 11 ಕೋಟಿ ಮೊತ್ತದಷ್ಟು ರಸ್ತೆ, ಚರಂಡಿ ಹಾಳಾದ ಬಗ್ಗೆ ವರದಿ ಬಂದಿವೆ  ಎಂದು ಹೇಳಿದರು.ಸರ್ಕಾರವು ದೇವದುರ್ಗ, ಮಾನ್ವಿ, ಸಿಂಧನೂರು, ಲಿಂಗಸುಗೂರು ತಾಲ್ಲೂಕುಗಳಿಗೆ ತಲಾ 50 ಲಕ್ಷ ಪರಿಹಾರ ಕಾರ್ಯಕ್ಕೆ ಬಿಡುಗಡೆ ಮಾಡಿದೆ. ರಾಯಚೂರು ತಾಲ್ಲೂಕಿಗೆ ಬಿಡುಗಡೆ ಮಾಡಿಲ್ಲ. ಆದರೆ, ಜಿಲ್ಲಾಡಳಿತದ ವಿಪತ್ತು ನಿಧಿಯಲ್ಲಿ 3 ಕೋಟಿ ಇದೆ. ಇದರಲ್ಲಿಯೇ ತಾಲ್ಲೂಕಿನ ಪರಿಹಾರ ಕಾರ್ಯಕ್ಕೆ ಬಳಸಿಕೊಳ್ಳಲು ಉನ್ನತ ಅಧಿಕಾರಿಗಳಿಗೆ ಅನುಮತಿ ಕೋರಲಾಗಿದ್ದು, ಒಪ್ಪಿದ್ದಾರೆ. ಅಧಿಕೃತ ಆದೇಶ ಬಂದ ಬಳಿಕ ಪರಿಹಾರ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry