ಬಿಡಾಡಿ ದನಗಳಿಗಾಗಿ ನೋಟಿಸ್

7

ಬಿಡಾಡಿ ದನಗಳಿಗಾಗಿ ನೋಟಿಸ್

Published:
Updated:

ಗಂಗಾವತಿ: ‘ರಸ್ತೆ ಮೇಲೆ ನಾಯಿ ಮತ್ತು ದನಕರುಗಳನ್ನು ಬಿಡುವ ಮಾಲೀಕರಿಗೆ ನಗರಸಭೆಯಿಂದ ಕೊನೆಯ ಎಚ್ಚರಿಕೆ ನೀಡಲಾಗುತ್ತಿದೆ. ನೋಟಿಸ್ ನೀಡಿದ ಏಳು ದಿನದೊಳಗೆ ಮಾಲೀಕರು ಸ್ಪಂದಿಸದಿದ್ದಲ್ಲಿ ರಸ್ತೆ ಮೇಲೆ ಓಡಾಡುವ ನಾಯಿ, ದನಕರುಗಳನ್ನು ನಗರಸಭೆ ವಶಕ್ಕೆ ಪಡೆಯುತ್ತದೆ’.ಹೀಗೆಂದು ನಗರಸಭೆ ಕಳೆದ ಐದು ತಿಂಗಳಿಂದ ಕನಿಷ್ಠ ಇಪ್ಪತ್ತು ಬಾರಿ ನೋಟಿಸ್ ಜಾರಿ ಮಾಡಿದೆ.  ‘ನಗರಸಭೆಯ ನೋಟಿಸ್ ಅನ್ನು ಯಾರೂ ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ’ ಎಂಬ ವ್ಯಂಗ್ಯದ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.ಬೀಡಾಡಿ ದನಕರು ಮತ್ತು ನಾಯಿಗಳ ವಿಷಯದಲ್ಲಿ ನಗರಸಭೆಯ ಅಧಿಕಾರಿ ವರ್ಗ ಅನುಸರಿಸುತ್ತಿರುವ ನಿರ್ಲಕ್ಷ್ಯದ ಧೋರಣೆ ಸಾರ್ವಜನಿಕರಲ್ಲಿ ನಗೆಪಾಟಲಿಗೀಡಾಗಿದೆ. ಅತ್ತ ಆಡಳಿತ ಮಂಡಳಿಯೂ ಈ ಬಗ್ಗೆ ಗಂಭೀರವಾಗಿ ಆಲೋಚಿಸದೆ ಸಾರ್ವಜನಿಕ ಹಿತಾಸಕ್ತಿಯನ್ನು ಗಾಳಿಗೆ ತೂರಿದೆ.ವ್ಯತಿರಿಕ್ತ ಸ್ಪಂದನೆ: ‘ನಗರದಲ್ಲಿ ಬೀಡಾಡಿ ನಾಯಿ-ದನಗಳ ಸಂಖ್ಯೆ ಹೆಚ್ಚಾಗಿದೆ. ಇವುಗಳಿಂದ ಜನ ಮತ್ತು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಸಂಬಂಧಿತರು ಗಮನ ಹರಿಸದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರಸಭೆ ಕಳೆದ ಐದಾರು ತಿಂಗಳಿಂದ ತಿಂಗಳಿಗೆರಡರಂತೆ ನೋಟಿಸ್ ಜಾರಿ ಮಾಡುತ್ತಲೇ ಇದೆ.ನೋಟಿಸ್‌ಗೆ ಜಾನುವಾರು ಮಾಲೀಕರು ಸ್ಪಂದಿಸಿ ಕಟ್ಟಿ ಹಾಕುವುದು ಇರಲಿ, ನೋಟಿಸ್ ಜಾರಿಯಾದ ಮೇಲೆ ನಗರದ ರಸ್ತೆಯ ಮೇಲೆ ಓಡಾಡುವ ಬಿಡಾಡಿ ದನಗಳ ಸಂಖ್ಯೆ ದ್ವಿಗುಣವಾಗುತ್ತಿರುವುದು ಸೋಜಿಗ ಉಂಟುಮಾಡಿದೆ. ಈ ಬಗ್ಗೆ ನಗರಸಭೆ ಒಮ್ಮೆಯೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ.ಕೋರ್ಟ್ ಕಚೇರಿ: ನಗರದ ಬಸ್ ನಿಲ್ದಾಣ, ಕೋರ್ಟ್, ಅಂಚೆ ಕಚೇರಿ, ಪೊಲೀಸ್ ಠಾಣೆ, ಬಸವಣ್ಣ, ಕೃಷ್ಣ ದೇವರಾಯ, ಗಾಂಧಿ, ಮಹಾವೀರ, ಗಣೇಶ ವೃತ್ತ, ಹಳೆ ತಹಸೀಲ್ದಾರ್ ಕಚೇರಿ ಹೀಗೆ ಎಲ್ಲೆಂದರಲ್ಲಿ ಓಡಾಡುವ ಬೀಡಾಡಿ ದನಗಳ ಸಂಖ್ಯೆ ನಗರದಲ್ಲಿ ಕನಿಷ್ಠ 500 ದಾಟುತ್ತದೆ.ರಸ್ತೆಯಲ್ಲಿ ವಿಶ್ರಾಂತಿ: ಹಗಲಲ್ಲೆನೋ ಸರಿ. ಆದರೆ ಸಂಜೆ ಸರಿದು ಮಬ್ಬುಗತ್ತಲು ಕವಿಯುತ್ತಿದ್ದಂತಯೆ ಇಡೀ ನಗರದ ತುಂಬೆಲ್ಲಾ ಓಡಾಡುವ ಬೀಡಾಡಿ ನಾಯಿ, ದನ-ಕರುಗಳು ನಾಲ್ಕಾರು ಕಡೆ ಗುಂಪಾಗಿ ಸೇರಿ ಸಿಕ್ಕ ಅಷ್ಟಿಷ್ಟು ಆಹಾರ ಮೇಯ್ದು ರಸ್ತೆಯಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ಮಲಗುತ್ತಿವೆ.ವಿಶೇಷವಾಗಿ ಗಾಂಧಿ, ಕೃಷ್ಣ ದೇವರಾಯ ವೃತ್ತ, ಬಸ್‌ನಿಲ್ದಾಣದ ಮಾರ್ಗದ ರಸ್ತೆಯುದ್ದಕ್ಕೂ ಜಾನುವಾರು ವಿಶ್ರಾಂತಿಗೆ ಮಲಗುತ್ತಿರುವುದಿಂದ ವಾಹನ ಸಂಚಾರ ಅದರಲ್ಲೂ ಸಾರಿಗೆ ಸಂಸ್ಥೆಯ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry