ಬುಧವಾರ, ಮೇ 12, 2021
20 °C

ಬಿಡಾಡಿ ದನ, ಮೇಕೆಗಳಿಗೆ ಕಡಿವಾಣ ಎಂದು?

ಕೆ.ಎಚ್. ಓಬಳೇಶ್ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಬಿಡಾಡಿ ದನಗಳು ಹಾಗೂ ಮೇಕೆಗಳ ಅಬ್ಬರಕ್ಕೆ ನಗರದ ನಾಗರಿಕರು ಸಂಕಷ್ಟ ಅನುಭವಿಸುವಂತಾಗಿದೆ.ಜಿಲ್ಲಾ ಕೇಂದ್ರದ ವ್ಯಾಪ್ತಿಯ ರಸ್ತೆಯಲ್ಲಿ ಎಲ್ಲೆಂದರಲ್ಲಿ ನಿಂತಿರುವ ದನಗಳು ಹಾಗೂ ಕಾಂಪೌಂಡ್ ಹಾರಿ ಮನೆಯಂಗಳದೊಳಕ್ಕೆ ನುಗ್ಗಿ ನಾಗರಿಕರು ಬೆಳೆಸಿರುವ ಗಿಡಗಳನ್ನು ತಿನ್ನುವ ಮೇಕೆಗಳು ಪ್ರತಿನಿತ್ಯವೂ ಕಣ್ಣಿಗೆ ಬೀಳುತ್ತವೆ. ಆದರೆ, ಇವುಗಳ ವಾರಸುದಾರರು ಯಾರೆಂಬುದು ಗೊತ್ತಿಲ್ಲ. ಸಂಜೆ ವೇಳೆ ಮಾಲೀಕರ ಮನೆಗಳಿಗೆ ಹೋಗುವ ಇವುಗಳನ್ನು ಹಿಂಬಾಲಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳುವ ಪ್ರಯತ್ನವೂ ನಗರಸಭೆ ಆಡಳಿತದಿಂದ ನಡೆದಿಲ್ಲ.ಪಚ್ಚಪ್ಪವೃತ್ತ, ಜೋಡಿರಸ್ತೆ, ಗುಂಡ್ಲುಪೇಟೆ ವೃತ್ತ, ಸಂತೇಮರಹಳ್ಳಿ ವೃತ್ತದಲ್ಲಿ ಬೆಳಿಗ್ಗೆಯೇ ಬಿಡಾಡಿ ದನಗಳ ಹಾವಳಿ ಆರಂಭವಾಗುತ್ತದೆ. ಕೆಲವು ಅಂಗಡಿ ಮಾಲೀಕರು ಇವುಗಳಿಗೆ ರಾತ್ರಿ ಉಳಿದಿರುವ ಹಳಸು ತಿಂಡಿ ನೀಡಿ ಸಾಗಹಾಕುತ್ತಾರೆ. ಕೆಲವೊಮ್ಮೆ ರಸ್ತೆಯಲ್ಲಿಯೇ ನಿಲ್ಲುವುದರಿಂದ ವಾಹನ ಸವಾರರು ತೊಂದರೆಪಡುವುದು ಹೆಚ್ಚು. ಎಷ್ಟೇ ಶಬ್ದ ಮಾಡಿದರೂ ದನಗಳು ಜಪ್ಪಯ್ಯ ಎನ್ನುವುದಿಲ್ಲ.ಸವಾರರು ಶಬ್ದ ಮಾಡಿ ಸೋತು ಹೋಗುತ್ತಾರೆ. ಅವುಗಳ ಬದಿಗೆ ಸರಿದಾಗಲಷ್ಟೇ ವಾಹನ ಮುಂದೆ ಚಲಾಯಿಸುವಂತಹ ಸಂದಿಗ್ಧ ಪರಿಸ್ಥಿತಿ ಸೃಷ್ಟಿಸುತ್ತಿರುವ ನೋಟ ಪ್ರತಿನಿತ್ಯವೂ ಸಾಮಾನ್ಯವಾಗಿದೆ. ಆದರೆ, ನಗರಸಭೆ ಆಡಳಿತ ಮಾತ್ರ ದನಗಳನ್ನು ವಶಕ್ಕೆ ಪಡೆದು ಸಂಬಂಧಪಟ್ಟ ಮಾಲೀಕರಿಗೆ ದಂಡ ವಿಧಿಸಲು ಮುಂದಾಗಿಲ್ಲ ಎಂಬುದು ನಾಗರಿಕರ ದೂರು.ಮೇಕೆಗಳ ಹಾವಳಿ ಇತ್ತೀಚೆಗೆ ಹೆಚ್ಚುತ್ತಿದೆ. ಕಿವಿ ಉದ್ದ ಇರುವ ಜಮುನಾಪಾರಿ ತಳಿಯ ಮೇಕೆಗಳು ಎಲ್ಲೆಂದರಲ್ಲಿ ಕಾಣಸಿಗುತ್ತವೆ. ಕೆಲವರು ನಾಡತಳಿ ಮೇಕೆಗಳನ್ನು ಕೂಡ ಬೀದಿಗೆ ಬಿಟ್ಟಿರುವುದು ಉಂಟು. ಅಂಗಡಿ ಮುಂದೆ ನೇತು ಹಾಕಿರುವ ಬಾಳೆಗೊನೆಗೆ ಬಾಯಿ ಹಾಕುವ ಈ ಮೇಕೆಗಳಿಗೂ ಕಡಿವಾಣ ಹಾಕಲು ಸ್ಥಳೀಯ ಆಡಳಿತ ಮುಂದಾಗಿಲ್ಲ.ಮನೆ ಅಂಗಳದಲ್ಲಿ ನೆಟ್ಟಿರುವ ಗಿಡಗಳು ಮೇಕೆಗಳ ಹಾವಳಿಗೆ ತುತ್ತಾಗುತ್ತಿವೆ. ಇವುಗಳ ಹಾವಳಿ ಇಷ್ಟಕ್ಕೆ ನಿಲ್ಲುವುದಿಲ್ಲ. ಸದ್ಯ ಜಿಲ್ಲಾಡಳಿತ ಭವನದ ಮುಂಭಾಗ ಸುತ್ತುಗೋಡೆಯೂ ಇಲ್ಲ. ಹೀಗಾಗಿ, ರಜಾ ದಿನಗಳಂದು ಜಿಲ್ಲಾಡಳಿತ ಭವನದ ಆವರಣದೊಳಕ್ಕೂ ನುಗ್ಗುವುದು ಸಾಮಾನ್ಯವಾಗಿದೆ. ಕಾವಲು ಕಾಯುವ ಸಿಬ್ಬಂದಿ ಎಚ್ಚರ ತಪ್ಪಿದ ವೇಳೆ ಆವರಣದಲ್ಲಿ ನೆಟ್ಟಿರುವ ಅಲಂಕಾರಿಕ ಗಿಡಗಳು ಮೇಕೆಗಳಿಗೆ ಆಹಾರವಾಗಿವೆ.`ಬಿಡಾಡಿ ದನಗಳು ಮತ್ತು ಮೇಕೆಗಳಿಂದ ನಾಗರಿಕರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ಕೈದೋಟಗಳು ಮೇಕೆಗಳ ಬಾಯಿಗೆ ತುತ್ತಾಗುತ್ತಿವೆ. ನಗರಸಭೆಯ ನಿಯಮಾವಳಿ ಅನ್ವಯ ಸಂಬಂಧಪಟ್ಟ ಜಾನುವಾರುಗಳ ಮಾಲೀಕರಿಗೆ ಕೂಡಲೇ ನೋಟಿಸ್ ನೀಡಬೇಕು.ಅದಕ್ಕೆ ಸ್ಪಂದಿಸದಿದ್ದರೆ ಅವುಗಳನ್ನು ವಶಕ್ಕೆ ಪಡೆದುಕೊಳ್ಳಬೇಕು. ಮಾಧ್ಯಮಗಳಿಗೆ ಹೇಳಿಕೆ ನೀಡಿ ಕೈತೊಳೆದುಕೊಳ್ಳಬಾರದು. ಸಾರ್ವಜನಿಕರು ಅನುಭವಿಸುತ್ತಿರುವ ಸಂಕಷ್ಟ ನಿವಾರಿಸಲು ಈಗಲಾದರೂ ಸ್ಥಳೀಯ ಆಡಳಿತ ಮುಂದಾಗಬೇಕು~ ಎಂದು ಒತ್ತಾಯಿಸುತ್ತಾರೆ ವ್ಯಾಪಾರಿ ಗೋಪಾಲ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.