ಬಿಡಿಎ: ಭಾರಿ ಆಸ್ತಿ ಕಬಳಿಕೆ

7
ರೂ.24,075 ಕೋಟಿ ಮೊತ್ತದ ಅತಿಕ್ರಮಣ- ಸಿಎಜಿ ವರದಿ

ಬಿಡಿಎ: ಭಾರಿ ಆಸ್ತಿ ಕಬಳಿಕೆ

Published:
Updated:

ಸುವರ್ಣ ವಿಧಾನಸೌಧ (ಬೆಳಗಾವಿ): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) 24,075 ಕೋಟಿ ರೂಪಾಯಿ ಮೊತ್ತದ ಆಸ್ತಿ ಅತಿಕ್ರಮಣಕ್ಕೆ ಒಳಗಾಗಿದೆ. 2006-2011ರ ಅವಧಿಯಲ್ಲಿ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವುದರಲ್ಲಿ ಅಕ್ರಮಗಳ ಸರಮಾಲೆಯೇ ನಡೆದಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.ಪ್ರಸಕ್ತ ವರ್ಷದ ಮಾರ್ಚ್ 31ಕ್ಕೆ ಕೊನೆಗೊಂಡಂತೆ, `ಸರ್ಕಾರದ ಸ್ವಾಧೀನಕ್ಕೆ ಪಡೆದುಕೊಂಡಿದ್ದ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವುದು ಮತ್ತು ಬಿಡಿಎ ನಿವೇಶನಗಳ ಹಂಚಿಕೆ'ಗೆ ಸಂಬಂಧಿಸಿದಂತೆ ಲೆಕ್ಕಪರಿಶೋಧನೆ ನಡೆಸಿ `ಸಿಎಜಿ' ನೀಡಿರುವ ವರದಿಯನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬುಧವಾರ ಮಧ್ಯಾಹ್ನ ವಿಧಾನಸಭೆಯಲ್ಲಿ ಮಂಡಿಸಿದರು.ಬಿಡಿಎ 1969ರಿಂದ 2002ರ ನಡುವೆ ನಿರ್ಮಿಸಿರುವ 13 ಬಡಾವಣೆಗಳಲ್ಲಿ 1,039.33 ಎಕರೆ ಜಮೀನು ಅತಿಕ್ರಮಣಕ್ಕೆ ಒಳಗಾಗಿದೆ. ಈ ಆಸ್ತಿಗಳ ಒಟ್ಟು ಮೌಲ್ಯ ರೂ 24,075 ಕೋಟಿ ಆಗುತ್ತದೆ. ಬಿಡಿಎ ಆಸ್ತಿಗಳನ್ನು ರಕ್ಷಿಸಲು ಇರುವ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕೆಲಸ ಮಾಡದಿರುವುದೇ ಈ ಪ್ರಮಾಣದ ಕಬಳಿಕೆ ನಡೆಯಲು ಕಾರಣ ಎಂಬ ಅಭಿಪ್ರಾಯ ಸಾಮಾನ್ಯ ಮತ್ತು ಸಾಮಾಜಿಕ ಲೆಕ್ಕ ಪರಿಶೋಧನಾ ವಿಭಾಗದ ಪ್ರಧಾನ ಮಹಾಲೇಖಪಾಲ ಡಿ.ಜೆ.ಭದ್ರ ಅವರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿದೆ.56 ಉದ್ಯಾನ ಅತಿಕ್ರಮಣ: ಪ್ರಾಧಿಕಾರದ ಮೂರು ವಿಭಾಗಗಳ ವ್ಯಾಪ್ತಿಯಲ್ಲಿ 56 ಉದ್ಯಾನಗಳು ಅತಿಕ್ರಮಣಕ್ಕೆ ಗುರಿಯಾಗಿವೆ. ಇದರಿಂದ ಪ್ರಾಧಿಕಾರದ 3.21 ಲಕ್ಷ ಚದರ ಮೀಟರ್ ಆಸ್ತಿ ಕಬಳಿಕೆಯಾಗಿದೆ. 26 ಉದ್ಯಾನಗಳಲ್ಲಿ ಅಕ್ರಮವಾಗಿ ದೇವಸ್ಥಾನಗಳು ತಲೆ ಎತ್ತಿದ್ದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಾಲ್ಕು ಉದ್ಯಾನಗಳನ್ನು ಅತಿಕ್ರಮಣ ಮಾಡಿದೆ. 15 ಉದ್ಯಾನಗಳಲ್ಲಿ ಅಕ್ರಮ ಕಟ್ಟಡಗಳಿವೆ. ಒಂದು ಉದ್ಯಾನವನ್ನು ಖಾಸಗಿ ರೆಸಾರ್ಟ್ ಅತಿಕ್ರಮಿಸಿದ್ದರೆ, ಉಳಿದ ಉದ್ಯಾನಗಳನ್ನು ಶಾಲೆಗಳು, ಜಲಮಂಡಳಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಗಳು ಕಬಳಿಸಿವೆ ಎಂದು ಹೇಳಿದೆ.ಭೂಸ್ವಾಧೀನ ವಿಭಾಗ ಮತ್ತು ಎಂಜಿನಿಯರಿಂಗ್ ವಿಭಾಗಗಳಲ್ಲಿ ಇರುವ ದಾಖಲೆಗಳಲ್ಲಿ ಹಸ್ತಾಂತರಿಸಿದ ಭೂಮಿ ಹಾಗೂ ಅಭಿವೃದ್ಧಿಪಡಿಸಿದ ಭೂಮಿಗೆ ಸಂಬಂಧಿಸಿದ ಅಂಕಿಅಂಶಗಳಲ್ಲಿ ಬೃಹತ್ ವ್ಯತ್ಯಾಸವಿದೆ. ಬಿಡಿಎ ತನ್ನ ಆಸ್ತಿಗಳ ಪಟ್ಟಿಯನ್ನು ನಿರ್ವಹಿಸಿಲ್ಲ ಎಂಬ ಟೀಕೆ ಪ್ರತಿ ವರ್ಷದ ಲೆಕ್ಕಪರಿಶೋಧನೆಯಲ್ಲೂ ಉಲ್ಲೇಖವಾಗಿದೆ. ಆದರೂ ಪ್ರಾಧಿಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿಎಜಿ ಅಸಮಾಧಾನ ವ್ಯಕ್ತಪಡಿಸಿದೆ.ಅಕ್ರಮಗಳ ಸರಮಾಲೆ: ವಿವಿಧ ಬಡಾವಣೆಗಳ ನಿರ್ಮಾಣಕ್ಕಾಗಿ ಬಿಡಿಎ ಸ್ವಾಧೀನಪಡಿಸಿಕೊಂಡ ಜಮೀನನ್ನು `ಡಿನೋಟಿಫಿಕೇಶನ್ ಸಮಿತಿ'ಯ ಶಿಫಾರಸು ಇಲ್ಲದೇ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಅಧಿಕಾರವನ್ನು ರಾಜ್ಯ ಸರ್ಕಾರ ಹೊಂದಿಲ್ಲ. ಆದರೆ, 2007ರ ಏಪ್ರಿಲ್ 1ರಿಂದ 2010ರ ಡಿಸೆಂಬರ್ 27ರ ನಡುವಿನ ಅವಧಿಯಲ್ಲಿ 610.16 ಎಕರೆ ಜಮೀನನ್ನು `ಡಿನೋಟಿಫಿಕೇಶನ್ ಸಮಿತಿ'ಯ ಮುಂದಿಡದೇ ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟು ಆದೇಶ ಹೊರಡಿಸಿದೆ. ಬಿಡಿಎ ಸ್ವಾಧೀನಕ್ಕೆ ಪಡೆದುಕೊಂಡಿದ್ದ ಜಮೀನನ್ನೂ ಮುಖ್ಯಮಂತ್ರಿಗಳು ನೀಡಿದ್ದ ಆದೇಶದ ಆಧಾರದಲ್ಲಿ ಭೂಸ್ವಾಧೀನ ಪ್ರಕ್ರಿಯೆಯೆಯಿಂದ ಕೈಬಿಡಲಾಗಿದೆ. ಈ ಪ್ರಕರಣಗಳಲ್ಲಿ ಸ್ಪಷ್ಟವಾಗಿ ಕಾನೂನು ಉಲ್ಲಂಘನೆ ನಡೆದಿದೆ ಎಂಬ ಅಂಶ ವರದಿಯಲ್ಲಿದೆ.ಜೆ.ಪಿ.ನಗರ ಎಂಟನೇ ಹಂತ, ಎಚ್‌ಎಸ್‌ಆರ್ ಬಡಾವಣೆ ಮತ್ತು ಅರ್ಕಾವತಿ ಬಡಾವಣೆಗಳಿಗಾಗಿ ಬಿಡಿಎ ಸ್ವಾಧೀನಪಡಿಸಿಕೊಂಡು ಅಭಿವೃದ್ಧಿಪಡಿಸಿದ್ದ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟ ಏಳು ಪ್ರಕರಣಗಳು ನಡೆದಿವೆ. ಈ ರೀತಿ 16.15 ಎಕರೆ ಜಮೀನನ್ನು ಕೈಬಿಡಲಾಗಿದೆ. ತಮಗೆ ಜೀವನಾಧಾರಕ್ಕೆ ಬೇರೆ ಭೂಮಿ ಇಲ್ಲ ಎಂಬ ಕಾರಣ ನೀಡಿ ಅರ್ಜಿ ಸಲ್ಲಿಸಿದ್ದ ಭೂ ಮಾಲೀಕರು, ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟ ತಕ್ಷಣವೇ ಅದನ್ನು ಬೇರೆಯವರಿಗೆ ಮಾರಾಟ ಮಾಡಿರುವುದು ಬಹುತೇಕ ಪ್ರಕರಣಗಳಲ್ಲಿ ನಡೆದಿದೆ ಎಂಬುದನ್ನು ಸಿಎಜಿ ಪತ್ತೆಮಾಡಿದೆ.ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವುದನ್ನು ಲೆಕ್ಕಿಸದೆಯೂ ಆರು ಪ್ರಕರಣಗಳಲ್ಲಿ 6.12 ಎಕರೆ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆ ಪ್ರಕಟವಾದ ಬಳಿಕ ಆರು ಪ್ರಕರಣಗಳಲ್ಲಿ 23.38 ಎಕರೆ ಜಮೀನನ್ನು ಭೂ ಮಾಲೀಕರಿಗೆ ಹಿಂದಿರುಗಿಸಲಾಗಿದೆ.

ಬಡಾವಣೆಗಳ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆಸುತ್ತಿರುವುದನ್ನು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳು ಎತ್ತಿ ಹಿಡಿದ ಐದು ಪ್ರಕರಣಗಳಲ್ಲಿ 13.25 ಎಕರೆ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದೆ. ಜಮೀನನ್ನು ಸ್ವಾಧೀನಕ್ಕೆ ಪಡೆಯುವ ಎಲ್ಲ ಅವಕಾಶಗಳಿದ್ದರೂ, ಅವುಗಳನ್ನು ಪರಿಶೀಲಿಸದೇ 29.24 ಎಕರೆ ಮತ್ತು 11,875 ಚದರ ಅಡಿ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲಾಯಿತು. ಈ ಎಲ್ಲ ಪ್ರಕರಣಗಳಲ್ಲೂ ಅಕ್ರಮ ನಡೆದಿದೆ ಎಂಬ ಆರೋಪ ವರದಿಯಲ್ಲಿ ಉಲ್ಲೇಖವಾಗಿದೆ.ಸಮೂಹ ವಸತಿ ಯೋಜನೆಗಳಿಗೆ ಅನುಮತಿ ನೀಡಿರುವುದು ಮತ್ತು ನಿವೇಶನಗಳ ಅಭಿವೃದ್ಧಿಗೆ ಖಾಸಗಿ ವ್ಯಕ್ತಿಗಳಿಗೆ ಅನುಮತಿ ನೀಡಿರುವ ನಾಲ್ಕು ಪ್ರಕರಣಗಳಲ್ಲಿ ಬಿಡಿಎ 67.20 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry