ಬಿತ್ತನೆ ಆಲೂ ಬೆಲೆ ನಿಗದಿ ಸಭೆ: ಮೂಡದ ಒಮ್ಮತ

7

ಬಿತ್ತನೆ ಆಲೂ ಬೆಲೆ ನಿಗದಿ ಸಭೆ: ಮೂಡದ ಒಮ್ಮತ

Published:
Updated:

ಹಾಸನ: ಆಲೂಗೆಡ್ಡೆ ಬಿತ್ತನೆ ಬೀಜದ ಬೆಲೆ ನಿಗದಿಗೆ ಸಂಬಂಧಿಸಿದಂತೆ ಅಯೋಜಿಸಿದ್ದ ಇನ್ನೊಂದು ಸಭೆಯೂ ಬಹುತೇಕ ವಿಫಲವಾದಂತಾಗಿದೆ. ಹಿಂದೆ ಕೆ.ಜಿ.ಗೆ ರೂ. 16.80 ಬೆಲೆ ಹೇಳುತ್ತಿದ್ದ ರೈತರು ಶುಕ್ರವಾರದ ಸಭೆಯಲ್ಲಿ 14 ರೂಪಾಯಿಗೆ ಬಿತ್ತನೆ ಬೀಜ ಮಾರಾಟ ಮಾಡಲು ಒಪ್ಪಿಕೊಂಡಿದ್ದರಿಂದ ಸಭೆ ಭಾಗಶಃ ಫಲಪ್ರದವಾದಂತೆ ಕಂಡರೂ, ಮುಂದೆ ಇದರಿಂದ ಅಪಾಯವಾಗಲಿದೆ ಎಂಬ ಸಂಕೇತವನ್ನು ವ್ಯಾಪಾರಿಗಳು ನೀಡಿದ್ದಾರೆ.ಜಿಲ್ಲೆಯಲ್ಲಿ ಐದು ಲಕ್ಷ ಚೀಲ ಬಿತ್ತನೆ ಬೀಜ ಸಂಗ್ರಹವಾಗಿದೆ. ಆದರೆ ಬೇಡಿಕೆ ಇರುವುದು ಹತ್ತು ಲಕ್ಷ ಚೀಲ ಮಾತ್ರ. ಇರುವ ಬಿತ್ತನೆ ಬೀಜವನ್ನು 14 ರೂಪಾಯಿಗೆ ಮಾರಾಟ ಮಾಡಿದರೂ ಜಿಲ್ಲೆಯ ಅರ್ಧದಷ್ಟು ರೈತರಿಗೆ ಕೊಡಲೂ ಸಾಲುವುದಿಲ್ಲ. ಜತೆಗೆ ನೆರೆಯ ಜಿಲ್ಲೆಗಳಿಂದಲೂ ಹಾಸನಕ್ಕೆ ಬಂದು ಬಿತ್ತನೆ ಬೀಜವನ್ನು ಖರೀದಿಸುತ್ತಾರೆ. ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಆರಂಭದಿಂದಲೂ ಹಗ್ಗ ಜಗ್ಗಾಟ ನಡೆದಿದೆ. ರೈತರು ಸಾವಿರ ದಿಂದ 1100  ರೂಪಾಯಿಯೊಳಗೆ ಬಿತ್ತನೆ ಬೀಜ ಕೊಡಿ ಎಂದರೆ ವ್ಯಾಪಾರಿಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲು ಸಿದ್ಧರಿರಲಿಲ್ಲ. ಮಾಜಿ ಸಚಿವ ರೇವಣ್ಣ ಸಭೆಯಲ್ಲಿದ್ದರೂ, `ನಾನು ಬೆಲೆ ನಿರ್ಧರಿಸಲು ಬರುವುದಿಲ್ಲ.ನೀವೆಲ್ಲ ಸೇರಿ ತೀರ್ಮಾನಿಸಿ ಅದಕ್ಕೆ ನನ್ನ ಬೆಂಬಲ ಇದೆ~ ಎಂದರು. ರೇವಣ್ಣ ಒಂದು ಬೆಲೆ ಸೂಚಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಬಂದಿದ್ದ ರೈತರಿಗೆ ಇದರಿಂದ ಸ್ವಲ್ಪ ನಿರಾಸೆಯಾಯಿತು. `ಆಕಾಶಕ್ಕೆ ಕಲ್ಲೆಸೆದಂತೆ ಮಾತನಾಡಬೇಡಿ, ದಯವಿಟ್ಟು ಒಂದು ಬೆಲೆ ನಿರ್ಧಾರ ಮಾಡಿ ನೀವೇ ಹೇಳಿ~ ಎಂದು ರೈತರು ಮನವಿ ಮಾಡಿದರೂ ರೇವಣ್ಣ ಬೆಲೆ ಹೇಳಲು ಸಿದ್ಧರಿರಲಿಲ್ಲ. ಇತ್ತ ವರ್ತಕರೂ, `ನಮ್ಮ ಮಗುವಿಗೆ ನೀವು ನಾಮಕರಣ ಮಾಡ ಬೇಡಿ~ ಲಕ್ಷಾಂತರ ಚೀಲಗಳಷ್ಟು ಆಲೂಗೆಡ್ಡೆ ತಂದಿದ್ದೇವೆ. ನಾವು ಉತ್ಪಾದಿಸಿದ ವಸ್ತುವಿಗೆ ನೀವು ಬೆಲೆ ನಿಗದಿ ಮಾಡಲು ಆಗುವುದಿಲ್ಲ. ನೀವಷ್ಟೇ ಅಲ್ಲ, ಕಳೆದ ವರ್ಷ ಪಂಜಾಬಿನ ರೈತರೂ ನಷ್ಟ ಅನುಭವಿ ಸಿದ್ದಾರೆ~ ಎಂದು ಖಂಡತುಂಡವಾಗಿ ಹೇಳಿದರು. ಒಂದು ನಿರ್ಧಾರಕ್ಕೆ ಬರಲಾಗದ ಸಂದರ್ಭದಲ್ಲಿ ಮತ್ತೆ ರೇವಣ್ಣ, ಜಿಲ್ಲಾಧಿಕಾರಿ, ಹಾಗೂ ವ್ಯಾಪಾರಿಗಳು ಡಿ.ಸಿ. ಚೇಂಬರ್ ಒಳಗೆ ಮಾತುಕತೆ ನಡೆಸಿದರು. ಅಲ್ಲಿಯೂ ರೇವಣ್ಣ `ನೀವು ಹೇಳುವ ಬೆಲೆಗೆ ಇಲ್ಲಿಯ ರೈತರಿಂದ ಖರೀದಿಸಲು ಆಗುವುದಿಲ್ಲ. ದಯವಿಟ್ಟು ಬೆಲೆ ಕಡಿಮೆ ಮಾಡಿ~ ಎಂದು ವ್ಯಾಪಾರಿಗಳನ್ನು ಒತ್ತಾಯಿಸಿದರು. ಅವರಿಂದ ಪೂರಕ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ರೇವಣ್ಣ ಹೊರನಡೆದರು. ಒಂದು ಹಂತದಲ್ಲಿ `ನಾವು ರೈತರಿಗೆ ಬೀಜ ಕೊಡುತ್ತೇವೆ ಮತ್ತು ರೈತರಿಂದ ನಾವೇ ಖರೀದಿಸಲೂ ಸಿದ್ಧ ಯಾವ ಬೆಲೆಗೆ ಕೊಡುತ್ತೀರಿ ನೀವೇ ಹೇಳಿ ಎಂದು ವ್ಯಾಪಾರಿಗಳು ಜಿಲ್ಲಾಧಿಕಾರಿಗೇ ಸಲಹೆ ನೀಡಿದರು. ಆದರೆ ಈ ಮಾತು ಮುಂದುವರಿಯಲಿಲ್ಲ. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆದ ಬಳಿಕ ಕೊನೆಯದಾಗಿ `ನಾವು 14ರೂಪಾಯಿಗೆ ಬಿತ್ತನೆ ಬೀಜ ಕೊಡುತ್ತೇವೆ.

 

ಈಗ ಸಂಗ್ರಹವಾಗಿರುವ ಬೀಜಕ್ಕೆ ಮಾತ್ರ ಈ ದರ ಅನ್ವಯಿಸುತ್ತದೆ. ಮುಂದಿನ ಬೆಲೆಯನ್ನು ಹೇಳಲಾಗದು~ ಎಂದು ವ್ಯಾಪಾರಿಗಳು ನುಡಿದರು. ಇದರ ಜತೆಯಲ್ಲೇ ಕೋಲ್ಡ್ ಸ್ಟೋರೇಜ್‌ಗಳಿಂದ ಬಿತ್ತನೆ ಬೀಜವನ್ನು ತೆಗೆಯುವ ಸಮಯದಲ್ಲಿ ಪೊಲೀಸ್ ರಕ್ಷಣೆ ನೀಡಬೇಕು ಎಂದೂ ಮನವಿ ಮಾಡಿಕೊಂಡರು. ವರ್ತಕರು ಹೇಳಿರುವ ಈ ಎರಡು ವಿಚಾರಗಳು ರೈತರಲ್ಲಿ ಆತಂಕ ಮೂಡಿಸುವಂತಿವೆ. ಬಿತ್ತನೆ ಕಾರ್ಯ ಆರಂಭವಾಗುವ ಸಮಯದಲ್ಲಿ ಪಂಜಾಬಿನಿಂದ ಬರುವ ಬಿತ್ತನೆ ಬೀಜ ಸ್ಟೋರೇಜ್‌ಗಳಿಗೆ ಬಾರದೆ ನೇರವಾಗಿ  ರೈತರಿಗೆ ಮಾರಾಟವಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಅವರು ಹೇಳಿದ ಬೆಲೆ ನೀಡಿ ಖರೀದಿಸಬೇಕಾಗುತ್ತದೆ.ಈಗ 14ರೂಪಾಯಿಗೆ ಮಾರುತ್ತಾರೆ ನಿಜ, ಆದರೆ ಸಮಯ ಬಂದಾಗ 20ರೂಪಾಯಿ ಹೇಳಿದರೂ ರೈತರು ಅನಿವಾರ್ಯವಾಗಿ ಖರೀದಿಸಬೇಕಾಗುತ್ತದೆ. ಕಳೆದ ವಾರದಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ಈಗಾಗಲೇ ಕೆಲವರು ಬೇರೆ ಜಿಲ್ಲೆಗಳಿಂದ ಬೀಜ ತರಿಸಿ ಬಿತ್ತನೆ ಆರಂಭಿಸಿದ್ದಾರೆ.   ಈಗ ಕಡಿಮೆ ಬೆಲೆಗೆ ಬಿತ್ತನೆ ಬೀಜ ಲಭ್ಯವಾಗುತ್ತದೆ ಎಂದಾಗ ರೈತರು ಒಮ್ಮೆಲೇ ಖರೀದಿಗೆ ನುಗ್ಗುವ ಸಾಧ್ಯತೆ ಇದೆ. ಇದರಿಂದ ಪರೋಕ್ಷವಾಗಿ ಮಧ್ಯವರ್ತಿಗಳಿಗೆ ಸಹಾಯವಾಗುವ ಮತ್ತು ರೈತರು ಶೋಷಣೆಗೆ ಒಳಗಾಗುವ ಸಾಧ್ಯತೆ ಇದೆ ಎಂಬುದು ರೈತರ ಚಿಂತೆಯಾಗಿದೆ.ಕೆ.ಜಿ.ಗೆ 14 ರೂಪಾಯಿ ನಿಗದಿಗೆ ವರ್ತಕರ ಪಟ್ಟು

 `ಯಾವಕಾರಣಕ್ಕೂ ಬಿತ್ತನೆ ಆಲೂಗೆಡ್ಡೆಯ ದರವನ್ನು ಕೆ.ಜಿಗೆ ರೂ.14 ಕ್ಕಿಂತ ಕಡಿಮೆ ಮಾಡಲಾಗದು~ ಎಂದು ಪಂಜಾಬ್‌ನಿಂದ ಬಂದ ವರ್ತಕರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಹಾಸನದ ರೈತರು ಹಾಗೂ ಜನಪ್ರತಿನಿಧಿಗಳು ಮಾತ್ರ 10 ರಿಂದ 11 ರೂಪಾಯಿಗಿಂತ ಹೆಚ್ಚಿನ ಬೆಲೆ ನೀಡಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.ಆಲೂಗೆಡ್ಡೆ ಬಿತ್ತನೆ ಬೀಜದ ಬೆಲೆ ನಿಗದಿಗೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನಲ್ಲಿ ನಡೆದ ಐದನೇ ಸಭೆ ಇದಾಗಿತ್ತು. ಇಷ್ಟು ಸಭೆಗಳಲ್ಲಿ ಪಂಜಾಬಿನಿಂದ ಬಂದಿದ್ದ ವರ್ತಕರು 16.80ರೂಪಾಯಿಗಿಂತ ಕಡಿಮೆ ಬೆಲೆ ನೀಡಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದಿದ್ದರು.ಆದರೆ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದಲ್ಲದೆ ಶೈತ್ಯಾಗಾರದಿಂದ ಬಿತ್ತನೆ ಬೀಜದ ಚೀಲಗಳನ್ನು ತೆಗೆಯಲು ಅನುಮತಿ ನೀಡದಿರುವುದು ಮತ್ತು ಸತತವಾಗಿ ಒತ್ತಡ ಬಂದ ಕಾರಣ ವ್ಯಾಪಾರಿಗಳು 14ರೂಪಾಯಿ ದರ ನಿಗದಿಗೆ ಒಪ್ಪಿಕೊಂಡರು.

 

ಆದರೆ ಈಗ ಸಂಗ್ರಹವಾಗಿರುವ ಆಲೂಗೆಡ್ಡೆಯನ್ನು ಮಾತ್ರ ಈ ದರಕ್ಕೆ ಮಾರಾಟ ಮಾಡುತ್ತೇವೆ. ಇನ್ನುಮುಂದೆ ಬರುವ ಬೀಜದ ಬೆಲೆಯನ್ನು ಇದೇ ಬೆಲೆಗೆ ನೀಡಲು ಸಾಧ್ಯವಿಲ್ಲ ಎಂದು ವ್ಯಾಪಾರಿಗಳು ಷ್ಪಷ್ಟಪಡಿಸಿದ್ದಾರೆ.

`ವರ್ತಕರು ತಿಳಿಸಿದ ಈ ಬೆಲೆಯನ್ನು ಒಪ್ಪಲು ಜಿಲ್ಲಾಡಳಿತ ಸಿದ್ಧವಿಲ್ಲ~ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್ ಸ್ಪಷ್ಟಪಡಿಸಿದ್ದಾರೆ.`ಎರಡು ದಿನದೊಳಗೆ ನಿರ್ಧಾರ ತಿಳಿಸಿ~

ಹಾಸನ: `ಆಲೂಗೆಡ್ಡೆ ಬಿತ್ತನೆ ಬೀಜದ ಬೆಲೆ ನಿಗದಿಗೆ ಸಂಬಂಧಿಸಿದಂತೆ ಐದನೇ ಸಭೆಯೂ ವಿಫಲವಾಗಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಎರಡು ದಿನದೊಳಗೆ ತನ್ನ ನಿರ್ಧಾರ ತಿಳಿಸಬೇಕು~ ಎಂದು ಎಚ್.ಡಿ. ರೇವಣ್ಣ ಒತ್ತಾಯಿಸಿದ್ದಾರೆ. ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ರೈತರಿಗೆ ವರ್ತಕರಿಂದ ಅನ್ಯಾಯವಾಗುತ್ತಿದೆ. ಸರ್ಕಾರ ರೈತರ ಪರವಾಗಿದೆಯೇ ಅಥವಾ ವರ್ತಕರ ಪರವಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಈಗಾಗಲೇ ಬಿತ್ತನೆಗೆ ಸಿದ್ಧತೆಗಳು ಆರಂಭವಾಗಿದ್ದು ತಡಮಾಡಿದರೆ ರೈತರಿಗೆ ಉಪಯೋಗವಾಗು ವುದಿಲ್ಲ. ಎರಡು ದಿನದೊಳಗೆ ನಿರ್ಧಾರ ಕೈಗೊಳ್ಳಬೇಕು~ ಎಂದು ಒತ್ತಾಯಿಸಿದರು.  `ಕಳೆದ ವರ್ಷ 22 ಸಾವಿರ ಹೆಕ್ಟೇರ್‌ನಲ್ಲಿ ಆಲೂಗೆಡ್ಡೆ ಬಿತ್ತನೆಯಾಗಿ ಅದರಲ್ಲಿ 18ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ. ಈ ಅಂಕಿ ಅಂಶ ಜಿಲ್ಲಾಡಳಿತದ ಮುಂದಿದೆ. ಜಿಲ್ಲಾಧಿಕಾರಿ ಇದನ್ನು ಗಮನಿಸಿ ಕಠಿಣ ನಿರ್ಧಾರ ಕೈಗೊಳ್ಳಬೇಕು.ವರ್ತಕರಿಗೆ ಕ್ವಿಂಟಲ್‌ಗೆ ಸುಮಾರು 800 ರೂಪಾಯಿ ವೆಚ್ಚ ಬಂದಿದೆ ಎನ್ನಲಾಗುತ್ತಿದೆ. ಬೇಕಿದ್ದರೆ 200 ರೂಪಾಯಿ ಲಾಭ ಇಟ್ಟುಕೊಂಡು ಸಾವಿರ ರೂಪಾಯಿಗೆ ಮಾರಾಟ ಮಾಡಲಿ, ಅದಕ್ಕೆ ನಮ್ಮ ಆಕ್ಷೇಪವಿಲ್ಲ ಎಂದು ರೇವಣ್ಣ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry