ಬಿತ್ತನೆ ಬೀಜ ಒದಗಿಸಲು ಸೂಚನೆ

ಸೋಮವಾರ, ಜೂಲೈ 22, 2019
24 °C

ಬಿತ್ತನೆ ಬೀಜ ಒದಗಿಸಲು ಸೂಚನೆ

Published:
Updated:

ಗದಗ: `ಮುಂಗಾರು ಬಿತ್ತನೆಗಾಗಿ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ತ್ವರಿತಗತಿಯಲ್ಲಿ ಒದಗಿಸಬೇಕು~ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚಂಬವ್ವ ಪಾಟೀಲ ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆಯಾಗಿದ್ದು ರೈತರು ಬಿತ್ತನೆ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರಿಗೆ ಬಿತ್ತನೆ ಬೀಜದ ಕೊರತೆಯಾಗದಂತೆ ನೋಡಿಕೊ ಳ್ಳುವಂತೆ ತಿಳಿಸಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬೀರಪ್ಪ ಬಂಡಿ ಮಾತನಾಡಿ, ರೈತರಿಗೆ ಒದಗಿಸುತ್ತಿರುವ ಹೆಸರು ಬೀಜ ಕಳಪೆ ಬೀಜಗಳೆಂದು ಕಂಡುಬಂದಿವೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಸಭೆಯಲ್ಲಿ ಹಾಜರಿದ್ದ ಜಂಟಿ ಕೃಷಿ ನಿರ್ದೇಶಕರು, ಈಗಾಗಲೇ ಕೆಲವು ಕಂಪೆನಿಗಳ ಬೀಜಗಳನ್ನು ಗುಣಮಟ್ಟ ಪರಿಶೀಲನೆಗಾಗಿ ಕಳುಹಿಸಲಾಗಿದೆ.  ವರದಿ ಬಂದ ನಂತರ ಅಂತಹ ಕಳಪೆ ಬೀಜಗಳ ಪೂರೈಕೆಯನ್ನು ರದ್ದು ಪಡಿಸಲಾಗುವುದು ಎಂದು ಹೇಳಿದರು.ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ ಮಾತನಾಡಿ, ರೈತರಿಗೆ ಒದಗಿಸಬೇಕಾದ ರಸಗೊಬ್ಬರಗಳನ್ನು ಸೊಸೈಟಿಗಳಿಗೆ ಪೂರೈಸುತ್ತಿದ್ದು, ಸೊಸೈಟಿಗಳು ಗೊಬ್ಬರ ಖರೀದಿಯಲ್ಲಿ ವಿಳಂಬ ಮಾಡುತ್ತಿವೆ. ಇದರಿಂದ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ತಲುಪುತ್ತಿಲ್ಲ. ಈ ಬಗ್ಗೆ ಇಲಾಖೆ ಪರಿಶೀಲಿಸಿ ರೈತ ಸಂಪರ್ಕ ಕೇಂದ್ರಗಳಿಗೆ ಹೆಚ್ಚು ಪ್ರಮಾಣದಲ್ಲಿ ರಸಗೊಬ್ಬರ ಪೂರೈಸಿ, ರೈತರಿಗೆ ನಿಗದಿತ ಬೆಲೆಯಲ್ಲಿ ರಸಗೊಬ್ಬರ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.  ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಣ್ಣ ತುರಮರಿ ಮಾತನಾಡಿ, ರೈತರಿಗೆ ಒದಗಿಸುವ ಬಿತ್ತನೆ ಬೀಜ ಹಾಗೂ ಗೊಬ್ಬರದ ವಿತರಣೆಯು ತ್ವರಿತವಾಗಿ ಹಾಗೂ ವ್ಯವಸ್ಥಿತವಾಗಿ ಆಗಬೇಕು. ವಿಳಂಬ ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಎಲ್ಲ ತಾಲ್ಲೂಕು ಅಧಿಕಾರಿಗಳಿಗೆ ಈ ಬಗ್ಗೆ ತಕ್ಷಣವೇ ಆದೇಶ ಕಳುಹಿಸುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ಶಾಲೆಗಳು ಪ್ರಾರಂಭವಾಗಿದ್ದು ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳ ಸಮರ್ಪಕ ಹಂಚಿಕೆ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ವರದಿ ಸಲ್ಲಿಸುವಂತೆ ತುರಮರಿ ಸೂಚಿಸಿದರು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆಗಳ ಕುಂದುಕೊರತೆ ಕುರಿತು ಚರ್ಚಿಸಲಾಯಿತು.  ಸಭೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶಾರದಾ ಹಿರೇಗೌಡರ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸುನಿತಾ ಹವಳೆಪ್ಪನವರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry