ಬಿತ್ತನೆ ಬೀಜ ಕಳಪೆ; ರೈತರ ಆರೋಪ

7

ಬಿತ್ತನೆ ಬೀಜ ಕಳಪೆ; ರೈತರ ಆರೋಪ

Published:
Updated:

ಹಿರಿಯೂರು: ಕಾವೇರಿ ಕಂಪೆನಿಯ 25ಕೆ55 ತಳಿಯ ಮೆಕ್ಕೆ ಜೋಳ ಬಿತ್ತಿದ ನಮಗೆ ಮೋಸವಾಗಿದೆ ಎಂದು ತಾಲ್ಲೂಕಿನ ರಂಗೇನಹಳ್ಳಿಯಲ್ಲಿ ಆರ್.ಡಿ.ನರೇಂದ್ರ ಎಂಬ ರೈತರು  ಆರೋಪಿಸಿದ್ದಾರೆ.4 ಎಕರೆ ಭೂಮಿಯಲ್ಲಿ ಮೆಕ್ಕೆ ಜೋಳ ಬೆಳೆಯಲು ನಿರ್ಧರಿಸಿ, ಹಿರಿಯೂರಿನ ಬಾಲಾಜಿ ಆಗ್ರೋ ಸೆಂಟರ್ ಅಂಗಡಿಯಿಂದ 6 ಪಾಕೆಟ್ ಬೀಜ ಖರೀದಿಸಿ, ಭೂಮಿಯನ್ನು ಹಂತ ಹಂತವಾಗಿ ಹದಗೊಳಿಸಿ, ಬೀಜ ಬಿತ್ತನೆ ಮಾಡಿದ್ದೆ. ಬೆಳೆ 25 ದಿನಕ್ಕೆ ಬಂದಿದ್ದಾಗ ಹರತೆ ಕುಂಟೆ ಹೊಡೆಸಿ, ಕಳೆ ತೆಗೆದು, ಮೊದಲ ಕಂತಾಗಿ 10 ಚೀಲ ಯೂರಿಯಾ ಗೊಬ್ಬರ ಹಾಕಿ ನೀರು ಹಾಯಿಸಿದ್ದೆ ಎಂದು ಗುರುವಾರ  ಪತ್ರಕರ್ತರಿಗೆ  ಅವರು ವಿವರಿಸಿದರು.ಇದಾದ 20 ದಿನದ ನಂತರ ಕೀಟನಾಶಕ ಸಿಂಪರಣೆ ಮಾಡಿ, ಮತ್ತೆ ಕುಂಟೆ ಹೊಡೆದು, ಎರಡನೇ ಕಂತಿನಲ್ಲಿ 10 ಚೀಲ ಯೂರಿಯಾ ಗೊಬ್ಬರ ಹಾಕಿದ್ದೆ. ಕೊಳವೆ ಬಾವಿಯಲ್ಲಿ ಬರುತ್ತಿದ್ದ ನೀರನ್ನು ಹಗಲು–ರಾತ್ರಿ ಕಾದಿದ್ದು ಬೆಳೆಗೆ ಹಾಯಿಸಿದ್ದೆ. ನನ್ನ ಶ್ರಮಕ್ಕೆ ತಕ್ಕಂತೆ ಫಸಲು ಹತ್ತು ಅಡಿಯವರೆಗೂ ಬೆಳೆದು ನಿಂತ ಖುಷಿಯಲ್ಲಿರುವಾಗಲೆ,  ಒಂದೊಂದು ದಂಟಿನಲ್ಲಿ 3–4 ತೆನೆಗಳು ಮೂಡಿ, ಮೂಲ ತೆನೆ ಸಾಕಷ್ಟು ಗಾತ್ರವಿದ್ದರೂ ಅದರ ಒಳಗಡೆ ಮತ್ತೆ ಮರಿತೆನೆಗಳು ಒಡೆಯಲಾರಂಭಿಸಿದ್ದು, ಯಾವ ತೆನೆಯಲ್ಲೂ ಕಾಳುಕಟ್ಟದಿರುವುದು ಆತಂಕ ಮೂಡಿಸಿದೆ ಎಂದು ನರೇಂದ್ರ ವಿವರಿಸಿದರು.ಶಾಸಕ ಡಿ.ಸುಧಾಕರ್‌ ಅವರ ಗಮನಕ್ಕೆ ಈ ವಿಷಯ ತರಲಾಗಿದ್ದು, ಶಾಸಕರು ಕೃಷಿ ಅಧಿಕಾರಿಗಳಿಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ. ಕೃಷಿ ಅಧಿಕಾರಿ ಬೆಂಗಳೂರಿನ ವಿಜ್ಞಾನಿಗಳಿಗೆ ಪತ್ರ ಬರೆದಿದ್ದು 3–4 ದಿನದಲ್ಲಿ ಬರುವ ಸಾಧ್ಯತೆ ಇದೆ. ಬೀಜ ಮಾರಾಟ ಮಾಡಿದ್ದ ಅಂಗಡಿಯವರು ಸಹ ಬೀಜ ಕಂಪೆನಿಗೆ ಬೆಳೆ ವೈಫಲ್ಯದ ಬಗ್ಗೆ ತಿಳಿಸಿದ್ದು, ಆ ಕಂಪೆನಿಯ ವಿಜ್ಞಾನಿಗಳು ತಪಾಸಣೆಗೆ ಬರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.ಮನವಿ: ಕಾವೇರಿ 25ಕೆ55 ತಳಿಯ ಬೀಜವನ್ನು ನಾಟಿ ಅಥವಾ ಬಿತ್ತನೆ ಮಾಡಿರುವ ರೈತರು ನನ್ನಂತೆ ತೊಂದರೆಗೆ ಒಳಗಾಗಿದ್ದರೆ ತಕ್ಷಣ ಹಿರಿಯೂರಿನ ಕೃಷಿ ಇಲಾಖೆ ಅಧಿಕಾರಿ ಮೊಬೈಲ್‌ ಸಂಖ್ಯೆ:  72590 04942  ಅಥವಾ 93797 56443 ಸಂಖ್ಯೆಗೆ ಸಂಪರ್ಕಿಸಲು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry