ಭಾನುವಾರ, ಮೇ 9, 2021
22 °C

ಬಿದರಿ ನೇಮಕಾತಿ ರದ್ದು: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ~ಸದ್ದಾಂ ಹುಸೇನ್ ಅಥವಾ ಮುಅಮ್ಮರ್ ಗಡ್ಡಾಫಿಗಿಂತಲೂ ಕ್ರೂರಿ~ ಎಂಬುದಾಗಿ ಶಂಕರ ಬಿದರಿ ಅವರನ್ನು ಬಣ್ಣಿಸಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ  ಅವರನ್ನು ನೇಮಿಸಿದ ಆದೇಶವನ್ನು ರದ್ದು ಪಡಿಸಿದ್ದ ಕರ್ನಾಟಕ ಹೈಕೋರ್ಟಿನ ಆಜ್ಞೆಗೆ ಸುಪ್ರೀಂಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ.ನ್ಯಾಯಮೂರ್ತಿಗಳಾದ ಆಫ್ತಾಬ್ ಆಲಂ ಮತ್ತು ಸಿ.ಕೆ. ಪ್ರಸಾದ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠವು ವಿಷಯವನ್ನು ಪುನಃ ಹೊಸದಾಗಿ ಪರಿಶೀಲಿಸಿ ಮೇ 31ರ ಒಳಗೆ ಇತ್ಯರ್ಥ ಪಡಿಸುವಂತೆ ರಾಜ್ಯ ಹೈಕೋರ್ಟಿಗೆ ಸೂಚಿಸಿದೆ.ಮಾರ್ಚ್ 30ರ ಹೈಕೋರ್ಟ್ ಆದೇಶವನ್ನು ತಡೆ ಹಿಡಿದ ಸುಪ್ರೀಂಕೋರ್ಟ್ ~ನ್ಯಾಯಮೂರ್ತಿ ಸದಾಶಿವ ಆಯೋಗ ಮತ್ತು ಮಾನವ ಹಕ್ಕುಗಳ ರಾಷ್ಟ್ರೀಯ ಆಯೋಗದ ತೀರ್ಪುಗಳನ್ನು ಪರಿಶೀಲಿಸದೆಯೇ ಹೈಕೋರ್ಟ್ ಸದರಿ ಆದೇಶವನ್ನು ನೀಡಿದೆ,  ಗುಡ್ಡಗಾಡು ಮಹಿಳೆಯರ ಮೇಲೆ ಜಂಟಿ ಎಸ್ ಟಿಎಫ್ ಸಿಬ್ಬಂದಿ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ  ಉಭಯ ಆಯೋಗಗಳು ಬಿದರಿ ಅವರನ್ನು ಆರೋಪಮುಕ್ತ ಗೊಳಿಸಿವೆ~ ಎಂದು ಹೇಳಿದೆ.ಈ ಮುನ್ನ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಬಿದರಿ ನೇಮಕಾತಿಯನ್ನು ರದ್ದು ಹೈಕೋರ್ಟ್ ರದ್ದು ಪಡಿಸಿತ್ತು. ಕರ್ನಾಟಕ ಮತ್ತು ತಮಿಳ್ನಾಡು ಶ್ರೀಗಂಧಚೋರ, ಕಾಡುಗಳ್ಳ ವೀರಪ್ಪನ್ ವಿರುದ್ಧ ಕಾರ್ಯಾಚರಣೆಗಾಗಿ ರಚಿಸಿದ  ಜಂಟಿ ಎಸ್ ಟಿಎಫ್ ಗುಡ್ಡಗಾಡು ಮಹಿಳೆಯರ ವಿರುದ್ಧ ನಡೆಸಿತ್ತೆನ್ನಲಾದ ಅತಿರೇಕಗಳ ಕಾಲದಲ್ಲಿ ಬಿದರಿ ಅವರು ಡೆಪ್ಯುಟಿ ಕಮಾಂಡೆಂಟ್ ಆಗಿದ್ದರು ಎಂದು ಹೇಳಿ ಹೈಕೋರ್ಟ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು.ಸದಾಶಿವ ಆಯೋಗ ಮತ್ತು ಮಾನವ ಹಕ್ಕುಗಳ ರಾಷ್ಟ್ರೀಯ ಆಯೋಗದ ತೀರ್ಪುಗಳು ಈ ಅಧಿಕಾರಿಗಳಿಗಳನ್ನಷ್ಟೇ ಪರಿಗಣಿಸಿದ್ದಲ್ಲ. ಆದರೂ ವಿಷಯದ ಅರ್ಹತೆ ಬಗ್ಗೆ  ಈ ಹಂತದಲ್ಲಿ ತಾನು ಏನೂ ಹೇಳುವುದಿಲ್ಲ. ಇದರ ನಿರ್ಧಾರವನ್ನು ಹೈಕೋರ್ಟ್ ಗೆ ಬಿಡುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.ಶಂಕರ ಬಿದರಿ ಪರವಾಗಿ ಮಾಜಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂ ಹಾಜರಾಗಿದ್ದರು. ಹಿರಿಯ ವಕೀಲ ಯು.ಯು. ಲಲಿತ್ ಅವರು ಕರ್ನಾಟಕ ಸರ್ಕಾರದ ಪರವಾಗಿ ಹಾಜರಾಗಿದ್ದರು. ಇನ್ನೊಬ್ಬ ಹಿರಿಯ ವಕೀಲ ಅಲ್ತಾಫ್ ಅಹಮದ್ ಅವರು ಹಿರಿಯ ಐಎಎಸ್ ಅಧಿಕಾರಿ ಎ.ಆರ್. ಇನ್ಫಾಂಟ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇನ್ಫಾಂಟ್ ಪರವಾಗಿ ಹೈಕೋರ್ಟ್ ಬಿದರಿ ನೇಮಕಾತಿ ರದ್ದು ಪಡಿಸಿ ಆದೇಶ ನೀಡಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.