ಬಿದಿರು ಸ್ವರವೆಲ್ಲ ನಂದೆಂದಿತು...

7

ಬಿದಿರು ಸ್ವರವೆಲ್ಲ ನಂದೆಂದಿತು...

Published:
Updated:

ಸೆ. 27ರಿಂದ ಅ. 2ರವರೆಗೆ ಗದಗದಲ್ಲಿ ಕರ್ನಾಟಕ ಗಾನ ಕಲಾಪರಿಷತ್‌ನ ಸಂಗೀತ ಸಮ್ಮೇಳನ. ಇಂಡೊನೇಷ್ಯಾ ಮೂಲದ ‘ಅಂಕ್ಲಂಗ್’ ಎಂಬ ಬಿದಿರು ವಾದ್ಯದಲ್ಲಿ ಕರ್ನಾಟಕ ಸಂಗೀತವನ್ನು ಅಳವಡಿಸಿ ವಿಶ್ವದ ಪ್ರತಿಷ್ಠಿತ ವೇದಿಕೆಗಳಲ್ಲಿ ಕಛೇರಿ ನೀಡಿ ಶಹಬ್ಬಾಸ್ ಎನಿಸಿಕೊಂಡ 78ರ ಹರೆಯದ ವಿದುಷಿ ಡಾ. ಅನಸೂಯ ಕುಲಕರ್ಣಿ ಅವರು ಸಮ್ಮೇಳನದ ಅಧ್ಯಕ್ಷರು. ಅವರಿಗೆ ಸಮ್ಮೇಳನದಲ್ಲಿ ‘ಗಾನಕಲಾ ಭೂಷಣ’ ಪುರಸ್ಕಾರ. ಕೊಳಲು ಸಾಧಕ ಎಲ್.ವಿ. ಮುಕುಂದ ಅವರು ಗಾನ ಕಲಾ ಯುವ ಸಮ್ಮೇಳನದ ಅಧ್ಯಕ್ಷರು. ಅವರಿಗೆ ‘ಗಾನ ಕಲಾಶ್ರೀ' ಪುರಸ್ಕಾರ. ಈ ಸಲದ ಎರಡೂ ಪುರಸ್ಕಾರಗಳು ಬಿದಿರು ವಾದ್ಯಕ್ಕೇ ಒಲಿದಿರುವುದು ವಿಶೇಷ.ವಿ ಶ್ವ ಮನ್ನಣೆಯ ‘ಅಂಕ್ಲಂಗ್’ ವಾದ್ಯ ವಿದುಷಿ ಡಾ. ಅನಸೂಯ ಕುಲಕರ್ಣಿ ಸುಮಾರು 15 ದೇಶಗಳಿಂದ ವಿವಿಧ ವಾದ್ಯಗಳನ್ನು ಸಂಗ್ರಹಿಸಿದ್ದಾರೆ, ಸ್ವತಃ ಸಂಗೀತಗಾರರೇ ಕಂಡು ಕೇಳರಿಯದ 300 ವಾದ್ಯಗಳು ಅವರ ಸಂಗ್ರಹದಲ್ಲಿವೆ. ಅಷ್ಟೂ ವಾದ್ಯಗಳನ್ನು ನುಡಿಸುವ ಮೂಲಕ ಅನಸೂಯ ಅವರು ವಾದ್ಯಗಳೊಂದಿಗೇ ಒಡನಾಡಿಯಾಗಿದ್ದಾರೆ. ಅಂಕ್ಲಂಗ್ ಕಛೇರಿ, ಅಧ್ಯಯನ, ಅಧ್ಯಾಪನ, ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನು ಮಾಡುತ್ತಾ ಬಂದ ಅವರೊಂದಿಗಿನ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ‘ಅಂಕ್ಲಂಗ್’ ವಾದ್ಯದಲ್ಲಿ ಹೊಸ ಪ್ರಯೋಗ ಮಾಡಿ, ಅದರಲ್ಲಿ ಕರ್ನಾಟಕ ಸಂಗೀತ ಅಳವಡಿಸಿದ್ದೀರಿ. ಇದು ಹೇಗೆ ಸಾಧ್ಯವಾಯಿತು?

30 ವರ್ಷಗಳ ಹಿಂದೆ ಇಂಡೊನೇಷ್ಯಾಕ್ಕೆ ಹೋದಾಗ ಅಲ್ಲಿ ಬಿದಿರಿನಿಂದಲೇ ತಯಾರಿಸಿದ ಒಂದು ವಿಶಿಷ್ಟ ವಾದ್ಯ ನೋಡಿದೆ. ‘ಅಂಕ್ಲಂಗ್’ ಎಂದು ಕರೆಯುವ ಈ ವಾದ್ಯ ಕಂಡಾಗ, ಇದರ ಸುಮಧುರ ನಾದ ಕೇಳಿದಾಗ ಇದನ್ನು ನಮ್ಮ ಕರ್ನಾಟಕ ಸಂಗೀತಕ್ಕೆ ಯಾಕೆ ಅಳವಡಿಸಬಾರದು ಎನಿಸಿತು. ಸಂಗೀತಕ್ಕೆ ತಾಳ ಹಾಕಿಕೊಂಡು ಪಕ್ಕವಾದ್ಯ ಜತೆ ನುಡಿಸಿದರೆ ಶೋಭಿಸಬಹುದು ಎಂದು ಲೆಕ್ಕಾಚಾರ ಹಾಕಿದೆ.ಸಂಪೂರ್ಣ ಬಿದಿರಿನಿಂದಲೇ ಮಾಡಿದ ಈ ವಾದ್ಯದ ನಾದ ಅತ್ಯಂತ ಸುಶ್ರಾವ್ಯ. ಬೆಂಗಳೂರಿಗೆ ಹಿಂದಿರುಗಿದ ಕೂಡಲೇ ಮೊದಲು ಮಾಡಿದ ಕೆಲಸ ಅಲ್ಲಿಂದಲೇ ತರಿಸಿದ ದೊಡ್ಡ ಗಾತ್ರದ ‘ಅಂಕ್ಲಂಗ್’ ವಾದ್ಯವನ್ನು ನಮಗೆ, ನಮ್ಮ ಸಂಗೀತಕ್ಕೆ ಬೇಕಾದ ಹಾಗೆ ತಯಾರಿಸಿ ವಾದ್ಯದ ಸ್ವರೂಪವನ್ನೇ ಬದಲಾಯಿಸಿದ್ದು. ಮೊದಲು ಈ ವಾದ್ಯವನ್ನು ಕರ್ನಾಟಕ ಸಂಗೀತಕ್ಕೆ ಅಳವಡಿಸುವ ಚಿಂತನೆ ನಡೆಸಿದೆ. 13 ಬಿದಿರು ತುಂಡುಗಳನ್ನು ಇಟ್ಟು ಒಂದು ಸ್ಟ್ಯಾಂಡ್ ಮಾಡಿ ಅದರಲ್ಲಿ ಸಪ್ತಸ್ವರಗಳನ್ನು ನುಡಿಸಲಾರಂಭಿಸಿದೆ. ಇದರಲ್ಲಿ ಷಡ್ಜ, ರಿಷಭ, ಗಾಂಧಾರ, ಮಧ್ಯಮ.. ಎಲ್ಲ ಸ್ವರಗಳು ಬರುವ ಹಾಗೆ ಮಾಡಿಕೊಂಡೆ. ದೇಶ ವಿದೇಶಗಳಲ್ಲಿ ಕಛೇರಿ ನೀಡಿ ಯಶಸ್ವಿಯಾದೆ. ಈ ವಾದ್ಯಕ್ಕೆ ಅಂತರಾಷ್ಟ್ರೀಯ ಸ್ಥಾನಮಾನ ಬಂತು. 

* ಈ ವಿಶಿಷ್ಟ (ವಿಚಿತ್ರ) ವಾದ್ಯದ ನುಡಿಸಾಣಿಕೆ ಹೇಗೆ?

ಇದು ಟೊಳ್ಳಾದ ಬಿದಿರು ನಳಿಗೆಯಿಂದ ಮಾಡಿದ ವಾದ್ಯ. ಇದನ್ನು ಒಂದು ಸ್ಟ್ಯಾಂಡ್‌ಗೆ ಹಾಕಿ ಸ್ವರಗಳಿಗೆ ಅನುಗುಣವಾಗಿ ಜೋಡಿಸಿ ಇಡುತ್ತೇನೆ. ಆಯಾಯ ರಾಗದ ಆರೋಹಣ, ಅವರೋಹಣದಲ್ಲಿರುವ ಸ್ವರಗಳಿಗೆ ತಕ್ಕ ಹಾಗೆ ನಳಿಗೆಗಳನ್ನು ತೆಗೆದುಕೊಂಡು ಸ್ಟ್ಯಾಂಡಿಗೆ ಸಿಕ್ಕಿಸಿ ಅದನ್ನು ಅಲ್ಲಾಡಿಸುವ ಮೂಲಕ ಸ್ವರಗಳನ್ನು ತರಬಹುದು.ಇದರಲ್ಲಿರುವ ನಳಿಕೆಗಳನ್ನು ರಾಗಕ್ಕೆ ತಕ್ಕಂತೆ ಬದಲಾಯಿಸಬೇಕಾಗುತ್ತದೆ. ಕಛೇರಿಗಳಲ್ಲಿ ಒಂದು ರಾಗ ಮುಗಿದ ತಕ್ಷಣ ಮುಂದಿನ ರಾಗ ನುಡಿಸುವಾಗ ಬಿದಿರ ನಳಿಕೆಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಶಾಸ್ತ್ರೀಯ ಸಂಗೀತದ ಸುಲಭ ರಾಗಗಳನ್ನು ಇದರಲ್ಲಿ ನುಡಿಸಬಹುದು. ಆದರೆ ಕಾಂಬೋಧಿ, ಭೈರವಿ ಮುಂತಾದ ಸೂಕ್ಷ್ಮ ರಾಗಗಳನ್ನು ನುಡಿಸುವುದು ಸ್ವಲ್ಪ ಕಷ್ಟ. ವಿದೇಶಗಳಲ್ಲಿ ಒಂದೊಂದು ಸ್ವರವನ್ನು ಒಬ್ಬೊಬ್ಬರು ನುಡಿಸುತ್ತಾರೆ. ಹೆಚ್ಚಾಗಿ ಆರ್ಕೆಸ್ಟ್ರಾಗಳಲ್ಲಿ ಈ ವಾದ್ಯ ಬಳಸುವರು.

*ಈ ವಾದ್ಯದಲ್ಲಿ ಕರ್ನಾಟಕ ಸಂಗೀತ ಶೈಲಿಯ ಎಲ್ಲ ವೈವಿಧ್ಯಗಳನ್ನೂ ನುಡಿಸಬಹುದೇ?

ಕರ್ನಾಟಕ ಸಂಗೀತದ ‘ವರ್ಣ’ದಿಂದ ಹಿಡಿದು ರಾಗ-ತಾನ-ಪಲ್ಲವಿವರೆಗೂ ನುಡಿಸಬಹುದು. ವರ್ಣಗಳನ್ನು ಎರಡು ಕಾಲಗಳಲ್ಲಿ, ರಾಗ ತಾನ ಪಲ್ಲವಿಯನ್ನು ಮೂರು ಕಾಲಗಳಲ್ಲಿ ನುಡಿಸಲು ಸಾಧ್ಯ. ತಿಲ್ಲಾನಗಳನ್ನೂ ಸಲೀಸಾಗಿ ನುಡಿಸಬಹುದು. ಕೀರ್ತನೆಗಳಲ್ಲಿ ಚಿಟ್ಟೆಸ್ವರ, ನೆರವಲ್, ಮನೋಧರ್ಮ ಸಂಗೀತ ಅಷ್ಟೇ ಅಲ್ಲದೆ ಹಿಂದಿ ಭಜನ್ಸ್ ಕೂಡ ನುಡಿಸಲು ಸಾಧ್ಯವಿದೆ. ಆದರೆ ಕೃತಿ, ದೇವರನಾಮ ನುಡಿಸಲು ಆಯ್ಕೆ ಮಾಡುವಾಗ ಹೆಚ್ಚು ಜನಪ್ರಿಯವಾದದ್ದನ್ನೇ ಆರಿಸಿಕೊಳ್ಳಬೇಕು. ಆಗ ಕೇಳುಗರು ಸುಲಭವಾಗಿ ಆಸ್ವಾದಿಸಲು ಸಾಧ್ಯವಾಗುತ್ತದೆ. ಫ್ಯೂಷನ್ ಕಛೇರಿಗಳಲ್ಲೂ ಈ ವಾದ್ಯ ನುಡಿಸಬಹುದು.

*ವಿಶ್ವದಲ್ಲೇ ಅಂಕ್ಲಂಗ್‌ನಲ್ಲಿ ಕರ್ನಾಟಕ ಸಂಗೀತ ನುಡಿಸುವ ಏಕೈಕ ವಾದಕಿಯಾಗಿ ರೂಪುಗೊಂಡಿದ್ದೀರಿ. ಇದರಲ್ಲಿ ಶಿಷ್ಯರನ್ನು ತಯಾರು ಮಾಡಿದ್ದೀರಾ?

ಅಂಕ್ಲಂಗ್ ಕಲಿಯಬೇಕಾದರೆ ಸ್ವಲ್ಪವಾದರೂ ಶಾಸ್ತ್ರೀಯ ಸಂಗೀತದ ಜ್ಞಾನ ಇರಬೇಕು. ವಾದ್ಯ ಕಲಿಯಬೇಕು ಎಂಬ ತೀವ್ರ ತುಡಿತ, ಆಸಕ್ತಿ ಇದ್ದರೆ ಸಂಗೀತವನ್ನು ವಾದ್ಯದ ಜತೆ ಜತೆಗೇ ಕಲಿಯಬಹುದು. ನನ್ನ ಬಳಿ ಏಳು ವರ್ಷದ ಮಗು ಅಂಕ್ರಂಗ್ ಕಲಿಯುತ್ತಿದ್ದು, ತಾಳವನ್ನೂ ಹಾಕಿಕೊಂಡು ಚೆನ್ನಾಗಿ ನುಡಿಸುತ್ತಾಳೆ. ಈಗಾಗಲೇ ಕೆಲವು ಶಿಷ್ಯರನ್ನು ಕಛೇರಿ ಕೊಡುವಷ್ಟರ ಮಟ್ಟಿಗೆ ತಯಾರು ಮಾಡಿದ್ದೇನೆ. ಇಬ್ಬರು ಶಿಷ್ಯರು ನನ್ನ ಜತೆಗೆ ಕಛೇರಿಗಳಲ್ಲಿ ಸಹಕಾರ ಕೊಡುತ್ತಾರೆ.

 

ಗಾನಕಲಾಶ್ರೀ ಮುಕುಂದ್

ಎಲ್‌.ವಿ. ಮುಕುಂದ್ ಕೊಳಲು ವಾದನದಲ್ಲಿ ಸಾಕಷ್ಟು ಹೆಸರು ಮಾಡಿರುವ ಪ್ರತಿಭಾವಂತ ಕಲಾವಿದರು. ಗಾನಕಲಾ ಯುವ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಅವರಿಗೆ ‘ಗಾನಕಲಾಶ್ರೀ’ ಪುರಸ್ಕಾರ. ಕರ್ನಾಟಕ ಸಂಗೀತದಲ್ಲಿ ಪರಂಪರೆ ಸಂಗೀತಗಾರರಾಗಿರುವ ಇವರ ಮನೆತನ ಸಂಗೀತದ್ದೇ. ಬೆಳಕವಾಡಿ ಸಂಗೀತ ಕುಟುಂಬಕ್ಕೆ ಸೇರಿದ ಮುಕುಂದ್, ವಿದ್ವಾನ್ ಪ್ರಪಂಚಂ ಬಾಲಚಂದ್ರನ್ ಅವರ ಬಳಿ ಆರಂಭಿಕ ಶಿಕ್ಷಣ ಪಡೆದರು. ಬಳಿಕ ಖ್ಯಾತ ಕಲಾವಿದರಾದ ಡಾ. ಎನ್. ರಮಣಿ ಅವರ ಬಳಿ ಹೆಚ್ಚಿನ ಅಭ್ಯಾಸ ಮಾಡಿದವರು.ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಎರಡು ವರ್ಷ ಬೆಂಗಳೂರಿನಲ್ಲಿ, ಆರು ವರ್ಷ ಅಮೆರಿಕದಲ್ಲಿ ದುಡಿದ ಮುಕುಂದ್ ವೃತ್ತಿಗೆ ಗುಡ್‌ಬೈ ಹೇಳಿ ಕೊಳಲು ವಾದನವನ್ನೇ ನೆಚ್ಚಿಕೊಂಡವರು. ಅವರ ಸಂಗೀತ ಸಾಧನೆಗೆ ಸಂದಿರುವ ಇತರ ಗೌರವಗಳು– ‘ಸ್ವರ ಭಾರ್ಗವ’ ಹಾಗೂ ‘ಅನನ್ಯ ಯುವ ಪುರಸ್ಕಾರ’.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry