ಬಿದಿರ ನಂಬಿದವರ `ಹಾವು-ಏಣಿ' ಬದುಕು

ಭಾನುವಾರ, ಜೂಲೈ 21, 2019
22 °C

ಬಿದಿರ ನಂಬಿದವರ `ಹಾವು-ಏಣಿ' ಬದುಕು

Published:
Updated:

`ನಾನ್ಯಾರಿಗಲ್ಲದವಳು...  ಬಿದಿರು... ನಾನ್ಯಾರಿಗಲ್ಲದವಳು/ಹುಟ್ಟುತ್ತ ಹುಲ್ಲಾದೆ, ಬೆಳೆಯುತ್ತಾ ಮರವಾದೆ...' ಎಂಬ ಹಾಡು ಕೇಳಲು ಯಾರಿಗೆ ತಾನೇ ಹಿತವೆನಿಸದು. ಹೌದು. ಹುಟ್ಟುತ್ತ ಹುಲ್ಲಾಗುವ ಬಿದಿರು ಬೆಳೆಯುತ್ತ ಮರವಾಗುತ್ತದೆ. ಅಷ್ಟೇ ಅಲ್ಲ, ಬಿದಿರ ಬದುಕು ಸಾರ್ಥಕತೆಗೆ ಉದಾಹರಣೆಯಾಗುತ್ತದೆ. ಆಗಷ್ಟೇ ಹುಟ್ಟಿದ ಮಗುವನ್ನು ತೂಗುವ ತೊಟ್ಟಿಲಾಗುತ್ತದೆ. ಅಮ್ಮಂದಿರ ಕೈಯಲ್ಲಿ ಕೇರುವ ಮೊರವಾಗುತ್ತದೆ. ಕೂರುವ ಕುರ್ಚಿಯಾಗುತ್ತದೆ. ಮಲಗುವ ಮಂಚವಾಗುತ್ತದೆ. ಮನೆಗೆ ಚಂದದ ಛಾವಣಿಯಾಗುತ್ತದೆ.ಏಣಿಯಾಗುತ್ತದೆ. ಅಟ್ಟವಾಗುತ್ತದೆ. ಹೂ, ತರಕಾರಿ ಬುಟ್ಟಿಯಾಗುತ್ತದೆ. ಮುದುಕರಿಗೆ ಊರುಗೋಲಾಗುತ್ತದೆ. ಕೊನೆಗೆ ಮಸಣದ ಯಾತ್ರೆಗೆ ಚಟ್ಟವಾಗುತ್ತದೆ. ಹೀಗೆ ಬಿದಿರು ನಮ್ಮ ಬದುಕಿನ ಪ್ರತಿ ಹಂತದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.ನಾಗರಿಕತೆ ಎಷ್ಟೇ ಬೆಳೆದರೂ, ಪ್ಲಾಸ್ಟಿಕ್ ನಮ್ಮ ಬದುಕನ್ನು ಆವರಿಸಿದರೂ, ಕೆಲವು ಪಾರಂಪರಿಕ ವಸ್ತುಗಳು ತಮ್ಮ ಅನನ್ಯತೆಯನ್ನು ಉಳಿಸಿಕೊಂಡಿವೆ. ಈ ಮಹಾನಗರದಲ್ಲಿ ಇವತ್ತಿಗೂ ಕುಂಬಾರಿಕೆ, ಚಮ್ಮಾರಿಕೆ, ಬುಟ್ಟಿ ಹೆಣಿಗೆ ಮುಂತಾದ ಕುಲಕಸುಬುಗಳು ಉಳಿದುಕೊಂಡಿವೆ. ನಗರದ ಅನೇಕ ರಸ್ತೆಗಳಲ್ಲಿ ಬಿದಿರಿನ ವಸ್ತುಗಳನ್ನು ತಯಾರಿಸಿ ಬದುಕು ಸಾಗಿಸುತ್ತಿರುವವರು ಅಲ್ಲಲ್ಲಿ ಕಾಣಸಿಗುತ್ತಾರೆ. ಹೀಗೆ ಬಿದಿರಿನಿಂದ ಏಣಿ, ಮೊರ, ಪರದೆ, ಬುಟ್ಟಿ, ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸಿ ಮಾರುವ ಕುಟುಂಬವೊಂದು ಮಾಗಡಿ ರಸ್ತೆಯಲ್ಲಿದೆ. ಸುಮಾರು ಹತ್ತು ವರ್ಷಗಳಿಂದ ಟೋಲ್‌ಗೇಟ್‌ನ ರಸ್ತೆ ಬದಿ ಬಿದಿರಿನ ವಸ್ತುಗಳನ್ನು ಮಾಡಿ ಮಾರುತ್ತಾ ಬೀಡುಬಿಟ್ಟಿದೆ.ನಂಜನಗೂಡಿನ ರಾಜಯ್ಯನವರು ಹತ್ತು ವರ್ಷಗಳಿಂದ ನಗರದ ಬೇರೆ ಬೇರೆ ಕಡೆ ಏಣಿ ಮಾರಾಟ ಮಾಡುತ್ತಾ ಬಂದವರು. ಮೊದಲು ಕೆ.ಆರ್. ಪುರಂನಲ್ಲಿ ಏಣಿ ವ್ಯಾಪಾರ ಆರಂಭಿಸಿದ್ದರು. ಅಲ್ಲಿ ರಸ್ತೆ ಅಗಲೀಕರಣ ಕಾರ್ಯ ಶುರುವಾದಾಗ ಮಾಗಡಿ ರಸ್ತೆಗೆ ಸ್ಥಳಾಂತರಗೊಂಡರು. ರಾಜಯ್ಯನವರ ಮಗ, ಪತ್ನಿ ಕೂಡ ಬಿದಿರಿನ ಉತ್ಪನ್ನಗಳ ತಯಾರಿಸುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ದೊಡ್ಡಮಗ ರಾಚಯ್ಯ ಮಾರುಕಟ್ಟೆಯಿಂದ ಬಿದಿರು ಖರೀದಿಸಿ ತರುತ್ತಾರೆ. ಇವರು ಒಂಟಿ ಸ್ಕ್ರೀನ್ ತಯಾರಿಸುವುದರಲ್ಲಿ ನಿಷ್ಣಾತರು. ಇದಕ್ಕಾಗಿ ಇವರ ಜೊತೆ ಇನ್ನಿಬ್ಬರು ಸಹಾಯಕರಿದ್ದಾರೆ. ಹೆಚ್ಚು ಕೆಲಸವಿದ್ದಾಗ ಊರಿನಿಂದ ಕೆಲಸಗಾರರನ್ನು ಕರೆತಂದು ಅವರಿಗೆ ಸಂಬಳ, ಊಟ ತಿಂಡಿ ಎಲ್ಲವನ್ನೂ ಪೂರೈಸಿ ಕೆಲಸ ಮಾಡಿಸುತ್ತಾರೆ. ಬಿದಿರು ಕತ್ತರಿಸುವುದು ಹೀಗೆ

ಬಿದಿರು ಮೆಳೆಗಳಿಂದ ಒಂದೊಂದೇ ಬಿದಿರು ಆಯ್ದು ಕತ್ತರಿಸುವುದು ಸುಲಭದ ಕೆಲಸವಲ್ಲ. ಬಿದಿರಿನ ತುಂಬಾ ಮುಳ್ಳುಗಳಿರುತ್ತವೆ. ಅವುಗಳಲ್ಲಿ ಹೆಚ್ಚು ನಂಜು ಇರುತ್ತದೆ. ಅಲ್ಲದೆ ಬಿದಿರು ಮೆಳೆಗಳಲ್ಲಿ ಹಾವು, ವಿಷಜಂತುಗಳೆಲ್ಲ ಆಶ್ರಯ ಪಡೆದಿರುತ್ತವೆ. ಹಾಗಾಗಿ ಬಿದಿರು ಕತ್ತರಿಸುವ ಮೊದಲು ಮೆಳೆಗಳಿಗೆ ಬೆಂಕಿ ಹಾಕಿ ಸುಡುವುದು ರೂಢಿಯಲ್ಲಿದೆ. ಹೀಗೆ ಸುಡುವಾಗ ಬೆಂಕಿ ಹೆಚ್ಚಾದರೆ ಬಿದಿರು ಒಡೆಯುವ ಸಾಧ್ಯತೆ ಇದೆ. ಆದರೆ, ಇದು ತಕ್ಷಣಕ್ಕೆ ಗೊತ್ತಾಗುವುದಿಲ್ಲ. ಬಿದಿರನ್ನು ಮಾರುಕಟ್ಟೆಯಿಂದ ಖರೀದಿಸುವವರೆಗೂ ಗಮನಕ್ಕೆ ಬರುವುದಿಲ್ಲ. ಏಣಿ ತಯಾರಿಸುವಾಗ ಅಲ್ಲಲ್ಲಿ ರಂಧ್ರಗಳನ್ನು ಮಾಡುವಾಗ ಹೆಚ್ಚು ಬೆಂಕಿ ತಾಕಿದ್ದ ಬಿದಿರು ಬೇಗನೇ ಒಡೆಯುತ್ತದೆ. ಹೀಗಾದಲ್ಲಿ ಅಪಾರ ನಷ್ಟವಾಗುವುತ್ತದೆ. ಇದನ್ನೆಲ್ಲ ಏಣಿ ಮಾರಾಟದಿಂದ ಸರಿಹೊಂದಿಸುತ್ತಾರೆ. ಚೆನ್ನಾಗಿ ಬೆಳೆದ ಬಿದಿರು ಬಿಸಿಲು, ಮಳೆಗೆ ಹಾಳಾಗುವುದಿಲ್ಲ.ಬಿದಿರಿನ ಮನೆಗಳ ಕಾಲ

ಇತ್ತೀಚೆಗೆ ನಗರದ ಆರ್ಕಿಟೆಕ್ಟ್ ಕಂಪೆನಿಯೊಂದು ಕಡಿಮೆ ವೆಚ್ಚದ ಪರಿಸರಸ್ನೇಹಿ ಮನೆಗಳನ್ನು ನಿರ್ಮಾಣ ಮಾಡುವ ತಂತ್ರಜ್ಞಾನ ಪರಿಚಯಿಸಿತ್ತು. ಅಲ್ಲಿ ಗೋಡೆ ಮತ್ತು ಅಂತಸ್ತು ನಿರ್ಮಾಣಕ್ಕೆ ಅವರು ಬಿದಿರಿನ ಒಳಗೆ ಕಾಂಕ್ರೀಟು ತುಂಬಿ ಬಳಸಿದ್ದರು. ಬಿದಿರು ಎಷ್ಟು ಗಟ್ಟಿ ಎಂದರೆ ಸರಿಯಾದ ರೀತಿಯಲ್ಲಿ ಅದನ್ನು ಬಳಸಿದರೆ ಎಷ್ಟೇ ವರ್ಷವಾದರೂ ಶಿಥಿಲವಾಗುವುದಿಲ್ಲ. ಕಾಂಕ್ರೀಟ್‌ಗಿಂತ ಹೆಚ್ಚು ಬಾಳಿಕೆ ಬರುತ್ತದೆ. ಹುಳು ಕಾಟವಿರುವುದಿಲ್ಲ. ಅದಕ್ಕಾಗಿ ಚೆನ್ನಾಗಿ ಬೆಳೆದಿರುವ ಬಿದಿರು ಮತ್ತು ಅದನ್ನು ಬಳಕೆ ಮಾಡಲು ಕೆಲವು ಕ್ರಮಗಳನ್ನು ಅನುಸರಿಸಬೇಕು. ಬಿದಿರಿನ ಮನೆಗಳನ್ನು ಕಟ್ಟುವ ತಂತ್ರಜ್ಞಾನ ವಿದೇಶದಲ್ಲಿ ಹೆಚ್ಚು ಚಾಲ್ತಿಯಲ್ಲಿದೆ.ಬಿದಿರೇ ಉಸಿರು

ಬುಟ್ಟಿ ಹೆಣೆಯುವುದು ನಮ್ಮ ಕುಲಕಸುಬು. ಇದನ್ನೇ ನಂಬಿ ನಗರಕ್ಕೆ ಬಂದಿದ್ದೇವೆ. ಆದರೆ ಇಲ್ಲಿ ಹಳ್ಳಿಗಳಿಗಿಂತ ಚೆನ್ನಾಗಿ ವ್ಯಾಪಾರವಾಗುತ್ತದೆ. ಏಣಿಗಳನ್ನು ತಯಾರಿಸುವ ಬಿದಿರು ಹಿಂದೆ ಶಿವಮೊಗ್ಗ, ಪಿರಿಯಾಪಟ್ಟಣ, ಭದ್ರಾವತಿಗಳಿಂದ ಬರುತ್ತಿತ್ತು. ಅದರಲ್ಲೂ ಕೊಡಗಿನ ಬಿದಿರು ಉತ್ತಮ ಗುಣಮಟ್ಟದ್ದು. ಆದರೆ ಕಳೆದ ವರ್ಷ ಕೊಡಗಿನ ಬಿದಿರು ನಾಶವಾಗಿರುವ ಕಾರಣ ಈಗ ಬೆಳಗಾಂನಿಂದ ಬಿದಿರು ಪೂರೈಕೆಯಾಗುತ್ತಿದೆ. ಹಾಗಾಗಿ ದುಬಾರಿಯಾಗಿದೆ. ಈಗ ಆಷಾಢ. ಮದುವೆ ಸಂಭ್ರಮಗಳಿಲ್ಲದಿರುವುದರಿಂದ ಬುಟ್ಟಿ ಮೊರಗಳಿಗೆ ಬೇಡಿಕೆ ಕಡಿಮೆಯಾಗಿದೆ. ಆದರೆ ಮುಂದಿನ ತಿಂಗಳು ಹಬ್ಬ ಬರುವ ಕಾರಣ ಈಗಲೇ ಮೊರಗಳನ್ನು ಸಿದ್ಧಪಡಿಸಿಡುತ್ತಿದ್ದೇವೆ  .

ಒಂದು ಬಿದಿರಿನ ಬೆಲೆ ಸಾಗಾಣಿಕೆ ಖರ್ಚು ಸೇರಿರೂ150 ಆಗುತ್ತದೆ. ಏಣಿ ತಯಾರಿಸುವಾಗ ಕೆಲವು ಬಿದಿರುಗಳು ಒಡೆದು ನಷ್ಟವಾಗುತ್ತದೆ. ಎಂಟು ಅಡಿಗಳಿಂದ ಇಪ್ಪತ್ತೆರಡು ಅಡಿಗಳವರೆಗಿನ ಏಣಿ ತಯಾರಿಸುತ್ತೇವೆ. ಏಣಿಗೆ ಹೆಚ್ಚು ಬೇಡಿಕೆ ಇದೆ. ಅದನ್ನು ತಯಾರಿಸುವುದು ಸವಾಲಿನ ಕೆಲಸ. ಏಕೆಂದರೆ ಏಣಿಗೆ ಬಿದಿರು ಕತ್ತರಿಸುವಾಗ ಸೀಳುಬಿಡುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ಮೂರ‌್ನಾಲ್ಕು ಪಟ್ಟು ಹೆಚ್ಚು ಬೆಲೆ ನಿಗದಿ ಮಾಡುವುದು ಅನಿವಾರ್ಯ. ಒಂದು ಏಣಿಗೆರೂ3000 ದವರೆಗೂ ಬೆಲೆ ಇದೆ. ಕೆಲ ದಿನಗಳಲ್ಲಿ ದಿನಕ್ಕೆ ಎರಡು, ಮೂರು ಏಣಿ ವ್ಯಾಪಾರವಾಗುತ್ತವೆ. ಕೆಲವೊಮ್ಮೆ ಆಗದೆಯೂ ಇರಬಹುದು. ಇದನ್ನು ಸರಿದೂಗಿಸಲು ಮಂಕರಿ, ಬುಟ್ಟಿ, ಮೊರ, ಸ್ಕ್ರೀನ್, ಡೈಮಂಡ್ ಕ್ಲೋಸಿಂಗ್ ತಟ್ಟಿ ತಯಾರಿಸಿ ಮಾರುತ್ತೇವೆ'.ಬಿದಿರಿನ ಕರ್ಟನ್‌ಗಳನ್ನು ಹೋಟೆಲ್ ಮತ್ತು ಕೆಲವು ಕಚೇರಿಗಳಲ್ಲಿ ಬಳಸುತ್ತಾರೆ. ಆದರೆ ಆರ್ಡರ್ ಬಂದಮೇಲೆ ಕರ್ಟನ್ ತಯಾರಿಸುತ್ತೇವೆ. ಬುಟ್ಟಿ, ಏಣಿಯ ತರಹ ಮೊದಲೇ ತಯಾರು ಮಾಡಿ ವ್ಯಾಪಾರ ಮಾಡಲಾಗದು. ಯಾಕೆಂದರೆ ಆಯಾ ಜಾಗ ಮತ್ತು ವಿನ್ಯಾಸಕ್ಕೆ ಸರಿಯಾಗಿ ಕರ್ಟನ್ ತಯಾರಿಸಬೇಕಾಗುತ್ತದೆ. ನಾನೂರು ಅಡಿಗಳಿಂದ ಸಾವಿರ ಅಡಿಗಳವರೆಗೂ ಆರ್ಡರ್ ಬರುತ್ತದೆ. ಒಂದು ಅಡಿಗೆರೂ25ರಿಂದ 50 ಬೆಲೆ ನಿಗದಿ ಮಾಡಿದ್ದೇವೆ. ಇದಲ್ಲದೆ ಕೆಲ ಅಂಗಡಿಯವರು ಮೊರಗಳನ್ನು ಹೋಲ್‌ಸೇಲ್ ದರದಲ್ಲಿ ಖರೀದಿಸುತ್ತಾರೆ. ಹಬ್ಬದ ಸಂದರ್ಭದಲ್ಲಿ ಜೋಡಿ ಮೊರಕ್ಕೆರೂ70ರಿಂದ 90 ಇರುತ್ತದೆ. ಉಳಿದ ದಿನಗಳಲ್ಲಿರೂ60ರಂತೆ ಮಾರಾಟ ಮಾಡುತ್ತೇವೆ.

-ರಾಜಯ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry