ಬಿಪಿ.ಇಡಿ ಪ್ರವೇಶಕ್ಕೆ `ಸಮಾನ ಶುಲ್ಕ'ದ ಆತಂಕ

ಮಂಗಳವಾರ, ಜೂಲೈ 23, 2019
25 °C

ಬಿಪಿ.ಇಡಿ ಪ್ರವೇಶಕ್ಕೆ `ಸಮಾನ ಶುಲ್ಕ'ದ ಆತಂಕ

Published:
Updated:

ಹುಬ್ಬಳ್ಳಿ: ಕರ್ನಾಟಕ ವಿಶ್ವವಿದ್ಯಾಲಯ ಹೊಸದಾಗಿ ಆರಂಭಿಸಿದ ಬಿಪಿ.ಇಡಿ (ದೈಹಿಕ ಶಿಕ್ಷಣ ಶಿಕ್ಷಕ) ಕೋರ್ಸ್ ಪ್ರವೇಶ ಪ್ರಕ್ರಿಯೆಗೆ ದೈಹಿಕ ಸಾಮರ್ಥ್ಯ ಪರೀಕ್ಷೆಯ ಮೂಲಕ ಗುರುವಾರ ಚಾಲನೆ ಸಿಕ್ಕಿದೆ. ಪ್ರವೇಶ ಪಡೆಯುವ ಕನಸಿನೊಂದಿಗೆ ಅಭ್ಯರ್ಥಿಗಳು ಅತ್ಯುತ್ಸಾಹದಿಂದ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರೂ ಎಲ್ಲರಿಂದ ಸಮಾನವಾಗಿ `ಶುಲ್ಕ' ಪಡೆಯುವ ನಿರ್ಧಾರ ಕೆಲವರಲ್ಲಿ ಆತಂಕ ಸೃಷ್ಟಿಸಿದೆ.ವಿವಿಯ ರಾಣಿ ಚನ್ನಮ್ಮ  ಕ್ರೀಡಾಂಗಣದಲ್ಲಿ ಗುರುವಾರ ರಾಷ್ಟ್ರೀಯ ದೈಹಿಕ ಸಾಮರ್ಥ್ಯ ಪರೀಕ್ಷೆ (ಎನ್‌ಪಿಎಫ್‌ಟಿ) ನಡೆದಿತ್ತು. ನೂರು ಮೀಟರ್ಸ್‌ ಓಟ, ಲಾಂಗ್‌ಜಂಪ್, ಹೈಜಂಪ್, ಶಾಟ್‌ಪಟ್, ಕಬಡ್ಡಿ, ವಾಲಿಬಾಲ್, ಪುರುಷರಿಗೆ 800 ಮೀಟರ್ಸ್‌ ಓಟ, ಮಹಿಳೆಯರಿಗೆ 200 ಮೀಟರ್ಸ್‌ ಓಟದ ಪರೀಕ್ಷೆ ನಡೆಯಿತು.ವಿವಿಯಲ್ಲಿ ಬಿಪಿ.ಇಡಿ ಕೋರ್ಸ್ ಆರಂಭಿಸಲು ಜುಲೈ ಮೂರರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ಪಡೆಯಲಾಗಿತ್ತು; ಅಭ್ಯರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿತ್ತು. ಆದರೆ ಕೋರ್ಸ್‌ಗೆ ಪರೋಕ್ಷವಾಗಿ ಶುಲ್ಕ ಪಡೆಯುವ ಸಿಂಡಿಕೇಟ್ ನಿರ್ಧಾರ ಅವರ ಉತ್ಸಾಹಕ್ಕೆ ತಣ್ಣೀರೆರಚಿತ್ತು.ಹೊಸ ಕೋರ್ಸ್ ಆರಂಭಿಸುವುದರಿಂದ ವಿವಿಗೆ ಆರ್ಥಿಕ ಹೊರೆ ಆಗಬಾರದು ಎಂಬ ಕಾರಣಕ್ಕೆ ಸಿಂಡಿಕೇಟ್ `ಸ್ವ ಆರ್ಥಿಕ ಸಹಾಯ' ಎಂಬ ಯೋಜನೆಯಡಿ ಕೋರ್ಸ್‌ಗೆ ತಗಲುವ ವೆಚ್ಚವನ್ನು ವಿದ್ಯಾರ್ಥಿಗಳಿಂದಲೇ ಭರಿಸಲು ನಿರ್ಧರಿಸಿತ್ತು. ಪ್ರತಿ ಅಭ್ಯರ್ಥಿಗೆ ರೂ 25 ಸಾವಿರ ನಿಗದಿ ಮಾಡಿತ್ತು. ಈ ಮೊತ್ತ ಹೊರೆಯಾಗುವ ಆತಂಕ ಅಭ್ಯರ್ಥಿಗಳನ್ನು ಕಾಡುತ್ತಿದೆ. ಕೆಲ ಅಭ್ಯರ್ಥಿಗಳು ಈ ಕುರಿತು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.`ವಿವಿ ಹೊಸ ಕೋರ್ಸ್ ಆರಂಭಿಸಿದ್ದು ಸಂತೋಷದ ವಿಷಯ. ಆದರೆ ವೆಚ್ಚದ ಬಗ್ಗೆ ನಮಗೆ ಆತಂಕ ಕಾಡುತ್ತಿದೆ. ರೂ 25 ಸಾವಿರ `ಶುಲ್ಕ' ನಿಗದಿ ಮಾಡಿದ್ದರೂ ಟ್ರ್ಯಾಕ್ ಸೂಟ್‌ಗೆ ತಗಲುವ ವೆಚ್ಚ ಸೇರಿ ಒಟ್ಟು ರೂ 30,500 ಆಗುತ್ತದೆ. ಬಡವರು ಇದನ್ನು ಭರಿಸಿ ಕೋರ್ಸ್ ಮಾಡುವುದು ಕಷ್ಟಸಾಧ್ಯ' ಎಂದು ಲಕ್ಷ್ಮೇಶ್ವರದ ರಾಮಗಿರಿಯಿಂದ ಬಂದಿದ್ದ ಚನ್ನಬಸಪ್ಪ `ಪ್ರಜಾವಾಣಿ'ಗೆ ತಿಳಿಸಿದರು.`ಎಲ್ಲರಿಂದಲೂ ಸಮಾನ ಶುಲ್ಕ ಪಡೆಯುವ ನಿರ್ಧಾರವನ್ನು ಮರುಪರಿಶೀಲಿಸಬೇಕು. ಬಡವರು, ಉತ್ತಮ ಸಾಮರ್ಥ್ಯ ತೋರಿದವರಿಗೆ ರಿಯಾಯಿತಿ ನೀಡಲು ಮುಂದಾಗಬೇಕು' ಎಂದು ಹಮಾಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಅವರು ಹೇಳಿದರು.`ಖಾಸಗಿ ಕಾಲೇಜುಗಳಲ್ಲಿ ಕೋರ್ಸ್ ಮಾಡಬೇಕಾದರೆ ಭಾರಿ ವೆಚ್ಚ ತಗಲುತ್ತದೆ. ವಿವಿಯಲ್ಲಿ ಕೋರ್ಸ್ ಆರಂಭಗೊಂಡಾಗ ಸಂತಸವಾಯಿತು. ಸಂಬಂಧಪಟ್ಟವರು ಶುಲ್ಕ ವಿನಾಯಿತಿಗೆ ಮುಂದಾಗುತ್ತಾರೆ ಎಂಬ ಭರವಸೆ ಇದೆ' ಎಂದು ವಿಜಾಪುರ ಜಿಲ್ಲೆಯ ತಾಳಿಕೋಟೆಯಿಂದ ಬಂದಿದ್ದ ಸಿದ್ದು ವಾಲೀಕಾರ ಹೇಳಿದರು.ಆದರೆ ಕೋರ್ಸ್‌ಗೆ ಸಂಬಂಧಪಟ್ಟ ಅಧಿಕಾರಿಗಳ ಪ್ರಕಾರ ಇದು ದೊಡ್ಡ ಮೊತ್ತವಲ್ಲ. ಮಾತ್ರವಲ್ಲದೆ ಎಸ್‌ಸಿ-ಎಸ್‌ಟಿ ಅಭ್ಯರ್ಥಿಗಳು ನೀಡಿದ ಶುಲ್ಕದ ಮೊತ್ತವನ್ನು ಸರ್ಕಾರ ಮರುಪಾವತಿ ಮಾಡಲಿರುವ ಕಾರಣ ಅನುಕೂಲವಾಗಲಿದೆ ಎಂಬುದು ಅವರ ವಾದ.`ಶುಲ್ಕ ಕಡಿಮೆ ಮಾಡುವಂತೆ ಕೋರಿ ಯಾರೂ ಮನವಿ ಸಲ್ಲಿಸಲಿಲ್ಲ. ಅಂಥ ಬೇಡಿಕೆ ಬಂದರೆ ಕೆಲವರಿಗೆ  ಶುಲ್ಕ ರಿಯಾಯಿತಿ ನೀಡುವಂತೆ ಸಿಂಡಿಕೇಟ್ ಅನ್ನು ಕೋರಲಾಗುವುದು' ಎಂದು ಕೋರ್ಸ್ ಸಂಯೋಜಕ ಡಾ.ಎಸ್.ಬಿ.ಮರಗಿ ತಿಳಿಸಿದರು.

ಪ್ರವೇಶ ದಿನಾಂಕ ಮುಂದೂಡಿಕೆ

ಬಿಪಿಇಡಿ ಕೋರ್ಸ್‌ಗೆ ಪ್ರವೇಶ ಪಡೆಯಲು ನಿಗದಿ ಮಾಡಿದ್ದ ಕೊನೆಯ ದಿನಾಂಕವನ್ನು ಆಗಸ್ಟ್ 14ರ ವರೆಗೆ ಮುಂದೂಡಲು ವಿವಿ ನಿರ್ಧರಿಸಿದೆ.

ಗುರುವಾರ ನಡೆದ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಿದ 63 ಮಂದಿ ಪೈಕಿ 56 ಮಂದಿ ಹಾಜರಾಗಿದ್ದರು. ಇವರ ಪೈಕಿ 11 ಮಂದಿ ಮಹಿಳೆಯರೂ ಇದ್ದರು.`ಆಗಸ್ಟ್ 2ರಂದು ಇನ್ನೊಂದು ಬಾರಿ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಿ ಇನ್ನಷ್ಟು ಅಭ್ಯರ್ಥಿಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಆಗಸ್ಟ್ 5ರಂದು ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು. ಆಯ್ಕೆಯಾದವರು ಪ್ರವೇಶ ಪಡೆಯಲು 14ರ ವರೆಗೆ ಅವಕಾಶವಿದೆ' ಎಂದು ಡಾ.ಎಸ್.ಬಿ.ಮರಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry