ಭಾನುವಾರ, ಆಗಸ್ಟ್ 9, 2020
21 °C
ಸರ್ಕಾರದಿಂದ ಶೇ 20ರಷ್ಟು ಕಡಿಮೆ ಧಾನ್ಯ ಬಿಡುಗಡೆ

ಬಿಪಿಎಲ್ ಕಾರ್ಡ್ ಇದೆ; ಪಡಿತರ ಇಲ್ಲ!

ಪ್ರಜಾವಾಣಿ ವಾರ್ತೆ / ಮನೋಜ್‌ಕುಮಾರ್ ಗುದ್ದಿ Updated:

ಅಕ್ಷರ ಗಾತ್ರ : | |

ಬಿಪಿಎಲ್ ಕಾರ್ಡ್ ಇದೆ; ಪಡಿತರ ಇಲ್ಲ!

ಧಾರವಾಡ: ಬಯೋ ಮೆಟ್ರಿಕ್ ಗುರುತು ನೀಡಿಲ್ಲ ಎಂಬ ನೆಪ ಒಡ್ಡಿ ಜಿಲ್ಲೆಯ 4,500 ಬಿಪಿಎಲ್ ಪಡಿತರ ಚೀಟಿದಾರರಿಗೆ 1 ರೂಪಾಯಿಗೆ ಒಂದು ಕೆ.ಜಿ.ಯಂತೆ ಅಕ್ಕಿ ನೀಡದೇ ಆಹಾರ ಇಲಾಖೆ ವಾಪಸ್ ಕಳುಹಿಸಿದೆ.`ಜಿಲ್ಲೆಯಲ್ಲಿ ಒಟ್ಟು 6,000 ಪಡಿತರ ಚೀಟಿದಾರರು ಬಯೊಮೆಟ್ರಿಕ್ ಗುರುತು ನೀಡಿಲ್ಲ. ಅದರಲ್ಲಿ 4,500 ಬಿಪಿಎಲ್, ಉಳಿದ 1,500 ಎಪಿಎಲ್ ಕಾರ್ಡುದಾರರು.  ಈ ತಿಂಗಳ 24ರ ಒಳಗಾಗಿ ಆಯಾ ತಾಲ್ಲೂಕುಗಳು ಮತ್ತು ನಗರದಲ್ಲಿರುವ ಇಲಾಖೆಯ ಕಚೇರಿಗೆ ತೆರಳಿ ಬಯೊಮೆಟ್ರಿಕ್ ಗುರುತು ನೀಡುವಂತೆ ಸೂಚಿಸಲಾಗಿದೆ' ಎಂದು ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ.ನಾನಣ್ಣವರ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.ಆದರೆ, ಎಲ್ಲ ಬಿಪಿಎಲ್ ಕಾರ್ಡುದಾರರಿಗೆ ವಿತರಿಸುವಷ್ಟು ಅಕ್ಕಿ ಈ ಬಾರಿ ಬಿಡುಗಡೆಯಾಗದ ಕಾರಣ ಬಯೊಮೆಟ್ರಿಕ್ ನೆಪ ಹೇಳಿ ಅಧಿಕಾರಿಗಳು ಅಕ್ಕಿ ನೀಡುತ್ತಿಲ್ಲ ಎಂದು ಬಿಪಿಎಲ್ ಕಾರ್ಡುದಾರರು ಆರೋಪಿಸಿದ್ದಾರೆ.ನಗರದ ರೈಲ್ವೆ ನಿಲ್ದಾಣದ ಬಳಿಯ ನ್ಯಾಯಬೆಲೆ ಅಂಗಡಿಯಲ್ಲಿ ಒಟ್ಟು 199 ಕಾರ್ಡ್‌ಗಳಿವೆ. ಈ ಪೈಕಿ ಬಯೊಮೆಟ್ರಿಕ್ ಗುರುತು ನೀಡಿಲ್ಲ ಎಂದು 56 ಜನರನ್ನು ವಾಪಸ್ ಕಳಿಸಲಾಗಿದೆ. ಮರಾಠಾ ಕಾಲೊನಿಯ ಮೋಹನ ರಾಮದುರ್ಗ ಅವರು ನಡೆಸುವ ನ್ಯಾಯಬೆಲೆ ಅಂಗಡಿಯ 221 ಕಾರ್ಡ್‌ಗಳಿದ್ದು, ಇದೇ ಕಾರಣ ನೀಡಿ  100ಕ್ಕೂ ಅಧಿಕ ಜನರಿಗೆ ಪಡಿತರ ನಿರಾಕರಿಸಲಾಗಿದೆ.

ನವಲೂರಿನ ನ್ಯಾಯಬೆಲೆ ಅಂಗಡಿಯಲ್ಲಿ 64, ಕಲಘಟಗಿ ರಸ್ತೆಯ ನ್ಯಾಯಬೆಲೆ ಅಂಗಡಿಯಲ್ಲಿ 63 ಕುಟುಂಬಗಳಿಗೆ ಈ ತಿಂಗಳು ಅಕ್ಕಿ ನೀಡಿಲ್ಲ ಎಂದು ಮೂಲಗಳು ಖಚಿತ ಪಡಿಸಿವೆ.`ಬಯೊಮೆಟ್ರಿಕ್ ಗುರುತನ್ನು ಪಡಿತರ ಕಾರ್ಡ್‌ದಾರರು ಮತ್ತೊಮ್ಮೆ ನೀಡಬೇಕಿದ್ದು, ಅದಾದ ಬಳಿಕವಷ್ಟೇ ರೇಷನ್ ನೀಡುವಂತೆ ಇಲಾಖೆಯ ಅಧಿಕಾರಿಗಳಿಂದ ನಿರ್ದೇಶನವಿದೆ. ಈಗಾಗಲೇ ಕಾರ್ಡುದಾರರಿಗೆ ದೂರವಾಣಿ ಕರೆ ಮಾಡಿ ಬಯೊಮೆಟ್ರಿಕ್ ಗುರುತು ನೀಡುವಂತೆ ಮನವಿ ಮಾಡಲಾಗಿದೆ. ಈ ತಿಂಗಳ 24ರೊಳಗೆ ನೀಡಿದರೆ ಮಾತ್ರ ಮುಂದಿನ ತಿಂಗಳ ಪಡಿತರ ದೊರೆಯಲಿದೆ. ಇಲ್ಲದಿದ್ದರೆ ಇಲ್ಲ' ಎಂದು ತಿಳಿಸಿರುವುದಾಗಿ ನಾನಣ್ಣವರ ಹೇಳಿದರು.ಈ ಮಧ್ಯೆ, ಬುಧವಾರ ರೈಲ್ವೆ ನಿಲ್ದಾಣದ ಬಳಿಯ ನ್ಯಾಯಬೆಲೆ ಅಂಗಡಿಗೆ ತೆರಳಿದ ಕೆಲ ಬಿಪಿಎಲ್ ಕಾರ್ಡ್‌ದಾರರು, ಪಡಿತರ ಕೊಡಲೇಬೇಕೆಂದು ಪಟ್ಟು ಹಿಡಿದರು. ಬಯೊಮೆಟ್ರಿಕ್ ಗುರುತು ನೀಡಬೇಕು ಎಂದಿದ್ದ ಅದೇ ಅಧಿಕಾರಿಗಳು, ಅವರಿಗೆ ಪಡಿತರ ನೀಡುವಂತೆ ನ್ಯಾಯಬೆಲೆ ಅಂಗಡಿಯವರಿಗೆ ಸೂಚನೆ ನೀಡಿದರು!`ಒಂದು ರೂಪಾಯಿಗೆ ಒಂದು ಕೆ.ಜಿ.ಯಂತೆ 30 ಕೆ.ಜಿ ಅಕ್ಕಿ ವಿತರಿಸುವ ಯೋಜನೆ ಜಾರಿಗೆ ಬಂದು ಕೆಲವೇ ದಿನಗಳಾಗಿದ್ದು, ಎಲ್ಲ ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಪೂರೈಸುವುದು  ಕಷ್ಟವಾಗಿದೆ. ಆದ್ದರಿಂದ ಬಯೊಮೆಟ್ರಿಕ್ ನೆಪದಲ್ಲಿ ಅವರನ್ನು ಈ ತಿಂಗಳ ಮಟ್ಟಿಗಾದರೂ ಯೋಜನೆಯಿಂದ ಹೊರಗಿಡಲಾಗುತ್ತಿದೆ. ಈ ಬಾರಿ ನಮ್ಮ ಅಂಗಡಿಗೆ ಒಟ್ಟು ಪಡಿತರ ಚೀಟಿದಾರರ ಪೈಕಿ ಶೇ 20ರಷ್ಟು ಕಡಿಮೆ ಪಡಿತರ ಬಿಡುಗಡೆಯಾಗಿದೆ' ಎಂಬ ಅಂಶವನ್ನು ನಗರದ ನ್ಯಾಯಬೆಲೆ ಅಂಗಡಿಯ ಮಾಲೀಕರೊಬ್ಬರು ಬಹಿರಂಗಪಡಿಸಿದರು.`ಪಡಿತರ ಕಾರ್ಡ್‌ದಾರರಿಗೆ ನ್ಯಾಯಬೆಲೆ ಅಂಗಡಿ ಹಾಗೂ ಆಹಾರ ಇಲಾಖೆ ಕಚೇರಿಗೆ ಅಲೆದಾಡುವುದೇ ಕೆಲಸವಾಗಿದೆ. ಸರ್ಕಾರದ ಅನ್ನಭಾಗ್ಯ ಯೋಜನೆಯ ಲಾಭ ಅವರಿಗೆ ದೊರೆಯುತ್ತಿಲ್ಲ. ಕಚೇರಿಗೆ ಅಲೆದಾಡಿಸುವ ಅಧಿಕಾರಿಗಳು ಅಂದಿನ ಕೂಲಿ ಬಿಟ್ಟು ಬಂದ ಜನರಿಗೆ ಕೂಲಿ ಕೊಡುತ್ತಾರೆಯೇ? ಈಗಾಗಲೇ ಬಯೊಮೆಟ್ರಿಕ್ ಕೊಟ್ಟಿದ್ದರೂ ಮತ್ತೆ ಪಡೆಯುತ್ತಿರುವುದು ಹಾಸ್ಯಾಸ್ಪದ ಸಂಗತಿ' ಎಂದು ಟೀಕಿಸುತ್ತಾರೆ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ಜಿಲ್ಲಾ ಸಂಚಾಲಕ ರಸೂಲ್ ನದಾಫ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.