ಬಿಪಿಎಲ್ ಪಡಿತರದಾರರಿಗೆ ನೇರ ನಗದು ಸಬ್ಸಿಡಿ

7

ಬಿಪಿಎಲ್ ಪಡಿತರದಾರರಿಗೆ ನೇರ ನಗದು ಸಬ್ಸಿಡಿ

Published:
Updated:

 ನವದೆಹಲಿ (ಪಿಟಿಐ): ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಸಂಸತ್ತಿನಲ್ಲಿ ಮಂಡಿಸಿದ 2011-12ರ ಸಾಲಿನ ಬಜೆಟ್ ನ ಪ್ರಮುಖ ಅಂಶಗಳಲ್ಲಿ ನೇರ ನಗದು ಸಬ್ಸಿಡಿಯು ಒಂದಾಗಿದ್ದು, ಸದ್ಯ ಹಲವು ಯೋಜನೆಗಳಿಗೆ ನೀಡಲಾಗುತ್ತಿರುವ ಸಬ್ಸಿಡಿ ದುರ್ಬಳಕೆಯಾಗುತ್ತಿರುವುದನ್ನು ಮನಗಂಡು ಬಿಪಿಎಲ್ ಬಳಕೆದಾರರಿಗೆ ಸೀಮೆಎಣ್ಣೆ ಹಾಗೂ ರಸಗೊಬ್ಬರಗಳ ಮೇಲೆ ನೇರ ನಗದು ಸಬ್ಸಿಡಿ ನೀಡಲು ಉದ್ದೇಶಿಸಲಾಗಿದೆ. ಇದು ಮುಂದಿನ ವರ್ಷದ ಮಾರ್ಚ್ ಹೊತ್ತಿಗೆ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದರು.

 ನಂದನ್ ನಿಲೇಕಣಿ ಅವರ ಅಧ್ಯಕ್ಷತೆಯಲ್ಲಿ ಸೀಮೆಎಣ್ಣೆ, ಅಡುಗೆ ಅನಿಲ ಹಾಗೂ ರಸಗೊಬ್ಬರಗಳ ಮೇಲಿನ ನೇರ ಸಬ್ಸಿಡಿ ವರ್ಗಾವಣೆ ಕುರಿತ ರೂಪುರೇಷೆಯನ್ನು ಸಿದ್ದಪಡಿಸುವ ಕಾರ್ಯಪಡೆಯು ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅದರ ಮಧ್ಯಂತರ ವರದಿ ಇದೇ ವರ್ಷ ಜೂನ್ ತಿಂಗಳಲ್ಲಿ ಬರುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ಪ್ರಸ್ತುತ ಬಿಪಿಎಲ್ ಕುಟುಂಬದವರಿಗೆ ಪಡಿತರದಲ್ಲಿ ಕಡಿಮೆ ಬೆಲೆಗೆ ಸೀಮೆಎಣ್ಣೆಯನ್ನು ವಿತರಿಸಲಾಗುತ್ತಿದೆ. ಹಾಗೂ ರಸಗೊಬ್ಬರ ಕಂಪೆನಿಗಳಿಗೆ ಸರ್ಕಾರವೇ ನೇರವಾಗಿ ಹಣ ನೀಡಿ ರೈತರಿಗೆ ಕಡಿಮೆ ಬೆಲೆಗೆ ರಸಗೊಬ್ಬರಗಳು ಸಿಗುವಂತೆ ಮಾಡುತ್ತಿದೆ.

ಸೋರಿಕೆ, ಕಲಬೆರಕೆ ಹಾಗೂ ಅದಕ್ಷತೆಗಳಿಂದಾಗಿ ಈ ಯೋಜನೆಗಳು ಅನುಪಯುಕ್ತವಾಗಿವೆ. ಇದನ್ನು ಸರಿಪಡಿಸಲೆಂದೆ  ಇನ್ಫೋಸಿಸ್ ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ ಅವರ ಅಧ್ಯಕ್ಷತೆಯಲ್ಲಿ ಹಣಕಾಸು, ರಾಸಾಯನಿಕ ಗೊಬ್ಬರ, ಕೃಷಿ, ಆಹಾರ, ಪೆಟ್ರೋಲಿಯಂ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ಕಾರ್ಯದರ್ಶಿಗಳನ್ನೊಳಗೊಂಡ ಕಾರ್ಯಪಡೆಯನ್ನು ಸರ್ಕಾರ ರಚಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry