ಶುಕ್ರವಾರ, ಮೇ 7, 2021
26 °C
ಕಡುಬಡವರಿಗೆ ಆದಾಯ ಪ್ರಮಾಣ ಪತ್ರ ಕೇಳುವಂತಿಲ್ಲ: ದಿನೇಶ್ ಗುಂಡೂರಾವ್

`ಬಿಪಿಎಲ್' ಪಡಿತರ ಕಾರ್ಡ್ ನಿಯಮ ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಡು ಬಡವರಿಗೆ ಬಿಪಿಎಲ್ ಪಡಿತರ ಚೀಟಿ ನೀಡಲು ಆದಾಯ ಪ್ರಮಾಣಪತ್ರ ಕೇಳಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.  ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಜನ್ಮದಿನದ ಪ್ರಯುಕ್ತ ಕರ್ನಾಟಕ ರಾಜ್ಯ ರಾಹುಲ್ ಗಾಂಧಿ ಯುವ ಶಕ್ತಿ ಸೋಮವಾರ ನಗರದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದರು.ಈ ಹಿಂದೆ ಬಿಪಿಎಲ್ ಪಡಿತರ ಚೀಟಿ ಪಡೆಯಲು ವಿಧಿಸಿದ್ದ ನಿಬಂಧನೆಗಳನ್ನು ಈಗ ಸಡಿಲಗೊಳಿಸಲಾಗಿದೆ. ಸರ್ಕಾರಿ ನೌಕರರು, ತೆರಿಗೆ ಪಾವತಿದಾರರು ಹಾಗೂ ಕಾರು ಹೊಂದಿರುವವರನ್ನು ಹೊರತು ಪಡಿಸಿ, ಆರ್‌ಸಿಸಿ ಮನೆ, ಟಿವಿ ಹಾಗೂ ದ್ವಿಚಕ್ರ ವಾಹನವನ್ನು ಹೊಂದಿರುವ ಬಡ ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ ನೀಡುವಂತೆ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ ಎಂದು ಸ್ಪಷ್ಟಪಡಿಸಿದರು.  ರಾಜ್ಯದಲ್ಲಿ ಒಂದು ಕೋಟಿ ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ ನೀಡಲಾಗಿದ್ದು, 3.5 ಕೋಟಿ ಜನರು ಇದರ ವ್ಯಾಪ್ತಿಗೆ ಬರುತ್ತಾರೆ. ಇವರಲ್ಲಿ ಅರ್ಹರಿಗೆ ಬಿಪಿಎಲ್ ಪಡಿತರ ಚೀಟಿ ಲಭ್ಯವಾಗಿದೆಯೇ ಅಥವಾ ಇಲ್ಲವೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಜೊತೆಗೆ ಪಡಿತರ ಚೀಟಿ ವಿತರಣೆಯಲ್ಲಿ ಇರುವ ಕೆಲವು ಗೊಂದಲ ಹಾಗೂ ಸಮಸ್ಯೆಗಳನ್ನು ಲೋಕಸಭಾ ಚುನಾವಣೆಯ ವೇಳೆಗೆ ಸರಿಪಡಿಸಲಾಗುವುದು ಎಂದು ತಿಳಿಸಿದರು.ಎಪಿಎಲ್ ಕಾರ್ಡ್ ಹೊಂದಿರುವವರು ಬಿಪಿಎಲ್‌ಗೆ ಪರಿವರ್ತಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು. ಈಗಾಗಲೇ ಪಡಿತರ ಚೀಟಿಗಳನ್ನು ಎಪಿಎಲ್ ನಿಂದ ಬಿಪಿಎಲ್‌ಗೆ ಬದಲಾವಣೆ ಮಾಡಿಕೊಳ್ಳುವ ನಾಗರಿಕರ ಸಂಖ್ಯೆ ಹೆಚ್ಚಾಗಿದ್ದು, ನಗರ ಪ್ರದೇಶಗಳಲ್ಲಿ ಹೆಚ್ಚಿನ ಫ್ರ್ಯಾಂಚೈಸ್‌ಗಳಿಗೆ ಅನುಮತಿ ನೀಡಲಾಗಿದೆ. ಇದರಿಂದ ಸಾರ್ವಜನಿಕರು ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಬಹುದಾಗಿದೆ ಎಂದರು.ರಕ್ತದಾನ ಶಿಬಿರದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ವಿ. ವೆಂಕಟೇಶ್ ಅವರು ಸೇರಿದಂತೆ ಒಟ್ಟು 60 ಮಂದಿ ರಕ್ತದಾನ ಮಾಡಿದರು. ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಗಿರೀಶ್ ಅವರನ್ನು ಸನ್ಮಾನ ಮಾಡಲಾಯಿತು.ಗೃಹ ಸಚಿವ ಕೆ.ಜೆ. ಜಾರ್ಜ್, ಸಂಸದ ಧ್ರುವ ನಾರಾಯಣ್, ಕಾಂಗ್ರೆಸ್ ಮುಖಂಡರಾದ ಜಿ.ಎ. ಬಾವಾ, ಮಾಜಿ ಸಚಿವ ಆರ್. ಕೃಷ್ಣಪ್ಪ, ರಾಜ್ಯ ರಾಹುಲ್ ಗಾಂಧಿ ಯುವ ಶಕ್ತಿಯ ಅಧ್ಯಕ್ಷ ಎಚ್.ಆರ್. ವೀರಭದ್ರ ಹಾಜರಿದ್ದರು,.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.