ಬಿಪಿಒ ಉದ್ಯೋಗಿ ಸಾವು

7

ಬಿಪಿಒ ಉದ್ಯೋಗಿ ಸಾವು

Published:
Updated:

ಬೆಂಗಳೂರು: ಕಚೇರಿಯಿಂದ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದ ಬಿಪಿಒ ಕಂಪೆನಿ ಉದ್ಯೋಗಿಯೊಬ್ಬರಿಗೆ ಮಾರ್ಗ ಮಧ್ಯೆ ಹೃದಯಾಘಾತವಾಗಿ ಮತ್ತು ಮೂರ್ಛೆ ರೋಗದ ಲಕ್ಷಣ ಕಾಣಿಸಿಕೊಂಡು ಕುಸಿದು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಹೊಸೂರು ರಸ್ತೆ ಸಿಂಗಸಂದ್ರ ಸಮೀಪ ಗುರುವಾರ ಬೆಳಿಗ್ಗೆ ನಡೆದಿದೆ.ಎನ್.ಆರ್.ಕಾಲೊನಿ ನಿವಾಸಿ ಶರಣಬಸಪ್ಪ ಪಾಟೀಲ್ (30) ಮೃತಪಟ್ಟವರು. ಮೂಲತಃ ಗುಲ್ಬರ್ಗದವರಾದ ಅವರು, ಐದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಎಂಬಿಎ ಓದಿದ್ದ ಅವರು ಗೀತಾ ಎಂಬುವರನ್ನು ಪ್ರೀತಿಸಿ ಎರಡು ವರ್ಷದ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಐದು ತಿಂಗಳ ಮಗುವಿದೆ.ಎಲೆಕ್ಟ್ರಾನಿಕ್‌ಸಿಟಿಯಲ್ಲಿರುವ ಬಿಪಿಒಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಪಾಟೀಲ್ ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ಬೆಳಿಗ್ಗೆ ಮನೆಗೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಬೈಕ್‌ನಲ್ಲಿ ಹೋಗುತ್ತಿದ್ದ ಅವರಿಗೆ ಸಿಂಗಸಂದ್ರದ ಸಮೀಪ ಎದೆ ನೋವು ಕಾಣಿಸಿಕೊಂಡಿತು. ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಕುಸಿದು ಬಿದ್ದರು.ಇದೇ ವೇಳೆ ಅವರಿಗೆ ಮೂರ್ಛೆ ರೋಗದ ಲಕ್ಷಣ ಕಾಣಿಸಿಕೊಂಡು ಒದ್ದಾಡಲಾರಂಭಿಸಿದರು. ಇದನ್ನು ಗಮನಿಸಿದ ಸ್ಥಳೀಯರು ಅವರನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅವರ ಸ್ಥಿತಿ ಗಂಭೀರವಾಗಿದ್ದರಿಂದ ನಾರಾಯಣ ಹೃದಯಾಲಯಕ್ಕೆ ಕರೆದೊಯ್ಯುವಂತೆ ಖಾಸಗಿ ಆಸ್ಪತ್ರೆ ವೈದ್ಯರು  ಸೂಚಿಸಿದರು. ಅಂತೆಯೇ ಅವರನ್ನು ನಾರಾಯಣ ಹೃದಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಂಜೆ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಅವರ ಕುಟುಂಬದವರಿಗೆ ಒಪ್ಪಿಸಲಾಯಿತು. ಶವವನ್ನು ಗುಲ್ಬರ್ಗಕ್ಕೆ ಕೊಂಡೊಯ್ದರು ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಸಂಬಂಧ ಎಲೆಕ್ಟ್ರಾನಿಕ್‌ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪಾಟೀಲ್ ಮತ್ತು ನಾನು ಬಾಲ್ಯ ಸ್ನೇಹಿತರು. ಆರೋಗ್ಯವಾಗಿದ್ದ ಆತನಿಗೆ ಹಿಂದೆಂದೂ ಈ ರೀತಿ ಆಗಿರಲಿಲ್ಲ~ ಎಂದು ಮೃತರ ಸ್ನೇಹಿತ ವರದರಾಜು `ಪ್ರಜಾವಾಣಿ~ಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry