ಶುಕ್ರವಾರ, ನವೆಂಬರ್ 22, 2019
19 °C

ಬಿ.ಪಿ ಬೇಡ ಹಪಾಹಪಿ

Published:
Updated:

ವಿಶ್ವದಲ್ಲಿ ಒಂದು ಶತಕೋಟಿ ಜನರಿಗೆ ಅಧಿಕ ರಕ್ತದೊತ್ತಡ (ಬಿ.ಪಿ) ಇದೆ. ಭಾರತದಲ್ಲಿ ಬಿ.ಪಿ.ಯಿಂದ ಬಳಲುತ್ತಿರುವವರ ಸಂಖ್ಯೆ 120 ದಶಲಕ್ಷ. ಇದೇ ಪರಿಸ್ಥಿತಿ ಮುಂದುವರಿದರೆ 2025ರ ವೇಳೆಗೆ ದೇಶದ 250 ದಶಲಕ್ಷ ಮಂದಿಗೆ ಬಿ.ಪಿ ಬರಬಹುದು ಎಂದು ಊಹಿಸಲಾಗಿದೆ. ಇದು ಬಿ.ಪಿ ಪತ್ತೆಯಾಗಿರುವ ರೋಗಿಗಳ ಸಂಖ್ಯೆ. ವಾಸ್ತವದಲ್ಲಿ ಬಿ.ಪಿ ಇದ್ದರೂ ಅದು ಪತ್ತೆಯಾಗದೇ ಇರುವವರ ಸಂಖ್ಯೆ ದುಪ್ಪಟ್ಟಾದರೂ ಇರಬಹುದು.ಬಿ.ಪಿ ಯಾರಿಗೆ ಬೇಕಾದರೂ, ಯಾವ ವಯಸ್ಸಿನಲ್ಲಾದರೂ ಬರಬಹುದು. 55 ವರ್ಷಗಳಾಗಿದ್ದೂ ಬಿ.ಪಿ. ರಹಿತರಾಗಿ ಇರುವವರಿಗೆ, ಉಳಿದ ಜೀವಿತಾವಧಿಯಲ್ಲಿ ಅದು ಬರುವ ಸಾಧ್ಯತೆ ಶೇಕಡಾ 90ರಷ್ಟು ಎಂಬುದು ಅನೇಕ ಸಂಶೋಧನೆಗಳಿಂದ ಸ್ಪಷ್ಟವಾಗಿದೆ. ದೇಶದ ಶೇ 30ರಷ್ಟು ನಗರವಾಸಿಗಳಲ್ಲಿ ಮತ್ತು ಶೇ 15ರಷ್ಟು ಹಳ್ಳಿಗರಲ್ಲಿ ಬಿ.ಪಿ. ಇದೆ. ಇಡೀ ವಿಶ್ವವೇ ಬಿ.ಪಿ.ಯನ್ನು ಗಂಭೀರವಾಗಿ ಹಾಗೂ ತುರ್ತಾಗಿ ಪರಿಗಣಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.`ಬಿ.ಪಿ. ಒಂದು ಕಾಯಿಲೆಯಲ್ಲ. ಆದರೆ ಇದು ಅನೇಕ ಕಾಯಿಲೆಗಳನ್ನು ಹುಟ್ಟುಹಾಕಬಲ್ಲದು. ಅದು ಹೇಗೆಂದರೆ, ದೀರ್ಘಕಾಲದವರೆಗೆ ರಕ್ತದ ಒತ್ತಡ ಹೆಚ್ಚಾಗಿಯೇ ಮುಂದುವರಿದರೆ ದೇಹದ ಸೂಕ್ಷ್ಮ ರಕ್ತನಾಳಗಳು ತತ್ತರಿಸಿ ಹೋಗುತ್ತವೆ.ಇದರಿಂದ ಹೃದಯದ ತೊಂದರೆ, ಹೃದಯಾಘಾತ, ಮೂತ್ರಪಿಂಡ ವೈಫಲ್ಯ, ಅಕ್ಷಿಪಟಲ ಭಗ್ನಗೊಂಡು ಅಂಧತ್ವ, ಮೆದುಳಿನಲ್ಲಿ ರಕ್ತಸ್ರಾವವಾಗಿ ಲಕ್ವ ಮತ್ತಿತರ ತೊಂದರೆಗಳು ಉಂಟಾಗುವ ಅಪಾಯ ಇರುತ್ತದೆ. ನಮ್ಮಲ್ಲಿ  ಬಹಳಷ್ಟು ಜನರಿಗೆ ಉಂಟಾಗುತ್ತಿರುವ ಲಕ್ವ ಹಾಗೂ ಹೃದಯಾಘಾತದ ಪ್ರಕರಣಗಳಿಗೆ ಅವರಲ್ಲಿ ಇದ್ದೂ ಪತ್ತೆಯಾಗದ ಹಾಗೂ ಪತ್ತೆಯಾದರೂ ಸೂಕ್ತ ಚಿಕಿತ್ಸೆ ಪಡೆಯದ ಬಿ.ಪಿ ನೇರ ಹಾಗೂ ಮುಖ್ಯ ಕಾರಣ ಎಂದು ತಿಳಿದು ಬಂದಿದೆ.

ಬಿ.ಪಿ.ಯಿಂದ ಬಿಡುಗಡೆ ಹೊಂದಲು ಎರಡು ಮುಖ್ಯ ಮಾರ್ಗಗಳಿವೆ. ಅವೆಂದರೆ:

1. ಬಿ.ಪಿ ಇಲ್ಲದವರು ಬಾರದಂತೆ ಪ್ರತಿಬಂಧಕ ಕ್ರಮ ಅನುಸರಿಸುವುದು.2. ಬಿ.ಪಿ ಇದ್ದವರು ಸೂಕ್ತ ಚಿಕಿತ್ಸೆ ಪಡೆಯುತ್ತಾ ಅಪಾಯಗಳಿಂದ ಪಾರಾಗುವುದು.ಬಿ.ಪಿ ಇಲ್ಲದವರು: ಬಿ.ಪಿ ಬರುವುದಕ್ಕೆ ಮುಖ್ಯ ಕಾರಣ ಜೀವನ ಶೈಲಿ. ಹೀಗಾಗಿ ಜೀವನ ಶೈಲಿಯನ್ನು ಮಾರ್ಪಡಿಸಿಕೊಂಡರೆ ಬಿ.ಪಿ ಬರುವ ಸಂಭವ ಕಡಿಮೆಯಾಗುತ್ತದೆ.ಬಿ.ಪಿ.ಗೆ ಇಂತಹುದೇ ಎಂಬ ವಿಶಿಷ್ಟ ಲಕ್ಷಣಗಳಿಲ್ಲ. ಬಿ.ಪಿ ಇರುವ ಬಹಳಷ್ಟು ಜನರಲ್ಲಿ ಯಾವುದೇ ತೊಂದರೆ ಪ್ರಕಟವಾಗುವುದಿಲ್ಲ. ಹೀಗಾಗಿ ಬಹುತೇಕರು  ಬಿ.ಪಿ.ಯನ್ನು ಉಪೇಕ್ಷಿಸುತ್ತಾರೆ. ನಮ್ಮ ದೇಶದಲ್ಲಿ ಈ ತೊಂದರೆ ಇರುವ ಜನರ ಸಂಖ್ಯೆಗಿಂತ ಅದು ಇದ್ದೂ ಪತ್ತೆ ಆಗದವರ ಸಂಖ್ಯೆಯೇ ಹೆಚ್ಚು. ಆದ್ದರಿಂದ ನಾವೆಲ್ಲ ವರ್ಷಕ್ಕೆ ಒಮ್ಮೆಯಾದರೂ ಬಿ.ಪಿ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ಬಿ.ಪಿ ಬರುವ ಸಂಭವ ಇರುವವರಿಗಂತೂ ಸಕಾಲಿಕ ಪರೀಕ್ಷೆ ಅತಿ ಮುಖ್ಯ.ಬಿ.ಪಿ ಇರುವವರು: ಬಿ.ಪಿ ಇದ್ದವರಿಗೆ ನೀಡುವ ಚಿಕಿತ್ಸೆಯ ಮುಖ್ಯ ಉದ್ದೇಶ ದೇಹದಲ್ಲಿ ಉಂಟಾಗಬಹುದಾದ ಸಾಮಾನ್ಯ ಮತ್ತು ಪ್ರಾಣಾಂತಿಕ ತೊಂದರೆಗಳನ್ನು ತಡೆಗಟ್ಟುವುದು. ಬಹಳಷ್ಟು ಬಿ.ಪಿ ರೋಗಿಗಳು ಚಿಕಿತ್ಸೆಯನ್ನೇ ಪಡೆಯುವುದಿಲ್ಲ. ಏಕೆಂದರೆ ಇವರನ್ನು ಯಾವ ತೊಂದರೆಯೂ ಬಾಧಿಸುತ್ತಿರುವುದಿಲ್ಲ.ಚಿಕಿತ್ಸೆಯನ್ನು ಆರಂಭಿಸಿದ ಬಹುತೇಕ ರೋಗಿಗಳು ಬಳಿಕ ತಾವಾಗಿಯೇ ಅದನ್ನು ನಿಲ್ಲಿಸಿ ಬಿಡುತ್ತಾರೆ. ಮುಂದೆ ಏಕಾಏಕಿ ಅಪಾಯಗಳಿಗೆ (ಹೃದಯಾಘಾತ, ಮೂತ್ರಪಿಂಡ ನಾಶ, ಲಕ್ವ, ಅಂಧತ್ವ) ಸಿಲುಕಿ ಹಾಕಿಕೊಂಡ ಮೇಲೆ ಪರಿತಪಿಸುತ್ತಾರೆ. ಆದ್ದರಿಂದ ಬಿ.ಪಿ ರೋಗಿಗಳು ಚಾಚೂ ತಪ್ಪದೆ ಕಟ್ಟುನಿಟ್ಟಾಗಿ ಚಿಕಿತ್ಸೆ ಪಡೆಯಬೇಕು.ಬಾರದಂತೆ ತಡೆಗಟ್ಟಿ

ದೇಹ ಸ್ಥೂಲವಾಗದಂತೆ ಎಚ್ಚರ ವಹಿಸಿ

ನಿತ್ಯ ಸಾಕಷ್ಟು ಚಟುವಟಿಕೆ/ ವ್ಯಾಯಾಮ ಮಾಡಿ

ಹಣ್ಣು - ತರಕಾರಿ, ಸೊಪ್ಪನ್ನು ಹೇರಳವಾಗಿ (ದಿನಕ್ಕೆ 500 ಗ್ರಾಂ) ಸೇವಿಸಿ

ಕಡಿಮೆ ಜಿಡ್ಡು (- 20 ಗ್ರಾಂ) ಹಾಗೂ ಕಡಿಮೆ ಮಾಂಸಾಹಾರ ಸೇವನೆ

ಉಪ್ಪಿನ ಸೇವನೆಯನ್ನು ನಿತ್ಯ 5 ಗ್ರಾಂಗೆ ಮಿತಗೊಳಿಸಿ

ಮಾನಸಿಕ ಒತ್ತಡ ನಿವಾರಿಸಿಕೊಳ್ಳಿ

ಸಾಕಷ್ಟು ವಿಶ್ರಾಂತಿ, ಮನರಂಜನೆ, ನಿದ್ದೆ ಇರಲಿ

ಬಿ.ಪಿ ಬರುವ ಸಾಧ್ಯತೆ ಇರುವವರು

30 ವರ್ಷ ಮೇಲ್ಪಟ್ಟವರು

ಸ್ಥೂಲಕಾಯದವರು

ಮನೆತನದಲ್ಲಿ ಬಿ.ಪಿ ಇತಿಹಾಸ ಇದ್ದವರು

ಧೂಮಪಾನಿ, ಮದ್ಯಪಾನಿಗಳು

ಮಾನಸಿಕ ಒತ್ತಡಕ್ಕೆ ಸಿಲುಕಿದವರು

ಸಕ್ಕರೆ ಕಾಯಿಲೆ ಇರುವವರು

ಗರ್ಭನಿರೋಧಕ ಮಾತ್ರೆಗಳನ್ನು ಬಹಳ ವರ್ಷ ಸೇವಿಸುವವರು

ಋತುಚಕ್ರ ನಿಂತ ಮಹಿಳೆಯರು

ಬಿ.ಪಿ ಇದ್ದವರು ಅನುಸರಿಸಬೇಕಾದ ಕ್ರಮ

ವೈದ್ಯರು ಸೂಚಿಸಿದ ಮಾತ್ರೆಗಳನ್ನೇ ಸೇವಿಸಬೇಕು (ನಿಗದಿತ ಸಮಯದಲ್ಲಿ)

ಮಾತ್ರೆ ಸೇವನೆ ನಿಲ್ಲಿಸುವುದು, ಪ್ರಮಾಣವನ್ನು ಹೆಚ್ಚು ಅಥವಾ ಕಡಿಮೆ ಮಾಡಿಕೊಳ್ಳುವುದು ಅಥವಾ ಇತರ ರೋಗಿಗಳು ಬಳಸುವ ಔಷಧಿಯನ್ನು ಪಡೆದುಕೊಂಡು ಸೇವಿಸುವುದು ಮಾಡಲೇಬಾರದು.ಔಷಧಿಯಿಂದ ತೊಂದರೆ/ ಅಡ್ಡ ಪರಿಣಾಮ ಕಾಣಿಸಿದರೆ ಅಲಕ್ಷಿಸದೆ ವೈದ್ಯರನ್ನು ವಿಚಾರಿಸಬೇಕು.ಮಾತ್ರೆಗಳನ್ನು ತಪ್ಪದೆ ನಿತ್ಯವೂ ಸೇವಿಸಬೇಕಾಗುವುದರಿಂದ ಊರಿಗೆ ಹೋಗುವಾಗ ಮರೆಯದೆ ತೆಗೆದುಕೊಂಡು ಹೋಗಬೇಕು.ಯಾವುದೇ ಸಮಸ್ಯೆಯ ಚಿಕಿತ್ಸೆಗೆ ವೈದ್ಯರ ಬಳಿ ಹೋದಾಗ ತಮಗಿರುವ ಬಿ.ಪಿ ಮತ್ತು ಮಾತ್ರೆಗಳ ಬಗ್ಗೆ ತಿಳಿಸಬೇಕು.ಪ್ರತಿ 15 ದಿನಗಳಿಗೊಮ್ಮೆ ಬಿ.ಪಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಚಿಕ್ಕ ಡೈರಿಯಲ್ಲಿ ಇದನ್ನು ಬರೆದಿಟ್ಟುಕೊಳ್ಳಬೇಕು.3ರಿಂದ 5 ವರ್ಷಕ್ಕೊಮ್ಮೆ ಸಂಪೂರ್ಣ ದೇಹ ಪರೀಕ್ಷೆ ಮಾಡಿಸಿಕೊಳ್ಳಬೇಕು.ಬಿ.ಪಿ.ಯೊಂದಿಗೆ ಸಕ್ಕರೆ ಕಾಯಿಲೆ ಅಥವಾ ಯಾವುದೇ ತೊಂದರೆ ಇದ್ದರೆ ಚಿಕಿತ್ಸೆ ಪಡೆಯಬೇಕು.ಬಿ.ಪಿ ಇದ್ದವರು ತುರ್ತು ಚಿಕಿತ್ಸಾ ಕೇಂದ್ರಗಳ, ವೈದ್ಯರ ವಿಳಾಸ, ಫೋನ್ ಸಂಖ್ಯೆ ತಿಳಿದಿರಬೇಕು.

ಪ್ರತಿಕ್ರಿಯಿಸಿ (+)