ಬಿಬಿಎಂಪಿಗೆ ಇ-ಆಡಳಿತ ಪ್ರಶಸ್ತಿ

7

ಬಿಬಿಎಂಪಿಗೆ ಇ-ಆಡಳಿತ ಪ್ರಶಸ್ತಿ

Published:
Updated:

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಭೌಗೋಳಿಕ ಮಾಹಿತಿಯ ಆಧಾರದ ಆಸ್ತಿ ತೆರಿಗೆ ಪದ್ಧತಿಗೆ `ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವಿಶ್ವ ಇ - ಆಡಳಿತ ಒಕ್ಕೂಟ~ದ (World e-Government Organization of cities and Local Governments)  2012ನೇ ಸಾಲಿನ `ಉತ್ತಮ ಇ-ಆಡಳಿತ~ ಪ್ರಶಸ್ತಿ ಲಭಿಸಿದೆ.ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಡಿ.ವೆಂಕಟೇಶಮೂರ್ತಿ ಈ ವಿಷಯ ತಿಳಿಸಿದರು. `ಬೆಂಗಳೂರು ನಗರದಲ್ಲಿ ಭೌಗೋಳಿಕ ಮಾಹಿತಿಯನ್ನು ಆಧರಿಸಿ ಆಸ್ತಿ ತೆರಿಗೆಯನ್ನು ನಿಗದಿ ಪಡಿಸುವ ವ್ಯವಸ್ಥೆಯನ್ನು ಅನುಸರಿಸಲಾಗುತ್ತಿದೆ.

 

ಈ ಪದ್ಧತಿಗೆ ಪೂರಕವಾಗಿ ಇ-ಆಡಳಿತವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದು ನಾಗರಿಕ ಸ್ನೇಹಿಯಾಗಿದ್ದು, ಇದರಿಂದ ಆಸ್ತಿ ಮಾಪನ ಹಾಗೂ ತೆರಿಗೆ ವಿಧಿಸುವುದು ಸುಲಭವಾಗಿದೆ. ಈ ಪದ್ಧತಿಗೆ ಒಕ್ಕೂಟವು ಅಂತರರಾಷ್ಟ್ರೀಯ ಮಾನ್ಯತೆಯ ಇ-ಆಡಳಿತ ಪ್ರಶಸ್ತಿಯನ್ನು ಘೋಷಿಸಿದೆ~ ಎಂದು ಅವರು ತಿಳಿಸಿದರು.`ಬಿಬಿಎಂಪಿಗೆ ಈ ಪ್ರಶಸ್ತಿ ಬರಲು ಪಾಲಿಕೆಯ ಎಲ್ಲ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರಣರಾಗಿದ್ದಾರೆ. ಪ್ರಶಸ್ತಿಯ ಗೌರವ ಬೆಂಗಳೂರಿನ ಎಲ್ಲ ನಾಗರಿಕರಿಗೆ ಸಲ್ಲಬೇಕು. ನಾಗರಿಕರು ಬಿಬಿಎಂಪಿಯೊಂದಿಗೆ ಇನ್ನೂ ಉತ್ತಮವಾಗಿ ಸ್ಪಂದಿಸಿ ನಗರದ ಅಭಿವೃದ್ಧಿಗೆ ಸಹಕರಿಸಬೇಕು~ ಎಂದು ಅವರು ನುಡಿದರು.ಕೊರಿಯಾ ದೇಶದಲ್ಲಿರುವ `ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವಿಶ್ವ ಇ - ಆಡಳಿತ ಒಕ್ಕೂಟ~ದ ಕಾರ್ಯದರ್ಶಿ ಮಂಡಳಿಯಲ್ಲಿ ಏಳು ಜನ ತೀರ್ಪುಗಾರರು  ಬಿಬಿಎಂಪಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ನವೆಂಬರ್ 12ರಂದು ಸ್ಪೇನ್‌ನ ಬಾರ್ಸಿಲೋನಾ ನಗರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry