ಬಿಬಿಎಂಪಿ:ಭಾರಿ ಅಕ್ರಮ ರೂ 2000 ಕೋಟಿ ಪೋಲು

7

ಬಿಬಿಎಂಪಿ:ಭಾರಿ ಅಕ್ರಮ ರೂ 2000 ಕೋಟಿ ಪೋಲು

Published:
Updated:

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2009-10ನೇ ಹಣಕಾಸು ವರ್ಷದಲ್ಲಿ ಕಾಮಗಾರಿ ಸಂಕೇತ (ವರ್ಕ್ ಕೋಡ್) ನೀಡುವಾಗ ಸುಮಾರು 2,000 ಕೋಟಿ ರೂಪಾಯಿ ಮೊತ್ತದ ಅಕ್ರಮ ನಡೆದಿರುವುದು ಲೆಕ್ಕ ಪರಿಶೋಧನೆಯಲ್ಲಿ ದೃಢಪಟ್ಟಿದೆ. ಕೆಲ ಅಧಿಕಾರಿಗಳು ಸೇರಿಕೊಂಡು ಬಜೆಟ್‌ನ ಒಪ್ಪಿಗೆಯೇ ಇಲ್ಲದೇ ಭಾರಿ ಮೊತ್ತದ ಕಾಮಗಾರಿಗಳಿಗೆ ‘ವರ್ಕ್‌ಕೋಡ್’ ನೀಡಿರುವುದು ಪತ್ತೆಯಾಗಿದೆ.ಪರಿಣಾಮವಾಗಿ ಪಾಲಿಕೆಯ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ ಹೊರೆಯಾಗಿರುವುದು ಮುಖ್ಯ ಲೆಕ್ಕ ಪರಿಶೋಧನೆಯಲ್ಲಿ ಬಹಿರಂಗವಾಗಿದೆ. 2008-09ನೇ ಸಾಲಿಗೆ ಹೋಲಿಸಿದರೆ 2009-10ನೇ ಸಾಲಿನಲ್ಲಿ ನೀಡಿರುವ ವರ್ಕ್ ಕೋರ್ಡ್ ಕಾಮಗಾರಿಗಳಲ್ಲಿ ಶೇ 178ರಷ್ಟು ಹೆಚ್ಚಳವಾಗಿದೆ.ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳುವ ಕಾಮಗಾರಿಗಳ ವೆಚ್ಚವನ್ನು ಆಯವ್ಯಯದ ಮಿತಿಯೊಳಗಿರುವಂತೆ ನೋಡಿಕೊಳ್ಳುವುದು, ಒಂದೇ ಕಾಮಗಾರಿಗೆ ಎರಡು ಬಾರಿ ಬಿಲ್ ಪಾವತಿಯಾಗುವುದು, ಕಾಮಗಾರಿ ಪುನರಾವರ್ತನೆಯಾಗದಂತೆ ತಡೆಯುವುದು, ತುರ್ತು ಕಾಮಗಾರಿಗಳಿಗೆ ಆದ್ಯತೆ ನೀಡುವುದು ಮುಂತಾದ ಉದ್ದೇಶದಿಂದ ವರ್ಕ್‌ಕೋಡ್ ಪದ್ಧತಿ ಜಾರಿಗೆ ತರಲಾಗಿತ್ತು.ಆದರೆ ಅದನ್ನೇ ದಾಳವಾಗಿ ಬಳಸಿಕೊಂಡ ಅಧಿಕಾರಿಗಳು ಭಾರಿ ಪ್ರಮಾಣದ ಅವ್ಯವಹಾರ ನಡೆಸಿರುವುದನ್ನು ಲೆಕ್ಕ ಪರಿಶೋಧನಾ ಸಮಿತಿ ಪತ್ತೆ ಹಚ್ಚಿದೆ.2009-10ನೇ ಸಾಲಿನಲ್ಲಿ ಕಾಮಗಾರಿಗಳಿಗೆ ಸಂಕೇತ ನೀಡಿರುವುದಕ್ಕೆ ಸಂಬಂಧಿಸಿದ ಲೆಕ್ಕ ಪರಿಶೋಧನಾ ವರದಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಹಗರಣ ಕುರಿತು ಸಮಗ್ರ ಲೆಕ್ಕ ಪರಿಶೀಲನೆ ನಡೆಸಿರುವ ಪಾಲಿಕೆ ಲೆಕ್ಕ ಪರಿಶೋಧನಾ ತಂಡ ಜನವರಿ ಮೊದಲ ವಾರದಲ್ಲಿ ಪಾಲಿಕೆ ಆಯುಕ್ತರಿಗೆ ವರದಿ ಸಲ್ಲಿಸಿದೆ.ಪಾಲಿಕೆಯ 2009-10ನೇ ಆರ್ಥಿಕ ವರ್ಷದಲ್ಲಿ ಕಾಮಗಾರಿಗಳಿಗಾಗಿ ಬಜೆಟ್‌ನಲ್ಲಿ ಮೀಸಲಿಡಲಾದ ಅನುದಾನವನ್ನು ಮೀರಿ ಹೆಚ್ಚುವರಿಯಾಗಿ 2,000 ಕೋಟಿ ರೂಪಾಯಿ ಮೊತ್ತದ ಕೆಲಸಗಳಿಗೆ ವರ್ಕ್ ಕೋಡ್ ನೀಡಲಾಗಿದೆ. ಇದರಿಂದ ಆಯವ್ಯಯದ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದ್ದು, ಬಿಬಿಎಂಪಿಯ ಆರ್ಥಿಕ ಶಿಸ್ತು ದಾರಿ ತಪ್ಪಿದೆ ಎಂದು ವರದಿ ಹೇಳಿದೆ.ಆಯುಕ್ತರ ಅನುಮೋದನೆಯೇ ಇಲ್ಲ: ಅಚ್ಚರಿಯ ಸಂಗತಿಯೆಂದರೆ ಆಯುಕ್ತರ ಅನುಮೋದನೆ ಪಡೆಯದೇ ಕೆಲವು ಕಾಮಗಾರಿಗಳಿಗೆ ವರ್ಕ್‌ಕೋಡ್ ನೀಡಲಾಗಿದೆ. 2009-10ನೇ ಸಾಲಿನ ಕಾಮಗಾರಿಗಳ ಕಾರ್ಯಕ್ರಮ ಪಟ್ಟಿಯಲ್ಲಿ ಸೇರದ/ ಆಯವ್ಯಯದಲ್ಲೂ ಸೇರಿರದ ಕೆಲವು ಕಾಮಗಾರಿಗಳಿಗೆ ಸಂಕೇತ ನೀಡಲಾಗಿದೆ. ಆಯುಕ್ತರ ಗಮನಕ್ಕೆ ತರದೇ ವರ್ಕ್ ಕೋಡ್ ನೀಡಿರುವುದೂ ಲೆಕ್ಕ ಪರಿಶೋಧನೆಯಲ್ಲಿ ಬಯಲಿಗೆ ಬಂದಿದೆ.ಆಯುಕ್ತರ ಅನುಮೋದನೆಯನ್ನೇ ಪಡೆಯದೆ ಸಹಾಯಕ ನಿಯಂತ್ರಕರು ಹಾಗೂ ಉಪ ನಿಯಂತ್ರಕರು 935 ಕಾಮಗಾರಿಗಳಿಗೆ ರೂ 200 ಕೋಟಿ ಮೊತ್ತದ ಕಾಮಗಾರಿಗಳಿಗೆ ವರ್ಕ್ ಕೋಡ್ ನೀಡಿ ಅಕ್ರಮ ನಡೆಸಿದ್ದಾರೆ. ನರ್ಮ್ ಯೋಜನೆಯ ಕಾರ್ಯಕ್ರಮಗಳಲ್ಲೂ ಅವ್ಯವಹಾರ ನಡೆದಿದೆ ಎಂದು ಲೆಕ್ಕ ಪರಿಶೋಧನಾ ಉಲ್ಲೇಖಿಸಿದೆ. ಕೆಎಂಸಿ ಕಾಯ್ದೆಯ (1976) 170ರ ಕಲಮಿನಡಿ ಬಿಬಿಎಂಪಿಗೆ ಅಳವಡಿಸಿಕೊಳ್ಳಲಾದ ನಿಯಮ 172ರ ಪ್ರಕಾರ ಸರ್ಕಾರದಿಂದ ಮಂಜೂರಾದ ಆಯವ್ಯಯದ ಮೊತ್ತವನ್ನು ಯಾವುದೇ ಕಾರಣಕ್ಕೂ ಹೆಚ್ಚಳ ಮಾಡಲು ಅವಕಾಶವಿಲ್ಲ. ಆದರೆ ಈ ನಿಯಮ ಉಲ್ಲಂಘಿಸಿ ಆಯವ್ಯಯದ ಮೊತ್ತಕ್ಕಿಂತ ಹೆಚ್ಚು ಮೊತ್ತದ ಕಾಮಗಾರಿಗೆ ವರ್ಕ್‌ಕೋಡ್ ನೀಡಲಾಗಿದೆ. ಇದರಿಂದ ಆಯವ್ಯಯದ ಅಂದಾಜುಗಳ ಮೇಲೆ ನಿಯಂತ್ರಣವಿಲ್ಲದಂತಾಗಿದ್ದು, ಪಾಲಿಕೆ ಆರ್ಥಿಕ ಸ್ಥಿತಿಯ ಮೇಲೆ ತೀವ್ರ ಪರಿಣಾಮ ಬೀರಿದೆ ಎಂಬ ಅಂಶ ವರದಿಯಲ್ಲಿದೆ.ಕಿರಿಯ ಅಧಿಕಾರಿಗಳ ಕೈವಾಡ: ಸಹಾಯಕ ನಿಯಂತ್ರಕ (ನರ್ಮ್) ರಮೇಶ್‌ರೆಡ್ಡಿ ಹಾಗೂ ಉಪ ನಿಯಂತ್ರಕ (ಹಣಕಾಸು) ರಘು ಅವರು ಮೇಲಧಿಕಾರಿಗಳಿಗೆ ಆರ್ಥಿಕ ಪರಿಸ್ಥಿತಿ ಮತ್ತು ಆಯವ್ಯಯದ ಲಭ್ಯತೆ ಬಗ್ಗೆ ಮಾಹಿತಿ ನೀಡದೇ ಅಕ್ರಮ ನಡೆಸಿದ್ದಾರೆ. ಕೆಲವು ಸಂದರ್ಭಗಳಲ್ಲಿ ಹಿರಿಯ ಅಧಿಕಾರಿಗಳ ಆದೇಶಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಮುಖ್ಯ ಹಣಕಾಸು ಅಧಿಕಾರಿ ಮತ್ತು ಮುಖ್ಯ ಲೆಕ್ಕಾಧಿಕಾರಿಗಳ ಗಮನಕ್ಕೆ ತರದೇ ಸಂಕೇತ ನೀಡಿರುವುದು ಲೆಕ್ಕಪರಿಶೋಧನೆಯಲ್ಲಿ ಬಯಲಾಗಿದೆ.ಆಯವ್ಯಯದಲ್ಲಿ ಅವಕಾಶ ಕಲ್ಪಿಸಿರುವುದಕ್ಕಿಂತ ಅಧಿಕ ಮೊತ್ತದ ಕಾಮಗಾರಿಗಳಿಗೆ ವರ್ಕ್‌ಕೋಡ್ ನೀಡಿರುವ ಬಗ್ಗೆ ಆಡಳಿತಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು ಅದನ್ನೂ ಲೆಕ್ಕಿಸದೇ ವರ್ಕ್‌ಕೋಡ್ ನೀಡಿರುವುದನ್ನು ಲೆಕ್ಕ ಪರಿಶೋಧಕರು ಬಯಲು ಮಾಡಿದ್ದಾರೆ.ಅಕ್ರಮವಾಗಿ ಮೊತ್ತ ಹೆಚ್ಚಳ: ಕೆಲವು ಕಾಮಗಾರಿಗಳಿಗೆ ಆಯುಕ್ತರು ಅನುಮೋದನೆ ನೀಡಿರುವ ಮೊತ್ತದಲ್ಲಿ ಸಾಕಷ್ಟು ಏರಿಕೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ದಾಸರಹಳ್ಳಿ ವಲಯದ ರಾಜಗೋಪಾಲನಗರ ಹಾಗೂ ಚೊಕ್ಕಸಂದ್ರ ಉಪವಿಭಾಗಗಳಲ್ಲಿ 1.10 ಕೋಟಿ ರೂಪಾಯಿ ವೆಚ್ಚದಲ್ಲಿ 23 ತುರ್ತು ಕಾಮಗಾರಿಗಳಿಗೆ ಆಯುಕ್ತರು ಅನುಮೋದನೆ ನೀಡಿದ್ದರು. ಆದರೆ ಇದೇ ಕಾಮಗಾರಿಗಳಿಗೆ ವರ್ಕ್ ಕೋಡ್ ನೀಡುವಾಗ ಮೊತ್ತವನ್ನು ರೂ 11.42 ಕೋಟಿಗೆ ಏರಿಕೆ ಮಾಡಲಾಗಿದೆ. ಅಂದರೆ ರೂ 10.32 ಕೋಟಿ ಹೆಚ್ಚುವರಿ ಹಣ ಮಂಜೂರು ಮಾಡಲಾಗಿದೆ.ಆದರೆ ಕಡತವನ್ನು ಆಯುಕ್ತರ ಮುಂದೆ ಮಂಡಿಸುವಾಗ ತಪ್ಪು ಮಾಹಿತಿ ನೀಡಿ ಅನುಮೋದನೆ ಪಡೆದುಕೊಂಡಿದ್ದರು. ಅಲ್ಲದೇ ಸಂಬಂಧಿಸಿದ ಕಡತದ ಚಲನವಲನವನ್ನೂ ಅಧಿಕೃತವಾಗಿ ಪಾಲಿಕೆಯ ದಾಖಲೆಗಳಲ್ಲಿ ನಮೂದಿಸಿರಲಿಲ್ಲ ಎಂಬುದನ್ನು ಲೆಕ್ಕ ಪರಿಶೋಧನಾ ತಂಡ ಪತ್ತೆ ಮಾಡಿದೆ.ಬಿಬಿಎಂಪಿಯ 2008-09ರಲ್ಲಿ ಬಜೆಟ್‌ನಲ್ಲಿ ಕಾಯ್ದಿರಿಸಲಾಗಿದ್ದ ಅನುದಾನಕ್ಕಿಂತ ಹೆಚ್ಚುವರಿಯಾಗಿ 1,500 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ವರ್ಕ್‌ಕೋಡ್ ನೀಡಿದ್ದನ್ನು ಈ ಹಿಂದೆ ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿರುವುದನ್ನು ಇಲ್ಲಿ ಸ್ಮರಿಸಬಹುದು.ಕಚೇರಿ ಹೊರಗೆ ದಾಖಲೆ ಸೃಷ್ಟಿ!

ವರ್ಕ್ ಕೋಡ್ ಪಡೆದ ಕಾಮಗಾರಿಗಳಿಗೆ ಸಂಬಂಧಪಟ್ಟ ಕಡತಗಳು ಪ್ರಾರಂಭದ ಕಚೇರಿಯಿಂದ ಆಯುಕ್ತರ ಕಚೇರಿವರೆಗೆ ಯಾವುದೇ ಕಚೇರಿಗಳಲ್ಲಿ ಪರಿಶೀಲನೆಗೆ ಒಳಗಾಗದಿರುವುದು (ಇನ್‌ವರ್ಡ್/ ಔಟ್‌ವರ್ಡ್) ಹಾಗೂ ಅವುಗಳ ಮೇಲೆ ಯಾವುದೇ ಕಚೇರಿಯ ಅಧಿಕೃತ ಮೊಹರು ಇಲ್ಲದಿರುವುದು ಬಯಲಾಗಿದೆ.

 ಅಂದರೆ ಪಾಲಿಕೆ ಕಚೇರಿಯ ಹೊರಗೆ ಕಡತಗಳನ್ನು ಸೃಷ್ಟಿಸಿ ವರ್ಕ್ ಕೋಡ್ ನೀಡಿ ಅಕ್ರಮವೆಸಗಿರುವುದು ಸ್ಪಷ್ಟವಾಗಿದೆ.

ಇಂತಹ ಅನಧಿಕೃತ ದಾಖಲೆಗಳಿಗೆ ಆಯುಕ್ತರು ಅನುಮೋದನೆ ನೀಡಿರುವುದು ಅಕ್ರಮಗಳಿಗೆ ಪ್ರೋತ್ಸಾಹ ನೀಡಿ ದಂತಾಗಿದೆ.2009-10 ಸಾಲಿನಲ್ಲಿ ವರ್ಕ್‌ಕೋಡ್ ನೀಡಿದ/

ಅನುಮೋದಿಸಿರುವ ಅಧಿಕಾರಿಗಳ ವಿವರ


*ಆಯುಕ್ತ ಡಾ.ಎಸ್. ಸುಬ್ರಹ್ಮಣ್ಯ

*ಆಯುಕ್ತ ಭರತ್‌ಲಾಲ್ ಮೀನಾ

*ಮುಖ್ಯ ಆರ್ಥಿಕ ಅಧಿಕಾರಿ (ನರ್ಮ್) ನಟರಾಜ್

*ಸಹಾಯಕ ನಿಯಂತ್ರಕ (ನರ್ಮ್) ರಮೇಶ್‌ರೆಡ್ಡಿ

* ಸಹಾಯಕ ನಿಯಂತ್ರಕರಾದ (ನರ್ಮ್) ವಾಣಿ

*ಮುಖ್ಯ ಲೆಕ್ಕಾಧಿಕಾರಿ ಮೂಲ್ಗಿ

*ಉಪ ನಿಯಂತ್ರಕ (ಹಣಕಾಸು) ರಘು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry