ಶನಿವಾರ, ಫೆಬ್ರವರಿ 27, 2021
31 °C
ಸಾರ್ವಜನಿಕ ದೂರುಗಳಿಗೆ ವೇಗವಾಗಿ ಸ್ಪಂದಿಸಲು ಅನುಕೂಲ

ಬಿಬಿಎಂಪಿಯಿಂದ ಕೇಂದ್ರೀಕೃತ ದೂರು ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಬಿಎಂಪಿಯಿಂದ ಕೇಂದ್ರೀಕೃತ ದೂರು ವ್ಯವಸ್ಥೆ

ಬೆಂಗಳೂರು: ಸಾರ್ವಜನಿಕ ದೂರುಗಳ ಮೇಲೆ ನಿಗಾ ಇಟ್ಟು, ಅವುಗಳಿಗೆ ವೇಗವಾಗಿ ಸ್ಪಂದಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರೀಕೃತ ದೂರು ವ್ಯವಸ್ಥೆ ಆರಂಭಿಸಲಿದೆ.ಸಾರ್ವಜನಿಕರ ದೂರು ಸಲ್ಲಿಕೆಗೆ ಅಭಿವೃದ್ಧಿಪಡಿಸಲಾದ ಮೊಬೈಲ್‌ ಆ್ಯಪ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಶುಕ್ರವಾರ ವಿಶೇಷಆಯುಕ್ತ (ಹಣಕಾಸು) ಕುಮಾರ್‌ ಪುಷ್ಕರ್‌ ಈ ವಿಷಯ ತಿಳಿಸಿದರು.‘ಕಾಲ್‌ ಸೆಂಟರ್‌ ಒಳಗೊಂಡ ಈ ಹೊಸ ವ್ಯವಸ್ಥೆ ಜೂನ್‌ ವೇಳೆಗೆ ಅಸ್ತಿತ್ವಕ್ಕೆ ಬರಲಿದೆ. ಕೇಂದ್ರೀಕೃತ ವ್ಯವಸ್ಥೆಗೆ ಅಗತ್ಯವಾದ ಮೂಲಸೌಕರ್ಯ ಒದಗಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಟೆಂಡರ್‌ ಸಹ ಕರೆಯಲಾಗಿದೆ’ ಎಂದು ಹೇಳಿದರು. ‘ತ್ಯಾಜ್ಯ, ಒಳಚರಂಡಿ, ಖಾತಾ, ರಸ್ತೆ ಸೇರಿದಂತೆ ನಗರಕ್ಕೆ ಸಂಬಂಧಿಸಿದ ಎಲ್ಲ ದೂರುಗಳನ್ನು ಈ ಕೇಂದ್ರ ದೂರು ಸ್ವೀಕರಿಸಲಿದೆ’ ಎಂದು ಮಾಹಿತಿ ನೀಡಿದರು.‘ಮೊಬೈಲ್‌ ಆ್ಯಪ್‌ ಮೂಲಕ ಸಾರ್ವಜನಿಕರು ಸುಲಭವಾಗಿ ದೂರು ದಾಖಲಿಸಬಹುದು. ದೂರು ಯಾವ ಹಂತದಲ್ಲಿದೆ ಮತ್ತು ಯಾವ ಅಧಿಕಾರಿ ಆ ದೂರಿಗೆ ಪರಿಹಾರ ಒದಗಿಸಲಿದ್ದಾರೆ ಎಂಬ ವಿವರ ಎಸ್‌ಎಂಎಸ್‌ ಮೂಲಕ ದೂರುದಾರರಿಗೆ ಬರಲಿದೆ’ ಎಂದು ಮಾಹಿತಿ ತಂತ್ರಜ್ಞಾನ ವಿಭಾಗದ ಅಧಿಕಾರಿಗಳು ತಿಳಿಸಿದರು.‘ಮೊಬೈಲ್‌ ಆ್ಯಪ್‌ನಿಂದ ಸಾರ್ವಜನಿಕರಿಗೆ ದೂರು ನೀಡುವುದು ಸುಲಭವಾದರೆ, ಬಿಬಿಎಂಪಿಗೆ ಅನಗತ್ಯ ಕಡತದ ಹೊರೆ ತಪ್ಪಲಿದೆ’ ಎಂದು ಹೇಳಿದರು.

ಆ್ಯಪ್‌ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ವಿವರಗಳಿಗೆ: bbmp.sahaya.in***

ಮೊಬೈಲ್‌ ಆ್ಯಪ್‌ನ ವಿಶೇಷಗಳು


* ದೂರುಗಳ ವಿಲೇವಾರಿ ಉಸ್ತುವಾರಿಯನ್ನು ಬಿಬಿಎಂಪಿ ಅಧಿಕಾರಿಗಳೇ ನಿರ್ವಹಿಸುತ್ತಾರೆ

* ಬಿಬಿಎಂಪಿಯ ಯಾವುದೇ ಇಲಾಖೆಗೆ ಸಂಬಂಧಪಟ್ಟಂತೆ ದೂರುಗಳನ್ನು ಒಂದೇ ಆ್ಯಪ್‌ನಲ್ಲಿ ಕಳುಹಿಸಬಹುದು

* ನೋಂದಣಿ ಮೂಲಕ ಅಥವಾ ನೋಂದಣಿರಹಿತವಾಗಿಯೂ ದೂರು ದಾಖಲಿಸಬಹುದು

* ನಕ್ಷೆಯಲ್ಲಿ ಸ್ಥಳ ಗುರುತಿಸಿ ದೂರು ದಾಖಲಿಸಬಹುದು

* ಚಿತ್ರಗಳನ್ನು ಲಗತ್ತಿಸಬಹುದು

* ದೂರಿಗೆ ಸಂಬಂಧಿಸಿದ ಕ್ರಮ ಪ್ರಗತಿಯಾದಂತೆ, ದೂರುದಾರರಿಗೆ ಎಸ್‌ಎಂಎಸ್ ರವಾನೆ

* ದೂರುಗಳ ವಿವರವನ್ನು ಅಧಿಕಾರಿಗಳು ಮತ್ತು ವಾರ್ಡ್‌ನ ಸದಸ್ಯರಿಗೆ ಎಸ್‌ಎಂಎಸ್ ಮೂಲಕ ತಿಳಿಸಲಾಗುತ್ತದೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.