ಬಿಬಿಎಂಪಿಯಿಂದ ರಸ್ತೆಗಳ ಬೃಹತ್ ಸ್ವಚ್ಛತಾ ಕಾರ್ಯ

ಶನಿವಾರ, ಜೂಲೈ 20, 2019
27 °C

ಬಿಬಿಎಂಪಿಯಿಂದ ರಸ್ತೆಗಳ ಬೃಹತ್ ಸ್ವಚ್ಛತಾ ಕಾರ್ಯ

Published:
Updated:

ಬೆಂಗಳೂರು: ಬಿಬಿಎಂಪಿ ವತಿಯಿಂದ ನಗರದ ಮಲ್ಲೇಶ್ವರ ಪ್ರದೇಶದ ಹಲವು ರಸ್ತೆಗಳಲ್ಲಿ ಗುರುವಾರ ಬೃಹತ್ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.ಸಂಪಿಗೆ ರಸ್ತೆ, ಎಂ.ಡಿ.ಬ್ಲಾಕ್, ಮಾರ್ಗೋಸಾ ರಸ್ತೆ, ವೈಯಾಲಿಕಾವಲ್, ಸ್ಯಾಂಕಿ ರಸ್ತೆ ಸೇರಿದಂತೆ ಹಲವು ಅಡ್ಡರಸ್ತೆಗಳಲ್ಲಿ ಸಿಬ್ಬಂದಿ ಸ್ವಚ್ಛತಾ ಕಾರ್ಯ ನಡೆಸಿದರು.ಪಾದಚಾರಿ ಮಾರ್ಗಗಳ ಮೇಲೆ ಸುರಿಯಲಾಗಿದ್ದ ಕಲ್ಲು, ಮಣ್ಣು ಇತರೆ ತ್ಯಾಜ್ಯವನ್ನು ತೆರವುಗೊಳಿಸಿದರು. ರಸ್ತೆಯ ಎರಡೂ ಬದಿಯ ಮೋರಿಗಳಿಗೆ ಅಲ್ಲಲ್ಲಿ ಬಿಡಲಾದ ಕಿಂಡಿಗಳನ್ನು (ಶೋಲ್ಡರ್ ಮೌತ್) ಸ್ವಚ್ಛಗೊಳಿಸಲಾಯಿತು.ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಸಿದ್ದಯ್ಯ ಅವರು ವೈಯಾಲಿಕಾವಲ್‌ನಲ್ಲಿರುವ ಶಿಕ್ಷಣ ಸಂಸ್ಥೆ ಹಾಗೂ ತೆಲುಗು ವಿಜ್ಞಾನ ಸಮಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಸ್ತಾರವಾಗಿರುವ ಶಾಲಾ ಆವರಣದಲ್ಲಿ ಕಡ್ಡಾಯವಾಗಿ ಮಳೆ ನೀರು ಸಂಗ್ರಹ ಘಟಕ ಸ್ಥಾಪಿಸಬೇಕು ಎಂದು ಸೂಚಿಸಿದರು.ಮಳೆ ನೀರು ಘಟಕ ನಿರ್ಮಿಸದಿದ್ದರೆ ಶಾಲೆ ನಡೆಸಲು ನೀಡಲಾದ ಭೋಗ್ಯದ ಕರಾರನ್ನು ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಒಂದು ಲಕ್ಷ ದಂಡ: ಮಲ್ಲೇಶ್ವರದ 9ನೇ ಅಡ್ಡರಸ್ತೆಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಪಾದಚಾರಿ ಮಾರ್ಗದ ಮೇಲೆ ನಿರ್ಮಾಣ ತ್ಯಾಜ್ಯ ಸುರಿದು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ತ್ಯಾಜ್ಯ ತೆರವುಗೊಳಿಸಬೇಕು ಹಾಗೂ ಕಟ್ಟಡ ಮಾಲೀಕರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಬೇಕು ಎಂದು ಸೂಚನೆ ನೀಡಿದರು.ವೈಯಾಲಿಕಾವಲ್ ಆಟದ ಮೈದಾನ, ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿನ ಸರ್ಕಾರಿ ಕಾಲೇಜು ಆಟದ ಮೈದಾನ, ಸ್ಯಾಂಕಿ ಕೆರೆಯ ಟ್ಯಾಂಕ್ ಬಂಡ್ ಪಕ್ಕದಲ್ಲಿನ ಖಾಲಿ ಪ್ರದೇಶ ಹಾಗೂ ಸರ್ಕಾರಿ ಸ್ವಾಮ್ಯದ  ಕಚೇರಿಗಳ ಆವರಣವನ್ನು ಪರಿಶೀಲಿಸಿದರು.ಈ ಭಾಗದಲ್ಲಿ ಖಾಸಗಿ ವ್ಯಕ್ತಿಗಳಿಗೆ ಸೇರಿದ ಖಾಲಿ ಪ್ರದೇಶ ಸಾಕಷ್ಟಿದೆ. ಈ ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹ ಘಟಕ ಅಳವಡಿಸುವಂತೆ ಭೂಮಾಲೀಕರು ಹಾಗೂ ಸಂಸ್ಥೆಗಳ ಮುಖ್ಯಸ್ಥರಲ್ಲಿ ಮನವಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಪಾಲಿಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಜಿ. ಮಂಜುನಾಥ ರಾಜು, ಪಾಲಿಕೆ ಸದಸ್ಯರಾದ ಆರ್.ಎಸ್. ಸತ್ಯನಾರಾಯಣ, ಡಾ.ಎಂ.ಎಸ್. ಶಿವಪ್ರಸಾದ್, ಎಂ. ವಿಜಯಕುಮಾರಿ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry