ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್ ನಿರ್ದೇಶನ

ಶುಕ್ರವಾರ, ಜೂಲೈ 19, 2019
28 °C

ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್ ನಿರ್ದೇಶನ

Published:
Updated:

ಬೆಂಗಳೂರು: ಬಿಬಿಎಂಪಿಯಲ್ಲಿ ಸರಿಯಾಗಿ ಕೆಲಸ ನಿರ್ವಹಿಸದ ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್, ಪಾಲಿಕೆ ಆಯುಕ್ತ ಸಿದ್ಧಯ್ಯ ಅವರಿಗೆ ಗುರುವಾರ ಸೂಚಿಸಿದೆ.ಅದರಂತೆ ರಕ್ಷಣಾ ಇಲಾಖೆಗೆ ಸೇರಿರುವ ಜಮೀನನ್ನು ತನ್ನದೆಂದು ಹೇಳಿಕೊಂಡು ಸುಮಾರು ನಾಲ್ಕು ವರ್ಷಗಳ ಕಾಲ ಪ್ರಕರಣವನ್ನು ಎಳೆಯುತ್ತ ಬಂದಿರುವ ಕುರಿತು ಎಂಟು ವಾರಗಳಲ್ಲಿ ಮಾಹಿತಿ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.

 

ದೊಮ್ಮಲೂರು ಬಳಿಯ ಸರ್ವೇ ನಂ. 57/4ರಲ್ಲಿನ 33 ಗುಂಟೆ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹೈಕೋರ್ಟ್ ಆದೇಶದ ಹೊರತಾಗಿಯೂ ಪರ್ಯಾಯ ರಸ್ತೆ ಕಲ್ಪಿಸದ ಪಾಲಿಕೆ ವಿರುದ್ಧ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ. ಈ ಹಿಂದೆ ನ್ಯಾಯಮೂರ್ತಿಗಳು ನೀಡಿದ್ದ ನಿರ್ದೇಶನದ ಮೇರೆಗೆ ಸಿದ್ಧಯ್ಯ ಅವರು ಖುದ್ದು ಹಾಜರು ಇದ್ದರು. ವಿವಾದಿತ ಜಮೀನು ರಕ್ಷಣಾ ಇಲಾಖೆಗೆ ಸೇರಿದ್ದು ಎಂದು ಅವರು ಪ್ರಮಾಣ ಪತ್ರ ಸಲ್ಲಿಸಿದ ಕಾರಣ, ಸುಳ್ಳಿನ ಕುರಿತು ಪೀಠ ಸತ್ಯಾಂಶ ಬಯಸಿದೆ.`ನ್ಯಾಯಾಲಯವನ್ನು ಹಗುರವಾಗಿ ಪರಿಗಣಿಸಬೇಡಿ. ನಿಮ್ಮ ಸಿಬ್ಬಂದಿಯನ್ನು ಮೊದಲು ನಿಯಂತ್ರಣಕ್ಕೆ ತನ್ನಿ~ ಎಂದು ನ್ಯಾಯಮೂರ್ತಿಗಳು ಸಿದ್ಧಯ್ಯ ಅವರಿಗೆ ತಿಳಿಸಿದರು. ವಿಚಾರಣೆಯನ್ನು ಮುಂದೂಡಲಾಗಿದೆ.ವಕ್ಫ್ ಮಂಡಳಿ ವರ್ಚಸ್ಸು ಕುಂದಿದೆ- ಪಾಷಾ

 ರಾಜ್ಯ ವಕ್ಫ್ ಮಂಡಳಿಯ ವರ್ಚಸ್ಸು ಕುಂದಿರುವ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಅದಕ್ಕೆ ಚುನಾವಣೆ ನಡೆದಿಲ್ಲ ಎಂದು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸೈಯದ್ ಜಮೀರ್ ಪಾಷಾ ಅವರು ಹೈಕೋರ್ಟ್‌ಗೆ ಗುರುವಾರ ತಿಳಿಸಿದರು.`ಇದೇ ಜೂನ್ 11ರಂದು ಮಂಡಳಿಯ ಸದಸ್ಯರ ವಿರುದ್ಧ 10 ಆರೋಪಪಟ್ಟಿಗಳನ್ನು ನಿಗದಿ ಮಾಡಲಾಗಿದೆ. ಇದರ ವರ್ಚಸ್ಸು ಕುಂದಿದ್ದು ಚುನಾವಣೆಗೆ ವಿಳಂಬ ಮಾಡಲಾಗುತ್ತಿದೆ~ ಎಂದು ಅವರು ಹೇಳಿದರು.ವಕ್ಫ್ ಮಂಡಳಿಯ ಆಡಳಿತ ಮಂಡಳಿಯ ಅಧಿಕಾರ ಮುಗಿದು 18 ತಿಂಗಳು ಕಳೆದಿದ್ದರೂ ಇದುವರೆಗೆ ಚುನಾವಣೆ ನಡೆಯದೇ ಇರುವ ಔಚಿತ್ಯದ ಕುರಿತು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಪ್ರಶ್ನಿಸಿದಾಗ ಅವರು ಈ ಹೇಳಿಕೆ ನೀಡಿದರು. ಕಳೆದ ಬಾರಿ ನ್ಯಾಯಮೂರ್ತಿಗಳು ನೀಡಿದ್ದ ನಿರ್ದೇಶನದ ಮೇರೆಗೆ ಖುದ್ದು ಹಾಜರು ಇದ್ದರು.ವರ್ಚಸ್ಸು ಕುಂದಿರುವ ಕಾರಣವನ್ನು ಹಾಗೂ ಇದನ್ನು ಸರಿದೂಗಿಸಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮುಂದಿನ ಮಂಗಳವಾರ ಖುದ್ದು ಹಾಜರು ಇದ್ದು ಮಾಹಿತಿ ನೀಡುವಂತೆ ಪೀಠ ನಿರ್ದೇಶಿಸಿದೆ.2010ರ ಜನವರಿ 16ಕ್ಕೆ ಮಂಡಳಿಯ ಆಡಳಿತ ಮಂಡಳಿಯ ಅಧಿಕಾರ ಮುಗಿದಿದ್ದು, ಆಡಳಿತಾಧಿಕಾರಿಯನ್ನು ನೇಮಕ ಮಾಡಿರುವುದನ್ನು ಹಾಗೂ ಅವರ ಅವಧಿಯನ್ನು ವಿಸ್ತರಣೆ ಮಾಡುತ್ತ ಬಂದಿರುವ ಸರ್ಕಾರದ ಕ್ರಮ ಪ್ರಶ್ನಿಸಿ `ಕರ್ನಾಟಕ ವಕ್ಫ್ ಸಂರಕ್ಷಣೆ ಜಂಟಿ ಕ್ರಿಯಾ ಸಮಿತಿ~ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry