ಬಿಬಿಎಂಪಿ ಆಯುಕ್ತ ಸಿದ್ದಯ್ಯ ಎತ್ತಂಗಡಿ

7

ಬಿಬಿಎಂಪಿ ಆಯುಕ್ತ ಸಿದ್ದಯ್ಯ ಎತ್ತಂಗಡಿ

Published:
Updated:
ಬಿಬಿಎಂಪಿ ಆಯುಕ್ತ ಸಿದ್ದಯ್ಯ ಎತ್ತಂಗಡಿ

ಬೆಂಗಳೂರು: ಬಿಬಿಎಂಪಿಯ ಮೂರು ವಿಭಾಗಗಳಲ್ಲಿ ಕೈಗೊಂಡ 1,539 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತ ತನಿಖೆ ಚುರುಕುಗೊಳ್ಳುತ್ತಿರುವಾಗಲೇ ಪಾಲಿಕೆಯ ಆಯುಕ್ತ ಸಿದ್ದಯ್ಯ ಅವರನ್ನು ಸರ್ಕಾರ ಏಕಾಏಕಿ ಎತ್ತಂಗಡಿ ಮಾಡಿದೆ.ನೂತನ ಆಯುಕ್ತರಾಗಿ ಐಎಎಸ್ ಅಧಿಕಾರಿ ಎಂ.ಕೆ. ಶಂಕರಲಿಂಗೇಗೌಡ ಸೋಮವಾರವೇ ಅಧಿಕಾರ ವಹಿಸಿಕೊಂಡಿದ್ದಾರೆ.ಪಾಲಿಕೆಯ ರಾಜರಾಜೇಶ್ವರಿನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಿಭಾಗಗಳಲ್ಲಿ 2008-09ನೇ ಸಾಲಿನಿಂದ ಈವರೆಗೆ ನಡೆದ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ಈ ಕುರಿತು ಪರಿಶೀಲನೆ ನಡೆಸುವಂತೆ ಸಿದ್ದಯ್ಯ ಅವರು ಅಕ್ಟೋಬರ್ 12ರಂದು ಆಯುಕ್ತರ ತಾಂತ್ರಿಕ ಜಾಗೃತ ದಳಕ್ಕೆ (ಟಿವಿಸಿಸಿ) ಸೂಚಿಸಿದ್ದರು.ಅದರಂತೆ ಪರಿಶೀಲನೆ ನಡೆಸಿದ ಟಿವಿಸಿಸಿ ತಂಡವು ಈ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂಬುದಾಗಿ ವರದಿ ನೀಡಿತ್ತು. ಆ ಹಿನ್ನೆಲೆಯಲ್ಲಿ ಆಯುಕ್ತರ ಸೂಚನೆ ಮೇರೆಗೆ ಹೆಚ್ಚುವರಿ ಆಯುಕ್ತರು (ಆಡಳಿತ) ಹಗರಣ ಕುರಿತು ತನಿಖೆ ನಡೆಸುವಂತೆ ಬಿಎಂಟಿಎಫ್‌ಗೆ ಕೋರಿದ್ದರು.ಆಯುಕ್ತರ ಈ ನಿರ್ಧಾರಕ್ಕೆ ಆಡಳಿತ ಪಕ್ಷ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಮೇಯರ್ ಹಾಗೂ ಆಡಳಿತ ಪಕ್ಷದ ಮುಖಂಡರೊಂದಿಗೆ ಈ ವಿಷಯ ಚರ್ಚಿಸದೇ ಏಕಾಏಕಿ ಬಿಎಂಟಿಎಫ್ ತನಿಖೆಗೆ ವಹಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು.ಆ ಬಳಿಕ ಹಗರಣ ಕುರಿತ ತನಿಖೆಯನ್ನು ಬಿಎಂಟಿಎಫ್ ಬದಲಿಗೆ ಸದನ ಸಮಿತಿಗೆ ವಹಿಸುವ ಬಗ್ಗೆ ಆಡಳಿತ ಪಕ್ಷ ಚಿಂತಿಸಿತ್ತು. ಈ ನಡುವೆ ಆಯುಕ್ತರು ಈ ಮೂರು ವಿಭಾಗಗಳಲ್ಲಿನ ಅಕ್ರಮ ಕುರಿತ ತನಿಖೆಯನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸುವಂತೆ ಕೋರಿ ನಗರಾಭಿವೃದ್ಧಿ ಇಲಾಖೆಗೆ ನವೆಂಬರ್ 9ರಂದು ಪತ್ರ ಬರೆದರು. ಇದು ಆಡಳಿತ ಪಕ್ಷವನ್ನು ಇನ್ನಷ್ಟು ಕೆರಳಿಸಿತು. ಆಯುಕ್ತರ ಕಾರ್ಯ ವೈಖರಿಯ ಬಗ್ಗೆ ಕೆಲ ಶಾಸಕರು ಹಾಗೂ ಪಾಲಿಕೆ ಸದಸ್ಯರು ತೆರೆ ಮರೆಯಲ್ಲೇ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದರು.ಈ ನಡುವೆ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿನ ಬಿಎಂಟಿಎಫ್ ಠಾಣೆಯಲ್ಲಿ ನ. 19ರಂದು ಬೆಂಕಿ ಕಾಣಿಸಿಕೊಂಡು ಹಲವು ಪ್ರಕರಣಗಳಿಗೆ ಸಂಬಂಧಪಟ್ಟ ದಾಖಲೆಗಳು ಸುಟ್ಟು ಭಸ್ಮವಾದವು. ಆ ಸಂದರ್ಭದಲ್ಲಿ ಸಿದ್ದಯ್ಯ, `ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಅನಾಹುತ ಸಂಭವಿಸಿರುವ ಸಾಧ್ಯತೆ ಇಲ್ಲ~ ಎಂದು ಹೇಳಿಕೆ ನೀಡಿದ್ದರು. ಇದು ಕೂಡ ಆಡಳಿತ ಪಕ್ಷವನ್ನು ತೀವ್ರ ಮುಜುಗರಕ್ಕೆ ಈಡುಮಾಡಿತ್ತು.ಇನ್ನೊಂದೆಡೆ ತನಿಖೆಯನ್ನು ತೀವ್ರಗೊಳಿಸಿದ ಬಿಎಂಟಿಎಫ್ ಪೊಲೀಸರು ಕಾರ್ಯಪಾಲಕ ಎಂಜಿನಿಯರ್ ಒಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದರು. ಇದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ತಳಮಳ ಸೃಷ್ಟಿಸಿತು.

ಆ ಬಳಿಕ ತನಿಖೆಗೆ ಆಡಳಿತ ಪಕ್ಷ ಹೆಚ್ಚಿನ ಸಹಕಾರ ನೀಡಲಿಲ್ಲ ಎಂಬ ಆರೋಪವಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಮಂಜುನಾಥ ರಾಜು ಅವರು ತನಿಖೆಯ ವ್ಯಾಪ್ತಿಯಲ್ಲಿರುವ ಕಡತಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದು, ಬಿಎಂಟಿಎಫ್‌ಗೆ ನೀಡಲು ನಿರಾಕರಿಸುತ್ತಿರುವುದು ಇದಕ್ಕೆ ಸಾಕ್ಷ್ಯ ಒದಗಿಸಿತ್ತು.ಹಗರಣವನ್ನು ಲೋಕಾಯುಕ್ತ ತನಿಖೆಗೆ ವಹಿಸುವುದಕ್ಕೆ ಸಂಬಂಧಪಟ್ಟಂತೆ ಕೆಲವು ಮಾಹಿತಿ ನೀಡುವಂತೆ ನಗರಾಭಿವೃದ್ಧಿ ಇಲಾಖೆ ಸೂಚಿಸಿತ್ತು. ಕೋರಿದ ಮಾಹಿತಿಯ ಜತೆಗೆ ಪಾಲಿಕೆಯ ಎಲ್ಲ 29 ವಿಭಾಗಗಳಲ್ಲಿ ನಡೆದಿರುವ ಕಾಮಗಾರಿಯ ಸತ್ಯಾಸತ್ಯತೆಗಳ ಪರಿಶೀಲನೆಯನ್ನು ಲೋಕಾಯುಕ್ತ ಸಂಸ್ಥೆಗೆ ವಹಿಸಬೇಕು ಎಂದು ಆಯುಕ್ತರು ನ. 24ರಂದು ಇಲಾಖೆಗೆ ಪತ್ರ ಬರೆದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಆಡಳಿತ ಪಕ್ಷದ ಸದಸ್ಯರು ಆಯುಕ್ತರ ವರ್ಗಾವಣೆಗೆ ಒತ್ತಡ ಹೇರಿದ್ದರು ಎಂದು ತಿಳಿದುಬಂದಿದೆ.ನಗರದ ಬಿಜೆಪಿ ಶಾಸಕರು, ಮೇಯರ್ ಹಾಗೂ ಕೆಲ ಪಾಲಿಕೆ ಸದಸ್ಯರೊಂದಿಗೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಭಾನುವಾರ ನಡೆಸಿದ ಸಭೆಯಲ್ಲಿ ಹಲವು ಶಾಸಕರು ಸಿದ್ದಯ್ಯ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಡ ಹೇರಿದ್ದರು. ಇಲ್ಲದಿದ್ದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆಯುಂಟಾಗಲಿದೆ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.ಮಂಗಳವಾರ ಪಾಲಿಕೆ ಕೌನ್ಸಿಲ್ ಸಭೆ ನಡೆಯಲಿದ್ದು, ಇದರಲ್ಲಿ ಹಗರಣ ಕುರಿತು ಚರ್ಚೆ ನಡೆಯುವುದು ನಿಚ್ಚಳವಾಗಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆ ಸರ್ಕಾರ ಸಿದ್ದಯ್ಯ ಅವರನ್ನು ದಿಢೀರ್ ಎತ್ತಂಗಡಿ ಮಾಡಿ ಸೋಮವಾರ ಆದೇಶ ಹೊರಡಿಸಿದ್ದು, ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry