ಬಿಬಿಎಂಪಿ ಕಟ್ಟಡಗಳಲ್ಲೇ ಪಾರ್ಕಿಂಗ್‌ ಇಲ್ಲ!

7

ಬಿಬಿಎಂಪಿ ಕಟ್ಟಡಗಳಲ್ಲೇ ಪಾರ್ಕಿಂಗ್‌ ಇಲ್ಲ!

Published:
Updated:
ಬಿಬಿಎಂಪಿ ಕಟ್ಟಡಗಳಲ್ಲೇ ಪಾರ್ಕಿಂಗ್‌ ಇಲ್ಲ!

ಬೆಂಗಳೂರು: ನಗರದ ಹೃದಯ  ಭಾಗದಲ್ಲಿ (ಕೋರ್‌ ಏರಿಯಾ) ವಾಹನಗಳ ನಿಲುಗಡೆಗೆ ದೊಡ್ಡ ಪ್ರಮಾಣದ ಶುಲ್ಕ ವಿಧಿಸಲು ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಈ ಪ್ರದೇಶದಲ್ಲಿ ತಾನು ಹೊಂದಿ ರುವ ಬಹುತೇಕ ಕಟ್ಟಡಗಳಲ್ಲಿ ಪಾರ್ಕಿಂಗ್‌ ಸೌಲಭ್ಯವನ್ನೇ ಕಲ್ಪಿಸಿಲ್ಲ.ಇದೊಂದು ರೀತಿ ಬೇಲಿಯೇ ಎದ್ದು ಹೊಲ ಮೇಯ್ದಂತೆ. ತಾನು ರೂಪಿಸಿದ ಕಟ್ಟಡ ನಿರ್ಮಾಣದ ಮಾರ್ಗಸೂಚಿ­ಯನ್ನು ಬಿಬಿಎಂಪಿ ತಾನೇ ಉಲ್ಲಂಘಿಸಿದೆ. ತನ್ನ ಎಲ್ಲ ಕಟ್ಟಡಗಳಿಗೆ ಪಾರ್ಕಿಂಗ್‌ ಸೌಲಭ್ಯವನ್ನು ಒದಗಿಸಲು ಅದರಿಂದ ಸಾಧ್ಯ­ವಾಗಿಲ್ಲ. ಬಿಬಿಎಂಪಿ ಮುಖ್ಯ ಆಡಳಿತ ಕಚೇರಿ ಹಿಂಭಾಗದಲ್ಲಿ ಹೊಸ­ದಾಗಿ ನಿರ್ಮಾಣ ಮಾಡಿರುವ ಅನೆಕ್ಸ್‌–2 ಕಟ್ಟಡದಲ್ಲೂ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿಲ್ಲ.ಜಯನಗರದಲ್ಲಿ ಇರುವ ಬಿಬಿಎಂಪಿ ದಕ್ಷಿಣ ವಲಯ ಕಟ್ಟಡದ ನೆಲ ಮಹಡಿ­ಯಲ್ಲಿ ಪಾರ್ಕಿಂಗ್‌­ಗಾಗಿ ಸ್ಥಳವನ್ನೇನೋ ಬಿಡಲಾಗಿದೆ. ಆದರೆ, ಅದನ್ನು ಎಲೆಕ್ಟ್ರಾನಿಕ್‌ ಮತಯಂತ್ರ (ಇವಿಎಂ) ಮತ್ತು ಗುಜರಿ ಇಡುವ ಗೋದಾಮು ಮಾಡ ಲಾಗಿದ್ದು, ಪಾಲಿಕೆ ಅಧಿಕಾರಿ­ಗಳೂ ಸೇರಿದಂತೆ ಸಾರ್ವಜನಿಕರ ವಾಹನಗಳೆಲ್ಲ ರಸ್ತೆ ಮೇಲೆ ನಿಲ್ಲುವಂತಾ­ಗಿದೆ. ಚಿಕ್ಕಪೇಟೆ, ಬಳೇಪೇಟೆ­ಯಂತಹ ಇಕ್ಕಟ್ಟಾದ ಪ್ರದೇಶಗಳಲ್ಲಿ ಇರುವ ಬಿಬಿಎಂಪಿ ಕಚೇರಿಗಳಲ್ಲೂ ಪಾರ್ಕಿಂಗ್‌ ಸೌಕರ್ಯ ಇಲ್ಲ.ಹಲವು ವರ್ಷಗಳ ಹಿಂದೆ ಕಟ್ಟಲಾದ ಬಹುತೇಕ ಬಿಬಿಎಂಪಿ ಕಟ್ಟಡಗಳ ಸುತ್ತ ವಾಹನ ನಿಲುಗಡೆಗೆ ಅಲ್ಪ–ಸ್ವಲ್ಪ ಜಾಗ ಇದೆ. ಆದರೆ, ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ವಾಹನಗಳಿಗೇ ಆ ಸ್ಥಳ ಸಾಕಾಗುವುದಿಲ್ಲ. 110 ಮಾರುಕಟ್ಟೆ/ ಶಾಪಿಂಗ್‌ ಕಾಂಪ್ಲೆಕ್ಸ್‌­ಗಳು ಸೇರಿದಂತೆ ಒಟ್ಟು 897 ಕಟ್ಟಡ ಗಳನ್ನು ಪಾಲಿಕೆ ಹೊಂದಿದೆ. ಎಂ.ಜಿ. ರಸ್ತೆಯ ಯುಟಿಲಿಟಿ ಬಹುಮಹಡಿ ಸಂಕೀರ್ಣ, ಕೆ.ಆರ್‌. ಮಾರುಕಟ್ಟೆ ಒಳಗೊಂಡಂತೆ ಕೆಲವೇ ಕೆಲವು ಕಟ್ಟಡ ಹೊರತುಪಡಿಸಿದರೆ ಉಳಿದ ಕಡೆಗಳಲ್ಲಿ ಸಮರ್ಪಕವಾದ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ.ಯುಟಿಲಿಟಿ ಕಟ್ಟಡದಲ್ಲಿ ಒಂದು ಗಂಟೆ ಕಾರು ನಿಲ್ಲಿಸಲು ರೂ. 30 ಶುಲ್ಕ ಪಡೆಯಲಾಗುತ್ತಿದೆ. ಅದೇ ದ್ವಿಚಕ್ರ ವಾಹನಕ್ಕೆ ರೂ. 10 ದರ ನಿಗದಿ ಮಾಡಲಾಗಿದೆ. ಹೀಗಾಗಿ ಸಾರ್ವಜನಿಕರು ರಸ್ತೆ ಮೇಲೆ ವಾಹನ ನಿಲ್ಲಿಸುತ್ತಾರೆಯೇ ಹೊರತು ಪಾರ್ಕಿಂಗ್‌ ಪ್ರದೇಶಕ್ಕೆ ಹೋಗಲು ಹಿಂಜರಿಯು­ತ್ತಾರೆ. ಆದರೆ, ಗಂಟೆ ಲೆಕ್ಕದ ಈ ಪಾರ್ಕಿಂಗ್‌ ವ್ಯವಸ್ಥೆ ಅಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬಂದಿಲ್ಲ ಎಂಬುದು ಅಲ್ಲಿನ ಸಿಬ್ಬಂದಿಯನ್ನು ಮಾತನಾಡಿಸಿ­ದಾಗ ಗೊತ್ತಾಗುತ್ತದೆ.‘ಇಲ್ಲಿ ವಾಹನ ನಿಲ್ಲಿಸಲು ತುಂಬಾ ಜನ ಬರುವುದಿಲ್ಲ. ಬಂದವರು 3–4 ಗಂಟೆ ಕಾರು ನಿಲ್ಲಿಸಿದರೂ ದಬಾಯಿಸಿ ಕೇವಲ ರೂ. 30 ಕೊಟ್ಟು ಹೋಗುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಾಹನ­ಗಳು ಬಾರದ ಕಾರಣ ನಾವೂ ಸುಮ್ಮನಿದ್ದೇವೆ’ ಎಂದು ಪಾರ್ಕಿಂಗ್‌ ಚೀಟಿ ಹರಿಯುವ ಇಲ್ಲಿನ ಕಾರ್ಮಿಕ ಹೇಳುತ್ತಾನೆ. ಹೆಸರು ಏನೆಂದು ಕೇಳಿದರೆ, ‘ಏಕೆ ಸೋಮಿ, ನಮ್ಮ ಹೊಟ್ಟೆ ಮೇಲೆ ನಿಮಗೆ ಸಿಟ್ಟು’ ಎಂದು ನಕ್ಕು ಮುಂದೆ ಹೋಗುತ್ತಾನೆ.ಕೆ.ಆರ್‌. ಮಾರುಕಟ್ಟೆಯಲ್ಲಿ ಪಾರ್ಕಿಂಗ್‌ ಸ್ಥಳ ವಿಶಾಲ­ವಾಗಿದೆ. ಆದರೆ, ಬಹುತೇಕ ಪ್ರದೇಶ­ವನ್ನು ಮಾರುಕಟ್ಟೆ ತ್ಯಾಜ್ಯ, ಗುಜರಿ ಮತ್ತು ಪೊಲೀಸರು ವಶಪಡಿಸಿಕೊಂಡ ಹಳೆಯ ವಾಹನ­­ಗಳೇ ಆಕ್ರಮಿಸಿಬಿಟ್ಟಿವೆ. ಕಗ್ಗತ್ತಲಿನಿಂದ ಕೂಡಿದ ಗವಿಯಂತೆ ಇರುವ ಈ ವಾಹನ ನಿಲುಗಡೆ ಪ್ರದೇಶಕ್ಕೆ ಹೋಗಲು ಜನ ಕೂಡ ಅಂಜುತ್ತಾರೆ. ಬಿಡಾಡಿ ದನಗಳ ದೊಡ್ಡಿಯಾಗಿ ಅದು ಮಾರ್ಪಟ್ಟಿದೆ. ರಸೆಲ್‌ ಮಾರುಕಟ್ಟೆ ಪಾರ್ಕಿಂಗ್‌ ವ್ಯವಸ್ಥೆ ಸಹ ಅಧೋಗತಿಗೆ ಇಳಿದಿದೆ.ಕೆ.ಜಿ. ರಸ್ತೆಯ ಬಿಬಿಎಂಪಿ ಒಡೆತನದ ಕೆಂಪೇಗೌಡ ಶಾಪಿಂಗ್‌ ಕಾಂಪ್ಲೆಕ್ಸ್‌ನಲ್ಲಿ ಪಾರ್ಕಿಂಗ್‌ಗೆ ಉತ್ತಮ ಸೌಲಭ್ಯ ಕಲ್ಪಿಸಲಾಗಿದೆ. ವಾರ್ಷಿಕ ರೂ. 32 ಲಕ್ಷ ನೀಡಲು ಒಪ್ಪಂದ ಮಾಡಿ­ಕೊಂಡು ಅದನ್ನು ಗುತ್ತಿಗೆ ನೀಡಲಾಗಿದೆ. ಆದರೆ, ಎರಡು ವರ್ಷಗಳಿಂದ ಪಾಲಿಕೆ ಬೊಕ್ಕಸಕ್ಕೆ ಬರುತ್ತಿರುವ ಮೊತ್ತ ಕೇವಲ ರೂ. 5 ಲಕ್ಷ. ಗುತ್ತಿಗೆದಾರರಿಗೆ ನಷ್ಟವಾಗುತ್ತಿದ್ದು, ಇದರಿಂದ ಗುತ್ತಿಗೆ ಮೊತ್ತ ಕುಗ್ಗಿದೆ ಎನ್ನುವುದು ಅಧಿಕಾರಿ­ಗಳು ಕೊಡುವ ಕಾರಣ!ನಗರದ ವಿವಿಧ ಪ್ರದೇಶಗಳಲ್ಲಿ ಇರುವ ಮಾರುಕಟ್ಟೆಗಳಲ್ಲಿ ಸಹ ಸೂಕ್ತವಾದ ಪಾರ್ಕಿಂಗ್‌ ತಾಣಗಳು ಇಲ್ಲ. ಹೀಗಾಗಿ ಜನ ರಸ್ತೆ ಮೇಲೆಯೇ ವಾಹನ ನಿಲುಗಡೆ ಮಾಡುತ್ತಿದ್ದಾರೆ. ಮಾರು­ಕಟ್ಟೆ­ಗಳಲ್ಲಿ ಮೂಲಸೌಕರ್ಯ ಕಲ್ಪಿಸಬೇಕಾದ ಬಿಬಿಎಂಪಿ ಅಸಹಾಯಕವಾಗಿ ಕೈಚೆಲ್ಲಿದೆ.‘ಸಂಚಾರಕ್ಕೆ ರಸ್ತೆಗಳನ್ನು ಮುಕ್ತಗೊಳಿಸಬೇಕು ಎನ್ನುವ ವಿಷಯದಲ್ಲಿ ಯಾರ ಆಕ್ಷೇಪವೂ ಇಲ್ಲ. ಆದರೆ, ವಾಹನ ನಿಲ್ಲಿಸಲು ಪರ್ಯಾಯ ಸ್ಥಳ­-ಗಳಾ­ದರೂ ಬೇಕಲ್ಲವೇ? ತನ್ನ ಕಟ್ಟಡಗಳಲ್ಲಿಯೇ ಪಾರ್ಕಿಂಗ್ ಸೌಲಭ್ಯ ಹೊಂದಿರದ ಬಿಬಿಎಂಪಿ ಜನರ ಮೇಲೆ ಮಾತ್ರ ದೊಣ್ಣೆ ಬೀಸಲು ಹೊರಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಶಿವಾಜಿನಗರದ ಮಹಮ್ಮದ್‌ ಇಮ್ತಿಯಾಜ್‌ ಚೌಧರಿ.‘ಬಿಬಿಎಂಪಿ ಇರುವುದು ಜನರ ಬದುಕನ್ನು ಮತ್ತಷ್ಟು ಹಸನಗೊಳಿಸಲೇ ಹೊರತು ಅಸಹ­ನೀಯ ಮಾಡಲಲ್ಲ. ದಿಕ್ಕುತಪ್ಪಿದ ಪಾರ್ಕಿಂಗ್‌ ವ್ಯವಸ್ಥೆಯನ್ನು ಸರಿದಾರಿಗೆ ತಂದು, ಅದರ ನಿರ್ವಹಣೆಗೆ ಅಲ್ಪ ಪ್ರಮಾಣದ ಶುಲ್ಕ ಪಡೆದರೆ ಯಾರ ವಿರೋಧವೂ ಇರುವುದಿಲ್ಲ’ ಎಂದು ಅವರು ಸಲಹೆ ನೀಡುತ್ತಾರೆ.‘ಬಿಬಿಎಂಪಿ ನಗರ ಯೋಜನೆ ಅಧಿಕಾರಿಗಳು ಇದುವರೆಗೆ ಮಾಡಿದ್ದಾದರೂ ಏನು? ನಗರದ ಯೋಜನೆ ರೂಪಿಸುವಾಗ ಅಲ್ಲಲ್ಲಿ ಪಾರ್ಕ್‌ ಮತ್ತು ಪಾರ್ಕಿಂಗ್‌ಗೆ ಸ್ಥಳಾವಕಾಶ ಮಾಡಲು ಏನು ಅಡಚಣೆ ಇತ್ತು’ ಎಂದು ‘ಬೆಂಗಳೂರು ಉಳಿಸಿ’ ಸಮಿತಿ ಸಹ ಸಂಚಾಲಕ ವಿ.ಎನ್‌. ರಾಜಶೇಖರ್‌ ಕೇಳುತ್ತಾರೆ. ‘ವಾಹನ ದಟ್ಟಣೆ ಮತ್ತು ಪಾರ್ಕಿಂಗ್‌ ಸಮಸ್ಯೆಗೆ ದೂರದೃಷ್ಟಿ ಇಲ್ಲದ ಬಿಬಿಎಂಪಿ ನೀತಿಗಳೇ ಕಾರಣ’ ಎಂದು ಅವರು ಸ್ಪಷ್ಟವಾದ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.ಬಿಬಿಎಂಪಿಯೇ ಪಾರ್ಕಿಂಗ್‌ ವ್ಯವಸ್ಥೆ ಮಾಡಿಕೊಳ್ಳದೆ ಸೋತಿರುವಾಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಂತಹ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೆ ತಂದೀತು ಎನ್ನುವ ನಿರೀಕ್ಷೆ ನಾಗರಿಕರಲ್ಲಿ ಇಲ್ಲ. ಅವರ ಯೋಚನೆಯಲ್ಲಿ ಒಂದಿಷ್ಟೂ ತಪ್ಪಿಲ್ಲ ಎನ್ನುವಂತೆಯೇ ಬಿಡಿಎ ಸಹ ನಡೆದುಕೊಂಡಿದೆ. ಕೆಲವೇ ಶಾಪಿಂಗ್‌ ಕಾಂಪ್ಲೆಕ್ಸ್‌ ಹೊರತುಪಡಿಸಿ­ದರೆ ಮಿಕ್ಕ ಕಡೆ ಆ ಪ್ರಾಧಿಕಾರವೂ ವಾಹನ ನಿಲುಗಡೆ ಕುರಿತು ತಲೆ ಕೆಡಿಸಿಕೊಂಡಿಲ್ಲ.ರಾತ್ರಿಯೂ ನಿಲುಗಡೆ ಸಮಸ್ಯೆ

ಶಿಕ್ಷಣ ಸಂಸ್ಥೆಗಳು, ಕೈಗಾರಿಕಾ ಘಟಕಗಳು, ವಾಣಿಜ್ಯ ಸಂಕೀರ್ಣಗಳು, ಸಿನಿಮಾ ಥಿಯೇಟರ್‌­, ಕಲ್ಯಾಣ ಮಂಟಪಗಳು, ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ಪಾರ್ಕಿಂಗ್‌ ಸಮಸ್ಯೆಗೆ ಮುಖ್ಯ ಕಾರಣವಾಗಿವೆ ಎಂದು ನಗರ ಭೂಸಾರಿಗೆ ನಿರ್ದೇಶನಾಲಯ ಅಭಿಪ್ರಾಯಪಟ್ಟಿದೆ. ಅವುಗಳ ಉದ್ಯೋಗಿಗಳು ಮತ್ತು ಅಲ್ಲಿಗೆ ಭೇಟಿ ಕೊಡುವವರಿಗೆ ರಸ್ತೆಯಿಂದ ಹೊರಗೆ (ಆಫ್‌ ಸ್ಟ್ರೀಟ್‌) ಪಾರ್ಕಿಂಗ್‌ ಸೌಲಭ್ಯ ಕಲ್ಪಿಸುವುದು ಅತ್ಯಗತ್ಯವಾಗಿದೆ ಎಂದು ಅದು ಸ್ಪಷ್ಟವಾಗಿ ತಿಳಿಸಿದೆ.ಪ್ರಮುಖ ರಸ್ತೆಗಳ ಮೇಲೆ ರಾತ್ರಿ ಬಸ್‌ಗಳು, ಲಾರಿಗಳು, ವ್ಯಾನ್‌ಗಳು ಸೇರಿದಂತೆ ದೊಡ್ಡ ವಾಹನಗಳ ನಿಲುಗಡೆಯನ್ನು ನಿಷೇಧಿಸಬೇಕು. ಇಂತಹ ವಾಹನಗಳ ನಿಲುಗಡೆಗೆ ಅಲ್ಲಲ್ಲಿ ಟರ್ಮಿನಲ್‌ಗಳನ್ನು ನಿರ್ಮಿಸಬೇಕು ಎಂದು ಶಿಫಾರಸು ಮಾಡಲಾಗಿದೆ.ರೈಲ್ವೆ ನಿಲ್ದಾಣದಲ್ಲಿ ರಕ್ಷಣೆ ಇಲ್ಲ

ರೈಲ್ವೆ ಮತ್ತು ಬಸ್‌ ನಿಲ್ದಾಣಗಳಲ್ಲಿ ಸಹ ಪಾರ್ಕಿಂಗ್‌ ವ್ಯವಸ್ಥೆ ಸಮರ್ಪಕವಾಗಿಲ್ಲ. ಮಳೆ­ಯಿಂದ ವಾಹನಗಳಿಗೆ ರಕ್ಷಣೆ ಸಹ ಇಲ್ಲ. ರೈಲ್ವೆ ನಿಲ್ದಾಣದ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ ವಾಹನ­ಗಳಿಂದ ಪೆಟ್ರೋಲ್‌, ಡೀಸೆಲ್‌ ಕದ್ದೊಯ್ಯ­ಲಾಗುತ್ತದೆ ಎಂಬ ದೂರುಗಳು ವ್ಯಾಪಕವಾಗಿವೆ.ಶುಲ್ಕ ಪಾವತಿ ರಸೀದಿ ಮೇಲೆ ‘ನಿಮ್ಮ ವಾಹನಗಳಿಗೆ ನಾವು ಜವಾಬ್ದಾರರಲ್ಲ’ ಎಂಬ ಎಚ್ಚರಿಕೆ ಬೇರೆ ಇರುತ್ತದೆ. ‘ಹಾಗಾದರೆ ಶುಲ್ಕ ಏಕೆ ನೀಡಬೇಕು’ ಎನ್ನುವುದು ವಾಹನ ಮಾಲೀಕರ ಪ್ರಶ್ನೆ. ಯಶವಂತ­ಪುರ, ಶಾಂತಿನಗರ, ಶಿವಾಜಿನಗರ, ಬನಶಂಕರಿನಗರ ಸೇರಿದಂತೆ ಬಿಎಂಟಿಸಿ ನಿಲ್ದಾಣಗಳಲ್ಲಿ ಬಹುಮಹಡಿ ಪಾರ್ಕಿಂಗ್‌ ಸೌಲಭ್ಯ ಇದೆ. ದುಬಾರಿ ಎನ್ನುವ ಆರೋಪ ಅಲ್ಲಿಯೂ ಇದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry