ಬಿಬಿಎಂಪಿ ಕೇಂದ್ರ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

7

ಬಿಬಿಎಂಪಿ ಕೇಂದ್ರ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

Published:
Updated:
ಬಿಬಿಎಂಪಿ ಕೇಂದ್ರ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ಬೆಂಗಳೂರು: ಸುಮಾರು ಒಂದು ವರ್ಷದಿಂದ ಬಾಕಿ ಉಳಿಸಿಕೊಂಡಿರುವ ಸಿವಿಲ್ ಮತ್ತು ಡಾಂಬರೀಕರಣ ಕಾಮಗಾರಿಗಳ ಎರಡು ಸಾವಿರ ಕೋಟಿ ರೂಪಾಯಿಗಳಷ್ಟು  ಬಿಲ್ ಮೊತ್ತವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಗುತ್ತಿಗೆದಾರರು ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.ಇದಕ್ಕೂ ಮುನ್ನ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಉರುಳು ಸೇವೆ ನಡೆಸಿದ ಗುತ್ತಿಗೆದಾರರು, ಪಾಲಿಕೆ ವಿರುದ್ಧ ಘೋಷಣೆಗಳನ್ನು ಕೂಗಿದರು.ತಮಗೆ ವಹಿಸಿದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಒಂದು ವರ್ಷದ ಹಿಂದೆಯೇ ಪಾಲಿಕೆಗೆ ದಾಖಲೆಗಳನ್ನು ಸಲ್ಲಿಸಲಾಗಿದೆ. ಆನಂತರ ಮೇಯರ್ ಹಾಗೂ ಆಯುಕ್ತರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗುತ್ತಿಗೆದಾರರು ಆರೋಪಿಸಿದರು.ಒಂದು ವರ್ಷದಿಂದ ಸಾವಿರಕ್ಕೂ ಹೆಚ್ಚು ಗುತ್ತಿಗೆದಾರರಿಗೆ 2000 ಕೋಟಿ ರೂಪಾಯಿಗಳಷ್ಟು ಬಾಕಿ ಬಿಲ್ ಬಿಡುಗಡೆಯಾಗಬೇಕಿದ್ದು, ಆರು ತಿಂಗಳ ಮೊತ್ತ ಸುಮಾರು ಒಂದು ಸಾವಿರ ಕೋಟಿ ರೂಪಾಯಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಜೆ. ಶ್ರೀನಿವಾಸ್ ಒತ್ತಾಯಿಸಿದರು.`ಸಾಲಸೋಲ ಮಾಡಿ ಕಾಮಗಾರಿಗಳನ್ನು ಮುಗಿಸಿರುವ ಗುತ್ತಿಗೆದಾರರು 15 ತಿಂಗಳಿಂದ ಹಣ ಬಿಡುಗಡೆಯಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪಾಲಿಕೆಯು ಇದೇ ಧೋರಣೆ ಮುಂದುವರಿಸಿದಲ್ಲಿ ಕಾಮಗಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲಾಗುವುದು~ ಎಂದು ಅವರು ಎಚ್ಚರಿಸಿದರು.ಈ ನಡುವೆ, ಗುತ್ತಿಗೆದಾರರು ಕೇಂದ್ರ ಕಚೇರಿಗೆ ಬೀಗ ಹಾಕುವುದರ ಸುಳಿವು ಅರಿತ ಪಾಲಿಕೆ ಸಿಬ್ಬಂದಿ ಮೊದಲೇ ಪ್ರವೇಶ ದ್ವಾರದ ಗೇಟ್‌ಗೆ ಒಳಗಿನಿಂದ ಬೀಗ ಹಾಕಿದರು. ಗುತ್ತಿಗೆದಾರರು ಹೊರಗಿನಿಂದ ಗೇಟ್‌ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಇದರಿಂದ ಆಯುಕ್ತರೂ ಸೇರಿದಂತೆ ಅಧಿಕಾರಿಗಳು ಹೊರಗೆ ಹೋಗಲು ತೊಂದರೆಯಾಯಿತು. ಸಂಘದ ಉಪಾಧ್ಯಕ್ಷ ಜಿ.ಎಂ. ರವೀಂದ್ರ ಸೇರಿದಂತೆ ನೂರಾರು ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಆಯುಕ್ತರ ಭರವಸೆ: ರಾಜ್ಯ ಸರ್ಕಾರದ ವಿವಿಧ ಮೂಲಗಳಿಂದ ಸರ್ಕಾರಕ್ಕೆ 1200 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಬೇಕಿದೆ. `ಹುಡ್ಕೋ~ ಸಂಸ್ಥೆಯಿಂದ ಸುಮಾರು 800 ಕೋಟಿ ರೂಪಾಯಿ ಸಾಲ ಬಿಡುಗಡೆಯಾಗಬೇಕಿದೆ. ಈ ಮೊತ್ತ ಬಿಡುಗಡೆಯಾದ ತಕ್ಷಣ ಗುತ್ತಿಗೆದಾರರಿಗೆ ಜೇಷ್ಠತೆ ಆಧಾರದಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದು ಆಯುಕ್ತ ರಜನೀಶ್ ಗೋಯಲ್ ಭರವಸೆ ನೀಡಿದರು.`ಹುಡ್ಕೋ~ದ ಆಡಳಿತ ಮಂಡಳಿ ಸಭೆ ನಡೆಯದಿರುವುದರಿಂದ 800 ಕೋಟಿ ರೂಪಾಯಿ ಸಾಲ ಬಿಡುಗಡೆಗೆ ತೊಂದರೆಯಾಗಿದೆ. ಅಲ್ಲದೆ, ಸುಧಾರಣಾ ಶುಲ್ಕದ ರೂಪದಲ್ಲಿಯೂ 600 ಕೋಟಿ ರೂಪಾಯಿ ಸಂಗ್ರಹವಾಗಬೇಕಾಗಿದೆ~ ಎಂದು ಅವರು ವಿವರಿಸಿದರು.`ಗುತ್ತಿಗೆದಾರರು ಬಾಕಿ ಬಿಲ್ ಮೊತ್ತಕ್ಕಾಗಿ ಪಾಲಿಕೆ ಕಚೇರಿ ಬಳಿ ಅಲೆದಾಡುವುದನ್ನು ತಪ್ಪಿಸಲು ಇಸಿಎಸ್ (ಎಲೆಕ್ಟ್ರಾನಿಕ್ ಕ್ಲಿಯರಿಂಗ್ ಸಿಸ್ಟಮ್) ಮೂಲಕ ನೇರವಾಗಿ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಬಿಡುಗಡೆ ಮಾಡಲಾಗುವುದು. ಕಾಮಗಾರಿ ಮುಗಿಸಿ ಸಲ್ಲಿಸಿದ ದಾಖಲೆಗಳ ಮೇರೆಗೆ ಜೇಷ್ಠತೆ  ಆಧಾರದಲ್ಲಿ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು~ ಎಂದು ಅವರು ಆಶ್ವಾಸನೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry