ಭಾನುವಾರ, ಮೇ 16, 2021
22 °C
ತನಿಖೆ ನೆಪದಲ್ಲಿ ಕಾಲಹರಣ * ಕ್ರಮ ಕೈಗೊಳ್ಳಲು ಹಿಂದೇಟು * ವಿಚಾರಣೆ ಮುನ್ನವೇ ಮಾತೃ ಇಲಾಖೆಗೆ ವರ್ಗ

ಬಿಬಿಎಂಪಿ ವರಸೆ: ತಪ್ಪು ಮಾಡಿದವರಿಗೆ ಶಿಕ್ಷೆ ಇಲ್ಲ!

ಪ್ರಜಾವಾಣಿ ವಾರ್ತೆ/ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ವರದಿಯಾದ ಹಗರಣಗಳ ಸಂಖ್ಯೆಗೆ ಲೆಕ್ಕವೇ ಇಲ್ಲ. ಹತ್ತು ವರ್ಷಗಳ ಅವಧಿಯಲ್ಲಿ ಇಂತಹ ಹಗರಣಗಳ ಸುಳಿಯಲ್ಲಿ ಸಿಲುಕಿದ ನೂರಾರು ಅಧಿಕಾರಿಗಳು ಮತ್ತು ನೌಕರರು ಅಮಾನತುಗೊಂಡಿದ್ದಾರೆ. ಆದರೆ, ವಿಚಾರಣೆಯಲ್ಲಿ ಆಗುತ್ತಿರುವ ವಿಳಂಬದಿಂದ ಅವರೆಲ್ಲ ಶಿಕ್ಷೆಯಿಂದ ಪಾರಾಗುತ್ತಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿಬಂದಿದೆ.ಆರೋಪ ಎದುರಿಸುತ್ತಿರುವ ಬಿಬಿಎಂಪಿ ನೌಕರರ ಕುರಿತು ಹಿರಿಯ ನಾಗರಿಕರೊಬ್ಬರು ಆರ್‌ಟಿಐ ಮೂಲಕ ಮಾಹಿತಿ ಪಡೆದಿದ್ದಾರೆ. ಮೇಲ್ನೋಟಕ್ಕೆ ಆರೋಪದಲ್ಲಿ ಸತ್ಯಾಂಶ ಕಂಡುಬಂದು, ಅಮಾನತುಗೊಂಡ ಸುಮಾರು ನೂರು ಜನ ಅಧಿಕಾರಿಗಳು ಹಾಗೂ ನೌಕರರ ವಿವರ ಅದರಲ್ಲಿದೆ. 2007ರಷ್ಟು ಹಿಂದೆಯೇ ವರದಿಯಾದ ಪ್ರಕರಣಗಳ ತನಿಖೆಯೂ ಇದುವರೆಗೆ ಆಗಿಲ್ಲ.ಆರೋಪ ಹೊತ್ತಿದ್ದ ಕೆಲವು ಅಧಿಕಾರಿಗಳು ಅಸುನೀಗಿದ್ದಾರೆ. ಮತ್ತೆ ಕೆಲವರು ನಿವೃತ್ತರಾಗಿದ್ದಾರೆ. ಇಲಾಖೆ ತನಿಖೆಯಲ್ಲಿ ಸಿಕ್ಕಿ ಬೀಳುವ ಭೀತಿಯಲ್ಲಿದ್ದ ಹಲವರು ಸ್ವಯಂ ನಿವೃತ್ತಿ ಪಡೆದು ಬಿಬಿಎಂಪಿಯಿಂದ ದೂರ ಸರಿದಿದ್ದಾರೆ. ಬೇರೆ ಇಲಾಖೆಗಳಿಂದ ಬಂದು ಹಗರಣ ಮಾಡಿಕೊಂಡಿದ್ದ ಹಲವು ಅಧಿಕಾರಿಗಳು ಮಾತೃ ಇಲಾಖೆಗೆ ವರ್ಗಾವಣೆ ಪಡೆದಿದ್ದಾರೆ.ಹಗರಣಗಳಲ್ಲಿ ಭಾಗಿಯಾದ ಅಧಿಕಾರಿಗಳು ಮತ್ತು ನೌಕರರ ಮಾಹಿತಿ ನೀಡಲು ಆಡಳಿತ ಇಲಾಖೆ ಬರೊಬ್ಬರಿ ಒಂದೂವರೆ ವರ್ಷ ಕಾಲಾವಕಾಶ ತೆಗೆದುಕೊಂಡಿದೆ. ಪಟ್ಟು ಬಿಡದೆ ಮೇಲಿಂದ ಮೇಲೆ ಪತ್ರ ಬರೆದು ಅರ್ಜಿದಾರರು ಮಾಹಿತಿ ಪಡೆದಿದ್ದಾರೆ. ಹೀಗಿದ್ದೂ ಬಿಬಿಎಂಪಿಗೆ ಪೂರ್ಣ ವಿವರಗಳನ್ನು ಕೊಡಲು ಸಾಧ್ಯವಾಗಿಲ್ಲ. ಕೆಲವು ಅಧಿಕಾರಿಗಳ ಹಗರಣಕ್ಕೆ ಸಂಬಂಧಿಸಿದ ಕಡತಗಳೇ ಮಾಯವಾಗಿವೆ. ಆರೋಪ ಹೊತ್ತ ನೌಕರರ ಪ್ರಕರಣಗಳು ಯಾವ ಹಂತದಲ್ಲಿವೆ ಎನ್ನುವ ಪೂರ್ಣ ವಿವರವೂ ಇಲಾಖೆ ಬಳಿ ಅಲಭ್ಯವಾಗಿದೆ.ಪ್ರತಿಯೊಬ್ಬ ಅಧಿಕಾರಿಗಳ ವಿಷಯವಾಗಿಯೂ `ವಿಚಾರಣೆ ಪ್ರಗತಿಯಲ್ಲಿದೆ, ಕ್ರಿಮಿನಲ್ ಪ್ರಕರಣ ದಾಖಲಾಗಿದೆ, ಅಮಾನತು ರದ್ದುಗೊಳಿಸಿ ಮಾತೃ ಇಲಾಖೆಗೆ ಕಳುಹಿಸಲಾಗಿದೆ' ಎಂಬಂತಹ ಶರಾ ಬರೆಯಲಾಗಿದೆ.ಶಾಂತಿನಗರ ವಿಭಾಗದಲ್ಲಿ ಇ-ಪ್ರಕ್ಯೂರ್‌ಮೆಂಟ್ ಮೂಲಕ ಟೆಂಡರ್ ಕರೆಯದೆ ಹಗರಣಕ್ಕೆ ಕಾರಣವಾದ ಆರೋಪವು ಕಾರ್ಯಪಾಲಕ ಎಂಜಿನಿಯರ್‌ಗಳಾದ ವಿ.ರಾಜಮನೋಹರ್, ಬಿ.ಜಿ. ರಾಘವೇಂದ್ರ ಪ್ರಸಾದ್ ಅವರ ಮೇಲಿತ್ತು. 2011-12ರಲ್ಲಿ ನಡೆದ ಈ ಪ್ರಕರಣದಲ್ಲಿ ಇಬ್ಬರೂ ಎಂಜಿನಿಯರ್‌ಗಳನ್ನು ಅಮಾನತು ಮಾಡಲಾಗಿತ್ತು.ಬಳ್ಳಾರಿ ರಸ್ತೆಯಲ್ಲಿ ಪಶು ಆಸ್ಪತ್ರೆಗೆ ಹೊಂದಿಕೊಂಡಂತೆ 2010-11ರಲ್ಲಿ ನಿರ್ಮಿಸಲಾಗಿದ್ದ ಗೋಡೆ ಕಳಪೆಯಾಗಿದ್ದುದು ದೃಢಪಟ್ಟ ಹಿನ್ನೆಲೆಯಲ್ಲಿ ಎಂಜಿನಿಯರ್‌ಗಳಾದ ಟಿ.ಪಿ. ಪದ್ಮನಾಭ, ಚಿದಾನಂದಯ್ಯ, ಅಶ್ವಥ್ ನಾರಾಯಣರೆಡ್ಡಿ, ಸತೀಶ್ ಅವರನ್ನು ಅಮಾನತು ಮಾಡಲಾಗಿತ್ತು. ಆದರೆ, ಈ ಹಗರಣಗಳ ತನಿಖೆ ಇನ್ನೂ ಮುಗಿದಿಲ್ಲ. ಪ್ರಕರಣದಲ್ಲಿ ಅವರ ಪಾತ್ರ ಏನು ಎಂಬುದು ಗೊತ್ತಾಗಿಲ್ಲ.ತುರ್ತು ಕಾಮಗಾರಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಮಂಜೂರು ಮಾಡಿಸಿಕೊಂಡು ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ಇದ್ದ ಆರೋಪದ ಮೇಲೆ ಕಾರ್ಯಪಾಲಕ ಎಂಜಿನಿಯರ್‌ಗಳಾಗಿದ್ದ ಕೀರಾ ನಾಯಕ್, ಜೋಗಿ ಸಿದ್ದೇಗೌಡ, ಬಿಲ್ಲು ಅನುಮೋದನೆ ಆಗುವ ಮುನ್ನವೇ ಹಣ ಬಿಡುಗಡೆ ಮಾಡಿದ್ದ ಸಹಾಯಕ ನಿಯಂತ್ರಕ (ಹಣಕಾಸು) ಸಂಗಪ್ಪ ಉಪಾಸೆ ಅವರನ್ನು ಸಹ ಅಮಾನತು ಮಾಡಲಾಗಿದೆ. ಪ್ರಕರಣಗಳು ನಡೆದು ವರ್ಷಗಳೇ ಉರುಳಿದ್ದರೂ ತನಿಖೆ ಮಾತ್ರ ಇನ್ನೂ ನಡೆಯುತ್ತಲೇ ಇದೆ.ಹೈಕೋರ್ಟ್‌ನಲ್ಲಿ ನಡೆದ ಪ್ರಕರಣವೊಂದರಲ್ಲಿ ಪ್ರತಿವಾದಿ ಆಗದೇ ಇದ್ದರೂ ಅಧಿಕಾರದ ವ್ಯಾಪ್ತಿ ಮೀರಿ ಬಿಬಿಎಂಪಿ ಪರವಾಗಿ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ ಸೂಪರಿಂಟೆಂಡಿಂಗ್ ಎಂಜಿನಿಯರ್ ಟಿ.ನಟರಾಜ್, ಅಪರ ನಿರ್ದೇಶಕ (ನಗರ ಯೋಜನೆ) ಎಸ್.ಎಸ್. ಟೊಪಗಿ, ಕಾರ್ಯಪಾಲಕ ಎಂಜಿನಿಯರ್ ಪಿ.ರಾಜೀವ್ ಹಾಗೂ ಪುಲಕೇಶಿನಗರ ವಿಭಾಗದ ಒಟ್ಟು 662 ಕಾಮಗಾರಿಗಳಿಗೆ ಅಂದಾಜು ಪಟ್ಟಿ ತಯಾರಿಸುವಲ್ಲಿ ಗುರುತರವಾದ ಕರ್ತವ್ಯಲೋಪ ಎಸೆಗಿದ ಸೂಪರಿಂಟೆಂಡಿಂಗ್ ಎಂಜಿನಿಯರ್ ಗೋವಿಂದರಾಜು, ವ್ಯವಸ್ಥಾಪಕ (ತಾಂತ್ರಿಕ) ಎಂ.ಸಿ. ಸೋಮೇಶ್ ಅವರ ಪ್ರಕರಣವೂ ಇತ್ಯರ್ಥವಾಗಿಲ್ಲ.ದ್ವಿತೀಯ ದರ್ಜೆ ಸಹಾಯಕರಾಗಿದ್ದ ಶರಣ್, ತಿಮ್ಮೇಗೌಡ, ಜಿ.ಟಿ. ನಾಗರಾಜು, ಸಿದ್ಧರಾಜು, ಪೈರೋಜ್ ಖಾನ್, ಕಾತ್ಯಾಯಿನಿ, ಕೃಷ್ಣ, ಉಪ ನಿಯಂತ್ರಕರಾಗಿದ್ದ (ಹಣಕಾಸು ಕೇಂದ್ರ) ರಘು, ಸಹಾಯಕ ನಿಯಂತ್ರಕರಾಗಿದ್ದ ರಮೇಶ್ ರೆಡ್ಡಿ ಅವರ ವಿರುದ್ಧ 2011ರಲ್ಲಿ ಆರಂಭವಾದ ತನಿಖೆ ಇನ್ನೂ ಮುಗಿದಿಲ್ಲ.ಅಧಿಕಾರಿಗಳ ವಿರುದ್ಧದ ಆರೋಪದ ಪ್ರಕರಣಗಳು ಯಾವ ಹಂತದಲ್ಲಿವೆ ಎಂಬ ಅರ್ಜಿದಾರರ ಪ್ರಶ್ನೆಗೆ ಬಿಬಿಎಂಪಿಯಿಂದ ಜಾರಿಕೊಳ್ಳುವ ಉತ್ತರ ನೀಡಲಾಗಿದೆ. `ಕಡತ ವ್ಯವಹರಣೆಯಲ್ಲಿ ಇರುತ್ತದೆ, ಕಡತವನ್ನು ಕಾನೂನು ವಿಭಾಗದ ಅಭಿಪ್ರಾಯ ಕೋರಿ ಕಾನೂನು ಕೋಶದ ಮುಖ್ಯಸ್ಥರಿಗೆ ಕಳುಹಿಸಲಾಗಿದೆ, ಆರೋಪ ಪಟ್ಟಿ ತಯಾರಿಸಲು ಕಡತ ವ್ಯವಹರಣೆಯಲ್ಲಿದೆ' ಎಂಬಂತಹ ಉತ್ತರಗಳನ್ನು ನೀಡಲಾಗಿದೆ. ಕೆಳಹಂತದ ನೌಕರರ ಬೆರಳೆಣಿಕೆಯಷ್ಟು ಪ್ರಕರಣಗಳಲ್ಲಿ ಮಾತ್ರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.ಹಲವು ಅಧಿಕಾರಿಗಳ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಕಡತಗಳೇ ಮಾಯವಾಗಿವೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಅನಾಹುತ ಸಂಭವಿಸಿ ಕಡತಗಳು ಸುಟ್ಟು ಕರಕಲಾಗಲು ಕೆಲವು ಅಧಿಕಾರಿಗಳ ಪಾತ್ರವೇ ಕಾರಣ ಎಂಬ ದೂರುಗಳೂ ಕೇಳಿಬಂದಿವೆ.ಅಲ್ಲಿತ್ತು ನಮ್ಮನೆ; ಇಲ್ಲಿದ್ದುದು ಸುಮ್ಮನೆ

ಯಲಹಂಕ ವಲಯ, ಬ್ಯಾಟರಾಯನಪುರ ವಲಯದಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಕರ್ತವ್ಯಲೋಪ ಎಸಗಿದ ಸೂಪರಿಂಟೆಂಡಿಂಗ್ ಎಂಜಿನಿಯರ್ ನಾಗರಾಜು, ಕಾರ್ಯಪಾಲಕ ಎಂಜಿನಿಯರ್‌ಗಳಾದ ಪ್ರಹ್ಲಾದ, ಮೋಹನ್‌ದಾಸ್ ಮತ್ತು ದೇವೇಂದ್ರ ನಾಯಕ್ ಅವರನ್ನೂ ಅಮಾನತು ಮಾಡಲಾಗಿತ್ತು. ಹಗರಣದ ತನಿಖೆ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ.ಲೋಕೋಪಯೋಗಿ ಇಲಾಖೆಗೆ (ಪಿಡಬ್ಲುಡಿ) ಸೇರಿದ ಹಲವು ಎಂಜಿನಿಯರ್‌ಗಳು ಬಿಬಿಎಂಪಿಗೆ ಎರವಲು ಸೇವೆ ಮೇಲೆ ಬಂದು, ಕರ್ತವ್ಯಲೋಪ ಎಸಗಿದ ಪ್ರಕರಣಗಳೇ ದೊಡ್ಡ ಪ್ರಮಾಣದಲ್ಲಿವೆ. ಎಲ್ಲರಿಗೂ ಮಾತೃ ಇಲಾಖೆಗೆ ಮರಳುವ `ಶಿಕ್ಷೆ' ವಿಧಿಸಲಾಗಿದೆ. ಹಲವು ಪ್ರಕರಣಗಳ ಆರೋಪಿಗಳು ಈಗಾಗಲೇ ಅಮಾನತು ಶಿಕ್ಷೆಯನ್ನು ಪೂರೈಸಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.ವಲಯ ಅರಣ್ಯ ಸಂರಕ್ಷಣಾಧಿಕಾರಿ ಆಗಿದ್ದ ಎಚ್.ಕೆ. ಮರಿಸ್ವಾಮಿ ಮಹದೇವಪುರ ವಲಯದಲ್ಲಿ ಸಸಿ ನೆಡುವ ಕಾರ್ಯದಲ್ಲಿ ಅಕ್ರಮ ಎಸಗಿದ್ದು 2011ರಲ್ಲಿ ದೃಢಪಟ್ಟಿತ್ತು. ಬಿಬಿಎಂಪಿ ಅವರಿಗೆ ವಿಧಿಸಿದ ಶಿಕ್ಷೆ ಏನೆಂದರೆ ತನ್ನ ಸೇವೆಯಿಂದ ಮುಕ್ತಗೊಳಿಸಿ ಅವರನ್ನು ಮಾತೃ ಇಲಾಖೆಗೆ ವರ್ಗಾಯಿಸಿದ್ದು. ಅದೇ ರೀತಿ ತಪ್ಪು ಸಾಬೀತಾದ ಡಾ. ಸುನಿಲ್, ಡಾ. ಅಮರೇಶ್ ಗದ್ದಿ, ಡಾ. ಸಿದ್ದಪ್ಪಾಜಿ, ಡಾ. ಸವಿತಾ ಅವರನ್ನು ಮಾತೃ ಇಲಾಖೆಗೆ ವರ್ಗಾಯಿಸುವ `ಶಿಕ್ಷೆ' ನೀಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.