ಮಂಗಳವಾರ, ಮೇ 18, 2021
30 °C

ಬಿಬಿಎಂಪಿ ವ್ಯಾಪ್ತಿಗೆ 110 ಗ್ರಾಮಗಳ ಸೇರ್ಪಡೆ: ಅಭಿವೃದ್ಧಿ ಶುಲ್ಕ ಒಟ್ಟಿಗೆ ವಸೂಲಿ ಸಲ್ಲ- ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೃಹತ್ ಬೆಂಗಳೂರು ವ್ಯಾಪ್ತಿಗೆ ಒಳಪಟ್ಟಿರುವ 110 ಗ್ರಾಮಗಳಲ್ಲಿ ನಿವೇಶನ ಖರೀದಿ ಮಾಡುವವರಿಂದ ಒಟ್ಟಿಗೇ `ಅಭಿವೃದ್ಧಿ ಶುಲ್ಕ~ ವಸೂಲು ಮಾಡಲು ಹೊರಡಿಸಲಾದ ಸುತ್ತೋಲೆಯನ್ನು ಹೈಕೋರ್ಟ್ ಶುಕ್ರವಾರ ರದ್ದು ಮಾಡಿ ಆದೇಶ ಹೊರಡಿಸಿದೆ.ನಿವೇಶನಗಳ ಅಳತೆಯ ಆಧಾರದ ಮೇಲೆ ಶುಲ್ಕವನ್ನು ಗೊತ್ತು ಮಾಡಿರುವುದು ಕೂಡ ಕಾನೂನುಬಾಹಿರ ಎಂದು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ತೀರ್ಪಿತ್ತಿದ್ದಾರೆ.2011ರ ಫೆಬ್ರುವರಿ 7ರಂದು  ಪಾಲಿಕೆಯ ಕಮಿಷನರ್ ಹೊರಡಿಸಿದ್ದ ಸುತ್ತೋಲೆ ಅನ್ವಯ 30/40 ಚದರ ಅಡಿ ನಿವೇಶನಕ್ಕೆ (ಪ್ರತಿ ಚದರ ಅಡಿಗೆ) ರೂ 200; 60/40 ನಿವೇಶನವಾದರೆ ರೂ 300 ಹಾಗೂ ಅದಕ್ಕಿಂತ ಹೆಚ್ಚಿನ ಅಳತೆಯದ್ದಾಗಿದ್ದರೆ ಪ್ರತಿ ಚದರ ಅಡಿಗೆ ರೂ 400 ಶುಲ್ಕ ನಿಗದಿ ಮಾಡಲಾಗಿತ್ತು. ನಿವೇಶನದ ಅಳತೆಯ ಆಧಾರದ ಮೇಲೆ ಒಟ್ಟಾರೆ ಶುಲ್ಕವನ್ನು ಖಾತೆ ನೋಂದಣಿ ಸಂದರ್ಭದಲ್ಲಿ ಒಂದೇ ಬಾರಿಗೆ ನೀಡಬೇಕಿತ್ತು.

ಇದನ್ನು ಹಲವಾರು ನಿವೇಶನದಾರರು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು.ಶುಲ್ಕ ವಸೂಲಿಗೆ ಸಂಬಂಧಿಸಿದಂತೆ ಹೊಸದಾಗಿ ಕ್ರಮ ತೆಗೆದುಕೊಳ್ಳುವಂತೆ ಪಾಲಿಕೆಗೆ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ.110 ಗ್ರಾಮಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಒಳಪಡಿಸಿದ ನಂತರ, ಅದಕ್ಕೆ ನೀರು ಸರಬರಾಜು, ವಿದ್ಯುತ್ ಇತ್ಯಾದಿ ಸೌಲಭ್ಯಗಳನ್ನು ದೊರಕಿಸಿಕೊಡುವ ಹಿನ್ನೆಲೆಯಲ್ಲಿ ಪಾಲಿಕೆಯು ಅಭಿವೃದ್ಧಿ ಶುಲ್ಕವನ್ನು ವಸೂಲಿ ಮಾಡಲು ನಿರ್ಧರಿಸಿ ಈ ಸಂಬಂಧ ಸುತ್ತೋಲೆ ಹೊರಡಿಸಿತ್ತು. ನಿವೇಶನದ ಅಳತೆ ಮಾನದಂಡವಲ್ಲ: ನಿವೇಶನದ ಅಳತೆಯು ಅದರ ಮಾಲೀಕರ ಹಣಕಾಸಿನ ಪರಿಸ್ಥಿತಿಯ ಮಾನದಂಡವಲ್ಲ. ನಿವೇಶನ ಚಿಕ್ಕದು ಇದ್ದರೆ ಅವರು ಆರ್ಥಿಕವಾಗಿ ಹಿಂದುಳಿದವರು, ದೊಡ್ಡ ನಿವೇಶನವಿದ್ದರೆ ಸಿರಿವಂತರು ಎಂದು ಹೇಳಲಾಗದು. ಇದನ್ನೇ ಮಾನದಂಡವಾಗಿಟ್ಟುಕೊಂಡು ಶುಲ್ಕವನ್ನು ನಿಗದಿ ಮಾಡುವುದು ಸರಿಯಲ್ಲ. ಇದು ಕಾನೂನುಬಾಹಿರ~ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.`ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಹಳ್ಳಿಗಳ ಪೈಕಿ ಹಲವು ಹಳ್ಳಿಗಳು ಬೆಂಗಳೂರು ಹೊರವಲಯಕ್ಕೆ ಸೇರಿರುವಂಥಾದ್ದು. ಅಲ್ಲಿ ಹೆಚ್ಚಿನ ಜನರು ರೈತಾಪಿ ವರ್ಗಕ್ಕೆ ಸೇರ್ದ್ದಿದಾರೆ. ಅವರ ಜಮೀನು ಈಗ ಕೃಷಿಯೇತರ ಜಮೀನಾಗಿ ಪರಿವರ್ತನೆಗೊಂಡು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡಿದೆ. ಆದುದರಿಂದ ನಿವೇಶನದ ಅಳತೆಯ ದೃಷ್ಟಿಯಲ್ಲಿ ಅವರು ಹೆಚ್ಚಿನ ನಿವೇಶನ ಹೊಂದಿದ್ದಾರೆ. ಇದೊಂದೇ ಕಾರಣಕ್ಕೆ ಅನ್ಯಾಯವಾಗಿ ಅವರು, ಹೆಚ್ಚಿಗೆ ಹಣ ನೀಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ಕೋರ್ಟ್ ಕಣ್ಣುಮುಚ್ಚಿ ಕುಳಿತುಕೊಳ್ಳುವುದಿಲ್ಲ~ ಎಂದು ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದಾರೆ.`ಈ ಆದೇಶದಿಂದಾಗಿ, ಖಾತೆ ನೋಂದಣಿ ಮಾಡುವ ವೇಳೆ ಒಂದೇ ಬಾರಿಗೆ ಬಿಬಿಎಂಪಿ ಸಂಪೂರ್ಣ ಶುಲ್ಕವನ್ನು ವಸೂಲಿ ಮಾಡುವಂತಿಲ್ಲ. ಆದರೆ ನಗರಾಭಿವೃದ್ಧಿ ಕಾಯ್ದೆಯ 467ನೇ ಕಲಮಿನ ಅನ್ವಯ 20 ಕಂತುಗಳಲ್ಲಿ ಅದನ್ನು ವಸೂಲಿ ಮಾಡಬಹುದಾಗಿದೆ~ ಎಂದು ಪಾಲಿಕೆಯ ಪರ ವಕೀಲ ಕೆ.ಎನ್.ಪುಟ್ಟೇಗೌಡ ತಿಳಿಸಿದ್ದಾರೆ. ಕೆಪಿಎಸ್ಸಿ ಅವ್ಯವಹಾರ: ಅರ್ಜಿ ಇತ್ಯರ್ಥ

1998, 1999 ಹಾಗೂ 2004ನೇ ಸಾಲಿನಲ್ಲಿ ಕರ್ನಾಟಕ ಲೋಕ ಸೇವಾ ಆಯೋಗ ನಡೆಸಿದ್ದ ಗೆಜೆಟೆಡ್ ಪ್ರೊಬೆಷನರ್ಸ್‌ ಹುದ್ದೆಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಐಡಿ ಅಂತಿಮ ವರದಿ ನೀಡಿದ್ದು, ಈ ಕುರಿತು ಹೈಕೋರ್ಟ್‌ಗೆ ಶುಕ್ರವಾರ ತಿಳಿಸಲಾಯಿತು.ಆ ಅವಧಿಯಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಎಚ್.ಎನ್.ಕೃಷ್ಣ ಸೇರಿದಂತೆ ಆರು ಮಂದಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ತಯಾರು ಮಾಡಲಾಗಿದ್ದು, ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಲಾದ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಈ ಹಿನ್ನೆಲೆಯಲ್ಲಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ಇತ್ಯರ್ಥಗೊಳಿಸಿತು.`ಬಿ~ ವರದಿ ರದ್ದತಿಗೆ ತಡೆ

ಡಿನೋಟಿಫಿಕೇಷನ್ ಹಗರಣದಲ್ಲಿ ಸಿಲುಕಿರುವ ಸಚಿವ ವಿ.ಸೋಮಣ್ಣ ಹಾಗೂ ಅವರ ಪತ್ನಿ ಶೈಲಜಾ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲು ಮಾಡಿದ್ದ `ಬಿ ವರದಿ~ಯನ್ನು ರದ್ದು ಮಾಡಿರುವ ವಿಶೇಷ ಕೋರ್ಟ್ ಆದೇಶಕ್ಕೆ ಹೈಕೋರ್ಟ್ ಶುಕ್ರವಾರ ಮಧ್ಯಂತರ ತಡೆ ನೀಡಿದೆ.`ನಾಗದೇವನಹಳ್ಳಿ ಬಳಿಯ ಸರ್ವೆ ನಂ. 47 ಮತ್ತು 48ರಲ್ಲಿರುವ 3.40 ಎಕರೆ ಜಮೀನಿಗೆ ಸಂಬಂಧಿಸಿದಂತೆ ಅಕ್ರಮ ಎಸಗಿರುವ ಆರೋಪ ಕುರಿತಾಗಿ ನಗರದ ರವಿಕೃಷ್ಣ ರೆಡ್ಡಿ ಅವರು ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ದೂರು ದಾಖಲು ಮಾಡಿದ್ದರು. ಆದರೆ ದಂಪತಿ ವಿರುದ್ಧದ ಈ ಆರೋಪದಲ್ಲಿ ಹುರುಳು ಇಲ್ಲ ಎಂದು ಪೊಲೀಸರು ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ `ಬಿ ವರದಿ~ ಸಲ್ಲಿಸಿದ್ದರು. ಆದರೆ ಈ ವರದಿಯನ್ನು ಮಾನ್ಯ ಮಾಡಲು ಇದೇ 13ರಂದು ಕೋರ್ಟ್ ನಿರಾಕರಿಸಿತ್ತು.ಇದನ್ನು ದಂಪತಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಅರ್ಜಿಗೆ ಸಂಬಂಧಿಸಿದಂತೆ ದೂರುದಾರ ರವಿಕೃಷ್ಣ ರೆಡ್ಡಿ ಅವರಿಗೆ ನೋಟಿಸ್ ಜಾರಿಗೆ ಆದೇಶಿಸಿರುವ ನ್ಯಾಯಮೂರ್ತಿ ವಿ.ಜಗನ್ನಾಥನ್ ವಿಚಾರಣೆ ಮುಂದೂಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.