ಸೋಮವಾರ, ಏಪ್ರಿಲ್ 19, 2021
32 °C

ಬಿಬಿಎಂಪಿ ಶಾಲೆಗಳಲ್ಲಿ ವಿಶೇಷ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಬೆಂಗಳೂರು: ಅರ್ಧಕ್ಕೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಿ ಅವರನ್ನು ಮತ್ತೆ ಶಾಲೆಗೆ ಕರೆ ತರುವ ನಿಟ್ಟಿನಲ್ಲಿ ಬಿಬಿಎಂಪಿ ವಿಶೇಷ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಪಾಲಿಕೆ ಪ್ರೌಢಶಾಲೆಗಳಲ್ಲಿ ‘ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್’ ವಿಧಾನದಡಿ ವಿದ್ಯಾರ್ಥಿಗಳ ಹಾಜರಾತಿ ಮೇಲ್ವಿಚಾರಣೆ ನಡೆಸಲು ಗಂಭೀರ ಚಿಂತನೆ ನಡೆಸಿದೆ.ಪಾಲಿಕೆ ಶಾಲೆಗಳಲ್ಲಿ ಪ್ರತಿವರ್ಷ ಹಲವು ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಶಾಲೆಯಿಂದ ದೂರ ಉಳಿಯುತ್ತಾರೆ. ಈ ಮಕ್ಕಳನ್ನು ಪತ್ತೆ ಹಚ್ಚಿ ವಾಪಸ್ ಕರೆ ತರಲು ವರ್ಷವೊಂದಕ್ಕೆ ಸುಮಾರು ಮೂರು ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಆದರೂ ಶಾಲೆಯಿಂದ ದೂರ ಉಳಿದ ಎಲ್ಲ ಮಕ್ಕಳನ್ನು ವಾಪಸ್ ಕರೆತರಲು ಸಾಧ್ಯವಾಗಿಲ್ಲ.ಆ ಹಿನ್ನೆಲೆಯಲ್ಲಿ ‘ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್’ ವಿಧಾನವನ್ನು ಜಾರಿಗೊಳಿಸಲು ಪಾಲಿಕೆಯ ಶಿಕ್ಷಣ ಮತ್ತು ಕ್ರೀಡಾ ಸ್ಥಾಯಿ ಸಮಿತಿ ಚಿಂತಿಸಿದೆ. ಈ ವಿಧಾನದಲ್ಲಿ ಪಾಲಿಕೆಯ ಎಲ್ಲ 33 ಪ್ರೌಢಶಾಲೆಗಳಲ್ಲಿ ಕ್ಯಾಮೆರಾ ಸಹಿತ ಸೆನ್ಸಾರ್ ಸಾಧನವನ್ನು ಅಳವಡಿಸಲಾಗುತ್ತದೆ.ವಿದ್ಯಾರ್ಥಿಗಳಿಗೆ ವಿಶೇಷವಾದ ಗುರುತಿನ ಚೀಟಿ ವಿತರಿಸಲಾಗುತ್ತದೆ. ವಿದ್ಯಾರ್ಥಿಗಳು ಶಾಲೆ ಪ್ರವೇಶಿಸುತ್ತಿದ್ದಂತೆ ವಿಡಿಯೋ ಚಿತ್ರೀಕರಣವಾಗುತ್ತದೆ. ಜತೆಗೆ ಗುರುತಿನ ಚೀಟಿಯಲ್ಲಿರುವ ಸಂಕೇತಗಳು ಸೆನ್ಸಾರ್ ಮೂಲಕ ದಾಖಲಾಗುತ್ತವೆ. ಇದರಿಂದ ವಿದ್ಯಾರ್ಥಿಗಳ ಹಾಜರಾತಿಯನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎಂಬುದು ಪಾಲಿಕೆಯ ನಂಬಿಕೆ.‘ಪಾಲಿಕೆ ಶಾಲೆಗೆ ದಾಖಲಾಗುವ ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಆದರೆ ಯಾವುದೇ ವಿದ್ಯಾರ್ಥಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸದಂತೆ ಎಚ್ಚರ ವಹಿಸಬೇಕಿದೆ. ಈ ಮಕ್ಕಳನ್ನು ಪತ್ತೆ ಹಚ್ಚಿ ವಾಪಸ್ ಶಾಲೆಗೆ ಕರೆ ತರಲು ಸುಮಾರು ಮೂರು ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ’ ಎಂದು ಶಿಕ್ಷಣ ಮತ್ತು ಕ್ರೀಡಾ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ. ಗಣೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.‘ಶಾಲೆಯನ್ನು ಬಿಟ್ಟು ಹೋದ ಮಕ್ಕಳನ್ನು ವಾಪಸ್ ಕರೆತರಲು ಪಾಲಿಕೆ ದಕ್ಷಿಣ ವಲಯದಲ್ಲಿ ರೂ 59 ಲಕ್ಷ, ಮಹದೇವಪುರ ವಲಯದಲ್ಲಿ ರೂ 49 ಲಕ್ಷ ಹಾಗೂ ರಾಜರಾಜೇಶ್ವರಿ ವಲಯದಲ್ಲಿ 26 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಈ ವೆಚ್ಚವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ನೂತನ ವ್ಯವಸ್ಥೆ ಜಾರಿಗೆ ತರಲು ಚಿಂತಿಸಲಾಗಿದೆ’ ಎಂದರು.‘ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ವಿಧಾನದಡಿ ಶಾಲೆಗೆ ಬರುವ ಮಕ್ಕಳ ಹಾಜರಾತಿಯನ್ನು ಆನ್‌ಲೈನ್ ಮೂಲಕ ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಶಾಲೆಯ ಪ್ರವೇಶ ದ್ವಾರಗಳಿಗೆ ಅಳವಡಿಸಲಾಗುವ ಕ್ಯಾಮೆರಾ ಹಾಗೂ ಸೆನ್ಸಾರ್ ಸಾಧನದಿಂದ ಮಾಹಿತಿಯನ್ನು ಕೊಠಡಿಯಲ್ಲೇ ಕುಳಿತು ಪಡೆಯಬಹುದು. ಆಯುಕ್ತರು, ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಣ ಮತ್ತು ಕ್ರೀಡಾ ಸ್ಥಾಯಿ ಸಮಿತಿ ಕೊಠಡಿಯಲ್ಲಿ ಅಳವಡಿಸಲಾದ ಸಾಧನದಲ್ಲಿ ಮಾಹಿತಿ ಪಡೆಯಬಹುದಾಗಿದೆ’ ಎಂದು ಹೇಳಿದರು.‘ಇದರಿಂದ ಮಕ್ಕಳ ಹಾಜರಾತಿಯನ್ನು ನಿತ್ಯ ಪರಿಶೀಲಿಸಬಹುದು. ಒಂದೊಮ್ಮೆ ಕೆಲ ವಿದ್ಯಾರ್ಥಿಗಳು ನಿರಂತರವಾಗಿ ಗೈರು ಹಾಜರಾದರೆ ಆ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರ ಬಳಿ ವಿವರ ಕೇಳಬಹುದು. ಆ ಮಕ್ಕಳನ್ನು ವಾಪಸ್ ಶಾಲೆಗೆ ಕರೆ ತರಲು ಪ್ರಯತ್ನಿಸಬಹುದಾಗಿದೆ. ಈ ವಿಧಾನ ಅಳವಡಿಕೆಗೆ ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚವಾಗಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಇದನ್ನು ಜಾರಿಗೊಳಿಸಲು ಚಿಂತಿಸಲಾಗಿದೆ’ ಎಂದು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.