ಮಂಗಳವಾರ, ಏಪ್ರಿಲ್ 13, 2021
30 °C

ಬಿಬಿಎಂಪಿ: ಸಂಧಾನ, ಪ್ರತಿಭಟನೆ ಮುಂದುವರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದಲ್ಲಿ ಡೆಂಗೆ, ಮತ್ತಿತರ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಜನ ಆತಂಕ ಎದುರಿಸುತ್ತಿರುವ ಸಮಯದಲ್ಲಿಯೇ ಬಿಬಿಎಂಪಿ ನೌಕರರು ಮುಷ್ಕರ ನಡೆಸುವ ಮೂಲಕ ಪೌರ ಕಾರ್ಮಿಕರನ್ನೂ ಕೆಲಸ ಮಾಡದಂತೆ ತಡೆಯೊಡ್ಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.ಕಚೇರಿಗಳು ಬಂದ್- ಸೇವೆಗೆ ಧಕ್ಕೆ

ಬಿಬಿಎಂಪಿ ಕೇಂದ್ರ ಕಚೇರಿ ಹಾಗೂ ಎಂಟು ವಲಯಗಳ ವ್ಯಾಪ್ತಿಯ ಪಾಲಿಕೆ ಕಚೇರಿಗಳು ಗುರುವಾರ ಕೂಡ ಬಂದ್ ಆಗಿದ್ದವು. ನೌಕರರು ಸೇವೆಗೆ ಗೈರು ಹಾಜರಾಗುವ ಮೂಲಕ ಕೇಂದ್ರ ಕಚೇರಿ ಆವರಣದಲ್ಲಿ ಬೆಳಿಗ್ಗೆ 10.30ಯಿಂದ ಸಂಜೆ 5 ಗಂಟೆವರೆಗೆ ಪ್ರತಿಭಟನೆ ಮುಂದುವರಿಸಿದರು. ಬಿಎಂಟಿಎಫ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮುಷ್ಕರದಲ್ಲಿ ಪಾಲ್ಗೊಂಡ ನೌಕರರು ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೆ ಮುಷ್ಕರ ಮುಂದುವರಿಸುವುದಾಗಿ ಘೋಷಿಸಿದರು.ಈ ನಡುವೆ, ಮೇಯರ್ ಡಿ. ವೆಂಕಟೇಶಮೂರ್ತಿ, ಉಪ ಮೇಯರ್ ಎಲ್. ಶ್ರೀನಿವಾಸ್, ಆಡಳಿತ ಪಕ್ಷದ ನಾಯಕ ಎನ್. ನಾಗರಾಜ್, ಮುಷ್ಕರ ನಿರತರ ಸ್ಥಳಕ್ಕೆ ತೆರಳಿ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರತಿಭಟನೆ ವಾಪಸು ತೆಗೆದುಕೊಳ್ಳುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜ ನವಾಗಲಿಲ್ಲ.ಆನಂತರ ಪಾಲಿಕೆ ಕಚೇರಿಯ ಸಭಾಂಗಣದಲ್ಲಿಯೂ ಮೇಯರ್ ಹಾಗೂ ಆಯುಕ್ತರು ಮುಷ್ಕರನಿರತ ಅಧಿಕಾರಿಗಳು ಹಾಗೂ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ವಿಫಲವಾಯಿತು.

ಬೆಳಿಗ್ಗೆ ಕಾರ್ಯಕಾರಿ ಸಮಿತಿ ಸಭೆ`ನಮ್ಮ ಬೇಡಿಕೆ ಇನ್ನೂ ಈಡೇರಿಲ್ಲ. ಮೇಯರ್ ಹಾಗೂ ಆಯುಕ್ತರೊಂದಿಗೆ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ. ಶುಕ್ರವಾರ ಬೆಳಿಗ್ಗೆ ನಡೆಯಲಿರುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮತ್ತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ~ ಎಂದು ಸುಬ್ರಮಣ್ಯಂ ತಿಳಿಸಿದರು.

ಮುಷ್ಕರ: ಪೌರ ಕಾರ್ಮಿಕರ ಸಂಘದಲ್ಲಿ ಭಿನ್ನಾಭಿಪ್ರಾಯ 

ಮುಷ್ಕರ ಮುಂದುವರಿಸುವ ಅಥವಾ ಹಿಂತೆಗೆದುಕೊಳ್ಳುವ ವಿಚಾರದಲ್ಲಿ ಬಿಬಿಎಂಪಿ ಪೌರ ಕಾರ್ಮಿಕರ ಮತ್ತು ಆರೋಗ್ಯ ಗ್ಯಾಂಗ್‌ಮೆನ್ ಸಂಘದ ಪದಾಧಿಕಾರಿಗಳಲ್ಲಿಯೇ ಭಿನ್ನಾಭಿಪ್ರಾಯ ತಲೆದೋರಿದೆ.ಸಂಘದ 13 ಚುನಾಯಿತ ಪ್ರತಿನಿಧಿಗಳ ಪೈಕಿ ಅಧ್ಯಕ್ಷ ನರಸಿಂಹ, ಪ್ರಧಾನ ಕಾರ್ಯದರ್ಶಿ ಪೋತನ್ನ ಹಾಗೂ ಖಜಾಂಚಿ ವೆಂಕಟಾಚಲಪತಿ ಅವರ ಬಣ ಮುಷ್ಕರ ವಾಪಸು ತೆಗೆದುಕೊಂಡಿರುವುದಾಗಿ ತಿಳಿಸಿದರೆ, ಚುನಾಯಿತ ನಿರ್ದೇಶಕರಾದ ಎನ್. ನಾರಾಯಣ, ಎನ್. ವೆಂಕಟರಮಣ, ಶೇಖರ್, ಕೆ. ಲಿಂಗರಾಜು, ಶಿವರಾಮೇಗೌಡ ಅವರ ಬಣ ಮುಷ್ಕರಕ್ಕೆ ಬೆಂಬಲ ಮುಂದುವರಿಸಿದೆ.ಇದರಿಂದ ಮುಷ್ಕರದ ವಿಚಾರದಲ್ಲಿ ಸಂಘವು ಎರಡು ಹೋಳಾಗಿದ್ದು, ಸಂಘದ 8 ಸದಸ್ಯರ ಬಣ ಮುಷ್ಕರ ವಾಪಸು ತೆಗೆದುಕೊಳ್ಳುವುದಾಗಿ ಘೋಷಿಸಿದ್ದರೆ, ಐವರು ಸದಸ್ಯರ ಬಣ ಮುಷ್ಕರಕ್ಕೆ ಬೆಂಬಲ ಘೋಷಿಸಿದೆ.

`ಮುಷ್ಕರದಿಂದ ಜನರಿಗೆ ಆಗುತ್ತಿರುವ ತೊಂದರೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ಆದರೆ, ಕಾರ್ಯಕಾರಿ ಸಮಿತಿ ಗಮನಕ್ಕೂ ತಾರದೆ ಅಧ್ಯಕ್ಷರು ತೀರ್ಮಾನ ಕೈಗೊಂಡಿದ್ದಾರೆ. ನಮ್ಮನ್ನು ಯಾರೂ ಸಂಪರ್ಕಿಸಿಲ್ಲ.ಬಿಎಂಟಿಎಫ್‌ನಿಂದ ನಮ್ಮ ಅಧಿಕಾರಿಗಳಿಗೆ ತೊಂದರೆಯಾಗುತ್ತಿರುವುದರಿಂದ ಅವರಿಗೆ ನಾವು ಬೆಂಬಲ ಮುಂದುವರಿಸುತ್ತಿದ್ದೇವೆ. ಶುಕ್ರವಾರ ಕೂಡ ಗ್ಯಾಂಗ್‌ಮೆನ್‌ಗಳು, ತೋಟಗಾರಿಕಾ ಮಾಲಿ/ಮೇಸ್ತ್ರಿ, ವಾಟರ್‌ಮೆನ್, ಕ್ಲೀನರ್ ಹಾಗೂ `ಡಿ~ ದರ್ಜೆಗೆ ಒಳಪಡುವ ಎಲ್ಲ ಪೌರ ಕಾರ್ಮಿಕರು ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ~ ಎಂದು ಚುನಾಯಿತ ನಿರ್ದೇಶಕ ಎನ್. ನಾರಾಯಣ ಸುದ್ದಿಗಾರರಿಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.