ಮಂಗಳವಾರ, ಏಪ್ರಿಲ್ 13, 2021
23 °C

ಬಿಬಿಎಂಪಿ: ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಣಗಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಸುತ್ತಮುತ್ತಲಿನ ಏಳು ಸ್ಥಳೀಯ ಸಂಸ್ಥೆಗಳು ಹಾಗೂ 110 ಹಳ್ಳಿಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿ ಭಾರ ಹೊರಿಸಿದ ರಾಜ್ಯ ಸರ್ಕಾರ, ಅದಕ್ಕೆ ಪೂರಕವಾಗಿ ಅನುದಾನ ನೀಡದೆ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದರಿಂದ ಬಿಬಿಎಂಪಿಯು ಬೃಹತ್ ಗಾತ್ರದ ಬಜೆಟ್ ಮಂಡಿಸಿದರೂ ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಣಗಾಡುವಂತಾಗಿದೆ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಆರೋಪಿಸಿದೆ.ನಗರದ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಮೇಯರ್ ಡಿ. ವೆಂಕಟೇಶಮೂರ್ತಿ ಅಧ್ಯಕ್ಷತೆಯಲ್ಲಿ ಸೋಮವಾರ ಪ್ರಾರಂಭವಾದ ಪಾಲಿಕೆಯ 2012-13ನೇ ಸಾಲಿನ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿರೋಧ ಪಕ್ಷದ ನಾಯಕ ಎಂ.ಕೆ. ಗುಣಶೇಖರ್, `60 ಕೆ.ಜಿ. ಭಾರ ಹೊರುವ ಸಾಮರ್ಥ್ಯ ಇರುವ ಪಾಲಿಕೆಯ ಮೇಲೆ 200 ಕೆ.ಜಿ. ಭಾರ ಹೊರಿಸಿದ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವ ವಿಚಾರದಲ್ಲಿ ಉದಾಸೀನ ತೋರುತ್ತಿದೆ~ ಎಂದು ದೂರಿದರು.`ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಮುಂಬೈ ಮಹಾನಗರ ಪಾಲಿಕೆಗಳಲ್ಲಿ ತಮ್ಮದೇ ಆದ ಕಾನೂನು ಮಾಡಿಕೊಳ್ಳಲು ಅಲ್ಲಿನ ಸರ್ಕಾರಗಳು ಅವಕಾಶ ನೀಡಿವೆ. ಅಲ್ಲದೆ, ಪಾಲಿಕೆಗೆ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನೂ ನೀಡಿವೆ. ಆದರೆ, ರಾಜ್ಯ ಸರ್ಕಾರ ಕರ್ನಾಟಕ ಮುನಿಸಿಪಲ್ ಕಾಯ್ದೆಯನ್ವಯ ಆಡಳಿತ ನಡೆಸುವಂತೆ ಪಾಲಿಕೆಗೆ ಹೇಳುವುದು ಎಷ್ಟರ ಮಟ್ಟಿಗೆ ಸರಿ?~ ಎಂದು ಅವರು ಪ್ರಶ್ನಿಸಿದರು.`2010-11ನೇ ಸಾಲಿನ ಬಜೆಟ್‌ನಲ್ಲಿ ಪಾಲಿಕೆಯು ರಾಜ್ಯ ಸರ್ಕಾರದಿಂದ 1300 ಕೋಟಿ ರೂಪಾಯಿ ಅನುದಾನ ನಿರೀಕ್ಷಿಸಿತ್ತು. ಆದರೆ, ಸರ್ಕಾರ ಬರೀ 300 ಕೋಟಿ ರೂಪಾಯಿ ಅನುದಾನ ನೀಡಿತು. ಅಂತೆಯೇ, 2011-12ನೇ ಸಾಲಿನಲ್ಲಿ 1500 ಕೋಟಿ ಅನುದಾನ ನಿರೀಕ್ಷಿಸಿದ್ದರೆ ಕೇವಲ 750 ಕೋಟಿ ಅನುದಾನ ನೀಡಿದೆ.ಒಂದೆಡೆ ತೆರಿಗೆ ವಿಧಿಸಲು ಸರ್ಕಾರ ಪಾಲಿಕೆಗೆ ಅಧಿಕಾರ ನೀಡದ ಸರ್ಕಾರ, ಮತ್ತೊಂದೆಡೆ ಅನುದಾನವನ್ನೂ ನೀಡುತ್ತಿಲ್ಲ. ಇದರಿಂದ ಪಾಲಿಕೆ ಬೃಹತ್ ಗಾತ್ರದ ಬಜೆಟ್ ಮಂಡಿಸಿ ಖರ್ಚು ಹೆಚ್ಚು ತೋರಿಸಿದರೂ ಸಂಪನ್ಮೂಲ ಕೊರತೆಯಿಂದ ಆಸ್ತಿಗಳ ಮೇಲೆ ಸಾಲ ಪಡೆಯುವಂತಾಗಿದೆ~ ಎಂದರು.7 ತಿಂಗಳಲ್ಲಿ 9,400 ಕೋಟಿ ಖರ್ಚು ಮಾಡಲು ಸಾಧ್ಯವೇ?: `ಬಜೆಟ್‌ಗೆ ಅನುಮೋದನೆ ನೀಡು ಸರ್ಕಾರಕ್ಕೆ ಎರಡು ತಿಂಗಳ ಕಾಲಾವಕಾಶ ಇದೆ. ಆನಂತರ ಉಳಿದ ಆರ್ಥಿಕ ವರ್ಷದ ಏಳು ತಿಂಗಳಲ್ಲಿ 9,400 ಕೋಟಿ ರೂಪಾಯಿಗಳ ವರಮಾನ ಸಂಗ್ರಹಿಸಿ ಖರ್ಚು ಮಾಡಲು ಸಾಧ್ಯವೇ?~ ಎಂದು ಪ್ರಶ್ನಿಸಿದ ಅವರು, `ಕ್ರೆಡಿಟ್ ರೇಟಿಂಗ್‌ನಲ್ಲಿ `ಬಿ ಡಬಲ್ ಪ್ಲಸ್~ ಶ್ರೇಣಿ ಹೊಂದಿರುವ ಬೆಂಗಳೂರು ಆರ್ಥಿಕ ನಿರ್ವಹಣೆಯಲ್ಲಿ ದುರ್ಬಲವಾಗಿದೆ.

 

ಹೀಗಾಗಿ, ಮುನಿಸಿಪಲ್ ಬಾಂಡ್ ವಿತರಣೆ ಮೂಲಕ 1000 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವುದು ಅಸಾಧ್ಯ~ ಎಂದು ಅಭಿಪ್ರಾಯಪಟ್ಟರು.`ಮುನಿಸಿಪಲ್ ಬಾಂಡ್‌ಗಳನ್ನು ವಿತರಿಸಲು ಸರ್ಕಾರ ಅನುಮೋದನೆ ನೀಡಿದೆಯೇ? ಇಂತಹ ಬಾಂಡ್‌ಗಳಿಗೆ ಸರ್ಕಾರ ಗ್ಯಾರಂಟಿ ನೀಡಲಿದೆಯೇ? ದೀರ್ಘಾವಧಿ ಬಾಂಡ್ ಪಡೆಯುವವವರಿಗೆ ಎಷ್ಟು ಬಡ್ಡಿ ನೀಡಲಾಗುತ್ತದೆ ಎಂಬುದನ್ನು ಪಾಲಿಕೆ ಸ್ಪಷ್ಟಪಡಿಸಬೇಕು~ ಎಂದು ಆಗ್ರಹಿಸಿದರು.ಎಲೆಕ್ಟ್ರಾನಿಕ್ ಸಿಟಿಯನ್ನೂ ಪಾಲಿಕೆಗೆ ಸೇರಿಸಲಿ: `ಬೊಮ್ಮನಹಳ್ಳಿಯನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿದ ಸರ್ಕಾರ, ಅದರ ಕೇವಲ 2 ಕಿ.ಮೀ. ಹೊರಗಿನ ಎಲೆಕ್ಟ್ರಾನಿಕ್ ಸಿಟಿಯನ್ನೂ ಸೇರಿಸಿದ್ದರೆ ಸುಮಾರು 200 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹವಾಗುತ್ತಿತ್ತು. ಈ ಸಂಬಂಧ ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳಿಸಬೇಕು~ ಎಂದು ಮನವಿ ಮಾಡಿದರು.ಆಸ್ತಿ ತೆರಿಗೆ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದರ ಜತೆಗೆ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಪೆಟ್ರೋಲ್ ಬಂಕ್‌ನ ಟ್ಯಾಂಕ್, ರೇಸ್‌ಕೋರ್ಸ್‌ಗಳಿಂದ ಸೂಕ್ತ ರೀತಿಯಲ್ಲಿ ತೆರಿಗೆ ಸಂಗ್ರಹಿಸಲು ಪಾಲಿಕೆ ಮುಂದಾದಲ್ಲಿ ನಿರೀಕ್ಷಿತ ವರಮಾನ ಸಂಗ್ರಹಿಸಲು ಸಾಧ್ಯವಾಗಲಿದೆ ಎಂದು ಸಲಹೆ ಮಾಡಿದರು.ಮೂರು ತಿಂಗಳಲ್ಲಿ ಅನುಷ್ಠಾನಕ್ಕೆ ಕ್ರಮ: ಇದಕ್ಕೂ ಮುನ್ನ ಮಾತನಾಡಿದ ಆಡಳಿತ ಪಕ್ಷದ ನಾಯಕ ಎನ್. ನಾಗರಾಜು, `ರಾಜ್ಯ ಸರ್ಕಾರ ಬಜೆಟ್‌ಗೆ ಅನುಮೋದನೆ ನೀಡಿದ ತಕ್ಷಣದಿಂದಲೇ ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ರೀತಿಯಲ್ಲಿ ಅಂದಾಜು ಪಟ್ಟಿಗಳನ್ನು ಸಿದ್ಧಪಡಿಸಲು ಈಗಿನಿಂದಲೇ ಕಾರ್ಯಪ್ರವೃತ್ತರಾಗಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು~ ಎಂದು ಮೇಯರ್ ಹಾಗೂ ಆಯುಕ್ತರನ್ನು ಕೋರಿದರು.`ಪುಸ್ತಕ ರೂಪದಲ್ಲಿ ಬಜೆಟ್ ಮಂಡಿಸಿದ್ದು ದೊಡ್ಡದಲ್ಲ. ಬಜೆಟ್‌ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕು. ಪಾಲಿಕೆ ಇತಿಹಾಸದಲ್ಲಿ ಇದುವರೆಗೆ ಆಗದ ಕೆಲಸವನ್ನು ಈ ವರ್ಷದಿಂದ ಮಾಡಿ ತೋರಿಸೋಣ. ಅದಕ್ಕಾಗಿ ಅಧಿಕಾರಿಗಳು ಹಾಗೂ ಸದಸ್ಯರು ಸಹಕಾರ ನೀಡಬೇಕು~ ಎಂದು ಕೋರಿದರು.ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎ. ಮುನೀಂದ್ರಕುಮಾರ್, ಆಯುಕ್ತ ಎಂ.ಕೆ. ಶಂಕರ  ಲಿಂಗೇಗೌಡ ಸಭೆಯಲ್ಲಿ ಭಾಗವಹಿಸಿದ್ದರು. ಮಂಗಳವಾರವೂ ಬಜೆಟ್ ಮೇಲಿನ ಚರ್ಚೆ ಮುಂದುವರಿಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.