ಬಿಬಿಎಂಪಿ ಸಭೆ: ನೀರಿಗಾಗಿ ಪ್ರತಿಭಟನೆ

7

ಬಿಬಿಎಂಪಿ ಸಭೆ: ನೀರಿಗಾಗಿ ಪ್ರತಿಭಟನೆ

Published:
Updated:
ಬಿಬಿಎಂಪಿ ಸಭೆ: ನೀರಿಗಾಗಿ ಪ್ರತಿಭಟನೆ

ಬೆಂಗಳೂರು: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಸದಸ್ಯರಿಂದ ಖಾಲಿ ಕೊಡ- ನಲ್ಲಿ ಪ್ರದರ್ಶಿಸಿ ಪ್ರತಿಭಟನೆ, ಸಚಿವ ಡಾ.ವಿ.ಎಸ್. ಆಚಾರ್ಯ ನಿಧನದ ಶೋಕಾಚರಣೆ ಹಾಗೂ ಗಾಂಧಿನಗರ ವಾರ್ಡ್ ಉಪ ಚುನಾವಣೆಯ ನೀತಿ ಸಂಹಿತೆ ಅಡ್ಡಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯನ್ನು ಗುರುವಾರ ದಿಢೀರನೆ ಮುಂದೂಡಲಾಯಿತು.ಕೆಂಪೇಗೌಡ ಪೌರ ಸಭಾಂಗಣದಲ್ಲಿ ಮೇಯರ್ ಪಿ. ಶಾರದಮ್ಮ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11.30ರ ವೇಳೆಗೆ ಸಭೆ ಪ್ರಾರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರಾದ ಸಂಪತ್‌ರಾಜ್ ಹಾಗೂ ನೂರ್‌ಜಹಾನ್ ಖಾಲಿ ಬಿಂದಿಗೆ- ನಲ್ಲಿಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ನಂತರ ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ ಅವರಿಗೆ ವಿಷಯ ಪ್ರಸ್ತಾಪಿಸಲು ಕೂಡ ಅವಕಾಶ ನೀಡದೆ ಕಾಂಗ್ರೆಸ್ ಸದಸ್ಯರು ಮೇಯರ್ ಪೀಠದ ಮುಂಭಾಗಕ್ಕೆ ತೆರಳಿ ಘೋಷಣೆ ಕೂಗಿ ಗದ್ದಲವೆಬ್ಬಿಸಿದರು.`ಮೊದಲು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ. ನಂತರ ಇತರ ವಿಷಯಗಳ ಬಗ್ಗೆ ಚರ್ಚಿಸಿ. ಜಲಮಂಡಳಿಯ ಅಧ್ಯಕ್ಷರನ್ನು ಸಭೆಗೆ ಕರೆಸಿ~ ಎಂದು ಕಾಂಗ್ರೆಸ್ ಸದಸ್ಯರು ಮೇಯರ್ ಅವರನ್ನು ಆಗ್ರಹಿಸಿದರು.`ಮೊದಲು ಆಡಳಿತ ಪಕ್ಷದ ನಾಯಕರು ವಿಷಯ ಮಂಡಿಸಲು ಅವಕಾಶ ಕೊಡಿ. ಆನಂತರ ಚರ್ಚೆಗೆ ಅವಕಾಶ ನೀಡುತ್ತೇನೆ~ ಎಂದು ಮೇಯರ್ ಶಾರದಮ್ಮ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ.ಒಂದು ಹಂತದಲ್ಲಿ ಸಭೆಯ ಸಭ್ಯತೆಯನ್ನು ಕಾಪಾಡುವಂತೆ ಬಿಜೆಪಿ ಹಿರಿಯ ಸದಸ್ಯ ಗಂಗಬೈರಯ್ಯ ಏರಿದ ದನಿಯಲ್ಲಿ ಕಾಂಗ್ರೆಸ್ ಸದಸ್ಯರನ್ನು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಎಂ. ಉದಯಶಂಕರ್ ಹಾಗೂ ಗಂಗಬೈರಯ್ಯ ನಡುವೆ ಮಾತಿನ ಚಕಮಕಿಯೂ ನಡೆಯಿತು. ಆಡಳಿತ ಪಕ್ಷದ ನಾಯಕ ಬಿ.ಆರ್.ನಂಜುಂಡಪ್ಪ ಇಬ್ಬರನ್ನೂ ಸಮಾಧಾನಪಡಿಸಿದ್ದರಿಂದ ಪರಿಸ್ಥಿತಿ ತಿಳಿಯಾಯಿತು.ಸಂತಾಪ ಸೂಚಕ ನಿರ್ಣಯ ಮಂಡನೆ: ಆನಂತರ ಮೊನ್ನೆ ನಿಧನರಾದ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಹಾಗೂ ಇತ್ತೀಚೆಗೆ ನಿಧನರಾದ ಹಾಸ್ಯ ಕಲಾವಿದ ಕರಿಬಸವಯ್ಯನವರ ನಿಧನಕ್ಕೆ ಸಭೆಯಲ್ಲಿ ಸಂತಾಪ ಸೂಚಕ ನಿರ್ಣಯ ಮಂಡಿಸಲಾಯಿತು.ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ, ವಿರೋಧ ಪಕ್ಷದ ನಾಯಕ ಎಂ. ಉದಯಶಂಕರ್, ಬಿಜೆಪಿಯ ಎಸ್.ಕೆ. ನಟರಾಜ್, ಗಂಗಬೈರಯ್ಯ, ಬಿ.ಎಸ್. ಸತ್ಯನಾರಾಯಣ, ಬಿ.ವಿ. ಗಣೇಶ್, ರೂಪಾದೇವಿ, ಉಮೇಶ್, ಕಾಂಗ್ರೆಸ್‌ನ ಗುಣಶೇಖರ್, ಜೆಡಿಎಸ್‌ನ ಪ್ರಕಾಶ್, ಪಕ್ಷೇತರ ಸದಸ್ಯ ಪಿಳ್ಳನಂಜಪ್ಪ ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡಿದ ನಂತರ ಒಂದು ನಿಮಿಷ ಮೌನ ಆಚರಿಸಿ, ಮೃತರ ಆತ್ಮಕ್ಕೆ ಗೌರವ ಸಲ್ಲಿಸಲಾಯಿತು.ಸಭೆ ನಡೆಸಲು ವಿಪಕ್ಷಗಳ ಆಕ್ಷೇಪ:

ಈ ನಡುವೆ, ಕಾಂಗ್ರೆಸ್ ಸದಸ್ಯರು ಶೋಕಾಚರಣೆ ಹಾಗೂ ಗಾಂಧಿನಗರ ಉಪ ಚುನಾವಣೆಯ ನೀತಿ ಸಂಹಿತೆ ಅಡ್ಡಿ ವಿಷಯವನ್ನು ಮುಂದಿಟ್ಟುಕೊಂಡು ಸಭೆ ನಡೆಸಲು ಆಕ್ಷೇಪ ವ್ಯಕ್ತಪಡಿಸಿದರು. ಈಗಾಗಲೇ ಉಪ ಚುನಾವಣೆಯ ನೀತಿಸಂಹಿತೆ ಜಾರಿಯಲ್ಲಿದೆ. ಇಂತಹ ಸನ್ನಿವೇಶದಲ್ಲಿ ಸಭೆ ನಡೆಸುವುದರಿಂದ ನೀತಿ ಸಂಹಿತೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದಂತಾಗುತ್ತದೆ ಎಂದು ಎಂ. ಉದಯಶಂಕರ್ ಹಾಗೂ ಎಂ.ಕೆ. ಗುಣಶೇಖರ್ ಆಕ್ಷೇಪವೆತ್ತಿದರು.`ಗಾಂಧಿನಗರ ವಾರ್ಡ್ ಸೇರಿದಂತೆ ಇಡೀ ನಗರಕ್ಕೆ ಅನ್ವಯವಾಗುವಂತಹ ಪ್ರಮುಖ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳುವುದರಿಂದ ಮತದಾರರಿಗೆ ಆಮಿಷ ನೀಡಿದಂತಾಗುತ್ತದೆ. ಇಲ್ಲವೇ ಗಾಂಧಿನಗರ ವಾರ್ಡ್ ಮಾತ್ರ ಹೊರತುಪಡಿಸಿ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವೇ?~ ಎಂದು ಉದಯಶಂಕರ್ ಪ್ರಶ್ನಿಸಿದರು.`ಗಾಂಧಿನಗರ ವಾರ್ಡ್‌ಗೆ ಸೀಮಿತವಾಗಿ ನಾವು ಯಾವುದೇ ಅಭಿವೃದ್ಧಿ ಯೋಜನೆ ಅಥವಾ ಪ್ಯಾಕೇಜ್ ಪ್ರಕಟಿಸುತ್ತಿಲ್ಲ. ಹಿಂದಿನ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳನ್ನು ಅನುಷ್ಠಾನಗೊಳಿಸಲು ನೀತಿಸಂಹಿತೆ ಅಡ್ಡಿಯಾಗುವುದಿಲ್ಲ~ ಎಂದು ಆಡಳಿತ ಪಕ್ಷದ ಸದಸ್ಯ ಪಿ.ಎನ್. ಸದಾಶಿವ ಸಭೆ ನಡೆಸುವ ಕ್ರಮವನ್ನು ಸಮರ್ಥಿಸಿಕೊಂಡರು.`ಮತದಾರರ ಮೇಲೆ ಪ್ರಭಾವ ಬೀರುವಂತಹ ಕೆಲವು ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಗುತ್ತಿದೆ. ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಿರ್ಧಾರ ಕೈಗೊಳ್ಳಿ~ ಎಂದು ಜೆಡಿಎಸ್ ಗುಂಪಿನ ನಾಯಕ ಪದ್ಮನಾಭರೆಡ್ಡಿ ಮೇಯರ್ ಅವರಲ್ಲಿ ಮನವಿ ಮಾಡಿದರು.ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರು ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಅವರನ್ನು ಕೋರಿದರು. ಆಯುಕ್ತರು ಸ್ಪಷ್ಟೀಕರಣ ನೀಡುವ ಮುನ್ನವೇ ಮೇಯರ್ ಸಭೆಯನ್ನು ದಿಢೀರನೆ ಮುಂದೂಡಿ ಹೊರ ನಡೆದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry